Kannada article

Reading Time: 2 minutes
Read Previous post!
Read Next post!

ಬೇಟೆಗಾರ ಮೃಗಾರಿಯ ಪರಿವರ್ತನೆ
ದೇವರ್ಷಿ ನಾರದರು ತ್ರಿಲೋಕ ಸಂಚಾರಿಗಳು. ಒಮ್ಮೆ ಅವರು ಗಂಗಾ-ಯಮುನಾ-ಸರಸ್ವತಿ ನದಿಗಳ ತ್ರಿವೇಣಿ ಸಂಗಮವಾದ ಪ್ರಯಾಗಕ್ಕೆ ಹೊರಟಿದ್ದರು. ಪರಿಶುದ್ದ ಭಕ್ತರಾದ ನಾರದರು ಕೃಷ್ಣನನ್ನು ಸ್ಮರಿಸುತ್ತಾ ಕಾಡಿನಲ್ಲಿ ಹೋಗುತ್ತಿರುವಾಗ ಬಾಣದಿಂದ ಗಾಯಗೊಂಡು ನರಳುತ್ತಾ ಬಿದ್ದಿದ್ದ ಜಿಂಕೆಯೊಂದನ್ನು ನೋಡಿದರು. ಮುಂದೆ ಹೋದಂತೆ ಹಲವಾರು ಪ್ರಾಣಿಗಳು ಬಾಣಗಳ ಏಟಿನಿಂದ ಅರೆ ಜೀವವಾಗಿ ಒದ್ದಾಡುತ್ತಿದ್ದುದನ್ನು ಕಂಡು ಮರುಗಿದರು. ಗಾಯಗೊಂಡಿದ್ದ ಪ್ರಾಣಿಗಳ ನೋವನ್ನು ತನ್ನ ನೋವೆಂದು ಪರಿಗಣಿಸಿದ ನಾರದ ಮುನಿಗಳು ಬಾಣದಿಂದ ಪ್ರಾಣಿಗಳನ್ನು ಘಾಸಿಗೊಳಿಸಿದವರು ಯಾರು ಎಂದು ಹುಡುಕತೊಡಗಿದರು. ಆಗ ನಾರದರಿಗೆ ಮರವೊಂದರ ಹಿಂದೆ ಅಡಗಿ ಕುಳಿತಿದ್ದ ಬೇಟೆಗಾರ ಕಾಣಿಸಿದನು. ಬಿಲ್ಲು ಬಾಣಗಳನ್ನು ಹಿಡಿದಿದ್ದ ಆತ ಮೃತ್ಯು ದೇವತೆ ಯಮರಾಜನಂತೆ ತೋರುತ್ತಿದ್ದನು.
ನಾರದ ಮುನಿಗಳ ಆಗಮನದಿಂದ ಕಾಡಿನಲ್ಲಿದ್ದ ಪ್ರಾಣಿಗಳು ಅತ್ತಿತ್ತ ಚದುರಿದ್ದರಿಂದ ಕೋಪಗೊಂಡ ಬೇಟೆಗಾರನು, ಮರದ ಮರೆಯಿಂದ ಹೊರಬಂದು ನಾರದರನ್ನು ನಿಂದಿಸಲು ಉದ್ಯುಕ್ತನಾದನು. ಆದರೆ ನಾರದರ ತಪಃ ಪ್ರಭಾವದಿಂದ ಆತನ ಬಾಯಿಂದ ಕಟು ಶಬ್ದಗಳು ಹೊರಬರಲಿಲ್ಲ. ಈ ಪ್ರಾಣಿಗಳನ್ನೆಲ್ಲಾ ಗಾಯಗೊಳಿಸಿರುವುದು ನೀನೇ ಏನು? ಎಂದು ನಾರದರು ಕೇಳಿದಾಗ, ಬೇಟೆಗಾರನು ಹೌದೆಂದು ಒಪ್ಪಿಕೊಂಡನು. ನನ್ನ ಹೆಸರು ಮೃಗಾರಿ, ಪ್ರಾಣಿಗಳು ಅರೆ ಜೀವದಿಂದ ಒದ್ದಾಡುವುದನ್ನು ನೋಡಲು ನನಗೆ ಸಂತಸವಾಗುತ್ತದೆ ಎಂದನು. ಆಗ ನಾರದ ಮುನಿಗಳು ನೀನು ಪ್ರಾಣಿಗಳನ್ನು ಕೊಲ್ಲುವುದಾದರೆ ಅವುಗಳನ್ನು ಪೂರ್ಣವಾಗಿ ಕೊಲ್ಲಬೇಕು ಎಂದು