Sri Ramakrishna

We are coming Soon!▶
Read Next post!
Reading Time: 36 minutes

ಶ್ರೀರಾಮಕೃಷ್ಣ ಪರಮಹಂಸರು

ಬೋಧನೆಗಳು
1) ರಾತ್ರಿಯ ಹೊತ್ತು ಗಗನದಲ್ಲಿ ಹಲವು ನಕ್ಷತ್ರಗಳು ಕಾಣುತ್ತವೆ. ಆದರೆ ಸೂರ್ಯೋದಯವಾದ ಮೇಲೆ ಅವು ಕಾಣುವುದಿಲ್ಲ. ಆದಕಾರಣ ಹಗಲು ಆಕಾಶದಲ್ಲಿ ನಕ್ಷತ್ರಗಳು ಇಲ್ಲವೆನ್ನುವುದಕ್ಕೆ ಆಗುತ್ತದೆಯೇ? ಅದರಂತೆಯ ಎಲೈ ಮಾನವನೆ, ಅಜ್ಞಾನದಲ್ಲಿ ನೀನು ಇರುವ ತನಕ ದೇವರು ನಿನಗೆ ಕಾಣದೆ ಇದ್ದರೂ ದೇವರು ಇಲ್ಲವೆಂದು ನೀನು ಹೇಳದಿರು.

2) ಪಡೆಯುವುದಕ್ಕೆ ಅಸಾಧ್ಯವಾದ ಮಾನವ ಜನ್ಮವನ್ನು ಪಡೆದು ಈ ಜನ್ಮದಲ್ಲೇ ದೇವರನ್ನು ನೋಡಲು ಪ್ರಯತ್ನಿಸದವನ ಬಾಳು ವ್ಯರ್ಥ.

3) ಮನುಷ್ಯ ಈ ಜಗತ್ತಿನಲ್ಲಿ ಎರಡು ಸ್ವಭಾವದೊಂದಿಗೆ ಹುಟ್ಟುತ್ತಾನೆ. ಮೋಕ್ಷ ಮಾರ್ಗವನ್ನು ಅನುಸರಿಸುವ ಸ್ವಭಾವ, ಅವಿದ್ಯಾ ಸಂಸಾರದಲ್ಲಿರಬೇಕು, ಬಂಧನದಲ್ಲಿ ಬೀಳಬೇಕು ಎನ್ನುವ ಸ್ವಭಾವ. ಅವನು ಹುಟ್ಟುವಾಗ ಈ ಎರಡು ಸ್ವಭಾವಗಳೂ ತಕ್ಕಡಿಯ ಎರಡು ಕಡೆಗಳಂತೆ ಒಂದೇ ಸಮನಾಗಿರುವುದು. ಪ್ರಪಂಚ ತನಗೆ ಸೇರಿದ ಭೋಗ ಮತ್ತು ಸಂತೋಷಗಳನ್ನು ಒಂದು ತಟ್ಟೆಯಲ್ಲಿ ಇಡುವುದು. ಆತ್ಮಶಕ್ತಿ ತನಗೆ ಸಂಬಂಧಪಟ್ಟ ಸುಖಸಂತೋಷಗಳನ್ನು ಇನ್ನೊಂದು ತಟ್ಟೆಯಲ್ಲಿ ಇಡುವುದು. ಮನುಷ್ಯನು ಪ್ರಪಂಚವನ್ನು ಇಚ್ಛಿಸಿದರೆ ಅವಿದ್ಯೆ ತೂಕವಾಗಿ ಪ್ರಪಂಚದ ಕಡೆ ವಾಲುವುದು. ಅವನು ಆತ್ಮನಿಗೆ ಸಂಬಂಧಿಸಿರುವುದನ್ನು ಇಚ್ಛಿಸಿದರೆ ವಿದ್ಯೆ ಭಾರವಾಗಿ ದೇವರ ಕಡೆ ವಾಲುವುದು.

4) ಒಂದನ್ನು ತಿಳಿಯಿರಿ, ಎಲ್ಲವೂ ನಿಮಗೆ ತಿಳಿಯುವುದು. ಒಂದಾದ ಮೇಲೆ ಇಡುವ ಸೊನ್ನೆಗಳಿಗೆ ನೂರು, ಸಾವಿರಗಳ ಬೆಲೆ ಬರುತ್ತದೆ. ಆದರೆ ಒಂದನ್ನು ಅಳಿಸಿದರೆ ಸೊನ್ನೆಗೆ ಯಾವ ಬೆಲೆಯೂ ಇಲ್ಲ. ಒಂದರಿಂದ ಉಳಿದವಕ್ಕೆ ಬೆಲೆ. ಮೊದಲು ಒಂದು, ಅನಂತರ ಹಲವು. ಮೊದಲು ದೇವರು, ಅನಂತರ ಜೀವ ಮತ್ತು ಜಗತ್ತು.

5) ಮೊದಲು ದೇವರನ್ನು ಪಡೆಯಿರಿ. ಅನಂತರ ದ್ರವ್ಯವನ್ನು ಪಡೆಯಿರಿ. ಆದರೆ ಇದನ್ನು ತಲೆಕೆಳಗೆ ಮಾಡಬೇಡಿ. ಆಧ್ಯಾತ್ಮಿಕತೆಯಲ್ಲಿ ಮುಂದುವರಿದ ಮೇಲೆ ನೀನು ಸಂಸಾರಿಯಾದರೆ ನಿನ್ನ ಶಾಂತಿಗೆ ಭಂಗವಿಲ್ಲ.

6) ಸಾಮಾಜಿಕ ಸುಧಾರಣೆಯ ವಿಚಾರವಾಗಿ ಮಾತನಾಡುವಿರೇನು? ಒಳ್ಳೆಯದು. ದೇವರನ್ನು ಕಂಡಾದ ಮೇಲೆ ನೀವು ಇದನ್ನು ಮಾಡಬಹುದು. ಹಿಂದಿನ ಕಾಲದ ಋಷಿಗಳು ದೇವರನ್ನು ಪಡೆಯುವುದಕ್ಕಾಗಿ ಪ್ರಪಂಚವನ್ನು ತೊರೆದರು ಎಂಬುದನ್ನು ಜ್ಞಾಪಕದಲ್ಲಿಡಿ. ನಮಗೆ ಅವಶ್ಯಕವಾಗಿರುವುದು ತ್ಯಾಗವೊಂದೇ. ಸುಧಾರಣೆ ಮುಂತಾದುವನ್ನು ನೀವು ಆಶಿಸಿದರೆ ಇವೆಲ್ಲವೂ ನಿಮಗೆ ಬಂದೇ ಬರುತ್ತವೆ. ಆದರೆ ಮೊದಲು ದೇವರನ್ನು ನೋಡಿ; ಅನಂತರ ಉಪನ್ಯಾಸ, ಸಮಾಜ ಸುಧಾರಣೆ ಇವುಗಳ ವಿಚಾರ ಮಾತನಾಡಿ.

7) ಒಂದೂರಿಗೆ ಹೊಸದಾಗಿ ಬಂದವನು ರಾತ್ರಿ ವಿಶ್ರಮಿಸಿಕೊಳ್ಳುವುದಕ್ಕೆ ಒಂದು ಅನುಕೂಲವಾದ ಕೊಠಡಿಯನ್ನು ಪಡೆಯಬೇಕು. ಅಲ್ಲಿ ತನ್ನ ಸಾಮಾನುಗಳನ್ನೆಲ್ಲ ಇಟ್ಟ ಮೇಲೆ ಊರನ್ನೆಲ್ಲ ನೋಡುವುದಕ್ಕೆ ಆತಂಕವಿಲ್ಲದೆ ಹೋಗಬಹುದು. ಇಲ್ಲದೆ ಇದ್ದರೆ ರಾತ್ರಿ ಕತ್ತಲೆಯಲ್ಲಿ ಮಲಗಿಕೊಳ್ಳಲು ಒಂದು ಮನೆಗಾಗಿ ತುಂಬ ಕಷ್ಟಪಡಬೇಕಾಗುವುದು. ಇದರಂತೆಯೇ ದೇವರ ಸಮೀಪದಲ್ಲಿ ನಮ್ಮ ನಿತ್ಯವಾದ ಸ್ಥಾನವನ್ನು ಭದ್ರಪಡಿಸಿಕೊಂಡ ಮೇಲೆ, ಪ್ರತಿದಿನ ತನ್ನ ಕೆಲಸವನ್ನು ಮಾಡುತ್ತ ಧೈರ್ಯವಾಗಿ ತಿರುಗಾಡಬಹುದು. ಇಲ್ಲದಿದ್ದರೆ ಭಯಾನಕವಾದ ಕಾರಿರುಳಿನಂತಿರುವ ಸಾವು ಸಮೀಪಿಸಿದಾಗ ತುಂಬಾ ಕಷ್ಟ ಪಡಬೇಕಾಗುವುದು, ದುಃಖವನ್ನು ಅನುಭವಿಸಬೇಕಾಗುವುದು.

8) ದೊಡ್ಡ ಕಣಜಗಳ ಬಾಗಿಲ ಹತ್ತಿರ ಇಲಿಗಳನ್ನು ಹಿಡಿಯುವುದಕ್ಕಾಗಿ ಪುರಿಯನ್ನು ಒಳಗೆ ಹಾಕಿದ ಬಲೆಗಳಿರುತ್ತವೆ. ಇಲಿಗಳು ಪುರಿಯ ವಾಸನೆಗೆ ಮರುಳಾಗಿ ಕಣಜದ ಒಳಗಿರುವ ಇನ್ನೂ ಹೆಚ್ಚಿನ ದವಸವನ್ನು ಮರೆತು ಬಲೆಗೆ ಬೀಳುತ್ತವೆ. ಅವುಗಳೆಲ್ಲ ಅಲ್ಲಿ ಸಿಕ್ಕಿಕೊಂಡು ಸಾಯುತ್ತವೆ. ಇದರಂತೆಯೇ ಜೀವನದ ಪಾಡು ಕೂಡ. ಪ್ರಪಂಚದ ಲಕ್ಷಾಂತರ ಸುಖಗಳು ಘನೀಭೂತವಾಗಿ ಏಕವಾದಂತಿರುವ ಸಚ್ಚಿದಾನಂದದ ಎದುರಿಗೆ ಜೀವ ನಿಂತಿರುವನು. ಅಂತಹ ಪರಮ ಸುಖಕ್ಕೆ ಪ್ರಯತ್ನಪಡುವ ಬದಲು ಕೆಲಸಕ್ಕೆ ಬಾರದ ಇಂದ್ರಿಯ ಭೋಗಗಳಿಗೆ ಮರುಳಾಗಿ ಮಹಾಘೋರವಾದ ಮಾಯೆಯ ಬಲೆಗೆ ಬಿದ್ದು ಅಲ್ಲಿ ಸಾಯುತ್ತಾನೆ.

9) ಎಲ್ಲರೂ ದೇವರನ್ನು ನೋಡಬಲ್ಲರೆ? ಯಾರೂ ದಿನವೆಲ್ಲ ಉಪವಾಸ ಮಾಡಬೇಕಾಗಿಲ್ಲ. ಕೆಲವರಿಗೆ ಬೆಳಗ್ಗೆ ಒಂಬತ್ತು ಗಂಟೆಗೆ ಊಟ ಸಿಕ್ಕುತ್ತದೆ. ಮತ್ತೆ ಕೆಲವರಿಗೆ ಮಧ್ಯಾಹ್ನದಲ್ಲಿ, ಮತ್ತೆ ಕೆಲವರಿಗೆ ಎರಡು ಗಂಟೆ ಹೊತ್ತಿಗೆ, ಉಳಿದವರಿಗೆ ಸಂಜೆಯ ಸೂರ್ಯಾಸ್ತದ ಸಮಯಕ್ಕೆ ಊಟ ಸಿಕ್ಕುತ್ತದೆ. ಇದರಂತೆಯೇ ಎಂದಾದರೊಂದು ದಿನ ಈ ಜೀವನದಲ್ಲಿಯೋ ಅಥವಾ ಯಾವುದಾದರೂ ಮುಂದಿನ ಜೀವನದಲ್ಲಿಯೋ ಎಲ್ಲರೂ ದೇವರನ್ನು ಕಂಡೇ ಕಾಣುತ್ತಾರೆ.

10) ಮನೆಯ ಅಂಗಳದಲ್ಲಿ ಸಣ್ಣ ಮಕ್ಕಳು ಆಟದ ಸಾಮಾನಿನೊಂದಿಗೆ ನಿರ್ಭಯವಾಗಿ ಯಾವ ಅಡ್ಡಿಆತಂಕಗಳಿಲ್ಲದೆ ಆಡುತ್ತ ಇರುತ್ತವೆ. ಅವರ ತಾಯಿ ಅವರ ಬಳಿಗೆ ಬಂದ ತಕ್ಷಣವೇ ಆವು ಆಟದ ಸಾಮಾನನ್ನು ಬಿಸುಟು “ಅಮ್ಮ ಅಮ್ಮ” ಎಂದು ಅಳುತ್ತಾ ಅವಳ ಬಳಿಗೆ ಹೋಗುವುವು. ಎಲೈ ಮಾನವನೇ! ನೀನು ಕೂಡಾ ಪ್ರಪಂಚದಲ್ಲಿ ದ್ರವ್ಯ ಕೀರ್ತಿ ಗೌರವಗಳೆಂಬ ಆಟದ ಸಾಮಾನಿಗೆ ಮರುಳಾಗಿ ಯಾವ ಅಂಜಿಕೆ ಆತಂಕಗಳಿಲ್ಲದೆ ಆಟದಲ್ಲಿ ನಿರತವಾಗಿರುವೆ. ಆದರೆ ನೀನು ಒಮ್ಮೆ ಜಗನ್ಮಯಿಯನ್ನು ನೋಡಿದರೆ, ಇವುಗಳ ಮೇಲೆ ನಿನಗೆ ಆಸೆಯೇ ಇರುವುದಿಲ್ಲ. ಆಟದ ಸಾಮಾನನ್ನು ಆಚೆಗೆ ಎಸೆದು ನೀನು ಅವಳ ಬಳಿಗೆ ಓಡುವೆ.

11) ಎಣ್ಣೆ ಇಲ್ಲದೆ ದೀಪ ಹೇಗೆ ಉರಿಯುವುದಿಲ್ಲವೊ ಹಾಗೆಯೇ ದೇವರಿಲ್ಲದ ಜೀವ ಬದುಕಿರಲಾರದು.

12) ಕಬ್ಬಿಣಕ್ಕೆ ಸೂಜಿಗಲ್ಲು ಹೇಗೋ ಹಾಗೆಯೇ ದೇವರೂ ಕೂಡ ಜೀವನಿಗೆ. ಆದರೆ ಅವನು ಮನುಷ್ಯನನ್ನು ಏತಕ್ಕೆ ಆಕರ್ಷಿಸುವುದಿಲ್ಲ? ಮಣ್ಣಿನಿಂದ ತುಕ್ಕು ಹಿಡಿದುಹೋದ ಕಬ್ಬಿಣ ಹೇಗೆ ಶಿಲೆಯಿಂದ ಆಕರ್ಷಿತವಾಗಲಾರದೋ ಹಾಗೆಯೇ ಮಾಯಾ ಕೆಸರಿನಿಂದ ಆವೃತವಾದ ಜೀವನು ದೇವನ ಆಕರ್ಷಣವನ್ನು ತಿಳಿಯಲಾರ. ಆದರೆ ನೀರಿನಿಂದ ಮಣ್ಣನ್ನು ತೊಳೆದ ಮೇಲೆ ಕಬ್ಬಿಣ ಸರಾಗವಾಗಿ ಚಲಿಸಬಲ್ಲದು. ಇದರಂತೆಯೇ ಪ್ರಾರ್ಥನೆ ಮತ್ತು ಪಶ್ಚಾತ್ತಾಪಗಳ ಕಂಬನಿಯಿಂದ ಪ್ರಪಂಚಕ್ಕೆ ಅಂಟಿಕೊಳ್ಳುವಂತೆ ಮಾಡಿದ ಮಾಯೆಯ ಕೆಸರನ್ನು ಜೀವನು ತೊಳೆದಮೇಲೆ ದೇವರ ಆಕರ್ಷಣೆಗೆ ಒಳಗಾಗುತ್ತಾನೆ.

13) ಬಂಧನದಲ್ಲಿರುವ ಜೀವವೇ ಮನುಷ್ಯ. ಆದರೆ ಮಾಯೆಯಿಂದ ಪಾರಾದ ಮೇಲೆ ಅದೇ ಬ್ರಹ್ಮ.

14) ಜೀವಾತ್ಮರಿಗೂ ಪರಮಾತ್ಮರಿಗೂ ಇರುವ ಸಂಬಂಧವೆಂತಹುದು ? ಹರಿಯುತ್ತಿರುವ ನೀರಿಗೆ ಎದುರಾಗಿ ಒಂದು ಹಲಗೆಯನ್ನು ಇಟ್ಟರೆ ನೀರು ಇಬ್ಭಾಗವಾದಂತೆ ತೋರುವುದು. ಇದರಂತೆಯೆ ಮಾಯೆಯ ಪ್ರಭಾವದಿಂದ ಏಕವು ಜೀವಾತ್ಮ ಪರಮಾತ್ಮರೆಂದು ಭಾಗವಾದಂತೆ ತೋರುವುದು.

15) ನೀರು ಮತ್ತು ಅದರ ಮೇಲಿರುವ ನೀರುಗುಳ್ಳೆ ಎರಡೂ ಒಂದೇ. ನೀರಗುಳ್ಳೆ ನೀರಿನಿಂದ ಏಳುವುದು, ಅದರ ಮೇಲೆ ತೇಲುವುದು, ಕೊನೆಗೆ ಅದರಲ್ಲಿ ಐಕ್ಯವಾಗುವುದು. ಇದರಂತೆಯೇ ಜೀವಾತ್ಮ ಪರಮಾತ್ಮರೂ ಕೂಡ ಒಂದೇ. ಇವರಿಗೆ ವ್ಯತ್ಯಾಸವಿರುವುದು ತರತಮದಲ್ಲಿ ಮಾತ್ರ. ಒಂದು ಮಿತ ಉಳ್ಳದ್ದು, ಅದಕ್ಕೆ ಮೇರೆ ಇದೆ. ಇನ್ನೊಂದು ಅನಂತವಾದುದು. ಒಂದು ಅನ್ಯಾಶ್ರಯ ಜೀವಿ, ಮತ್ತೊಂದು ಸ್ವತಂತ್ರ.

16) ಅಹಂಕಾರವೆಂಬ ಭಾವನೆ ಗಂಗಾನದಿಯ ನೀರನ್ನು ಒಂದು ಪಾತ್ರೆಗೆ ಹಾಕಿ ಅದನ್ನು ನನ್ನ ಗಂಗೆ ಎಂದು ಹೇಳುವಂತೆ.

17) ಪಾದರಸ ಇರುವ ಒಂದು ಪಾತ್ರೆಗೆ ಒಂದು ಚೂರು ಸೀಸವನ್ನು ಹಾಕಿದರೆ ಅದು ಅದರಲ್ಲಿ ಕರಗಿಹೋಗುವಂತೆ ಜೀವಾತ್ಮ ಬ್ರಹ್ಮಸಾಗರಕ್ಕೆ ಬಿದ್ದ ಮೇಲೆ ತನ್ನ ಪ್ರತ್ಯೇಕತೆಯನ್ನು ಕಳೆದುಕೊಳ್ಳುವನು.

18) ದೇವರು ಮನುಷ್ಯನಂತೆ ಆಡುತ್ತಿರುವನು. ಅವನು ದೊಡ್ಡ ಐಂದ್ರಜಾಲಕನು. ಈ ಜೀವ ಜಗತ್ತು ಎಂಬ ತೋರಿಕೆ ಅವನ ಅದ್ಭುತವಾದ ಇಂದ್ರಜಾಲ. ಐಂದ್ರಜಾಲಕನೊಬ್ಬನೆ ಸತ್ಯ. ಇಂದ್ರಜಾಲವೆಲ್ಲ ಮಿಥ್ಯ.

19) ಸಚ್ಚಿದಾನಂದ ಸ್ವರೂಪವೇ ಜೀವಿಯ ನಿಜಸ್ವರೂಪ. ಅಹಂಕಾರದ ದೆಸೆಯಿಂದ ಅವನು ಹಲವು ಉಪಾಧಿಗಳಲ್ಲಿ ಬದ್ಧನಾಗಿ ತನ್ನ ನಿಜ ಸ್ವಭಾವವನ್ನು ಮರೆತಿರುವನು.

