Kannada article

Reading Time: < 1 minute
Read Previous post!
Read Next post!

ಬಾಳಿಗೊಂದು ಚಿಂತನೆ (3) – ನಮ್ಮ ಉನ್ನತಿ
ಆನಂದ, ಸಂತೋಷ, ನೆಮ್ಮದಿ, ಆರೋಗ್ಯ, ಇವೆಲ್ಲವೂ ನಮಗಿದ್ದರೆ ಮಾತ್ರ ನಮ್ಮ ಬದುಕು ಚಂದ. ಸಂತಸ ತಾನಾಗಿಯೇ ಬರುವುದೇ ಇಲ್ಲ, ನಾವದನ್ನು ಬರುವಂತೆ ಮಾಡಬೇಕು. ಅದು ಅಂಗಡಿಯಲ್ಲಿ ಹಣ ಕೊಟ್ಟರೆ ಸಿಗುವ ವಸ್ತುವಲ್ಲ. ನಮ್ಮೊಳಗೆ ಅಡಕವಾಗಿದೆ. ಹೊರತರುವ ಕೆಲಸ ನಮ್ಮಿಂದಾಗಬೇಕು.
ಅಜ್ಞಾನವೆಂಬ ಕತ್ತಲೆ ನಮ್ಮನ್ನು ಆವರಿಸಿದಾಗ, ಜ್ಞಾನ ಎಲ್ಲಿಂದ ಬರಬೇಕು? ‘ನಾನು ಈ ದೇಹ, ನನ್ನದೇ ಶರೀರ, ಹೇಗೆ ಬೇಕಾದರೂ ಇರುವ ಹಕ್ಕು ನನಗಿದೆ’ ಇದೇ ಅಜ್ಞಾನ, ಅಹಂ. ಸಾವು, ನೋವು, ದುಃಖ ಒಂದೆಡೆ ಭಯಭೀತರಾಗುವಂತೆ ಮಾಡುತ್ತಿರುತ್ತದೆ. ಇನ್ನೊಂದೆಡೆ ಅಹಂಕಾರ. ಎರಡರ ಮಿಶ್ರಣದಲ್ಲಿ ಬಳಲಿದ ಶರೀರ, ಹೋಗುವಾಗ ದಾರಿಯಲ್ಲಿ ಹಗ್ಗವನ್ನು ನೋಡಿ ಹಾವೆಂದು ಭ್ರಮಿಸುವುದೂ ಉಂಟು. ಸರಿಯಾಗಿ ನೋಡಿದಾಗ, ಬೆಳಕನ್ನು ಚೆಲ್ಲಿದಾಗ, ಅಯ್ಯೋ ಇದು ಹಗ್ಗ ಅಂದುಕೊಳ್ಳುತ್ತೇವೆ. ಇಲ್ಲಿ ಬೆಳಕು ಅಂದರೆ ವಿವೇಕ, ಜ್ಞಾನ.’ಅಹಂ ಬ್ರಹ್ಮಾಸ್ಮಿ, ‘ನಾನು ಬ್ರಹ್ಮ ಎಂಬ ಬೆಳಕನ್ನು ಎಲ್ಲೆಡೆ ಚೆಲ್ಲೋಣ. ನನ್ನಲ್ಲಿ ಪ್ರಕಾಶವಿದೆ, ನಾನೇ ಜ್ಯೋತಿ, ನಾನೇ ಬೆಳಕು ಎಂದು ಭಾವಿಸಿ ಆನಂದದ ಬದುಕಿನತ್ತ ಹೆಜ್ಜೆಗಳನ್ನು ಹಾಕೋಣ.
ಸತ್ ಚಿಂತನೆ, ಒಳ್ಳೆಯ ವಿಚಾರಗಳು ನಮ್ಮಲ್ಲಿ ಸುಳಿದಾಡುವಂತೆ ಮಾಡಿದರೆ ನಾವು ಮಾನವರಾಗಬಹುದು. ವಿಭೂತಿ ಎನ್ನುವುದು ಮತ್ತೆ ಸುಡಲಾಗುವುದಿಲ್ಲ. ಯಾಕೆ ಅದು ಶಾಶ್ವತದ ಸಂಕೇತ. ಅದರಂತೆ ಶಾಶ್ವತದ ಆತ್ಮಜ್ಞಾನ ನಮ್ಮ ಕೈವಶವಾದರೆ ನಾವು ನಾವಾಗಿರಬಹುದು.
ಆಂಗ್ಲ ಭಾಷೆಯ ಜಿ,ಓ,ಡಿಯನ್ನು ಸೇರಿಸಿದಾಗ’ಜಿಓಡಿ’ಆಗುವುದಿಲ್ಲ, ‘ಗಾಡ್’ಆಗುತ್ತದೆ. ಇದೇ ರೀತಿ ಅ,ಉ, ಮ(ಅಂದರೆ–ಭೂಃಭುವಃ ಮತ್ತು ಸುವಃ–ಅಸ್ತಿತ್ವ ಮತ್ತು ಪ್ರಜ್ಞೆಯ ಮೂರು ಹಂತಗಳು) ಒಟ್ಟು ಸೇರಿ ಪ್ರಣವ ನಾದವಾದ ‘ಓಂ’ಆಗುವುದು. ಸಂಶಯವೆಂಬ ಹೊಲವನ್ನು ಉತ್ತು ಬಿತ್ತಿ ,ನೀರು ಗೊಬ್ಬರ ಹಾಕಿ ಬೆಳೆಸದೆ,ಬೇರು ಸಹಿತ ಕಿತ್ತು ಎಸೆಯಲು ಪ್ರಯತ್ನಿಸೋಣ.
ಲೋಕಜ್ಞಾನ, ಬ್ರಹ್ಮಜ್ಞಾನ ಎಂಬುದನ್ನು ನಮ್ಮ ಗುಣ ನಡತೆ, ವ್ಯವಹಾರಗಳಲ್ಲಿ ಅಳವಡಿಸಿಕೊಂಡು, ಸಾತ್ವಿಕ ಜೀವನವನ್ನು ನಡೆಸೋಣ.
-ರತ್ನಾ ಭಟ್ ತಲಂಜೇರಿ
ಆಧಾರ:ಸೂಕ್ತಿಸಾರ.
 

Read Previous post!
Read Next post!