ಹೇಳಿದರು. ಇದನ್ನು ಕೇಳಿದ ಬೇಟೆಗಾರ ಪ್ರಾಣಿಗಳನ್ನು ಅರ್ಧ ಕೊಲ್ಲುವುದಕ್ಕೂ, ಪೂರ್ಣ ಕೊಲ್ಲುವುದಕ್ಕೂ ಏನು ವ್ಯತ್ಯಾಸ ಎಂದು ಕೇಳಿದನು? ಪ್ರಾಣಿಗಳನ್ನು ಕೊಲ್ಲುವುದೇ ಪಾಪ, ಅದರಲ್ಲೂ ಅವುಗಳನ್ನು ಅರೆ ಜೀವವನ್ನಾಗಿಸುವುದಂತೂ ಮಹಾಪಾಪ ಏಕೆಂದರೆ ಪ್ರಾಣಿಯನ್ನು ಅರ್ಧ ಕೊಂದರೆ ಅದು ತುಂಬಾ ನರಳುತ್ತದೆ. ಇಂತಹ ಕೃತ್ಯ ಎಸಗಿದ್ದಕ್ಕಾಗಿ ಮುಂದಿನ ಜನ್ಮಗಳಲ್ಲಿ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನಾರದ ಮುನಿಗಳು ಎಚ್ಚರಿಸಿದರು.
ನಾರದ ಮುನಿಗಳ ಮಾತಿನಿಂದ ಹೆದರಿದ ಬೇಟೆಗಾರ ನಾರದರ ಪಾದ ಕಮಲಗಳಿಗೆ ಬಿದ್ದು ಕ್ಷಮೆ ಯಾಚಿಸಿದನಲ್ಲದೇ, ಮಾಡಿರುವ ಪಾಪಗಳಿಂದ ಪಾರಾಗುವ ದಾರಿ ತೋರಿಸಿ ಎಂದು ಕೇಳಿದನು. ಕರುಣಾಮಯಿಗಳಾದ ನಾರದರು ಮೃಗಾರಿಯ ಕೋರಿಕೆ ಮನ್ನಿಸಿ ಅವನ ಹತ್ತಿರ ಇರುವ ಬಿಲ್ಲು ಬಾಣ ಮತ್ತು ಎಲ್ಲಾ ವಸ್ತುಗಳನ್ನು ತ್ಯಜಿಸಿ ಕೃಷ್ಣ ಭಕ್ತನಾಗುವಂತೆ ತಿಳಿಸಿದರು. “ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ” ಮಹಾಮಂತ್ರವನ್ನು ಉಪದೇಶಿಸಿದರು. ಬೇಟೆಗಾರನು ತನ್ನ ಊಟದ ವ್ಯವಸ್ಥೆಯ ಬಗ್ಗೆ ಕೇಳಿದಾಗ, ಸದಾಕಾಲವು ಹರೇಕೃಷ್ಣ ಮಂತ್ರ ಜಪಿಸುತ್ತಿರು, ನಿನ್ನ ಕುಟುಂಬಕ್ಕೆ ಆಹಾರ ಒದಗಿಸುವ ಜವಾಬ್ದಾರಿ ನನ್ನದು ಎಂದು ನಾರದ ಮುನಿಗಳು ಅವನನ್ನು ಆಶೀರ್ವದಿಸಿದರು. ಅವರ ಉಪದೇಶದಂತೆ ಮೃಗಾರಿ ಬಿಲ್ಲು ಬಾಣಗಳನ್ನು ತ್ಯಜಿಸಿ, ನದಿಯ ಬಳಿ ಕುಟೀರ ನಿರ್ಮಿಸಿಕೊಂಡು, ತುಳಸೀ ಪೂಜೆ ಮತ್ತು ಹರೇಕೃಷ್ಣ ಮಹಾಮಂತ್ರ ಜಪಿಸಲಾರಂಭಿಸಿದನು. ಬೇಟೆಗಾರನಲ್ಲಾದ ಪರಿವರ್ತನೆ ಕಂಡ ಗ್ರಾಮಸ್ಥರು ಹಣ್ಣು-ಹಂಪಲು-ಆಹಾರ ಧಾನ್ಯಗಳನ್ನು ತಂದು ಕೊಡಲಾರಂಭಿಸಿದರು. ಅವರು ತಂದು ಕೊಡುತ್ತಿದ್ದ ಆಹಾರ ಪದಾರ್ಥಗಳು ಇಪ್ಪತ್ತು ಜನರಿಗಾಗುತ್ತಿತ್ತು.