20) ಹಾವು ತನ್ನ ಪೊರೆಯಿಂದ ಹೇಗೆ ಬೇರೆಯೋ ಹಾಗೆಯೇ ಆತ್ಮ ದೇಹಕ್ಕಿಂತ ಬೇರೆ.

21) ಆತ್ಮನು ಯಾವುದಕ್ಕೂ ಸಂಬಂಧಿಸಿದವನಲ್ಲ. ಸುಖದುಃಖಗಳು ಧರ್ಮ ಅಧರ್ಮಗಳು ಆತ್ಮವನ್ನು ಯಾವ ವಿಧದಲ್ಲಿಯೂ ವಿಕಾರಿಯಾಗಿ ಮಾಡಲಾರವು. ಆದರೆ ಯಾರು ದೇಹವನ್ನು ತಾವೆಂದು ತಿಳಿದುಕೊಂಡಿರುವರೊ ಅವರ ಮೇಲೆ ತನ್ನ ಪರಿಣಾಮವನ್ನು ಬೀರುವುದು. ಹೊಗೆಯು ಗೋಡೆಯನ್ನು ಕಪ್ಪಾಗಿ ಮಾಡುವುದೇ ಹೊರತು ಗೋಡೆಗಳ ಮಧ್ಯದಲ್ಲಿರುವ ಆಕಾಶವನ್ನಲ್ಲ.

22) ಒಬ್ಬ ಬೆಸ್ತರವನು ಹೊಳೆಯಲ್ಲಿ ಬಲೆಯನ್ನು ಬೀಸಿ ಮೀನುಗಳನ್ನು ಹಿಡಿದನು. ಕೆಲವು ಮೀನುಗಳು ಬಲೆಯಲ್ಲಿ ಸ್ವಲ್ಪವೂ ಆಚೆಗೆ ಬರಲು ಪ್ರಯತ್ನ ಪಡದೆ ಸುಮ್ಮನೆ ಇದ್ದವು. ಮತ್ತೆ ಕೆಲವು ತಪ್ಪಿಸಿಕೊಂಡು ಹೋಗುವುದಕ್ಕೆ ಒದ್ದಾಡಿದುವು. ಆದರೆ ಪ್ರಯೋಜನವಾಗಲಿಲ್ಲ. ಮೂರನೆ ಬಗೆಯ ಮೀನುಗಳು ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಹೋದುವು. ಪ್ರಪಂಚದಲ್ಲಿಯೂ ಕೂಡ ಇದರಂತೆ ಮೂರು ಬಗೆಯ ಜನರು ಇರುವರು. ಬದ್ಧರು, ಮುಕ್ತರಾಗಲು ಪ್ರಯತ್ನಿಸುವವರು ಮತ್ತು ಆಗಲೆ ಮುಕ್ತಿಯನ್ನು ಪಡೆದವರು.

23) ಮನುಷ್ಯರು ತಲೆದಿಂಬಿನ ಚೀಲಗಳಂತೆ. ಒಂದರ ಬಣ್ಣ ಕೆಂಪು, ಮತ್ತೊಂದು ನೀಲಿ, ಮೂರನೆಯದು ಕಪ್ಪು ಇರಬಹುದು. ಆದರೆ ಎಲ್ಲ ದಿಂಬಿನ ಒಳಗೂ ಒಂದೇ ಹತ್ತಿ ಇದೆ. ಇದರಂತೆಯೇ ಮನುಷ್ಯರೂ ಕೂಡ. ಒಬ್ಬನು ಸುಂದರನಾಗಿರುವನು, ಮತ್ತೊಬ್ಬನು ಕಪ್ಪಾಗಿರುವನು. ಮೂರನೆಯವನು ಪುಣ್ಯಾತ್ಮನಾಗಿರಬಹುದು, ನಾಲ್ಕನೆಯವನು ದುರಾತ್ಮನಾಗಿರಬಹುದು. ಆದರೆ ಪರಮಾತ್ಮನು ಎಲ್ಲರಲ್ಲಿಯೂ ಇರುವನು.

24) ದೇವರು ಹುಲಿಯಲ್ಲಿ ಕೂಡ ಇರುವುದು ನಿಜ. ಆದರೆ ಅದಕ್ಕಾಗಿ ನಾವು ಹೋಗಿ ಅದನ್ನು ಮುಟ್ಟಬೇಕಾಗಿಲ್ಲ. ಅತ್ಯಂತ ದುಷ್ಟರಲ್ಲಿ ಕೂಡ ದೇವರು ಇರುತ್ತಾನೆ ಎಂಬುದು ನಿಜ. ಆದರೆ ಅವರೊಂದಿಗೆ ನಾವು ಸಲಿಗೆಯಿಂದ ಇರುವುದು ಯೋಗ್ಯವಲ್ಲ.

25) ಶ್ರೀಮನ್ನಾರಾಯಣ ನೀರಿನ ಮೇಲೆ ಮಲಗುತ್ತಾನೆ. ಆದರೆ ಎಲ್ಲ ವಿಧದ ನೀರು ಕುಡಿಯಲು ಯೋಗ್ಯವಲ್ಲ. ಇದರಂತೆಯೆ ದೇವರು ಸರ್ವಾಂತರ್ಯಾಮಿಯಾಗಿರುವುದು ನಿಜವಾದರೂ ಮನುಷ್ಯರು ಎಲ್ಲ ಸ್ಥಳಕ್ಕೂ ಹೋಗುವುದು ಯೋಗ್ಯವಲ್ಲ. ಒಂದು ನೀರನ್ನು ಕಾಲು ತೊಳೆಯುವುದಕ್ಕೆ ಉಪಯೋಗಿಸಬಹುದು. ಮತ್ತೊಂದನ್ನು ಬಾಯಿ ಮುಕ್ಕಳಿಸುವುದಕ್ಕೆ ಮೂರನೆಯದನ್ನು ಕುಡಿಯುವುದಕ್ಕೆ ಉಪಯೋಗಿಸಬಹುದು. ಮುಟ್ಟಲು ಕೂಡಾ ಯೋಗ್ಯವಲ್ಲದ ಉಳಿದ ಎಷ್ಟೋ ಬಗೆಯ ನೀರುಗಳು ಕೂಡಾ ಇವೆ. ಇದರಂತೆಯೆ ಹಲವು ಸ್ಥಳಗಳಿವೆ. ಕೆಲವದರ ಹತ್ತಿರ ಹೋಗಬಹುದು; ಮತ್ತೊಂದನ್ನು ಪ್ರವೇಶಿಸಬಹುದು. ಮತ್ತೆ ಕೆಲವು ಸ್ಥಳಗಳಿವೆ, ಅವಕ್ಕೆ ದೂರದಿಂದಲೇ ನಮಸ್ಕಾರ ಮಾಡಬೇಕು.

26) ಸಾಯುವ ಸಮಯದಲ್ಲಿ ಕೂಡ ಬದ್ಧಜೀವಿಗಳು ಪ್ರಾಪಂಚಿಕ ವಿಷಯವನ್ನೇ ಮಾತನಾಡುತ್ತಾರೆ. ಮನಸ್ಸಿನಲ್ಲಿ ಪ್ರಾಪಂಚಿಕ ಆಸೆ ಇದ್ದರೆ, ತೀರ್ಥಯಾತ್ರೆ, ಗಂಗಾಸ್ನಾನ, ಜಪ ಮುಂತಾದುವುಗಳನ್ನು ಮಾಡಿ ಪ್ರಯೋಜನವಿಲ್ಲ. ಪ್ರಾಪಂಚಿಕ ಸಂಸ್ಕಾರಗಳು ಕೊನೆಗಾಲದಲ್ಲಿ ವ್ಯಕ್ತವಾಗುತ್ತವೆ. ಆದಕಾರಣವೇ ಬದ್ಧಜೀವಿಗಳು ಅಂತಹ ಕಾಲದಲ್ಲಿ ಹುಚ್ಚುಹುಚ್ಚಾಗಿ ಅರಚುತ್ತಾರೆ. ಗಿಳಿ ಸಾಧಾರಣ ಕಾಲದಲ್ಲಿ ರಾಧಾಕೃಷ್ಣ ಎಂದು ಹಾಡಬಹುದು. ಆದರೆ ಅದನ್ನು ಬೆಕ್ಕು ಹಿಡಿದಾಗ ‘ಕಾಂಗ್ ಕಾಂಗ್’ ಎಂಬ ಅದರ ಸಹಜ ಧ್ವನಿಮಾತ್ರ ವ್ಯಕ್ತವಾಗುವುದು.

27) ದೇವರ ಮೇಲೆ ಭಕ್ತಿ ಇಲ್ಲದೆ ಇರುವುದರಿಂದ ಮನುಷ್ಯನು ಅಷ್ಟು ದುಃಖಪಡುವುದು. ಆದಕಾರಣವೇ ಕಡೆಗಾಲದಲ್ಲಿ ದೇವರ ಆಲೋಚನೆ ಬರುವಂತೆ ಒಬ್ಬನು ಅಭ್ಯಾಸ ಮಾಡಬೇಕು. ಈಶ್ವರ ಭಕ್ತಿಯೇ ಇದಕ್ಕೆ ಮಾರ್ಗ. ಬದುಕಿರುವಾಗ ಇದನ್ನು ಮಾಡಿದರೆ ಕೊನೆಗಾಲದಲ್ಲಿ ಕೂಡ ದೇವರ ಆಲೋಚನೆ ಬರುವುದರಲ್ಲಿ ಸಂದೇಹವಿಲ್ಲ.

28) ಸಾಯುವುದಕ್ಕೆ ಮುಂಚೆ ಅವನು ಏನನ್ನು ಆಲೋಚಿಸುತ್ತಿದ್ದನೊ ಅದರ ಮೇಲೆ ಅವನ ಜನ್ಮ ನಿಷ್ಕರ್ಷೆಯಾಗುವುದು. ಭಕ್ತಿ ಅದಕ್ಕೆ ಅತ್ಯಾವಶ್ಯಕ. ಪ್ರತಿದಿನದ ಸಾಧನೆಯಿಂದ ಒಬ್ಬನ ಮನಸ್ಸಿನಲ್ಲಿ ಪ್ರಾಪಂಚಿಕತೆಯೆಲ್ಲ ಹೋಗಿದ್ದರೆ, ಆ ಸ್ಥಳವನ್ನು ಆಕ್ರಮಿಸುವ ದೇವರ ಆಲೋಚನೆಗಳು ಸಾಯುವ ಸಮಯದಲ್ಲಿ ಕೂಡ ಬಿಟ್ಟುಹೋಗುವುದಿಲ್ಲ.

29) ಶಿವ ಮತ್ತು ಶಕ್ತಿ ಇಬ್ಬರೂ ಸೃಷ್ಟಿಗೆ ಆವಶ್ಯಕ. ಒಣಗಿದ ಜೇಡಿಮಣ್ಣಿನಿಂದ ಯಾವ ಕುಂಬಾರನೂ ಮಡಕೆಯನ್ನು ಮಾಡಲಾರ. ನೀರು ಕೂಡ ಆವಶ್ಯಕ. ಹಾಗೆಯೇ ಶಕ್ತಿಯ ಸಹಾಯವಿಲ್ಲದೆ ಶಿವನೊಬ್ಬನೆ ಸೃಷ್ಟಿಸಲಾರ.

30) ಹಾವಿಗೆ ತನ್ನ ಹಲ್ಲಿನಲ್ಲಿರುವ ವಿಷದಿಂದ ಅದಕ್ಕೆ ಏನೂ ಅಪಾಯವಿಲ್ಲ. ಆದರೆ ಇನ್ನೊಂದು ಪ್ರಾಣಿಯನ್ನು ಕಚ್ಚಿದಾಗ ವಿಷ ಆ ಪ್ರಾಣಿಯನ್ನು ಕೊಲ್ಲುತ್ತದೆ. ಹೀಗೆಯೇ ಮಾಯೆಯು ಈಶ್ವರನಲ್ಲಿದೆ. ಆದರೆ ಅವನಿಗೆ ಇದರಿಂದ ಏನೂ ತೊಂದರೆ ಇಲ್ಲ. ಆದರೆ ಅದೇ ಮಾಯೆ ವಿಶ್ವವನ್ನೇ ಮೋಹಗೊಳಿಸುವುದು.

31) ದೇವರು ಸರ್ವಾಂತರ್ಯಾಮಿಯಾದರೆ ನಾವು ಅವನನ್ನು ಯಾತಕ್ಕೆ ನೋಡುವುದಿಲ್ಲ? ಪಾಚಿಯಿಂದ ಬೆಳೆದ ಕೊಳದ ಸಮೀಪದಲ್ಲಿ ನಿಂತು ನೋಡಿದರೆ ನೀರು ಅಲ್ಲಿ ಕಾಣಿಸುವುದಿಲ್ಲ. ನೀರನ್ನು ನೋಡಬೇಕೆಂದು ನೀನು ಬಯಸಿದರೆ, ಕೊಳದ ಮೇಲಿಂದ ಪಾಚಿಯನ್ನು ತೆಗೆ. ಮಾಯೆಯ ತೆರೆಯಿಂದ ಆವೃತನಾಗಿರುವಾಗ ದೇವರನ್ನು ಕಾಣಲಾರೆ ಎಂದು ದೂರು ಹೇಳುವೆ. ನೀನು ಅವನನ್ನು ನೋಡಬೇಕೆಂದು ಬಯಸಿದರೆ ನಿನ್ನ ಕಣ್ಣಿನಿಂದ ಮಾಯೆಯ ಪೊರೆಯನ್ನು ತೆರೆ.

32) ಮೋಡ ಸೂರ್ಯನನ್ನು ಮುಚ್ಚುವಂತೆ ಮಾಯೆ ದೇವರನ್ನು ಮುಚ್ಚುವುದು. ಮೋಡ ಚಲಿಸಿದರೆ ಸೂರ್ಯ ಕಾಣಿಸುತ್ತಾನೆ. ಮಾಯೆ ಜಾರಿದರೆ ದೇವರು ಕಾಣಿಸುತ್ತಾನೆ.

33) ಪುರಾಣ ಪ್ರಸಿದ್ಧವಾದ ರಾಜಹಂಸ ಹಾಲನ್ನು ಅದರೊಂದಿಗೆ ಬೆರೆಸಿದ ನೀರಿನಿಂದ ಬೇರೆ ಮಾಡಿ ನೀರನ್ನು ಬಿಟ್ಟು ಹಾಲನ್ನು ಮಾತ್ರ ಕುಡಿಯುವುದು. ಉಳಿದ ಹಕ್ಕಿಗಳು ಇದನ್ನು ಮಾಡಲಾರವು. ದೇವರು ಮಾಯೆಯೊಂದಿಗೆ ಮಿಶ್ರವಾಗಿ ಹೋಗಿರುವನು. ಸಾಧಾರಣ ಮನುಷ್ಯರು ಅವನನ್ನು ಮಾಯೆಯಿಂದ ಬೇರೆ ನೋಡಲಾರರು. ಪರಮಹಂಸನೊಬ್ಬನೇ ಮಾಯೆಯನ್ನು ತ್ಯಜಿಸಿ, ಪರಿಶುದ್ಧವಾದ ದೇವರನ್ನು ಸೇರುವನು.

34) ಮೋಹಕಾರಿಯಾದ ಮಾಯೆಯ ಸ್ವಭಾವವನ್ನು ನೀನು ತಿಳಿದರೆ, ಪತ್ತೆಯಾದ ಕಳ್ಳ ಓಡಿಹೋಗುವಂತೆ ಅದು ಮಾಯವಾಗುವುದು.

35) ದೇವರಲ್ಲಿ ವಿದ್ಯಾಮಾಯೆ ಮತ್ತು ಅವಿದ್ಯಾಮಾಯೆ ಎರಡೂ ಇವೆ. ವಿದ್ಯಾಮಾಯೆ ಜೀವಿಯನ್ನು ದೇವರ ಕಡೆಗೆ ಕರೆದೊಯ್ಯುವುದು. ಅವಿದ್ಯಾಮಾಯೆ ಜೀವಿಯನ್ನು ದೇವರಿಗೆ ವಿಮುಖವಾಗಿ ಕರೆದೊಯ್ಯುವುದು. ಜ್ಞಾನ, ಭಕ್ತಿ , ವೈರಾಗ್ಯ, ದಯೆ ಇವು ವಿದ್ಯಾಮಾಯೆಯ ಲಕ್ಷಣ. ಇವುಗಳ ಸಹಾಯದಿಂದ ಮಾತ್ರ ನಾವು ದೇವರನ್ನು ಪಡೆಯಬಹುದು.

36) ಮಾಯೆಯ ಮೂಲಕವೇ ಬ್ರಹ್ಮಸಾಕ್ಷಾತ್ಕಾರ. ಮಾಯೆಯ ಕೃಪೆ ಇಲ್ಲದೆ ಬ್ರಹ್ಮ ಸಾಕ್ಷಾತ್ಕಾರ ಯಾರಿಗೆ ತಾನೇ ಸಾಧ್ಯ? ಬ್ರಹ್ಮದ ವ್ಯಕ್ತ ಸ್ವರೂಪವಾದ ಶಕ್ತಿಯನ್ನು ಅರಿತಲ್ಲದೆ ಬ್ರಹ್ಮಾನುಭವಕ್ಕೆ ಬೇರೆ ಮಾರ್ಗವಿಲ್ಲ.

37) ಬೆಕ್ಕು ತನ್ನ ಹಲ್ಲಿನಿಂದ ಮರಿಯನ್ನು ಹಿಡಿದುಕೊಳ್ಳುತ್ತದೆ. ಅದರಿಂದ ಮರಿಗೆ ವ್ಯಥೆಯಾಗುವುದಿಲ್ಲ. ಆದರೆ ಇಲಿಯನ್ನು ಹಾಗೆ ಹಿಡಿದರೆ ಅದು ಸಾಯುತ್ತದೆ. ಹೀಗೆಯೇ ಮಾಯೆ ಉಳಿದವರನ್ನು ನಾಶ ಮಾಡಿದರೂ ಎಂದಿಗೂ ಭಕ್ತರನ್ನು ಕೊಲ್ಲುವುದಿಲ್ಲ.

38) ಸಂಸಾರದಲ್ಲಿ ಸಿಕ್ಕಿದ ಬದ್ಧಜೀವಿಗಳು ಸಾವಿರಾರು ಅಪಮಾನಗಳು ಬಂದರೂ ಕಾಮಕಾಂಚನಗಳನ್ನು ನಿಗ್ರಹಿಸಿ ದೇವರ ಕಡೆಗೆ ಮನಸ್ಸನ್ನು ಕೊಡಲಾರರು.

39) ಗೃಹಸ್ಥರೇ! ಜೋಪಾನವಾಗಿರಿ. ಹೆಂಗಸರಲ್ಲಿ ಹೆಚ್ಚು ನೆಚ್ಚಿಗೆಯನ್ನು ಇಡಬೇಡಿ. ಹೊಂಚಿಕೊಂಡಿದ್ದು ನಿಮ್ಮನ್ನು ಅವರು ಹೇಳಿದಂತೆ ಕೇಳುವಂತೆ ಮಾಡುವರು.

40) ಮಸಿ ಇರುವ ಕೋಣೆಯಲ್ಲಿ ನೀವು ಎಷ್ಟೇ ಜೋಪಾನವಾಗಿದ್ದರೂ ಸ್ವಲ್ಪ ಮಸಿಯಾಗದೆ ಇರದು. ಇದರಂತೆಯೆ ಮನುಷ್ಯನು ಹೆಂಗಸಿನೊಂದಿಗೆ ಇದ್ದರೆ, ಅವನು ಎಷ್ಟೇ ಇಂದ್ರಿಯನಿಗ್ರಹ ಮಾಡಿದ್ದರೂ, ಅಲ್ಪ ಪ್ರಮಾಣದಲ್ಲಾದರೂ ಕಾಮದ ಆಲೋಚನೆ ಏಳುವುದು.

41) “ಕಾಮ ಕಾಂಚನ” ಇವೆರಡು ಮನುಷ್ಯರನ್ನು ದೇವರಿಂದ ವಿಮುಖರನ್ನಾಗಿ ಮಾಡಿ ಸಂಸಾರದಲ್ಲಿ ಮಗ್ನರಾಗುವಂತೆ ಮಾಡುವುವು. ಇದನ್ನು ನೆನಪಿನಲ್ಲಿಡಿ. ಎಲ್ಲರೂ ತಮ್ಮ ಹೆಂಡತಿಯನ್ನು, ಅವಳು ಒಳ್ಳೆಯವಳೊ ಕೆಟ್ಟವಳೊ, ಕೆಲಸಕ್ಕೆ ಬಾರದವಳೊ, ಏನಾದರಾಗಲಿ ಹೊಗಳುವರಲ್ಲದೆ ಮತ್ತೇನೂ ಇಲ್ಲ. ಇದೊಂದು ವಿಚಿತ್ರವೇ ಸರಿ.

42) ಬೇಟೆಯವನ ಕಾಲಿನ ಹತ್ತಿರ ತನ್ನ ಪ್ರಾಣವನ್ನು ಕಳೆದುಕೊಳ್ಳುವಂತೆ ಮನುಷ್ಯ ಸುಂದರ ನಾರಿಯ ಪಾದತಳದಲ್ಲಿ ಬಿದ್ದು ಸಾಯುವನು.

43) ಯಾರು ದೇವರನ್ನು ಹೊಂದಬೇಕು ಅಥವಾ ಸಾಧನೆಯಲ್ಲಿ ಮುಂದುವರಿಯಬೇಕು ಎಂದು ಬಯಸುವರೊ ಅವರು ಕಾಮಕಾಂಚನದ ಬಲೆಗೆ ಬೀಳದಂತೆ ಜೋಪಾನವಾಗಿ ಇರಬೇಕು. ಹಾಗಿಲ್ಲದೆ ಇದ್ದರೆ ಅವರೆಂದಿಗೂ ಗುರಿಯನ್ನು ಸೇರಲಾರರು.

44) ನಿತ್ಯಾನಂದನು ಶ್ರೀ ಚೈತನ್ಯರನ್ನು “ನನ್ನ ಪರಮ ಭಕ್ತಿ ಬೋಧನೆಗಳೆಲ್ಲ ಜನರ ಮನಸ್ಸಿನ ಮೇಲೆ ಸಾಕಾದಷ್ಟು ಪರಿಣಾಮವನ್ನು ಏತಕ್ಕೆ ಉಂಟು ಮಾಡಲಿಲ್ಲ?” ಎಂದು ಕೇಳಿದನು. ಅದಕ್ಕೆ ಚೈತನ್ಯರು “ಹೆಂಗಸಿನ ಸಂಗದಿಂದ ಅವರು ಗಹನವಿಷಯವನ್ನು ತಿಳಿದುಕೊಳ್ಳಲಾರರು. ಕೇಳು, ಸೋದರ ನಿತ್ಯಾನಂದ, ಪ್ರಪಂಚದಲ್ಲೇ ನಿರತನಾದವನಿಗೆ ಮೋಕ್ಷವಿಲ್ಲ” ಎಂದರು.

45) ತಕ್ಕಡಿಯ ಕೋಲು ಮಧ್ಯದ ಸೂಜಿಯಿಂದ ಯಾವಾಗ ವಾಲುವುದು? ಒಂದು ತಟ್ಟೆ ಮತ್ತೊಂದು ಕಡೆಗಿಂತ ಭಾರವಾದಾಗ. ಇದರಂತೆಯೆ ಮನಸ್ಸಿನ ಮೇಲೆ ಕಾಮಕಾಂಚನಗಳ ಭಾರ ಬಿದ್ದಾಗ ಸಮತ್ವ ಹೋಗಿ ದೇವರಿಗೆ ವಿರೋಧವಾಗಿ ವಾಲುವುದು.

46) ನೀರಿನ ಗಡಿಗೆಯ ತಳದಲ್ಲಿ ಒಂದು ಸಣ್ಣ ತೂತು ಇದ್ದರೆ ನೀರೆಲ್ಲ ಸೋರಿಹೋಗುವುದು. ಇದರಂತೆಯೆ ಸಾಧಕನಲ್ಲಿ ಅತ್ಯಲ್ಪ ಪ್ರಾಪಂಚಿಕತೆ ಇದ್ದರೂ ಕೂಡ ಅವನ ಸಾಧನೆಯೆಲ್ಲ ನಿಷ್ಫಲವಾಗುವುದು.

47) ಕಾಮವನ್ನು ಸಂಪೂರ್ಣ ನಿಗ್ರಹಿಸಲು ಯತ್ನಿಸು. ಒಬ್ಬನು ಇದರಲ್ಲಿ ಜಯಶೀಲನಾದರೆ ಇದುವರೆಗೂ ಇನ್ನೂ ಬೆಳೆಯದ ಮೇಧಾ ಎಂಬ ನರವು ಅಭಿವೃದ್ಧಿಯಾಗಿ, ದೇಹವು ಪಾಶವೀಶಕ್ತಿಯನ್ನು ದೈವೀಶಕ್ತಿಯನ್ನಾಗಿ ಮಾರ್ಪಡಿಸುವುದು. ಈ ಮೇಧಾನರ ಅಭಿವೃದ್ಧಿಯಾದ ಮೇಲೆ ನಮಗೆ ಪರಮಾತ್ಮನ ಪರಿಚಯವಾಗುವುದು.

48) ವಿಷಸರ್ಪಗಳಿಂದ ಕೂಡಿದ ಮನೆಯಲ್ಲಿರುವವರು ಯಾವಾಗಲೂ ಜೋಪಾನವಾಗಿರುವಂತೆ ಕಾಮಕಾಂಚನಗಳ ಪ್ರಲೋಭನೆಗಳಿಗೆ ಸಿಕ್ಕದಂತೆ ಯಾವಾಗಲೂ ಜೋಪಾನವಾಗಿರಬೇಕು.

49) ಕಾಮಕಾಂಚನ, ಪ್ರಪಂಚವನ್ನೆಲ್ಲ ಪಾಪದಲ್ಲಿ ಮುಳುಗಿಸಿದೆ. ಕಾಮಿನಿಯನ್ನು ಜಗನ್ಮಯಿಯ ಆವಿರ್ಭಾವವೆಂದು ನೋಡಿದಾಗ ಅವಳು ನಿಶ್ಯಸ್ತ್ರಳಾಗುವಳು. ಕಾಮಕಾಂಚನಗಳ ಮೇಲೆ ಜೀವಿಗೆ ಆಸೆ ಆನಂದ ಇರುವ ತನಕ ದೇವರನ್ನು ನೋಡಲಾರ.

50) ತೀವ್ರ ವೈರಾಗ್ಯದಿಂದ ಯಾರು ದೇವರನ್ನು ಪಡೆಯುತ್ತಾರೆಯೊ ಅವರಿಗೆ ಕಾಮದ ಆಸೆ ಮತ್ತು ಮಾಯೆ ಮಾಯವಾಗುವುವು. ತನ್ನ ಹೆಂಡತಿಯಿಂದಲೂ ಕೂಡ ಅವನಿಗೆ ಆಗ ಏನೂ ಅಪಾಯವಿರುವುದಿಲ್ಲ. ಒಂದು ಕಬ್ಬಿಣದ ತುಂಡಿಗೆ ಸಮದೂರದಲ್ಲಿ ಹೆಚ್ಚು ಮತ್ತು ಕಡಿಮೆ ಶಕ್ತಿಯುಳ್ಳ ಅಯಸ್ಕಾಂತಶಿಲೆ ಇದ್ದರೆ, ಯಾವುದು ಕಬ್ಬಿಣವನ್ನು ಹೆಚ್ಚು ವೇಗದಿಂದ ಸೆಳೆಯುವುದು? ನಿಜವಾಗಿಯೂ ಯಾವುದಕ್ಕೆ ಹೆಚ್ಚು ಶಕ್ತಿ ಇದೆಯೊ ಅದು. ನಿಸ್ಸಂಶಯವಾಗಿಯೂ ದೇವರು ಹೆಚ್ಚು ಶಕ್ತಿಯುಳ್ಳ ಅಯಸ್ಕಾಂತಶಿಲೆ. ಸಣ್ಣ ಅಯಸ್ಕಾಂತಶಿಲೆಯಾದ ಹೆಣ್ಣು ಏನನ್ನು ಮಾಡಬಲ್ಲಳು?

51) ಹಣದಿಂದ ಅನ್ನ ಮಾತ್ರ ಸಿಕ್ಕುತ್ತದೆ. ಅದನ್ನೇ ನಿನ್ನ ಜೀವನದ ಗುರಿಯನ್ನಾಗಿ ಮಾಡಿಕೊಳ್ಳಬೇಡ.

52) ಕೆಲವರು ತಮ್ಮ ಐಶ್ವರ್ಯ, ದರ್ಪ, ಹೆಸರು, ಕೀರ್ತಿ, ಸಮಾಜದಲ್ಲಿ ತಮಗೆ ಇರುವ ಸ್ಥಾನ ಇವುಗಳನ್ನು ಜಂಬ ಕೊಚ್ಚಿಕೊಳ್ಳುವರು. ಆದರೆ ಇವು ಕೆಲವು ದಿನ ಮಾತ್ರ. ಸತ್ತ ಮೇಲೆ ಇವುಗಳಾವುವೂ ಹಿಂದೆ ಬರುವುದಿಲ್ಲ.

53) ಎರಡು ವೇಳೆ ದೇವರು ನಗುತ್ತಾನೆ. ಮೊದಲನೆಯ ಸಲ ವೈದ್ಯನು ಇನ್ನೇನು ಸಾಯಲಿರುವ ರೋಗಿಯ ತಾಯಿಯ ಬಳಿಗೆ ಬಂದು “ಏನಮ್ಮ, ಅಂಜಿಕೊಳ್ಳಬೇಕಾಗಿಲ್ಲ. ನಿನ್ನ ಮಗನ ಜೀವವನ್ನು ಉಳಿಸುವ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ” ಎಂದಾಗ. ಎರಡನೆ ಸಲ, ಇಬ್ಬರು ಅಣ್ಣತಮ್ಮಂದಿರು ಭೂಮಿಯನ್ನು ವಿಭಾಗಮಾಡಿಕೊಳ್ಳುವಾಗ, ಅಳೆಯುವ ದಾರವನ್ನು ಜಮೀನಿನ ಮೇಲೆ ಇಟ್ಟು “ಈ ಕಡೆಯದು ನನ್ನದು, ಆ ಕಡೆಯದು ನಿನ್ನದು” ಎಂದು ಹೇಳುವಾಗ.

54) ಸೇತುವೆಯ ಕೆಳಗಡೆ ನೀರು ಯಾವಾಗಲೂ ಹರಿದುಹೋಗುತ್ತದೆ. ಅಲ್ಲಿ ತಂಗುವುದಿಲ್ಲ. ಅದರಂತೆಯೇ ಮುಕ್ತನ ಕೈಯಲ್ಲಿ ಹಣ ಸಾಗಿ ಹೋಗುತ್ತದೆ. ಅವರೆಂದಿಗೂ ಕೂಡಿ ಇಡುವುದಿಲ್ಲ.

55) ಯಾರಿಗೆ ಹಣ ಸೇವಕನೋ ಅವನೇ ನಿಜವಾದ ಮನುಷ್ಯ. ಅದಲ್ಲದೆ ಯಾರು ಹಣವನ್ನು ಹೇಗೆ ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ತಿಳಿಯರೋ ಅವರು ಮನುಷ್ಯರೆಂದು ಕರೆಯುವುದಕ್ಕೆ ಯೋಗ್ಯರಲ್ಲ.

56) ಸೂರ್ಯ ಜಗತ್ತಿಗೆ ಶಾಖ ಮತ್ತು ಬೆಳಕನ್ನು ಕೊಡಬಲ್ಲನು. ಆದರೆ ಮೋಡ ಅವನ ಕಿರಣವನ್ನು ಮುಚ್ಚಿದರೆ ಅವನು ಕೊಡಲಾರ. ಇದರಂತೆಯೇ ಎಲ್ಲಿಯವರೆಗೂ ಅಹಂಕಾರವು ಹೃದಯವನ್ನು ಆವರಿಸಿರುವುದೊ ಅಲ್ಲಿಯವರೆಗೆ ದೇವರು ಅಲ್ಲಿ ಬೆಳಗಲಾರನು.

57) ನನ್ನ ಮುಂದೆ ಈ ಬಟ್ಟೆಯನ್ನು ಹಿಡಿದರೆ, ನಾನು ಹಿಂದೆ ಇದ್ದಷ್ಟೇ ಹತ್ತಿರವಿದ್ದರೂ ನೀನು ನನ್ನನ್ನು ನೋಡಲಾರೆ. ಅದರಂತೆಯೇ ದೇವರು ಉಳಿದ ಎಲ್ಲಾ ವಸ್ತುಗಳಿಗಿಂತಲೂ ಹತ್ತಿರದಲ್ಲಿದ್ದರೂ ಮಾಯೆಯ ತೆರೆ ಇರುವುದರಿಂದ ನೀನು ಅವನನ್ನು ನೋಡಲಾರೆ.

58) ಅಹಂಕಾರವಿರುವ ತನಕ ಆತ್ಮಜ್ಞಾನವಾಗಲಿ ಮುಕ್ತಿಯಾಗಲಿ ದೊರಕುವುದಿಲ್ಲ; ಜನನ ಮರಣಗಳಿಗೆ ಕೊನೆಯಿಲ್ಲ.

59) ಮಳೆಯ ನೀರು ಎಂದಿಗೂ ಎತ್ತರದ ಪ್ರದೇಶದಲ್ಲಿ ನಿಲ್ಲುವುದಿಲ್ಲ. ಯಾವಾಗಲೂ ಇಳಿಜಾರಿನ ಪ್ರದೇಶಕ್ಕೆ ಹರಿದು ಬರುವುದು. ಇದರಂತೆಯೇ ದೇವರೂ ಕೂಡ ಅತಿ ವಿನೀತರ ಹೃದಯದಲ್ಲಿ ಇರುವನು. ದುರಭಿಮಾನಿಗಳಿಂದ ಮತ್ತು ಅಹಂಕಾರಿಗಳಿಂದ ಜಾರಿಹೋಗುವನು.

60) ಎಲ್ಲರ ಅಹಂಕಾರವು ಕ್ರಮೇಣ ನಾಶವಾಗಿ ಹೋಗುವುದು. ಆದರೆ ಸಾಧುವಿಗೆ ತನ್ನ ಸಾಧುತ್ವದ ಮೇಲೆ ಇರುವ ಅಹಂಕಾರ ತೊಲಗುವುದು ಬಹಳ ಕಷ್ಟ.

61) ಬೆಳ್ಳುಳ್ಳಿ ರಸವಿಟ್ವ ಬಟ್ಟಲನ್ನು ಎಷ್ಟು ಸಲ ತೊಳೆದರೂ ಆ ವಾಸನೆ ಇದ್ದೇ ಇರುತ್ತದೆ. ಅಹಂಕಾರವೆನ್ನುವುದು ಬಡಪೆಟ್ಟಿಗೆ ಬಿಡಲೊಲ್ಲದ ಮಾಯೆಯ ಸ್ವಭಾವ. ಅದರಿಂದ ಪಾರಾಗಲು ನೀನು ಎಷು ಪ್ರಯತ್ನಪಟ್ಟರೂ ಅದು ಸಂಪೂರ್ಣ ಎಂದಿಗೂ ಬಿಟ್ಟು ಹೋಗುವುದಿಲ್ಲ.

62) ಹೆಸರು ಮತ್ತು ಕೀರ್ತಿಯನ್ನು ಗಳಿಸಬೇಕೆಂದಿರುವವರು ಮೋಹದಲ್ಲಿರುವರು. ಎಲ್ಲಾ ಇತ್ಯರ್ಥವಾಗುವುದು ಭಗವಂತನಿಂದ ಎನ್ನುವುದನ್ನು ಅವರು ಮರೆತಿರುವರು. ಒಳ್ಳೆಯವನು ಯಾವಾಗಲೂ “ಎಲ್ಲವೂ ನೀನೆ, ಹೇ ಭಗವಂತ” ಎನ್ನುವನು. ಅಜ್ಞಾನಿಗಳು, ಮೋಹದಲ್ಲಿ ಬಿದ್ದವನು “ನಾನು” “ನಾನು” ಎನ್ನುವನು.

63) ಎರಡು ತರಹ ಅಹಂಕಾರಗಳಿವೆ. ಒಂದು ಮಾಗಿದ ಅಹಂಕಾರ ಮತ್ತೊಂದು ಮಾಗದ ಅಹಂಕಾರ. “ಯಾವುದೂ ನನ್ನದಲ್ಲ. ನಾನು ಏನು ನೋಡಿದರೂ, ಅನುಭವಿಸಿದರೂ, ಕೇಳಿದರೂ ಈ ದೇಹವು ಕೂಡ ನನ್ನದಲ್ಲ. ನಾನು ಯಾವಾಗಲೂ ಅನಾದಿಯು ನಿತ್ಯಸ್ವತಂತ್ರನು ಮತ್ತು ಸರ್ವಜ್ಞನು” ಎಂಬುದು ಮಾಗಿದ ಅಹಂಕಾರದಿಂದ ಬರುವುದು. “ಇದು ನನ್ನ ಮಗು, ಇವಳು ನನ್ನ ಹೆಂಡತಿ, ಇದು ನನ್ನ ದೇಹ” ಎಂಬ ಭಾವ ಮಾಗದ ಅಹಂಕಾರದಿಂದ ಬಂದಿರುವುದು.

64) ನಾನು ದೇವರ ಸೇವಕ ಎಂದು ಕಾಣಿಸಿಕೊಳ್ಳುವ ಅಹಂಕಾರ ಭಕ್ತನ ಲಕ್ಷಣ. ಇದೇ ವಿದ್ಯಾ ಅಹಂಕಾರ, ಇದನ್ನೆ ಮಾಗಿದ ಅಹಂಕಾರವೆನ್ನುವುದು.

65)’ಕೆಟ್ಟ ನಾನೆಂಬುದು ಯಾವುದು?’ ಯಾವ ನಾನು ಎಂಬುದು, “ಏನು, ಅವರಿಗೆ ನಾನು ಗೊತ್ತಿಲ್ಲವೆ? ನನಗೆ ಎಷ್ಟೊಂದು ಐಶ್ವರ್ಯವಿದೆ! ನನ್ನಷ್ಟು ಐಶ್ವರ್ಯವಂತರು ಯಾರು? ನನ್ನನ್ನು ಮೀರಿಸುವವರು ಯಾರು?” ಎನ್ನುವುದು.

66) ಶಂಕರಾಚಾರ್ಯರನ್ನು ಬಹಳ ಕಾಲ ಶುಶ್ರೂಷೆ ಮಾಡುತ್ತಿದ್ದ ಶಿಷ್ಯನೊಬ್ಬನು ಇದ್ದನು. ಆದರೂ ಅವನಿಗೆ ಯಾವ ಉಪದೇಶವನ್ನೂ ಕೊಟ್ಟಿರಲಿಲ್ಲ. ಒಂದು ದಿನ ಶಂಕರಾಚಾರ್ಯರು ಕುಳಿತುಕೊಂಡಿದ್ದಾಗ ಹಿಂದಿನಿಂದ ಯಾರೋ ಬರುವ ಸದ್ದು ಕೇಳಿಸಿತು. ಅವರು “ಯಾರವರು?” ಎಂದು ಕೇಳಿದರು. ಶಿಷ್ಯನು “ನಾನು” ಎಂದನು. ಅಗ ಶಂಕರಾಚಾರ್ಯರು “ಈ ನಾನೆಂಬುದು ಅಷ್ಟೊಂದು ಇಷ್ಟವಾದರೆ ಅದನ್ನು ಅನಂತತೆಗೆ ವಿಸ್ತಾರ ಮಾಡು (ಅಂದರೆ ವಿಶ್ವವೇ ನಾನೆಂದು ತಿಳಿ) ಅಥವಾ ಅದನ್ನು ಒಂದೇ ಸಲ ತ್ಯಾಗ ಮಾಡು” ಎಂದರು.

67) ಹೇಗೆ ಉಳಿದ ಸಿಹಿ ಪದಾರ್ಥಗಳಿಗೆ ಇರುವ ದೋಷ ಕಲ್ಲುಸಕ್ಕರೆಗೆ ಇಲ್ಲವೋ ಹಾಗೆಯೇ ನಾನು ದೇವರ ಭಕ್ತ, ಅವನ ಸೇವಕ ಎಂದು ತಿಳಿದುಕೊಳ್ಳುವ ಮಾಗಿದ ಅಹಂಕಾರದಲ್ಲಿ ಮಾಗದ ಅಹಂಕಾರಕ್ಕೆ ಇರುವ ಕೆಡಕುಗಳು ಯಾವುವೂ ಇರುವುದಿಲ್ಲ. ಅದಲ್ಲದೆ ಇದು ಭಗವಂತನ ಕಡೆಗೆ ಕರೆದೊಯ್ಯುವುದು. ಒಬ್ಬನು ಭಕ್ತಿಯೋಗದಲ್ಲಿ ಮುಂದುವರಿಯುತ್ತಿರುವನು ಎನ್ನುವುದಕ್ಕೆ ಇದು ಚಿಹ್ನೆ.