ಕೆಲಕಾಲದ ನಂತರ ನಾರದ ಮುನಿಗಳು ಮಿತ್ರರಾದ ಪರ್ವತ ಮುನಿಯೊಂದಿಗೆ ತಮ್ಮ ಶಿಷ್ಯನನ್ನು ನೋಡಲು ಬಂದರು. ತನ್ನ ಆಧ್ಯಾತ್ಮಿಕ ಗುರುವನ್ನು ಕಂಡ ಮೃಗಾರಿ ಆನಂದದಿಂದ ಅವರಿಗೆ ದೀರ್ಘದಂಡ ಪ್ರಣಾಮ ಸಲ್ಲಿಸಲೆಂದು ಬಗ್ಗಿದಾಗ ನೆಲದಲ್ಲಿ ಇರುವೆಗಳ ಸಾಲು ಹರಿಯುತ್ತಿರುವುದನ್ನು ನೋಡಿದ ಮೃಗಾರಿ ಕೈಯಲ್ಲಿದ್ದ ವಸ್ತ್ರದಿಂದ ಇರುವೆಗಳಿಗೆ ಗಾಯವಾಗದಂತೆ ಅತ್ತಿತ್ತ ಸರಿಸಿದ ನಂತರ ಪ್ರಣಾಮ ಸಲ್ಲಿಸಿದನು. ಹಿಂದೆ ಪ್ರಾಣಿಗಳನ್ನು ಅರ್ಧ ಕೊಂದು ಸಂತೋಷಿಸುತ್ತಿದ್ದ ಬೇಟೆಗಾರ ಈಗ ಇರುವೆಗಳನ್ನು ಸಹ ಕೊಲ್ಲಲು ಸಿದ್ದನಿರಲಿಲ್ಲ ಎಂಬುದನ್ನು ನೋಡಿದ ಪರ್ವತ ಮುನಿಗಳಿಗೆ ಅಚ್ಚರಿಯಾಯಿತು. ನಾರದ ಮುನಿಗಳಿಗೆ ತಮ್ಮ ಶಿಷ್ಯನ ಬಗ್ಗೆ ಹೆಮ್ಮೆಯಾಯಿತು. ಮೃಗಾರಿ ತನ್ನ ಪತ್ನಿಯೊಂದಿಗೆ ಮುನಿದ್ವಯರನ್ನು ಆದರಿಸಿ ಸತ್ಕರಿಸಿದರು. ಮೃಗಾರಿಯು ನೀವು ನಮಗೆ ಕಡಿಮೆ ಆಹಾರ ಪದಾರ್ಥಗಳನ್ನು ಕಳಿಸಿಕೊಡಿ ಎಂದು ಕೇಳಿಕೊಂಡನು. ಇದನ್ನು ಕೇಳಿ ತೃಪ್ತರಾದ ನಾರದ ಮುನಿಗಳು ದಂಪತಿಗಳನ್ನು ಆಶೀರ್ವದಿಸಿ ಅಂತರ್ಧಾನರಾದರು.
ಶ್ರೀಕೃಷ್ಣನ ಶುದ್ಧಭಕ್ತರ ಸಂಗದಿಂದ ಬೇಟೆಗಾರನು ಸಹ ತನ್ನ ಎಲ್ಲಾ ಪಾಪಗಳಿಂದ ಮುಕ್ತನಾಗಿ ಭಗವಂತನ ಭಕ್ತನಾಗಬಲ್ಲನು ಎಂಬುದನ್ನು ಮೃಗಾರಿಯ ಜೀವನದಿಂದ ತಿಳಿಯಬಹುದು.
ವಾಟ್ಸಾಪ್ ದಿಂದ ಸಂಗ್ರಹ

Read Previous post!
Read Next post!