68) ಎಲ್ಲವೂ ದೇವರ ಇಚ್ಛೆಯಂತೆ ನಡೆಯುವುದು ಎಂಬುದನ್ನು ದೃಢ ನಿಶ್ಚಯ ಮಾಡಿಕೊಂಡವನು, ತಾನು ದೇವರ ಕೈಯಲ್ಲಿ ಕೇವಲ ಯಂತ್ರವೆಂದು ಭಾವಿಸುತ್ತಾನೆ. ಆಗ ಅವನು ಈ ಜನ್ಮದಲ್ಲಿಯೇ ಎಲ್ಲಾ ಬಂಧನಗಳಿಂದ ಪಾರಾಗಿರುವನು. ಹೇ ದೇವ, ನೀನು ನಿನ್ನ ಕೆಲಸವನ್ನು ಮಾಡುವೆ. ಆದರೆ ಮನುಷ್ಯ ನಾನು ಮಾಡುತ್ತೇನೆ ಎನ್ನುತ್ತಾನೆ.

69) ನಾನು ಎಂಬ ಭಾವನೆ ಸಂಪೂರ್ಣವಾಗಿ ಎಂದಿಗೂ ನಾಶವಾಗುವುದಿಲ್ಲವೆ? ತಾವರೆಯ ರೇಕು ಉದುರಿ ಹೋದರೂ ತಮ್ಮ ಗುರುತನ್ನು ಹಿಂದೆ ಬಿಡುವುವು. ಇದರಂತೆ (ದೇವರನ್ನು ಕಂಡಮೇಲೆ) ಒಬ್ಬನ ಅಹಂಕಾರ ಸಂಪೂರ್ಣವಾಗಿ ಮಾಯವಾಗುವುದು. ಆದರೆ ಹಿಂದೆ ಇದ್ದ ಗುರುತು ಇರುವುದು. ಇದರಿಂದ ಎಂತಹ ಕೆಟ್ಟ ಪರಿಣಾಮವೂ ಆಗುವುದಿಲ್ಲ.

70) ಯಾರು ದೇವರನ್ನು ಕಂಡಿರುವನೋ ಅವನೇ ನಿಜವಾದ ಜ್ಞಾನಿ. ಅವನು ಮಗುವಿನಂತೆ ಆಗುವನು. ಮಗು ತನಗೆ ಏನೋ ಒಂದು ವ್ಯಕ್ತಿತ್ವ ಪ್ರತ್ಯೇಕವಾಗಿ ಇರುವುದು ಎಂದು ತಿಳಿದುಕೊಳ್ಳುವುದು. ಆದರೆ ಆ ವ್ಯಕ್ತಿತ್ವ ಕೇವಲ ತೋರಿಕೆಯದು; ಅದು ನಿಜವಲ್ಲ. ಮಗುವಿನ ಮನಸ್ಸು ದೊಡ್ಡವರ ಮನಸ್ಸಿನಂತೆ ಅಲ್ಲ.

71) ಏಳನೆ ಅಥವಾ ಸಮಾಧಿಯ ಪರಮಪದವನ್ನು ಮುಟ್ಟಿ ಪರಮಾತ್ಮನಲ್ಲಿ ತಲ್ಲೀನರಾದ ಕೆಲವು ಮಹಾಪುರುಷರು ಜನಸಾಮಾನ್ಯರ ಹಿತಕ್ಕೋಸುಗ ಕೆಳಗೆ ಇಳಿದು ಬರುತ್ತಾರೆ. ಅವರು ವಿದ್ಯಾ ಅಹಂಕಾರವನ್ನು ಅಂದರೆ ಶುದ್ಢಾತ್ಮನ ಅಹಂಕಾರವನ್ನು ಇಟ್ಟುಕೊಂಡಿರುತ್ತಾರೆ. ಆದರೆ ಈ ಅಹಂಕಾರ ಕೇವಲ ತೋರಿಕೆಯದು. ಇದು ನೀರಿನ ಮೇಲೆ ಎಳೆದ ಗೀರಿನಂತೆ.

72) ರಣಹದ್ದುಗಳು ಆಕಾಶದಲ್ಲಿ ಬಹಳ ಮೇಲಕ್ಕೆ ಹಾರುವುವು. ಆದರೂ ಕೂಡ ಅವುಗಳ ದೃಷ್ಟಿಯೆಲ್ಲ ನೆಲದ ಮೇಲೆ ಕೊಳೆತು ನಾರುತ್ತಿರುವ ಹೆಣಗಳು ಬಿದ್ದಿರುವ ಕಡೆಗೆ. ಇದರಂತೆಯೇ ಯಾರನ್ನು ಬಹಳ ಬುದ್ಧಿವಂತರು ಎನ್ನುವರೊ ಅವರ ಮನಸ್ಸೆಲ್ಲ ಪ್ರಪಂಚದಲ್ಲಿರುವ ಕಾಮಕಾಂಚನದ ಮೇಲೆ ಇರುವುದು. ಆದಕಾರಣ ಅವರು ಶಾಸ್ತ್ರದಲ್ಲಿ ಅಷ್ಟೊಂದು ಪಾಂಡಿತ್ಯವನ್ನು ಹೊಂದಿದ್ದರೂ ಅವರಿಗೆ ನಿಜವಾದ ಜ್ಞಾನ ಬರುವುದಿಲ್ಲ.

73) ಯಾವುದು ಚಿತ್ತ ಮತ್ತು ಹೃದಯವನ್ನು ಶುದ್ಧಿಮಾಡುವುದೋ ಅದೇ ನಿಜವಾದ ಜ್ಞಾನ. ಉಳಿದುದೆಲ್ಲ ಅಜ್ಞಾನ.

74) ಸುಮ್ಮನೆ ಪಾಂಡಿತ್ಯದಿಂದ ಏನು ಪ್ರಯೋಜನ? ಪಂಡಿತರಿಗೆ ಬೇಕಾದಷ್ಟು ಶಾಸ್ತ್ರ ಗೊತ್ತಿರಬಹುದು. ಶ್ಲೋಕಗಳು ಬಾಯಿಗೆ ಬರಬಹುದು. ಅವುಗಳನ್ನು ಹೇಳಿದುದರಿಂದ ಪ್ರಯೋಜನವೇನು? ಶಾಸ್ತ್ರದಲ್ಲಿರುವ ಸತ್ಯಗಳನ್ನು ಒಬ್ಬನು ತನ್ನ ಜೀವಮಾನದಲ್ಲಿ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಎಲ್ಲಿಯವರೆಗೂ ಮನುಷ್ಯನು ಪ್ರಪಂಚದಲ್ಲಿ ಆಸಕ್ತನಾಗಿರುವನೋ ಕಾಮಿನಿಕಾಂಚನಗಳನ್ನು ಆಶಿಸುವನೋ, ಅಲ್ಲಿಯವರೆಗೂ ಕೇವಲ ವಿದ್ಯೆಯಿಂದ ಜ್ಞಾನವಾಗಲಿ ಮೋಕ್ಷವಾಗಲಿ ಬರುವುದಿಲ್ಲ.

75) ನಮ್ಮ ಪಂಡಿತರು ದೊಡ್ಡ ದೊಡ್ಡ ಮಾತುಗಳನ್ನು ಆಡುವರು. ಬ್ರಹ್ಮ, ದೇವರು, ಅವ್ಯಕ್ತ, ಜ್ಞಾನ, ಯೋಗ, ತತ್ತ್ವ, ಆತ್ಮ ಮುಂತಾದವುಗಳ ವಿಚಾರವನ್ನೆಲ್ಲ ಮಾತನಾಡುವರು. ಆದರೆ ತಾವು ಮಾತನಾಡುವುದನ್ನು ಕಣ್ಣಾರೆ ಕಂಡವರು ಬಹಳ ಕಡಿಮೆ. ಉಳಿದವರು ಒಣಪಂಡಿತರು, ಕೆಲಸಕ್ಕೆ ಬಾರದವರು.

76) ಗಿಳಿ ರಾಧಾಕೃಷ್ಣನ ಹೆಸರನ್ನು ಬಾಯಿಯಲ್ಲಿ ಹೇಳುವುದು. ಆದರೆ ಅದು ಬೆಕ್ಕಿನ ಬಾಯಿಗೆ ಸಿಕ್ಕಿಬಿದ್ದ ಕೂಡಲೆ ಅದರ ‘ಕಾ, ಕಾ’ ಎಂಬ ಸಹಜ ಸ್ವರ ಹೊರಡುವುದು. ಪ್ರಾಪಂಚಿಕರು ಲಾಭದಾಸೆಯಿಂದ ದೇವರ ಹೆಸರನ್ನು ಕೆಲವು ವೇಳೆ ಜಪ ಮಾಡುತ್ತಾರೆ, ಒಳ್ಳೆ ಕೆಲಸವನ್ನೆಲ್ಲ ಮಾಡುತ್ತಾರೆ. ಆದರೆ ಗ್ರಹಚಾರ, ದುಃಖ, ದಾರಿದ್ರ್ಯ ಮತ್ತು ಸಾವಿನ ಬಾಯಿಗೆ ಬೀಳುವ ಸಮಯದಲ್ಲಿ ದೇವರನ್ನು ಮರೆಯುವರು.

77) ದೇವರಿರುವ ಕಡೆ ಯುಕ್ತಿ, ಬುದ್ಧಿ, ಪಾಂಡಿತ್ಯ ಇವುಗಳಿಂದ ಏನೂ ಪ್ರಯೋಜನವಿಲ್ಲ. ಅಲ್ಲಿ ಮೂಗರು ಮಾತನಾಡುತ್ತಾರೆ, ಕುರುಡರು ನೋಡುತ್ತಾರೆ, ಕಿವುಡರು ಕೇಳುತ್ತಾರೆ.

78) ಬರೇ ಶಾಸ್ತ್ರವನ್ನು ಓದಿ ದೇವರನ್ನು ವರ್ಣಿಸುವುದು ಎಂದರೆ, ಕಾಶೀ ನಗರವನ್ನು ಭೂಪಟದಲ್ಲಿ ನೋಡಿ ಅದನ್ನು ವಿವರಿಸಿದಂತೆ.

79) ಭಂಗಿ ಎಂಬ ಪದವನ್ನು ಸಾವಿರ ಸಾರಿ ಹೇಳಿದರೂ ಅಮಲು ಏರುವುದಿಲ್ಲ. ಸ್ವಲ್ಪ ಭಂಗಿಯನ್ನು ತಂದು ನೀರಿನೊಂದಿಗೆ ಅರೆದು ಕಷಾಯ ಮಾಡಿ ಕುಡಿದರೆ ಆಗ ನಿಜವಾದ ಅಮಲು ತಲೆಗೇರುವುದು. ಸುಮ್ಮನೆ ದೇವರೆ, ದೇವರೆ ಎಂದು ಕಿರಿಚಿಕೊಳ್ಳುವುದರಿಂದ ಪ್ರಯೋಜನವಿಲ್ಲ. ದಿನವೂ ಸಾಧನೆ ಮಾಡಿ. ಆಗ ದೇವರನ್ನು ನೋಡುವಿರಿ.

80) ಬರಿಯ ಕೊಡಕ್ಕೆ ನೀರು ಸುರಿದರೆ ಶಬ್ದವಾಗುತ್ತದೆ. ಆದರೆ ಕೂಡ ತುಂಬಿದ ಮೇಲೆ ಏನೂ ಶಬ್ದವಾಗುವುದಿಲ್ಲ. ಇದರಂತೆಯೇ ಯಾರು ದೇವರನ್ನು ಕಂಡಿಲ್ಲವೊ ಅವರು ದೇವರ ಇರುವಿಕೆ ಮತ್ತು ಅವನ ಸ್ವಭಾವದ ವಿಚಾರವಾಗಿ ಬೇಕಾದಷ್ಟು ವಾದವನ್ನು ಮಾಡುವರು. ಆದರೆ ಯಾರು ಅವನನ್ನು ನೋಡಿರುವರೋ ಅವರು ಮೌನವಾಗಿ ಬ್ರಹ್ಮಾನಂದವನ್ನು ಅನುಭವಿಸುವರು.

81) ಸಾಧಾರಣ ಮನುಷ್ಯರು ಹೊರೆಯಷ್ಟು ಧಾರ್ಮಿಕ ವಿಚಾರವನ್ನು ಮಾತನಾಡುವರು. ಆದರೆ ಒಂದು ಕಣದಷ್ಟೂ ಅಭ್ಯಾಸ ಮಾಡುವುದಿಲ್ಲ. ಜ್ಞಾನಿಯ ಇಡೀ ಜೀವನವೇ ಅನುಷ್ಠಾನರೂಪವಾದ ಧರ್ಮದಂತೆ ಇದ್ದರೂ ಮಾತನಾಡುವುದು ಸ್ವಲ್ಪ.

82) ಎಲ್ಲಿಯವರೆಗೂ ಜೇನುನೊಣವು ಹೂವಿನ ದಳದ ಆಚೆ ಇರುವುದೋ ಮತ್ತು ಒಳಗೆ ಇರುವ ಮಕರಂದವನ್ನು ಕುಡಿದಿಲ್ಲವೊ, ಅಲ್ಲಿಯವರೆಗೂ ಝೇಂಕಾರ ಮಾಡಿಕೊಂಡು ಸುತ್ತಲೂ ಹಾರಾಡುವುದು. ಆದರೆ ಅದು ಹೂವನ್ನು ಪ್ರವೇಶಿಸಿದ ಮೇಲೆ ನಿಶ್ಯಬ್ದವಾಗಿ ಮಕರಂದವನ್ನು ಸೇವಿಸುವುದು. ಎಲ್ಲಿವರೆಗೆ ಒಬ್ಬನು ಸಿದ್ಧಾಂತಗಳನ್ನು ಮತ್ತು ನಂಬಿಕೆಗಳನ್ನು ಚರ್ಚೆ ಮಾಡುತ್ತಿರುವನೋ ಅಲ್ಲಿಯವರೆಗೂ ಅವನು ನಿಜವಾದ ಭಕ್ತಿಯ ಅಮೃತವನ್ನು ಕುಡಿದಿಲ್ಲ. ಒಂದು ಸಲ ಅವನು ಅದನ್ನು ಕುಡಿದರೆ ಮೌನವಾಗುವನು.

83) ಎರಡು ವಿಧದ ಮನುಷ್ಯರಿಗೆ ಮಾತ್ರ ಆತ್ಮಜ್ಞಾನ ಲಾಭವಾಗುವುದು. ಪಾಂಡಿತ್ಯದ ಭಾರದಿಂದ ಬಾಗದವರು, ಅಂದರೆ, ಪರದಿಂದ ಎರವಲಾಗಿ ತೆಗೆದುಕೊಂಡ ಭಾವಗಳಿಂದ ಮನಸ್ಸನ್ನು ತುಂಬಿಸಿಕೊಳ್ಳದೆ ಇರುವವರು, ಮತ್ತು ಯಾರು ಎಲ್ಲ ಶಾಸ್ತ್ರಗಳನ್ನು ಓದಿದ ಮೇಲೂ ತಮಗೆ ಏನೂ ಗೊತ್ತಿಲ್ಲ ಎಂದು ತಿಳಿದಿರುವರೊ ಅವರು.

84) ಇಬ್ಬರು ಒಂದು ತೋಟಕ್ಕೆ ಹೋದರು. ಅವರಲ್ಲಿ ತುಂಬ ಪ್ರಾಪಂಚಿಕ ಜ್ಞಾನವಿದ್ದವನು ಅಲ್ಲಿರುವ ಮಾವಿನ ಮರಗಳನ್ನು ಎಣಿಸಲು ಮೊದಲು ಮಾಡಿದನು. ಅವುಗಳಲ್ಲಿ ಸುಮಾರು ಎಷ್ಟು ಮಾವಿನ ಹಣ್ಣು ಬಿಡಬಹುದು, ಒಟ್ಟು ತೋಟದ ಬೆಲೆ ಎಷ್ಟಾಗಬಹುದು ಎಂಬುದನ್ನು ಅಂದಾಜು ಮಾಡಲು ಮೊದಲು ಮಾಡಿದನು. ಇವನ ಸ್ನೇಹಿತನು ತೋಟದ ಯಜಮಾನನ ಹತ್ತಿರ ಹೋಗಿ ಸುಮ್ಮನೆ ಹಣ್ಣನ್ನು ಬಿಡಿಸಿ ತಿನ್ನಲು ಮೊದಲುಮಾಡಿದನು. ಇಬ್ಬರಲ್ಲಿ ಯಾರು ಬುದ್ಧಿವಂತರೆಂದು ತಿಳಿಯುವಿರಿ? ಮಾವಿನ ಹಣ್ಣನ್ನು ತಿನ್ನಿ! ನಿಮ್ಮ ಹಸಿವು ಅಡಗುವುದು. ಅಲ್ಲಿರುವ ಮರಗಳನ್ನು ಮತ್ತು ಎಲೆಗಳನ್ನು ಎಣಿಸುವುದರಿಂದ ಪ್ರಯೋಜನವೇನು? ಬರಿಯ ಕೆಲಸಕ್ಕೆ ಬಾರದ ಪಂಡಿತನು, ಸೃಷ್ಟಿಗೆ ಕಾರಣವೇನು? ಅದು ಎಲ್ಲಿಂದ ಬಂದಿತು? ಎಂಬುದನ್ನು ವಿಚಾರಿಸಲು ಯತ್ನಿಸುವನು. ಆದರೆ ನಮ್ರನಾದ ಜ್ಞಾನಿಯಾದರೊ, ಸೃಷ್ಟಿಕರ್ತನೊಂದಿಗೆ ಸ್ನೇಹ ಬೆಳೆಸಿ, ಅವನು ಕರುಣಿಸುವ ಪರಮಾನಂದವನ್ನು ಅನುಭವಿಸುವನು.

85) ಜ್ಞಾನಸ್ವರೂಪಳಾದಂತಹ ನನ್ನ ಜಗನ್ಮಯಿಯ ಕಿರಣವೊಂದು ಬಹಳ ಬುದ್ಧಿವಂತನಾದ ಪಂಡಿತನನ್ನು ಕೂಡ ಅಡಗಿಸಿ ಅವನನ್ನು ನೆಲದ ಮೇಲೆ ಹರಿದಾಡುವ ಕೀಟಕ್ಕೆ ಸಮಾನವಾಗಿ ಮಾಡುವುದು.

86) ಗೀತಾ, ಗೀತಾ ಎಂದು ನೀವು ಹಲವು ಬಾರಿ ಉಚ್ಚರಿಸಿ. ಆಗ ಅದು ನಿಜವಾಗಿ ತ್ಯಾಗಿ, ತ್ಯಾಗಿ ಅಂದರೆ ದೇವರಿಗಾಗಿ ಎಲ್ಲವನ್ನೂ ತ್ಕಾಗ ಮಾಡಿರುವವನು ಎಂದಂತೆ ಆಗುವುದು. ಗೀತೆಯು ಒಂದು ಮಾತಿನಲ್ಲಿ “ಎಲೈ ಸಂಸಾರಿಯೇ ತ್ಯಾಗಮಾಡು! ಎಲ್ಲವನ್ನೂ ಬಿಟ್ಟು ದೇವರ ಮೇಲೆ ಮನಸ್ಸನ್ನು ಇಡು” ಎಂದು ಬೋಧಿಸುವುದು.

87) ಪರಮಪ್ರೀತಿಯ ಕಡಲಿನಲ್ಲಿ ಮುಳುಗುವುದಕ್ಕೆ ಯಾರಿಗೂ ಸಮಾಧಾನವಿಲ್ಲ ಅಥವಾ ಆಸೆಯೂ ಇಲ್ಲ. ಪ್ರಾಪಂಚಿಕ ವಸ್ತುಗಳ ಮೇಲೆ ವಿವೇಕ ವೈರಾಗ್ಯ ಅಥವಾ ಸಾಧನದ ಮೇಲೆ ಯಾರಿಗೂ ಇಚ್ಛೆಯಿಲ್ಲ. ಅದರೂ ಎಲ್ಲೊ ಪುಸ್ತಕದಿಂದ ಕಲಿತ ಸ್ವಲ್ಪವನ್ನು ಎಲ್ಲರೂ ಉಪನ್ಯಾಸ ಮಾಡಲು ಬಯಸುವರು. ಇನ್ನೊಬ್ಬರಿಗೆ ಕಲಿಸುವುದು ಬಹಳ ಕಷ್ಟದ ಕೆಲಸ. ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡಮೇಲೆ ಯಾರು ಅವನಿಂದ ಅಪ್ಪಣೆಯನ್ನು ಪಡೆಯುವರೋ ಅವರು ಮಾತ್ರ ಇನ್ನೊಬ್ಬರಿಗೆ ಬೋಧಿಸಬಹುದು.

88) ಕೊಡ ತುಂಬಿದ ಮೇಲೆ ಶಬ್ದ ಮಾಡುವುದಿಲ್ಲ. ಇದರಂತೆ ಆತ್ಮ ಸಾಕ್ಷಾತ್ಕಾರವನ್ನು ಪಡೆದವನು ಹೆಚ್ಚು ಮಾತನಾಡುವುದಿಲ್ಲ. ಆದರೆ ನಾರದ, ಶುಕದೇವ ಮತ್ತು ಇಂತಹ ಇನ್ನು ಕೆಲವರು ಸಮಾಧಿಯನ್ನು ಹೊಂದಿದ ಮೇಲೆ ಹಲವು ಮೆಟ್ಟಿಲುಗಳು ಕೆಳಗೆ ಬಂದು ಮಾನವಕೋಟಿಗೆ ಮರುಕ ತಾಳಿ ಕರುಣೆ ಮತ್ತು ಪ್ರೀತಿಯಿಂದ ಬೋಧಿಸಿದರು.

89) ಪ್ರಪಂಚದಲ್ಲಿ ಎರಡು ವಿಧ ಮುಕ್ತ ಪುರುಷರಿರುವರು: ಸತ್ಯವನ್ನು ಪಡೆದಾದ ಮೇಲೆ ಮೌನವಾಗಿ, ಮತ್ತೊಬ್ಬರ ಯೋಚನೆಯಿಲ್ಲದೆ ತಮಗೆ ತಾವೇ ಆನಂದಪಡುವರು ಮತ್ತು ಸತ್ಯವನ್ನು ಪಡೆದಾದ ಮೇಲೆ ತಮಗೆ ಮಾತ್ರ ಅದನ್ನು ಇಟ್ಟುಕೊಂಡಿರುವುದರಿಂದ ಸಂತೋಷವಿಲ್ಲದೆ ಎಲ್ಲರೂ ಬನ್ನಿ, ತಮ್ಮೊಂದಿಗೆ ಸತ್ಯವನ್ನು ತಿಳಿದು ಆನಂದಿಸಿ ಎಂದು ಘಂಟಾಘೋಷವಾಗಿ ಸಾರುವರು.

90) ತಂಗಾಳಿಯು ಬೀಸಿ ಪೂರ್ಣವಿಕಸಿತವಾದ ಹೂವಿನ ಪರಿಮಳವನ್ನು ದಿಕ್ಕುದಿಕ್ಕಿಗೆ ಎರಚಿದಾಗ ದುಂಬಿಗಳು ತಮಗೆ ತಾವೇ ಬರುವುವು. ಸಿಹಿ ಪದಾರ್ಥಗಳು ಇರುವ ಸ್ಥಳಕ್ಕೆ ಇರುವೆಗಳನ್ನು ಯಾರೂ ಕರೆಯಬೇಕಾಗಿಲ್ಲ. ಅದರಂತೆಯೇ ಯಾವಾಗ ಒಬ್ಬನು ಪರಿಶುದ್ಧನಾಗಿ ಪರಿಪೂರ್ಣನಾಗುವನೋ, ಆಗ ಅವನಲ್ಲಿರುವ ಮಂಗಳ ಗುಣಗಳ ಮಾಧುರ್ಯ ಸುತ್ತಲೂ ಹಬ್ಬುವುದು. ಸತ್ಯಾನ್ವೇಷಕರೆಲ್ಲ ಸ್ವಭಾವತಃ ಅವನ ಹತ್ತಿರಕ್ಕೆ ಬರುವರು. ತಾನು ಮಾತನಾಡುವುದನ್ನು ಕೇಳುವುದಕ್ಕಾಗಿ ಪ್ರೇಕ್ಷಕರ ಸಂದಣಿಯನ್ನು ಅವನು ಹುಡುಕಿಕೊಂಡು ಹೋಗಬೇಕಾಗಿಲ್ಲ.

91) ಮಾಳಿಗೆಯ ಮೇಲೆ ಬಿದ್ದ ಮಳೆಯ ನೀರು ವಿಚಿತ್ರವಾಗಿ ಮಾಡಿರುವ ಹುಲಿಯ ಬಾಯಿಯಿಂದ ಕೆಳಗೆ ಹರಿದುಬರುತ್ತದೆ. ಹುಲಿಯ ಬಾಯಿಂದ ನೀರು ಬರುತ್ತದೆ ಎಂದು ಭಾಸವಾಗುವುದು. ಆದರೆ ಅದು ನಿಜವಾಗಿ ಆಕಾಶದಿಂದ ಬಂದುದು. ಇದರಂತೆ ಮಹಾಪುರುಷರ ಬಾಯಿಂದ ಬರುವ ಉಪದೇಶಗಳು ಅವರಿಂದ ಬಂದಂತೆ ಕಾಣುವುದು. ಆದರೆ ನಿಜವಾಗಿ ಅವು ದೇವರಿಂದ ಬರುವುವು.

92) ಮನುಷ್ಯರಲ್ಲಿ ಎರಡು ವಿಧ: ಹೆಸರಿಗೆ ಮಾತ್ರ ಮನುಷ್ಯರು ಮತ್ತು ಎಚ್ಚೆತ್ತ ಮನುಷ್ಯರು. ದೇವರಿಗೋಸ್ಕರ ಯಾರು ಕಾತುರರಾಗಿರುವರೋ ಅವರು ಎಚ್ಚೆತ್ತವರ ಗುಂಪಿಗೆ ಸೇರಿದವರು. ಕಾಮಕಾಂಚನಗಳಲ್ಲೇ ಯಾರು ತೃಪ್ತರಾಗಿರುವರೋ ಅವರು ಸಾಧಾರಣ ಮನುಷ್ಯರು, ಹೆಸರಿಗೆ ಮಾತ್ರ.

93) ಹೇಗೆ ಒಂದು ಮುಖವಾಡವನ್ನು ಹಲವು ಮನುಷ್ಯರು ಉಪಯೋಗಿಸಬಹುದೋ ಹಾಗೆಯೇ ಹಲವು ಬಗೆಯ ಪ್ರಾಣಿಗಳು ಮನುಷ್ಯನ ವೇಷವನ್ನು ಧರಿಸಿವೆ. ಇವುಗಳೆಲ್ಲಾ ಒಂದೇ ಆಕಾರದಂತೆ ಕಂಡರೂ ಕೆಲವು ಚೂರುಚೂರಾಗಿ ಕತ್ತರಿಸುವ ತೋಳಗಳು, ಕೆಲವು ಬಹಳ ಕ್ರೂರವಾಗಿರುವ ಕರಡಿಗಳು, ಮತ್ತೆ ಕೆಲವರು ನರಿಯಂತೆ ಬಹಳ ಉಪಾಯವಂತರು ಅಥವಾ ವಿಷಸರ್ಪಗಳು.

94) ಸಂಸಾರಿಯು ಪ್ರಪಂಚದಲ್ಲಿ ಬೇಕಾದಷ್ಟು ಕಷ್ಟ ಮತ್ತು ದುಃಖಗಳಿಂದ ಪೆಟ್ಟು ತಿನ್ನುತ್ತಿದ್ದರೂ ಕಾಮಕಾಂಚನಗಳ ಮೇಲೆ ಮನಸ್ಸನ್ನು ಸುಲಭವಾಗಿ ನಿಗ್ರಹಿಸಿ ದೇವರ ಕಡೆಗೆ ತಿರುಗಿಸಲಾರ.

95) ಕಬ್ಬಿಣದ ಮೊಳೆಯನ್ನು ಕಲ್ಲಿನೊಳಕ್ಕೆ ಹೊಡೆಯಲಾರೆವು; ಆದರೆ ಮಣ್ಣಿನೊಳಕ್ಕೆ ಸುಲಭವಾಗಿ ಹೊಡೆಯಬಹುದು. ಹಾಗೆಯೇ ಧರ್ಮಾತ್ಮರ ಉಪದೇಶಗಳು ಬದ್ಧಜನಗಳ ಮೇಲೆ ಏನನ್ನೂ ಮಾಡಲಾರವು. ಆದರೆ ಶ್ರದ್ಧೆಯಿಂದ ಕೂಡಿದ ಭಕ್ತನ ಹೃದಯದ ಆಳಕ್ಕೆ ಹೋಗುವುವು.

96) ಹಸಿಯ ಜೇಡಿಯಮಣ್ಣು ಸುಲಭವಾಗಿ ಯಾವ ಆಕಾರವನ್ನಾದರೂ ತಾಳಬಲ್ಲದು. ಆದರೆ ಗಟ್ಟಿಯಾದ ಕಲ್ಲಿಗೆ ಸಾಧ್ಯವಿಲ್ಲ. ಇದರಂತೆಯೇ ಭಕ್ತರ ಹೃದಯದ ಮೇಲೆ ಧಾರ್ಮಿಕ ಉಪದೇಶಗಳು ತಮ್ಮ ಪ್ರಭಾವವನ್ನು ಬೀರುವುವು. ಆದರೆ ಬದ್ಧಜೀವಿಗಳ ಮೇಲೆ ಸಾಧ್ಯವಾಗುವುದಿಲ್ಲ.

97) ಸೇತುವೆಯ ಕೆಳಗೆ ಹೇಗೆ ನೀರು ಒಂದು ಕಡೆಯಿಂದ ಪ್ರವೇಶಿಸಿ ಮತ್ತೊಂದು ಕಡೆಗೆ ಹರಿದು ಹೋಗುವುದೋ ಅದರಂತೆಯೆ ಪ್ರಾಪಂಚಿಕರಿಗೆ ಬುದ್ದಿವಾದವೂ ಸಹ ಒಂದು ಕಿವಿಯಿಂದ ಒಳಗೆ ಪ್ರವೇಶಿಸಿ ಯಾವ ಪರಿಣಾಮವನ್ನೂ ಉಂಟುಮಾಡದೆ ಮತ್ತೊಂದು ಕಿವಿಯಿಂದ ಹೊರಗೆ ಹೊರಟುಹೋಗುವುದು.

98) ಬದ್ಧಜೀವಿಗಳು ಎಂದಿಗೂ ಜಾಗ್ರತರಾಗುವುದಿಲ್ಲ. ದುಃಖ ಅವರನ್ನು ಪೀಡಿಸುವುದು. ಕಪಟಿಗಳು ಅವರನ್ನು ಹೇಗೆ ವಂಚಿಸುವರು? ಅಪಾಯಗಳು ಹೇಗೆ ಅವರನ್ನು ಅಂಜಿಸುವುವು? ಆದರೂ ಅವರು ಜಾಗ್ರತರಾಗುವುದಿಲ್ಲ. ಒಂಟೆಗೆ ಮುಳ್ಳಿನ ಪೊದೆ ತಿನ್ನುವಾಗ ಬಾಯಿಂದ ರಕ್ತ ಸೋರಿದರೂ, ಅದೇ ಅದಕ್ಕೆ ಇಷ್ಟವಾದಂತೆ. ಪ್ರಪಂಚದಲ್ಲಿ ಜೀವಿಸುವವನು ಅಷ್ಟು ಕಷ್ಟ ನಷ್ಟವನ್ನು ಅನುಭವಿಸುವನು. ಆದರೆ ಸ್ವಲ್ಪ ದಿನದಲ್ಲೇ ಎಲ್ಲವನ್ನೂ ಅವನು ಮರೆಯುವನು. ಅವನ ಹೆಂಡತಿ ಕಾಲವಾದಳು ಅಥವಾ ಇನ್ನಾರನ್ನಾದರೂ ಪ್ರೀತಿಸಿದಳು ಎಂದಿಟ್ಟುಕೊಳ್ಳೋಣ. ನೋಡಿ ಅವನು ಆಗಲೇ ಪುನಃ ಮದುವೆಯಾಗುತ್ತಾನೆ. ಬಹುಶಃ ಅವನ ಮಗು ಸತ್ತು ಹೋಗಿದೆ. ಅವನು ಅಳುತ್ತಾನೆ. ಆದರೆ ಇನ್ನು ಸ್ವಲ್ಪ ದಿನದಲ್ಲೇ ಇದೆಲ್ಲ ಮನಸ್ಸಿನಿಂದ ಮಾಯವಾಗಿದೆ. ದುಃಖದಿಂದ ಕೊರಗಿದ ಮಗುವಿನ ತಾಯಿಯಾದರೋ ಆಗಲೇ ಸ್ನಾನ, ಸೀರೆ, ಒಡವೆ ಮುಂತಾದವುಗಳನ್ನೂ ತೊಟ್ಟುಕೊಳ್ಳುವುದರಲ್ಲಿ ನಿರತಳಾಗಿರುವಳು. ಮಗಳ ಮದುವೆಯಿಂದ ತಂದೆ ತಾಯಿಗಳು ದರಿದ್ರರಾಗಿ ಹೋಗುವರು. ಆದರೂ ಪ್ರತಿ ವರ್ಷವೂ ಅವರಿಗೆ ಮಕ್ಕಳು ಹುಟ್ಟುವುವು. ವ್ಯಾಜ್ಯದಿಂದ ಮನೆ ಹಾಳಾಗಿದ್ದರೂ ಪುನಃ ಕೋರ್ಟು ಕಛೇರಿಗೆ ಹೋಗುವರು. ಇರುವ ಮಕ್ಕಳನ್ನು ಕಾಪಾಡುವುದಕ್ಕೆ ಗತಿಯಿಲ್ಲ. ಆದರೂ ಪ್ರತಿ ವರ್ಷವೂ ಮಕ್ಕಳನ್ನು ಹೆರುವರು.

ಕೆಲವು ವೇಳೆ ಸಂಸಾರಿಯು ದೊಡ್ಡ ಕಪ್ಪೆಯನ್ನು ಹಿಡಿದ ಹಾವಿನಂತೆ. ಅದನ್ನು ನುಂಗಲೂ ಆರ, ಎಸೆಯಲೂ ಆರ. ಪ್ರಪಂಚದಲ್ಲಿ ಏನೂ ಇಲ್ಲ. ಆದರೂ ಅವನು ಪ್ರಪಂಚವನ್ನು ಮರೆತು ದೇವರ ಮೇಲೆ ಮನಸ್ಸನ್ನು ಇಡಲಾರ. ಅವನನ್ನು ಸಂಸಾರದ ವಾತಾವರಣದಿರಿದ ತೆಗೆದು ಒಂದು ಉತ್ತಮ ಸ್ಥಳದಲ್ಲಿ ಇಟ್ಟರೆ ಸೆಗಣಿಯಲ್ಲಿ ಜೀವಿಸುವ ಹುಳುವನ್ನು ಅನ್ನದ ಜೊತೆಯಲ್ಲಿಟ್ಟರೆ ಸಾಯುವಂತೆ ಕೊರಗಿ ನರಳುತ್ತಾನೆ.

99) ಹೇಗೆ ನೊಣವು ಈಗ ಗಾಯದ ಮೇಲೆ ಕುಳಿತು, ಮರುಕ್ಷಣ ದೇವರ ಪ್ರಸಾದದ ಮೇಲೆ ಕುಳಿತುಕೊಳ್ಳುವುದೋ ಹಾಗೆಯೇ ಪ್ರಾಪಂಚಿಕರು ಒಂದು ಸಲ ಧಾರ್ಮಿಕ ವಿಷಯಗಳನ್ನು ಮಾತನಾಡುವರು. ಮರುಕ್ಷಣವೇ ಕಾಮಕಾಂಚನಗಳ ಮಾತಿನಲ್ಲಿ ತಮ್ಮನ್ನೇ ಮರೆತುಬಿಡುವರು.

100) ಪ್ರಾಪಂಚಿಕರ ಮನಸ್ಸು ಗೊಬ್ಬರದ ಗುಂಡಿಯಲ್ಲಿರುವ ಹುಳುವಿನಂತೆ. ಅದಕ್ಕೆ ಯಾವಾಗಲೂ ಅಲ್ಲಿರುವುದಕ್ಕೆ ಆಸೆ. ಯಾರಾದರೂ ಅದನ್ನು ಅಕಸ್ಮಾತ್ ಅಲ್ಲಿಂದ ತೆಗೆದು ಒಂದು ಕಮಲದ ಮೇಲಿಟ್ಟರೆ ಅದು ಹೂವಿನ ಪರಿಮಳದಿಂದ ಬೇಗ ಸತ್ತುಹೋಗುವುದು. ಇದರಂತೆಯೇ ಪ್ರಾಪಂಚಿಕನು ವಿಷಯವಸ್ತುಗಳ ಆಸೆ ಮತ್ತು ಆಲೋಚನೆಗಳ ವಾತಾವರಣದಿಂದ ಹೊರಗೆ ಒಂದು ಕ್ಷಣವಾದರೂ ಜೀವಿಸಲಾರ.

101) ದೆವ್ವ ಮೆಟ್ಟಿಕೊಂಡವರ ಮೇಲೆ ಮಂತ್ರದ ಸಾಸುವೆ ಕಾಳನ್ನು ಹಾಕಿ ದೆವ್ವ ಬಿಡಿಸಬಹುದು. ಆದರೆ ದೆವ್ವ ಸಾಸುವೆ ಕಾಳನ್ನು ಮೆಟ್ಟಿಕೊಂಡಿದ್ದರೆ ಇತರರ ಮೇಲಿರುವ ದೆವ್ವವನ್ನು ಬಿಡಿಸುವುದಕ್ಕೆ ಹೇಗೆ ಉಪಯೋಗವಾಗುವುದು? ನೀನು ದೇವರನ್ನು ಧ್ಯಾನಮಾಡುವ ಮನಸ್ಸೇ ಪ್ರಪಂಚದ ಆಸೆಗಳಿಂದ ಕೂಡಿದ್ದರೆ, ಇಂತಹ ಕೆಟ್ಟ ಯಂತ್ರದಿಂದ ನೀನು ಹೇಗೆ ಸಾಧನೆ ಮಾಡಬಲ್ಲೆ?

102) ಪ್ರಾಪಂಚಿಕನಿಗೆ ಜ್ಞಾನಿಗೆ ಇರುವಷ್ಟೇ ಬುದ್ಧಿ ಮತ್ತು ಜ್ಞಾನ ಇರಬಹುದು. ಯೋಗಿಯಷ್ಟೇ ಇವನು ಕಷ್ಟಗಳನ್ನು ಪಡಬಹುದು. ಇವನ ಶಕ್ತಿಯೆಲ್ಲ ತಪ್ಪು ದಾರಿಗೆ ಹೋಗಿರುವುದರಿಂದ ಇವನ ಶ್ರಮವೆಲ್ಲಾ ವೃಥಾ ವ್ಯರ್ಥ. ಇವನು ಇದನ್ನೆಲ್ಲ ಕೇವಲ ಪ್ರಪಂಚದ ಕೀರ್ತಿ ಮತ್ತು ಕಾಂಚನಗಳ ಆಸೆಗೆ ಮಾಡುತ್ತಾನೆಯೇ ಹೊರತು ದೇವರಿಗೋಸ್ಕರವಾಗಿ ಅಲ್ಲ.

103) ಆಕಾಶದಲ್ಲಿ ಹಾರಾಡುತ್ತಿರುವ ಹಲವು ಕಾಗದದ ಗಾಳಿಪಟಗಳಲ್ಲಿ ದಾರ ಕಿತ್ತು ಹೋಗಿ ಎಲ್ಲೊ ಒಂದಕ್ಕೊ ಎರಡಕ್ಕೊ ಸ್ವಾತಂತ್ರ್ಯ ಸಿಕ್ಕುವುದು. ಇದರಂತೆಯೆ ಆಧ್ಯಾತ್ಮಿಕ ಸಾಧನೆ ಮಾಡುತ್ತಿರುವ ನೂರಾರು ಮಂದಿಗಳಲ್ಲಿ ಒಬ್ಬರೋ, ಇಬ್ಬರೋ ಸಂಸಾರ ಬಂಧನದಿಂದ ಮುಕ್ತರಾಗುವರು.

104) ಬೆಳಗಿನ ಜಾವದಲ್ಲಿ ಕಡೆದ ಬೆಣ್ಣೆ ಅತ್ಯುತ್ತಮವಾದುದು. ಸೂರ್ಯೋದಯವಾದ ಮೇಲೆ ಕಡೆದ ಬೆಣ್ಣೆ ಅಷ್ಟೇನೂ ಉತ್ತಮವಲ್ಲ. ಸಂನ್ಯಾಸ ಧರ್ಮವನ್ನು ಸ್ವೀಕಾರ ಮಾಡಿದ ತಮ್ಮ ಕಿರಿಯ ಶಿಷ್ಯರನ್ನು ನೋಡಿ ಶ್ರೀ ಗುರುದೇವರು ಹೀಗೆಂದರು: “ನೀವು ಹೊತ್ತಿಗೆ ಮುಂಚೆ ಕಡೆದ ಬೆಣ್ಣೆಯಂತೆ. ನನ್ನ ಗೃಹಸ್ಥ ಶಿಷ್ಯರಾದರೋ ಹೊತ್ತಾದ ಮೇಲೆ ಕಡೆದ ಬೆಣ್ಣೆಯಂತೆ.”

105) ಎಳೆಯ ಬೊಂಬನ್ನು ಸುಲಭವಾಗಿ ಬಗ್ಗಿಸಬಹುದು. ಆದರೆ ಬಲಿತ ಬೊಂಬನ್ನು ಬಗ್ಗಿಸಿದರೆ ಅದು ಮುರಿದು ಹೋಗುವುದು. ಎಳೆಯ ಮನಸ್ಸನ್ನು ದೇವರ ಕಡೆಗೆ ತಿದ್ದುವುದು ಸುಲಭ. ಆದರೆ ವಯಸ್ಸಾಗಿ ನಿಯಮಕ್ಕೆ ಒಳಗಾಗದವರ ಮನಸ್ಸು ತಿರುಗಿಸಲು ಯತ್ನಿಸಿದರೆ ತಪ್ಪಿಸಿಕೊಳ್ಳುವುದು.

106) ಹುಡುಗನಲ್ಲಿರುವ ಭಕ್ತಿ ಪೂರ್ಣವಾದುದು. ಭಾಗವಾಗದೆ ಇರುವುದು. ಕಾಲಕ್ರಮೇಣ ಮದುವೆ ಆದಮೇಲೆ, ಅವನ ಅರ್ಧ ಮನಸ್ಸು ಅಥವಾ ಅರ್ಧಕ್ಕಿಂತ ಹೆಚ್ಚನ್ನೆ ಹೆಂಡತಿಗೆ ಕೊಡುವನು. ಅವನಿಗೆ ಮಕ್ಕಳಾದ ಮೇಲೆ ಉಳಿದ ಕಾಲುಪಾಲು ಅವುಗಳಿಗೆ ಹೋಗುವುದು. ಇನ್ನುಳಿದ ಕಾಲುಪಾಲು ತಂದೆ, ತಾಯಿ, ಗೌರವ, ಕೀರ್ತಿ, ಅಹಂಕಾರ ಉಡುಗೆ ತೊಡುಗೆ ಇವುಗಳಿಗೆ ಹೋಗುತ್ತದೆ. ಇನ್ನು ದೇವರಿಗೆ ಅರ್ಪಿಸುವುದಕ್ಕೆ ಅವನಲ್ಲಿ ಪ್ರೀತಿ ಇರುವುದಿಲ್ಲ. ಆದಕಾರಣವೇ ಇನ್ನೂ ವಿಭಾಗವಾಗದ ಹುಡುಗನ ಮನಸ್ಸನ್ನು ದೇವರ ಕಡೆಗೆ ತಿರುಗಿಸಿದರೆ ಅವನು ಪರಮಾತ್ಮನ ಪ್ರೀತಿಯನ್ನು ಪಡೆಯಬಹುದು; ಸುಲಭವಾಗಿ ಅವನನ್ನು ನೋಡಬಹುದು. ಆದರೆ ವಯಸ್ಸಾದವರಿಗೆ ಹೀಗೆ ಮಾಡುವುದು ಸುಲಭವಲ್ಲ.

107) ನೂರಾರು ವರ್ಷಗಳು ಚುಕ್ಕುಮುಕ್ಕಿಯ ಕಲ್ಲು ನೀರಿನಲ್ಲಿ ಮುಳುಗಿರಬಹುದು. ಆದರೂ ಅದು ತನ್ನ ಸ್ವಭಾವವನ್ನು ಕಳೆದುಕೊಳ್ಳುವುದಿಲ್ಲ. ಬೇಕಾದಾಗ ಅದನ್ನು ಉಕ್ಕಿನಿಂದ ಹೊಡೆಯಿರಿ; ತಕ್ಷಣವೇ ಕಿಡಿ ಏಳುವುದು. ಇದರಂತೆಯೇ ನಿಜವಾದ ಭಕ್ತನಲ್ಲಿರುವ ಶ್ರದ್ಧೆಯೂ ಕೂಡ ಅಚಲವಾದುದು. ಅವನು ಹೀನವಾದ ಪ್ರಾಪಂಚಿಕ ವಸ್ತುಗಳಿಂದ ಸುತ್ತಲೂ ಆವರಿಸಿಕೊಂಡಿದ್ದರೂ ದೇವರಲ್ಲಿ ಶ್ರದ್ಧೆ ಮತ್ತು ಪ್ರೀತಿಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ದೇವರ ಹೆಸರನ್ನು ಕೇಳಿದೊಡನೆಯೇ ಅವನು ಉತ್ಸಾಹದಿಂದ ಜಾಗ್ರತನಾಗುವನು.

108) ಚಿನ್ನ ಮತ್ತು ಹಿತ್ತಾಳೆಯನ್ನು ನಾವು ಹೇಗೆ ಒರೆಗಲ್ಲಿನ ಮೇಲೆ ಪರೀಕ್ಷೆ ಮಾಡುತ್ತೇವೆಯೋ ಹಾಗೆಯೆ ನಿಜವಾದ ಮತ್ತು ಕಪಟ ಸಾಧಕರನ್ನು ಹಿಂಸೆ ಮತ್ತು ಚಾಡಿಕೋರತನವೆಂಬ ಒರೆಗಲ್ಲು ವ್ಯಕ್ತಪಡಿಸುವುದು.

109) ರೈಲ್ವೆಯಂತ್ರ ಸುಲಭವಾಗಿ ತನಗೆ ಸೇರಿದ ಗಾಡಿಗಳನ್ನು ಎಳೆದುಕೊಂಡು ಹೋಗುತ್ತದೆ. ಶ್ರದ್ಧೆ ಮತ್ತು ಭಕ್ತಿಯಿಂದ ಅಚಲವಾಗಿ ದೇವರನ್ನು ಪ್ರೀತಿಸುವವರು ಎಷ್ಟೇ ಕಷ್ಟ ಬರಲಿ, ಆತಂಕಗಳು ಬರಲಿ, ಜೀವನ ಸಾಗಿಸುವುದಕ್ಕೆ ಅವರಿಗೆ ಕಷ್ಟ ತೋರುವುದಿಲ್ಲ. ಅದೇ ಕಾಲದಲ್ಲಿ ಅವರು ಹಲವರನ್ನು ದೇವರ ಕಡೆಗೆ ಕರೆದುಕೊಂಡು ಹೋಗುವರು.

110) ಯಾರು ಒಮ್ಮೆ ಶುಭ್ರವಾದ ಕಲ್ಲುಸಕ್ಕರೆಯನ್ನು ರುಚಿ ನೋಡಿರುವರೋ ಅವರಿಗೆ ಕೆಲಸಕ್ಕೆ ಬಾರದ ಕೊಳೆಯಾದ ಜಿನುಗಿನ ಬೆಲ್ಲದ ಮೇಲೆ ಇಷ್ಟವಿಲ್ಲ. ಯಾರು ಅರಮನೆಯಲ್ಲಿ ಮಲಗಿದ್ದರೋ ಅವರಿಗೆ ಕಸದ ಗುಂಡಿಯಲ್ಲಿ ಮಲಗಲು ಇಷ್ಟವಿಲ್ಲ. ಸಚ್ಚಿದಾನಂದ ಸುಖವನ್ನು ಅನುಭವಿಸಿದ ಜೀವನಿಗೆ ಕೆಲಸಕ್ಕೆ ಬಾರದ ಪ್ರಾಪಂಚಿಕ ವಿಷಯಗಳ ಮೇಲೆ ಇಚ್ಛೆಯಿರುವುದಿಲ್ಲ.

111) ಯಾವ ಹೆಂಗಸನ್ನು ಪ್ರೀತಿಸುವುದಕ್ಕೆ ದೊರೆಯೆ ಇರುವನೋ, ಅವಳು ಭಿಕ್ಷುಕನ ಕರೆಗೆ ಮೆಚ್ಚುವುದಿಲ್ಲ. ಪರಮಾತ್ಮನ ಕೃಪಾಕಟಾಕ್ಷ ದೊರೆತ ಜೀವ ಪ್ರಪಂಚದ ಅಲ್ಪವಸ್ತುಗಳನ್ನು ಪ್ರೀತಿಸುವುದಿಲ್ಲ.

112) ಕೇರುವ ಮೊರದ ಸ್ವಭಾವ ಹಗುರವಾದ ಕೆಲಸಕ್ಕೆ ಬಾರದ ವಸ್ತುವನ್ನು ತಿರಸ್ಕರಿಸಿ ಭಾರವಾದ ಒಳ್ಳೆಯ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳುವುದು. ಎಲ್ಲ ಭಕ್ತರ ಸ್ವಭಾವವು ಹೀಗೆಯೆ.

113) ವೇಗವಾಗಿ ಹರಿಯುವ ಪ್ರವಾಹ ಕೆಲವು ಕಡೆಗಳಲ್ಲಿ ಸುತ್ತಿಕೊಂಡು ಸುಳಿಯಲ್ಲಿ ಹರಿದುಕೊಂಡು ಹೋಗುವುದು. ಆದರೆ ಇವುಗಳನ್ನು ದಾಟಿದ ಮೇಲೆ ಪುನಃ ವೇಗವಾಗಿ ಹರಿಯುವುದು. ಇದರಂತೆಯೆ ಹಲವು ವೇಳೆ ಭಕ್ತನ ಹೃದಯ ನಿರಾಶೆ ದುಃಖ ಅಪನಂಬಿಕೆ ಇವುಗಳ ಸುಳಿಯಲ್ಲಿ ಸಿಕ್ಕುವುದು. ಆದರೆ ಇದು ತಾತ್ಕಾಲಿಕ. ಬಹಳ ಕಾಲವಿರದು.

114) ಭಕ್ತನ ಶಕ್ತಿ ಇರುವುದೆಲ್ಲಿ? ಅವನು ದೇವರ ಮಗು. ಅವನ ಪ್ರೇಮಾಶ್ರುಗಳೇ ಅತಿ ಅಮೋಘವಾದ ಅಸ್ತ್ರ!

115) ದೇವರು ಎಂಬ ಹೆಸರನ್ನು ಕೇಳಿದ ಮಾತ್ರಕ್ಕೆ ಯಾರಿಗೆ ರೋಮಾಂಚನವಾಗಿ ಕಣ್ಣಿನಿಂದ ನೀರು ಸುರಿಯುವುದೋ ಅವನು ನಿಜವಾಗಿಯೂ ತನ್ನ ಕೊನೆಯ ಜನ್ಮಕ್ಕೆ ಬಂದಿರುವನು.

116) ಒಂದು ಹಸುವಿನ ಮಂದೆಯ ಹತ್ತಿರ ಯಾವುದಾದರೊಂದು ಹೊಸ ಪ್ರಾಣಿಯು ಬಂದರೆ ಇವುಗಳೆಲ್ಲ ಒಟ್ಟಿಗೆ ಸೇರಿ ಅದನ್ನು ಹೊರಗೆ ಅಟ್ಟುವುವು. ಆದರೆ ಒಂದು ಹಸುವು ಬಂದರೆ ಉಳಿದ ಹಸುಗಳೆಲ್ಲಾ ಅದನ್ನು ನೆಕ್ಕುತ್ತಾ ಸ್ನೇಹ ಬೆಳೆಸುವುವು. ಇದರಂತೆಯೆ ಭಕ್ತನು ಮತ್ತೊಬ್ಬ ಭಕ್ತನನ್ನು ಸಂಧಿಸಿದಾಗ ಇಬ್ಬರಿಗೂ ಅತ್ಯಾನಂದವಾಗುವುದು. ಅಗಲುವುದಕ್ಕೆ ಇಚ್ಛೆಯೇ ಬಾರದು.

117) ದೇವರನ್ನು ಪ್ರೀತಿಸುವವನು ಏಕಾಂತವಾಗಿ ಏತಕ್ಕೆ ಇರಲೊಲ್ಲ? ಭಂಗಿ ಸೇದುವವನಿಗೆ ಜೊತೆಗಾರರಿಲ್ಲದಿದ್ದರೆ ಆನಂದವಿಲ್ಲ. ಭಂಗಿ ಸೇದುವವನಂತೆಯೇ ಭಕ್ತನೂ ಕೂಡ. ಇತರ ಭಕ್ತರಿಂದ ದೂರವಾಗಿ ಭಗವಂತನ ನಾಮೋಚ್ಚಾರಣೆ ಮಾಡುವುದರಿಂದ ಆನಂದಪಡಲಾರ.

118) ಸಂಸಾರದಲ್ಲಿ ಸಂದೇಹವಿಲ್ಲದೆ ಹಣದ ಆವಶ್ಯಕತೆಯಿದೆ. ಆದರೆ ಹಣ ಮತ್ತು ಇನ್ನಿತರ ವಸ್ತುಗಳ ಮೇಲೆ ಸುಮ್ಮನೆ ಹೆಚ್ಚು ಯೋಚನೆ ಮಾಡಬೇಡ. ತಾನಾಗಿ ಏನು ಬರುವುದೋ ಅದರಲ್ಲೇ ತೃಪ್ತರಾಗಿರುವುದು ಅತ್ಯುತ್ತಮವಾದ ರೀತಿ. ಕೂಡಿಡಲು ಕಾತುರವಾಗಿರಬೇಡ. ಯಾರು ತಮ್ಮ ಜೀವನವನ್ನು ಭಗವಂತನಿಗೆ ಅರ್ಪಿಸುವರೊ, ಯಾರು ಅವನ ಭಕ್ತರಾಗಿ ಅವನ ಆಶ್ರಯ ಹೊಂದಿರುವರೊ, ಅವರೆಂದಿಗೂ ಪ್ರಾಪಂಚಿಕ ವಸ್ತುಗಳನ್ನು ಬಯಸುವುದಿಲ್ಲ. ಅವರಿಗೆ ಬಂದಷ್ಟೂ ಖರ್ಚಾಗುವುದು. ಒಂದು ಕಡೆಯಿಂದ ದುಡ್ಡು ಬಂದರೆ ಮತ್ತೊಂದು ಕಡೆಯಿಂದ ಖರ್ಚಾಗುವುದು.

119) ಪ್ರಪಂಚದಲ್ಲಿರಿ. ಆದರೆ ಪ್ರಾಪಂಚಿಕರಾಗಬೇಡಿರಿ. ಹಿಂದಿನವರು ಹೇಳುವಂತೆ, ಹಾವಿನ ಮುಂದೆ ಕಪ್ಪೆಯನ್ನು ಕುಣಿಯುವಂತೆ ಮಾಡಿ. ಆದರೆ ಹಾವು ಅದನ್ನು ನುಂಗದಂತೆ ನೋಡಿಕೊಳ್ಳಿ.

120) ನೀರಿನ ಮೇಲೆ ದೋಣಿಯಿರಬಹುದು. ಆದರೆ ದೋಣಿಯೊಳಗೆ ನೀರು ಇರಕೂಡದು. ಸಾಧಕ ಪ್ರಪಂಚದಲ್ಲಿರಬಹುದು. ಆದರೆ ಪ್ರಾಪಂಚಿಕತೆ ಅವನಲ್ಲಿರಕೂಡದು.

121) ನೀನು ಗೃಹಸ್ಥನೋ ಅಲ್ಲವೋ ಅದೇನೂ ಅಷ್ಟು ಪ್ರಮುಖವಲ್ಲ. ನಿಮ್ಮ ಮನಸ್ಸನ್ನು ಯಾವಾಗಲೂ ದೇವರ ಮೇಲೆ ಇಟ್ಟು ಅನಾಸಕ್ತರಾಗಿ ನಿಮ್ಮ ಕೆಲಸಗಳನ್ನು ನಿರ್ವಹಿಸಿ. ಉದಾಹರಣೆಗೆ, ಬೆನ್ನಿನ ಮೇಲೆ ಒಂದು ಕುರು ಎದ್ದಿರುವ ಮನುಷ್ಯ ತನ್ನ ಸ್ನೇಹಿತರು ಮುಂತಾದವರೊಂದಿಗೆ ಮಾತನಾಡುತ್ತಾನೆ; ಕೆಲಸವನ್ನು ಮಾಡುತ್ತಾನೆ. ಆದರೆ ಅವನ ಮನಸ್ಸೆಲ್ಲಾ ಅವನ ನೋವಿನ ಮೇಲಿರುವುದು.

122) ವಿವೇಕ ವೈರಾಗ್ಯ ಮತ್ತು ಭಕ್ತಿ ಇವುಗಳೊಂದಿಗೆ ಪ್ರಪಂಚದಲ್ಲಿದ್ದರೆ ಯಾವ ಅಪಾಯವೂ ಇಲ್ಲ.

123) ನೀನು ಸಾಧನೆಯಲ್ಲಿ ನಿರತವಾಗಿರುವಾಗ ಯಾರು ಅದನ್ನು ತಾತ್ಸಾರದಿಂದ ನೋಡುವರೋ ಮತ್ತು ಧರ್ಮ ಮತ್ತು ಧರ್ಮಾತ್ಮನನ್ನು ಯಾರು ಅಸಡ್ಡೆಯಿಂದ ಕಾಣುವರೋ ಅವರಿಂದ ದೂರವಿರು.

124) ನೀನು ಮೊದಲು ಕೈಗೆ ಎಣ್ಣೆ ಸವರಿಕೊಂಡು ಹಲಸಿನ ಹಣ್ಣನ್ನು ಕೊಯ್ಯಲು ಹೋದರೆ ಅದರ ಅಂಟು ನಿನ್ನ ಕೈಗೆ ಅಂಟಿ ತೊಂದರೆ ಕೊಡುವುದಿಲ್ಲ. ಪರಮಾತ್ಮನ ನಿಜವಾದ ಜ್ಞಾನದಿಂದ ನೀನು ಸಿದ್ಧನಾಗಿ ಅನಂತರ ಐಶ್ವರ್ಯ ಮತ್ತು ಪ್ರಪಂಚದ ಮಧ್ಯದಲ್ಲಿ ಇದ್ದರೆ ನಿನಗೆ ಯಾವ ವಿಧವಾದ ತೊಂದರೆಯನ್ನೂ ಕೊಡುವುದಿಲ್ಲ.

125) ಹುಡುಗನು ಕಂಬವನ್ನು ಹಿಡಿದುಕೊಂಡು ತಾನು ಬೀಳುತ್ತೇನೆಂಬ ಅಂಜಿಕೆಯಿಲ್ಲದೆ ಹೇಗೆ ವೇಗವಾಗಿ ತಿರುಗುತ್ತಾನೆಯೋ ಹಾಗೆಯೇ ನಿಮ್ಮ ಮನಸ್ಸನ್ನೆಲ್ಲಾ ದೇವರ ಮೇಲೆ ಇಟ್ಟು ನಿಮ್ಮ ಪ್ರಾಪಂಚಿಕ ಕೆಲಸಗಳನ್ನು ಮಾಡಿ. ನೀವು ಅಪಾಯದಿಂದ ಪಾರಾಗುವಿರಿ.

126) ಪ್ರಪಂಚದಲ್ಲಿದ್ದು ಮೋಕ್ಷವನ್ನು ಪಡೆಯಲು ಯತ್ನಿಸುವವರು ಕೋಟೆಯ ಹಿಂದೆ ನಿಂತುಕೊಂಡು ಕಾದಾಡುವ ಯೋಧರಂತೆ. ದೇವರನ್ನು ಹುಡುಕುವುದಕ್ಕಾಗಿ ಎಲ್ಲವನ್ನೂ ತ್ಯಜಿಸಿದ ಸಂನ್ಯಾಸಿಗಳಾದರೋ ಅಡಚಣೆಯಿಲ್ಲದ ಮೈದಾನದಲ್ಲಿ ನಿಂತು ಕಾಯುವ ಯೋಧರಂತೆ.

127) ಪ್ರಾಪಂಚಿಕ ವಿಷಯಗಳಲ್ಲಿ ನಿರತವಾಗಿರುವುದರಿಂದ ಅವನ ಮನಸ್ಸಿನ ಶಕ್ತಿ ಎಷ್ಟೊ ವ್ಯಯವಾಗುವುದು. ಸನ್ಯಾಸ ಜೀವನವನ್ನು ತೆಗೆದುಕೊಂಡರೆ ಮಾತ್ರ ಆ ನಷ್ಟದಿಂದ ಪಾರಾಗಬಹುದು.

128) ಯಾರು ಪವಿತ್ರ ಸನ್ಯಾಸಾಶ್ರಮಕ್ಕೆ ಅರ್ಹರು? ಯಾರು ಪ್ರಪಂಚವನ್ನು ಸಂಪೂರ್ಣ ತ್ಯಜಿಸಿ, ನಾಳೆ ಊಟ ಮಾಡುವುದೆಲ್ಲಿ? ನಾಳೆ ಉಟ್ಟುಕೊಳ್ಳುವುದೇನು? ಎಂಬುದನ್ನು ಸ್ವಲ್ಪವೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಇರುವರೋ ಅವರೇ ನಿಜವಾಗಿಯೂ ಸನ್ಯಾಸಿಯಾಗಲು ಅರ್ಹರು. ಅವನ ಸ್ವಭಾವ, ಆವಶ್ಯಕ ಬಿದ್ದರೆ ದೊಡ್ಡ ಮರದ ಮೇಲಿಂದ ತನ್ನನ್ನು ರಕ್ಷಿಸಿಕೊಳ್ಳಬೇಕು ಎಂಬುದನ್ನು ಕೂಡ ಲೆಕ್ಕಿಸದೆ ಕೆಳಗೆ ಬೀಳುವವನಂತೆ ಇರಬೇಕು.

129) ತಂದೆ ತಾಯಿ ಅಥವಾ ಹೆಂಡತಿಯರೊಂದಿಗೆ ಬಂದ ಮನಸ್ತಾಪದಿಂದ ಯಾರು ವೈರಾಗ್ಯ ಹೊಂದುವರೋ ಅವರನ್ನು ಜಿಗುಪ್ಸಾತ್ಯಾಗಿಗಳೆನ್ನಬಹುದು. ಅವರ ವೈರಾಗ್ಯ ಕ್ಷಣಿಕ! ಯಾರಾದರೊಬ್ಬ ಶ್ರೀಮಂತರ ಮನೆಯಲ್ಲಿ ಲಾಭದಾಯಕವಾದ ಒಂದು ಕೆಲಸ ಸಿಕ್ಕಿದರೆ ಅವನು ವೈರಾಗ್ಯವನ್ನು ತ್ಯಜಿಸುವನು.

130) ಯಾವ ಸಂನ್ಯಾಸಿ ಔಷಧಿಯನ್ನು ಕೊಡುವನೋ, ಮಾಯಾಮಂತ್ರಗಳನ್ನು ಮಾಡುವನೋ, ಹಣವನ್ನು ಸ್ವೀಕರಿಸುವನೋ, ದೊಡ್ಡ ದೊಡ್ಡ ಬಾಹ್ಯ ಚಿಹ್ನೆಗಳ ಮೂಲಕ ಭಕ್ತಿಯನ್ನು ಪ್ರದರ್ಶಿಸುವನೋ ಅವನನ್ನು ನಂಬಬೇಡಿ.

131) ಕ್ಷಮಾಗುಣವೇ ತ್ಯಾಗಿಯ ನೈಜ ಸ್ವಭಾವ.

132) ಒಳಗೆ ಬಹಳ ಬೆಲೆ ಬಾಳುವ ಮುತ್ತು ಇರುವ ಕಪ್ಪೆಚಿಪ್ಪಿಗೆ ಅಷ್ಟು ಬೆಲೆ ಇಲ್ಲ. ಆದರೆ ಮುತ್ತು ಬೆಳೆಯಬೇಕಾದರೆ ಇದು ಆವಶ್ಯಕ. ಮುತ್ತನ್ನು ಪಡೆದವನಿಗೆ ಚಿಪ್ಪಿನಿಂದ ಉಪಯೋಗವಿಲ್ಲದೆ ಇರಬಹುದು. ಇದರಂತೆಯೇ ಪರಮ ಸತ್ಯವನ್ನು ಅಂದರೆ ದೇವರನ್ನು ಪಡೆದವನಿಗೆ ನಿಯಮಾಚಾರಗಳೇನೂ ಆವಶ್ಯಕವಿಲ್ಲ.

133) ಮೊದಲು ನಿಯಮಾಚಾರಗಳನ್ನು ಪಾಲಿಸಬೇಕು. ಆಧ್ಯಾತ್ಮಿಕ ಜೀವನದಲ್ಲಿ ಮುಂದುವರೆದ ಮೇಲೆ ಹೆಚ್ಚು ಕಾಲ ಪಾಲಿಸಬೇಕಾಗಿಲ್ಲ. ಆಗ ಮನಸ್ಸು ಅವನ ಧ್ಯಾನದಲ್ಲಿ ಐಕ್ಯವಾಗಿ ನಿಲ್ಲುವುದು.

134) ಬಿರುಗಾಳಿ ಎದ್ದಿರುವಾಗ ಅಶ್ವತ್ಥ ಮತ್ತು ವಟವೃಕ್ಷಗಳಿಗೆ ವ್ಯತ್ಯಾಸ ಕಾಣಬರುವುದಿಲ್ಲ. ಇದರಂತೆಯೇ ಪರಮಜ್ಞಾನದ ಬಿರುಗಾಳಿ ಎದ್ದಾಗ ಜಾತಿಗಳ ಭೇದಭಾವವಿರುವುದಿಲ್ಲ.

135) ಪ್ರೇಮದಿಂದ ಉನ್ಮತ್ತನಾದ ನಿಜವಾದ ಭಕ್ತ ಒಬ್ಬ ಹೆಂಡಕುಡುಕನಂತೆ. ಅವನು ಮರ್ಯಾದೆಯ ನಿಯಮಗಳನ್ನು ಸದಾ ಕಾಲದಲ್ಲಿಯೂ ಪಾಲಿಸುವುದಿಲ್ಲ.

136) ಕುಡುಕನು ಕೆಲವು ವೇಳೆ ತನ್ನ ಕೋಟನ್ನು ತಲೆಯ ಮೇಲೆ ಇಟ್ಟುಕೊಳ್ಳುವನು, ಕೆಲವು ವೇಳೆ ಚಡ್ಡಿಯಂತೆ ಹಾಕಿಕೊಳ್ಳುವನು, ಇದರಂತೆಯೇ ದೇವೋನ್ಮತ್ತನೂ ಕೂಡ ಬಾಹ್ಯಪ್ರಜ್ಞೆ ಇಲ್ಲದವನಂತೆಯೇ ಆಚರಿಸುವನು.

137) ಯಾರು ಮೀನನ್ನು ತಿನ್ನುತ್ತಾರೆಯೊ ಅವರಿಗೆ ಮೀನಿನಲ್ಲಿ ಕೆಲಸಕ್ಕೆ ಬಾರದ ತಲೆ ಮತ್ತು ಬಾಲಗಳು ಬೇಕಿಲ್ಲ. ಮೃದುವಾದ ಮಧ್ಯಭಾಗ ಮಾತ್ರ ಬೇಕು. ಇದರಂತೆಯೇ ನಮ್ಮ ಶಾಸ್ತ್ರದ ಹಿಂದಿನ ನಿಯಮಾಚಾರಗಳಿಂದ ಅನಾವಶ್ಯಕವಾದ ಭಾಗಗಳನ್ನು ತೆಗೆದುಹಾಕಿ ಇಂದಿನ ಕಾಲಕ್ಕೆ ಯೋಗ್ಯವಾಗುವಂತೆ ಮಾಡಬೇಕು.

138) ಮನೆಯನ್ನು ಕಟ್ಟುವಾಗ ಕಾಲಾವಧಿ (scaffolding) ಅತ್ಯಾವಶ್ಯಕ. ಕೆಲಸವಾದ ಮೇಲೆ ಅದರಿಂದ ಏನೂ ಪ್ರಯೋಜನವಿಲ್ಲ. ಇದರಂತೆಯೇ ಮೊದಲಲ್ಲಿ ವಿಗ್ರಹಾರಾಧನೆ ಅವಶ್ಯಕ, ಅನಂತರ ಇಲ್ಲ.

139) ಅಕ್ಷರ ಕಲಿತುಕೊಳ್ಳುವವನು ಮೊದಲು ದೊಡ್ಡದೊಡ್ಡದಾಗಿ ಗೀಚಿ ಅನಂತರ ಸಣ್ಣಗೆ ಬರೆಯುವುದನ್ನು ಕಲಿಯುವಂತೆ, ಮೊದಲು ಮನುಷ್ಯನು ಸಾಕಾರದ ಮೇಲೆ ಮನಸ್ಸನ್ನು ಏಕಾಗ್ರಮಾಡುವುದನ್ನು ಕಲಿತು ಆನಂತರ ಅದರಲ್ಲಿ ಪಳಗಿದ ಮೇಲೆ ನಿರಾಕಾರದ ಮೇಲೆ ಯತ್ನಿಸಬೇಕು.

140) ತಾಯಿ ತನ್ನ ಮಕ್ಕಳಿಗೆ ಯಾರಿಗೆ ಯಾವ ಆಹಾರ ಒಗ್ಗುವುದೊ ಅದನ್ನು ಅಣಿ ಮಾಡುವಳು. ಅವಳಿಗೆ ಐದು ಜನ ಮಕ್ಕಳಿದ್ದು ಒಂದು ದೊಡ್ಡ ಮೀನು ಅಡಿಗೆಗೆ ಸಿಕ್ಕಿದರೆ, ಅದರಿಂದ ಹಲವು ವಿಧದ ಅಡಿಗೆ ಮಾಡಿ, ಯಾರು ಯಾವುದನ್ನು ಅರಗಿಸಿಕೊಳ್ಳಬಲ್ಲರೊ ಅವನ್ನು ಕೊಡುವಳು; ಒಬ್ಬನಿಗೆ ಮೀನಿನೊಂದಿಗೆ ಪಲಾವ್, ಜೀರ್ಣಶಕ್ತಿ ಜಾಸ್ತಿಯಿಲ್ಲದವನಿಗೆ ಸ್ವಲ್ಪ ಸಾರು, ಹೀಗೆ ಅವರವರ ಜೀರ್ಣಶಕ್ತಿಗನುಸಾರವಾಗಿ ಕೊಡುವಳು. (ಸಾಧಕರಿಗೆ ವಿಧಿಸಿರುವ ಹಲವು ವಿಧದ ನಿಯಮಾಚಾರಗಳೂ ಇದರಂತೆಯೇ.)

141) ಒಬ್ಬನು ದೇವರನ್ನು ನೋಡಿಯಾದ ಮೇಲೆ ವಿಗ್ರಹ ಮುಂತಾದುವುಗಳೆಲ್ಲ ಪರಮಾತ್ಮನ ಸ್ವರೂಪವೆಂದು ಗೊತ್ತಾಗುವುದು. ಅವನ ಪಾಲಿಗೆ ವಿಗ್ರಹವು ಮಣ್ಣಿನಿಂದ ಆಗಿಲ್ಲ. ಅದು ಚಿನ್ಮಯಮೂರ್ತಿ.

142) ದನಗಳು ಹೊಟ್ಟೆ ತುಂಬ ಹುಲ್ಲನ್ನು ತಿಂದಾದ ಮೇಲೆ ಒಂದು ಕಡೆ ಕೂತು ಮೆಲುಕು ಹಾಕುವಂತೆ, ಪವಿತ್ರ ಕ್ಷೇತ್ರಗಳನ್ನು, ನೋಡಿಯಾದ ಮೇಲೆ ಅಲ್ಲಿದ್ದಾಗ ಎದ್ದ ಒಳ್ಳೆಯ ಆಲೋಚನೆಗಳನ್ನು ಯಾವುದಾದರೊಂದು ನಿರ್ಜನ ಪ್ರದೇಶದಲ್ಲಿ ಕುಳಿತು ಅದರಲ್ಲೇ ತನ್ಮಯನಾಗುವವರೆಗೆ ಆಲೋಚಿಸಬೇಕು. ಇಂತಹ ಸ್ಥಳಗಳನ್ನು ಬಿಟ್ಟಾದ ಮೇಲೆ ಪ್ರಾಪಂಚಿಕ ವಿಷಯಗಳಲ್ಲಿ ಮಗ್ನರಾಗಿ ಬರುವ ಒಳ್ಳೆಯ ಆಲೋಚನೆಗಳನ್ನು ಅಟ್ಟಬಾರದು.

143) ಪ್ರಪಂಚದ ನಾಲ್ಕು ದಿಕ್ಕುಗಳಲ್ಲಿಯೂ ಸಂಚಾರ ಮಾಡಿ ಬನ್ನಿ. ಎಲ್ಲಿಯೂ ನಿಮಗೆ ನಿಜವಾದ ಧರ್ಮ ಸಿಕ್ಕುವುದಿಲ್ಲ. ಇರುವುದೆಲ್ಲ ಇಲ್ಲಿದೆ. (ಅಂದರೆ ಒಬ್ಬನ ಹೃದಯಾಂತರಾಳದಲ್ಲಿದೆ)

144) ಹಾಲು ಮತ್ತು ನೀರನ್ನು ಒಟ್ಟಿಗೆ ಸೇರಿಸಿದರೆ ಎರಡೂ ಮಿಶ್ರವಾಗಿ ಹೋಗುವುದರಲ್ಲಿ ಸಂದೇಹವಿಲ್ಲ. ಹಾಲನ್ನೇ ಪುನಃ ಪ್ರತ್ಯೇಕ ಮಾಡಲಾಗುವುದಿಲ್ಲ. ಇದರಂತೆಯೇ ಆತ್ಮೋನ್ನತಿಗಾಗಿ ಆಶಿಸುತ್ತಿರುವ ಸಾಧಕನೂ ಕೂಡ ಹಲವು ಬಗೆಯ ಪ್ರಾಪಂಚಿಕರೊಂದಿಗೆ ಬೆರೆತರೆ ಅವನು ತನ್ನ ಆದರ್ಶವನ್ನು ಕಳೆದುಕೊಳ್ಳುವುದು ಮಾತ್ರವಲ್ಲ. ಜೊತೆಗೆ ಅವನಿಗೆ ಹಿಂದೆಯಿದ್ದ ಶ್ರದ್ಧೆ , ಭಕ್ತಿ ಉತ್ಸಾಹ ಇವೂ ಕ್ರಮೇಣ ಮಾಯವಾಗುವುದು.

145) ಆತ್ಮೋನ್ನತಿಗೆ ಸಾಧುಸಂತರ ಸಂಗ ಬಹಳ ಮುಖ್ಯ.

146) ಯಾರೋ ಸೌದೆ ಮುಂತಾದುವುಗಳೆಲ್ಲವನ್ನೂ ಶೇಖರಿಸಿ ಹಚ್ಚಿದ ಬೆಂಕಿಯಲ್ಲಿ ಹಲವರು ಬೆಂಕಿಯನ್ನು ಕಾಯಿಸಿಕೊಳ್ಳುವರು. ಇದರಂತೆಯೇ ಬಹಳ ತಪಸ್ಸು ಮಾಡಿ ದೇವರನ್ನು ಕಂಡ ಮಹಾತ್ಮರ ಸಂಗದಿಂದ ಮತ್ತು ಅವರ ಉಪದೇಶವನ್ನು ಅನುಸರಿಸುವುದರಿಂದ ಹಲವರು ದೇವರನ್ನು ಧ್ಯಾನಿಸುವರು.

147) ಒಬ್ಬನು ವಕೀಲನನ್ನು ನೋಡಿದರೆ ಕೋರ್ಟು ಮತ್ತು ಕೇಸುಗಳನ್ನು ಸಾಧಾರಣವಾಗಿ ಆಲೋಚಿಸುವನು. ಇದರಂತೆಯೇ ಒಬ್ಬ ಭಕ್ತನನ್ನು ನೋಡಿದರೆ ದೇವರು ಮತ್ತು ನಮ್ಮ ಮುಂದಿನ ಜನ್ಮ ಇವುಗಳನ್ನು ನೆನೆಯುತ್ತೇವೆ.

148) ಸಾಧುಸಂಗ ಅಕ್ಕಿಯನ್ನು ತೊಳೆದ ನೀರಿನಂತೆ. ಅಕ್ಕಿಯ ನೀರಿಗೆ ಮಾದಕ ದ್ರವ್ಯಗಳ ಮತ್ತನ್ನು ಕಡಿಮೆಮಾಡುವ ಗುಣವಿದೆ. ಕೆಲಸಕ್ಕೆ ಬಾರದ ಆಸೆಯೆಂಬ ಸುರೆಯನ್ನು ಕುಡಿದು ಮತ್ತರಾದ ಪ್ರಾಪಂಚಿಕರ ಅಮಲನ್ನು ಸಾಧುಸಂಗ ಇಳಿಸುವುದು.

149) ಜಗನ್ಮಯಿಯಾದ ಉಮಾದೇವಿಯು ಹಿಮಾಲಯ ರಾಜನ ಮಗಳಾಗಿ ಹುಟ್ಟಿದಾಗ ಅವಳು ತನ್ನ ಹಲವು ಅವತಾರಗಳನ್ನು ತಂದೆಗೆ ತೋರಿದಳೆಂದು ಪುರಾಣದಲ್ಲಿ ಹೇಳಿದೆ. ಗಿರಿರಾಜನು ಅವಳನ್ನು ವೇದಾಂತದ ಬ್ರಹ್ಮನನ್ನು ತೋರಿಸೆಂದು ಕೇಳಿದಾಗ, ಉಮಾದೇವಿ “ನೀನು ಬ್ರಹ್ಮನನ್ನು ನೋಡಬೇಕಾದರೆ ಪ್ರಪಂಚವನ್ನೆಲ್ಲ ತ್ಯಜಿಸಿದ ಸಾಧುಗಳ ಸಂಗವನ್ನು ಮಾಡಬೇಕು” ಎಂದು ಹೇಳಿದಳು.

150) ಏನು? ಭಗವನ್ನಾಮ ಕೆಲಸಕ್ಕೆ ಬಾರದುದೇ? ಅವನು ಮತ್ತು ಅವನ ಹೆಸರು ಬೇರೆಯಲ್ಲ. ಸತ್ಯಭಾಮೆಗೆ ಚಿನ್ನ ಬೆಳ್ಳಿಯ ನಗಗಳಿಂದ ಕೃಷ್ಣನನ್ನು ತುಲಾಭಾರ ತೂಗಲು ಸಾಧ್ಯವಾಗಲಿಲ್ಲ. ಆದರೆ ರುಕ್ಮಿಣಿಯು ಶ್ರೀಕೃಷ್ಣನ ಹೆಸರನ್ನು ಮತ್ತು ತುಳಸಿ ದಳವನ್ನು ಇಟ್ಟಾಗ ಸಾಧ್ಯವಾಯಿತು.

151) ನೀನು ದೇವರನ್ನು ನೋಡಬೇಕಾದರೆ ಹರಿನಾಮೋಚ್ಚಾರಣೆಯಲ್ಲಿ ಅಚಲವಾದ ಭಕ್ತಿಯನ್ನಿಡು ಮತ್ತು ನಿತ್ಯ ಅನಿತ್ಯ ವಸ್ತುವನ್ನು ವಿವೇಕಿಸು.

152) ಭಗವನ್ನಾಮ ನಿಜವಾಗಿಯೂ ಶಕ್ತಿಯಿಂದ ಕೂಡಿರುವುದು. ಅದರಿಂದ ತಕ್ಷಣವೇ ಪ್ರತಿಫಲ ಸಿಕ್ಕದೆ ಇರಬಹುದು. ಆದರೆ ಒಂದಲ್ಲ ಒಂದು ದಿನ ಅದು ಫಲವನ್ನು ಕೊಟ್ಟೇ ತೀರಬೇಕು. “ಮನೆಯ ಗೋಡೆಯ ಮೇಲೆ ಬಿದ್ದ ಬೀಜ ಬಹುಶಃ ಕಟ್ಟಡ ಕುಸಿದು ನೆಲದ ಮೇಲೆ ಬಿದ್ದ ಮೇಲೆ, ಆ ಬೀಜ ನೆಲವನ್ನು ಸೇರಿ ಮೊಳೆತು ಮರವಾಗಿ ಫಲವನ್ನು ಕೊಡುವುದು” ಎಂದು ಶ್ರೀ ಚೈತನ್ಯರು ಹೇಳಿರುವರು.

153) ಅಮೃತ ಸರೋವರಕ್ಕೆ ತಿಳಿದೊ ತಿಳಿಯದೆಯೊ ಯಾವ ರೀತಿಯಲ್ಲಾಗಲಿ ಬಿದ್ದರೂ ಅದನ್ನು ಅವನು ಸೋಕಿದೊಡನೆಯೆ ಅಮೃತತ್ವವನ್ನು ಪಡೆಯುವನು; ಯಾರಾದರಾಗಲೀ ಭಗವನ್ನಾಮವನ್ನು ಸ್ವೇಚ್ಛೆಯಿಂದಲೋ ಅಥವಾ ಬಲಾತ್ಕಾರದಿಂದಲೋ ಹೇಗಾದರೂ ಉಚ್ಚರಿಸಲಿ. ಕೊನೆಗೆ ಅವನು ಅಮೃತತ್ವವನ್ನು ಪಡೆಯುವನು.

154) ಹೇಡಿತನ, ದ್ವೇಷ ಮತ್ತು ಅಂಜಿಕೆ ಇರುವ ಕಡೆ ದೇವರು ಬರುವುದಿಲ್ಲ.

155) ತಕ್ಕಡಿಯಲ್ಲಿ ಭಾರವಾದುದು ಕೆಳಗೆ ಬರುವುದು, ಭಾರವಿಲ್ಲದುದು ಮೇಲೆ ಹೋಗುವುದು. ಇದರಂತೆ ಪ್ರಪಂಚದ ಆಸೆ ಆತಂಕಗಳ ಬಂಧನಕ್ಕೆ ಒಳಗಾದವನು ಅದರ ಭಾರಕ್ಕೆ ಕಳಗೆ ಬರುವನು. ಇದು ಕಡಿಮೆ ಇರುವವನು ದೇವರ ಪಾದಪದ್ಮಗಳ ಕಡೆಗೆ ಏರುವನು.

156) ಮತ್ತೊಬ್ಬರ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ಚರ್ಚಿಸುವುದರಲ್ಲಿ ನಿರತವಾಗಿರುವವನು ವೃಥಾ ತನ್ನ ಸಮಯವನ್ನು ಕಳೆಯುವನು. ಇದು ತನ್ನನ್ನಾಗಲಿ ಅಥವಾ ಪರಮಾತ್ಮನನ್ನಾಗಲಿ ಯೋಚಿಸಿದಂತೆ ಅಲ್ಲ. ಕೆಲಸಕ್ಕೆ ಬಾರದ ಮತ್ತೊಬ್ಬರನ್ನು ವಿಚಾರಿಸಿದಂತೆ.

157) ಕೂಪಮಂಡೂಕದಂತೆ ಇರಬೇಡಿ. ಬಾವಿಯಲ್ಲಿರುವ ಕಪ್ಪೆಗೆ ತನ್ನ ಬಾವಿಗಿಂತ ದೊಡ್ಡದಾಗಿರುವುದು, ಅದಕ್ಕಿಂತ ಸೊಗಸಾಗಿರುವುದು ಮತ್ತಾವುದೂ ಇಲ್ಲ. ಇದರಂತೆಯೇ ಎಲ್ಲ ಧರ್ಮಾಂಧರಿಗೂ ತಮ್ಮ ಮತಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ.

158) ಹೀನಸ್ವಭಾವದವರು ಮಾತ್ರ ರೋಗಗಳನ್ನು ಗುಣಮಾಡುವುದು, ವ್ಯಾಜ್ಯವನ್ನು ಗೆಲ್ಲುವುದು, ನೀರಿನ ಮೇಲೆ ನಡೆಯುವುದು, ಇಂತಹ ಅದ್ಭುತ ವ್ಯಾಪಾರಗಳನ್ನು ಬಯಸುವರು. ನಿಜವಾದ ಭಕ್ತ ದೇವರ ಪಾದಕಮಲಗಳನ್ನಲ್ಲದೆ ಮತ್ತಾವುದನ್ನೂ ಬಯಸುವುದಿಲ್ಲ.

159) ಒಮ್ಮೆ ಶ್ರೀಕೃಷ್ಣ ಅರ್ಜುನನಿಗೆ “ನೀನು ನನ್ನನ್ನು ಪಡೆಯಬೇಕಾದರೆ ಅಷ್ಟಸಿದ್ಧಿಗಳಲ್ಲಿ ಒಂದನ್ನಾದರೂ ನೀನು ಎಲ್ಲಿಯವರೆಗೂ ಪಡೆದಿರುವೆಯೋ ಅಲ್ಲಿಯವರೆಗೂ ನಿನಗೆ ಅದು ಸಾಧ್ಯವಿಲ್ಲ” ಎಂದು ಹೇಳಿದನು. ಇಂತಹ ಮಾಯಾ ಮಂತ್ರದ ಶಕ್ತಿ ಒಬ್ಬನ ಅಹಂಕಾರವನ್ನು ಹೆಚ್ಚಿಸಿ ದೇವರನ್ನು ಮರೆಯುವಂತೆ ಮಾಡುವುದು.

160) ಭಿಕ್ಷುಕನೊಬ್ಬನು ಅರಮನೆಗೆ ಹೋಗಿ ಸೋರೆಯ ಕಾಯನ್ನು ಬೇಡಿದರೆ ಮೂರ್ಖನಾಗುತ್ತಾನೆ. ಇದರಂತೆಯೆ ಭಕ್ತನು ಸರ್ವೇಶ್ವರನಾದ ಪರಮಾತ್ಮನ ಮುಂದೆ ನಿಂತು ಅನರ್ಘ್ಯವಾದ ಜ್ಞಾನ ಭಕ್ತಿಯನ್ನು ಬೇಡುವುದು ಬಿಟ್ಟು ಮಾಯಾಮಂತ್ರ ಶಕ್ತಿಯನ್ನು ಬೇಡಿದರೆ ಮೂರ್ಖನಾಗುತ್ತಾನೆ.

161) ಒಂದು ಸಲ ಪರಮಹಂಸರೊಬ್ಬರ ತರುಣ ಶಿಷ್ಯ ಮತ್ತೊಬ್ಬರ ಆಲೋಚನೆಗಳನ್ನು ಓದುವುದನ್ನು ಕಲಿತನು. ಇದರಿಂದ ಅತ್ಯಾನಂದಿತನಾಗಿ ಈ ಸುದ್ದಿಯನ್ನು ಗುರುಗಳಿಗೆ ತಿಳಿಸಿದನು. ರಾಮಕೃಷ್ಣರು ಕೇಳಿ “ಮಗು, ಎಂತಹ ನಾಚಿಕೆಕೇಡು, ಇಂತಹ ಕ್ಷುದ್ರ ವಿಷಯಗಳ ಮೇಲೆ ನಿನ್ನ ಶಕ್ತಿಯನ್ನು ವ್ಯರ್ಥ ಮಾಡಬೇಡ” ಎಂದು ಬುದ್ದಿ ಹೇಳಿದರು.

162) ಸನ್ಯಾಸಿ ಕಾವಿಯ ಬಟ್ಟೆಯನ್ನು ಧರಿಸುವುದರಿಂದ ಏನು ಪ್ರಯೋಜನ? ಬಟ್ಟೆಯಲ್ಲಿ ಏನಿದೆ ? ಕಾವಿಯ ಬಟ್ಟೆ ಅದಕ್ಕೆ ಸಂಬಂಧಪಟ್ಟ ಆಲೋಚನೆಯನ್ನು ತರುತ್ತದೆ. ಹಳೆಯ ಎಕ್ಕಡಗಳನ್ನು ಮತ್ತು ಹರಿದು ಹೋದ ಬಟ್ಟೆಯನ್ನು ಹಾಕಿಕೊಳ್ಳುವುದರಿಂದ ಒಬ್ಬನ ದೈನ್ಯತೆಯನ್ನು ಮನಸ್ಸಿಗೆ ತರುತ್ತದೆ. ಷರಾಯಿ ಅಂಗಿ ಜೋಡುಗಳು ಇವುಗಳನ್ನು ಹಾಕಿಕೊಳ್ಳುವುದರಿಂದ ಸಾಧಾರಣವಾಗಿ ಒಬ್ಬನು ಅಹಂಕಾರದಿಂದ ಕೂಡಿದಂತೆ ಕಾಣುವುದು. ಮಲ್ಲಿನ ಕರಿಯಂಚಿನ ಪಂಚೆಯನ್ನುಟ್ಟುಕೊಂಡ ಮೇಲೆ ತಮಾಷೆಗಾಗಿ ಪ್ರೀತಿಯ ಹಾಡುಗಳನ್ನು ಹೇಳುವಂತೆ ಆಗುವುದು. ಸನ್ಯಾಸಿಯ ಕಾವಿಯ ಬಟ್ಟೆ ಮನಸ್ಸಿನಲ್ಲಿ ಸಾಧಾರಣವಾಗಿ ಒಳ್ಳೆಯ ಆಲೋಚನೆಗಳು ಏಳುವಂತೆ ಮಾಡುವುದು. ಉಡುಪಿಗೆ ಯಾವ ವಿಧವಾದ ಪ್ರಾಮುಖ್ಯತೆ ಇಲ್ಲದಿದ್ದರೂ ಪ್ರತಿಯೊಂದು ವಿಧದ ಪೋಷಾಕಿಗೂ ಒಂದೊಂದು ಬಗೆಯ ಆಲೋಚನೆಯ ಸಂಬಂಧವಿದೆ.

163) ಶ್ರಾದ್ಧ ದಿನಗಳಲ್ಲಿ ಕೊಟ್ಟ ಊಟವನ್ನು ಉಣ್ಣಬೇಡ. ಅದು ಭಕ್ತಿ ಪ್ರೇಮಗಳನ್ನು ನಾಶಮಾಡುವುದು. ಮತ್ತೊಬ್ಬರಿಗೆ ವೈದಿಕ ಮುಂತಾದವುಗಳನ್ನು ಮಾಡಿಸುವ ಪುರೋಹಿತರ ಮನೆಗಳಲ್ಲಿ ಊಟ ಮಾಡಬೇಡ.

164) ಹಗಲಲ್ಲಿ ಮನಸ್ಸು ತೃಪ್ತಿಯಾಗುವ ತನಕ ಊಟ ಮಾಡಿ. ಆದರೆ ರಾತ್ರಿ ಮಿತವಾಗಿ ಸುಲಭವಾಗಿ ಜೀರ್ಣಿಸುವುದನ್ನು ಊಟ ಮಾಡಿ.

165) ಯಾವ ಆಹಾರ ಶರೀರವನ್ನು ಉದ್ರೇಕಿಸುವುದಿಲ್ಲವೊ ಮತ್ತು ಮನಸ್ಸನ್ನು ಚಂಚಲಗೊಳಿಸುವುದಿಲ್ಲವೊ, ಅದನ್ನು ಮಾತ್ರ ಭಕ್ತ ಸೇವಿಸಬೇಕು.

166) ಹಕ್ಕಿ ಹಾರಿ ಹೋದ ಮೇಲೆ ಇದ್ದ ಗೂಡನ್ನು ಯಾರೂ ಲೆಕ್ಕಿಸುವುದಿಲ್ಲ. ಪ್ರಾಣವೆಂಬ ಹಕ್ಕಿ ಹಾರಿಹೋದ ಮೇಲೆ ಹಿಂದೆ ಉಳಿದ ದೇಹವನ್ನು ಯಾರೂ ಲೆಕ್ಕಿಸುವುದಿಲ್ಲ.

167) ದೇಹ ಕೆಲಸಕ್ಕೆ ಬಾರದ ಕ್ಷಣಿಕ ವಸ್ತುವಾದರೆ ಸಾಧುಗಳು ಮತ್ತು ಭಕ್ತರು ಅದನ್ನು ಏಕೆ ನೋಡಿಕೊಳ್ಳುತ್ತಾರೆ? ಬರಿ ಪೆಟ್ಟಿಗೆಯನ್ನು ಯಾರೂ ಕಾಯುವುದಿಲ್ಲ. ಅಂದರೆ ಅಮೂಲ್ಯವಾದ ಚಿನ್ನ ಬೆಳ್ಳಿಗಳಿರುವ ಪೆಟ್ಟಿಗೆಯನ್ನು ಎಲ್ಲರೂ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ದೇವರು ದೇಹದಲ್ಲಿ ಇರುವುದರಿಂದ ಧರ್ಮಾತ್ಮರು ಅದನ್ನು ನೋಡಿಕೊಳ್ಳದೆ ವಿಧಿಯಿಲ್ಲ. ನಮ್ಮ ದೇಹಗಳೆಲ್ಲ ಭಗವಂತನು ಇರುವ ಖಜಾನೆ.

168) ಮನೆಯಲ್ಲಿರುವವನು ಮನೆಗೆ ಬಾಡಿಗೆ ಕೊಡುವಂತೆ ದೇಹವನ್ನು ಉಪಯೋಗಿಸಿಕೊಂಡಿರುವುದಕ್ಕೆ ವ್ಯಥೆಯೇ ನಾವು ಅದಕ್ಕೆ ಕೊಡುವ ಬಾಡಿಗೆ.

169) ಕಬ್ಬಿಣ ಒಳ್ಳೆಯ ಉಕ್ಕಾಗುವುದಕ್ಕೆ ಮುಂಚೆ ಅದನ್ನು ಬಾರಿ ಬಾರಿಗೆ ಬೆಂಕಿಯಲ್ಲಿ ಕಾಯಿಸಿ ಹೊಡೆಯಬೇಕು. ಆಗ ಮಾತ್ರ ಅದರಿಂದ ಮೊನಚಾದ ಕತ್ತಿಯನ್ನು ಮಾಡಬಹುದು. ನಮ್ಮ ಇಚ್ಛೆ ಬಂದಂತೆ ಅದನ್ನು ಮಡಿಸಬಹುದು. ಇದರಂತೆಯೇ ಮನುಷ್ಯನೂ ಕೂಡ ಪರಿಶುದ್ಧನೂ ಮತ್ತು ವಿನಯವಂತನೂ ಆಗಿ ದೇವರ ಸಾನ್ನಿಧ್ಯವನ್ನು ಸೇರುವುದಕ್ಕೆ ಮುಂಚೆ ದುಃಖವೆಂಬ ಮೂಸೆಯಲ್ಲಿ ಹಲವು ವೇಳೆ ಕಾಯಬೇಕು. ಪ್ರಪಂಚದ ಕಷ್ಟವೆಂಬ ಸುತ್ತಿಗೆಯ ಪೆಟ್ಟಿಗೆ ಸಿಕ್ಕಬೇಕು.

170) ರೋಗದ ವಿಷಯದಲ್ಲಿ ತಮ್ಮ ಮನೋಭಾವವನ್ನು ವರ್ಣಿಸುತ್ತ ಶ್ರೀರಾಮಕೃಷ್ಣರು ಹೀಗೆ ಹೇಳಿದರು: “ರೋಗ ತನ್ನ ಪಾಡಿಗೆ ತಾನಿರಲಿ. ದೇಹ ಅನುಭವಿಸಲಿ; ಎಲೈ ಮನವೆ, ನೀನು ಮಾತ್ರ ಯಾವಾಗಲೂ ಚಿದಾನಂದದಲ್ಲಿರು.”

171) ಭಕ್ತನ ದೇಹ ಯಾವ ರೋಗದಲ್ಲಿ ನರಳುತ್ತಿದ್ದರೂ ಅವನಲ್ಲಿರುವ ಶ್ರದ್ಧೆ ಮತ್ತು ಜ್ಞಾನದ ಶಕ್ತಿ ಅವನನ್ನೆಂದಿಗೂ ಕೈಬಿಡುವುದಿಲ್ಲ. ಅವನ ಜ್ಞಾನ ಮತ್ತು ಶ್ರದ್ಧೆ ಎಂದಿಗೂ ಮಂಕಾಗುವುದಿಲ್ಲ. ನೋಡಿ! ಪಾಂಡವರಿಗೆ ಪ್ರಾಪ್ತವಾದ ಕಷ್ಟ ಎಷ್ಟು ಕಡುತರವಾಗಿತ್ತು. ಆದರೂ ಒಂದು ಕ್ಷಣವಾದರೂ ಅವರು ಜ್ಞಾನವನ್ನು ಕಳೆದುಕೊಳ್ಳಲಿಲ್ಲ.

172) ಅಕ್ಕಸಾಲೆಯ ಅಡಿಗಲ್ಲನ್ನು ನೋಡಿ! ಅದು ಹೇಗೆ ಸುತ್ತಿಗೆಯಿಂದ ಪೆಟ್ಟು ತಿನ್ನುತ್ತದೆ. ಆದರೂ ತನ್ನ ಸ್ಥಳದಿಂದ ಕದಲುವುದಿಲ್ಲ. ಮಾನವನು ಇದರಿಂದ ಸಹಿಷ್ಣುತೆ ಮತ್ತು ಸಹನೆಯನ್ನು ಕಲಿಯಲಿ.

173) ನಿನ್ನ ಶ್ರದ್ಧೆ ಮತ್ತು ಭಾವನೆಯನ್ನು ನಿನ್ನಲ್ಲಿಯೇ ಇಟ್ಟುಕೊಂಡಿರು. ಅದನ್ನು ಯಾರಿಗೂ ಹೇಳಬೇಡ. ಹೇಳಿದರೆ ನಿನಗೆ ಬಹಳ ನಷ್ಟವಾಗುವುದು.

174) ಒಬ್ಬನು ತನ್ನ ಸಾಧನೆಯನ್ನು ಎಷ್ಟು ಮತ್ತೊಬ್ಬರಿಂದ ಬಚ್ಚಿಟ್ಟರೆ ಅಷ್ಟು ಒಳ್ಳೆಯದು.

175) ನನ್ನ ಸಮಾನವಿಲ್ಲವೆಂದು ತಿಳಿಯುವುದು ಬಹಳ ಹೀನಾಯ. ಕಾಗೆಯನ್ನು ನೋಡಿ, ತಾನು ಬುದ್ಧಿವಂತನೆಂದು ತಿಳಿದುಕೊಳ್ಳುವುದು ! ಅದು ಯಾರ ಬಲೆಗೂ ಬೀಳುವುದಿಲ್ಲ. ಅಪಾಯದ ಸುಳಿವು ಕಂಡ ತಕ್ಷಣವೇ ಹಾರಿಹೋಗುವುದು. ಬಹಳ ಬುದ್ಧಿವಂತರ ಕೈಯಿಂದ ಆಹಾರವನ್ನು ಕದಿಯುವುದು. ಆದರೂ ಅದಕ್ಕೆ ಕಸವನ್ನು ತಿನ್ನದೆ ವಿಧಿ ಇಲ್ಲ. ನನ್ನ ಸಮಾನವಿಲ್ಲ. ನಾನು ಬಹಳ ಬುದ್ಧಿವಂತ ಎಂದು ತಿಳಿದುಕೊಂಡಿದುದರ ಪರಿಣಾಮವಿದು.

176) ಅನೇಕರು ತೋರಿಕೆಯ ವಿನಯಕ್ಕಾಗಿ ಮಣ್ಣಿನಲ್ಲಿ ಹರಿದಾಡುವ ಹುಳದಂತೆ ನಾನು ಎನ್ನುವರು. ಹೀಗೆಯೇ ಯಾವಾಗಲೂ ನಾವು ಕೀಟಗಳೆಂದು ತಿಳಿದುಕೊಂಡು ಕ್ರಮೇಣ ತಮ್ಮ ರೀತಿಯಲ್ಲಿಯೂ ಕೀಟಗಳಾಗುವರು. ಎಂದಿಗೂ ನಿರಾಶೆ ನಿನ್ನ ಹೃದಯವನ್ನು ಪ್ರವೇಶಿಸದಿರಲಿ. ಅಭ್ಯುದಯದ ಹಾದಿಯಲ್ಲಿ ನಿರಾಶೆ ಅತಿ ಪ್ರಬಲ ಶತ್ರು. ಮನುಷ್ಯ ತಾನು ಆಲೋಚಿಸಿದಂತೆ ಆಗುವನು.

177) ಹಣ್ಣಿನಿಂದ ಕೂಡಿದ ಮರ ಯಾವಾಗಲೂ ಬಗ್ಗಿರುವುದು. ನೀನು ಉತ್ತಮನಾಗಬೇಕಾದರೆ ನಮ್ರನಾಗಿರು, ಸಾಧುವಾಗಿರು.

178) ತಕ್ಕಡಿಯಲ್ಲಿ ಭಾರವಾಗಿರುವ ಭಾಗ ತಗ್ಗುವುದು. ಭಾರವಿಲ್ಲದ ಭಾಗ ಮೇಲೇಳುವುದು. ದಕ್ಷನೂ ಮತ್ತು ಕುಶಲಿಯಾಗಿರುವವನೂ ಯಾವಾಗಲೂ ಅತಿ ವಿನೀತ. ಆದರೆ ಮೂರ್ಖನಿಗಾದರೋ ಹಿಡಿಸಲಾರದಷ್ಟು ಅಹಂಕಾರ.

179) ಆತ್ಮಗೌರವವುಳ್ಳವನೇ ನಿಜವಾದ ಮನುಷ್ಯ. ಉಳಿದವರು ಹೆಸರಿಗೆ ಮಾತ್ರ ಮನುಷ್ಯರು.

180) ಆತ್ಮತೇಜಸ್ಸನ್ನು ಹೊರಪಡಿಸುವ ಅಹಂಕಾರ ಅಹಂಕಾರವಲ್ಲ. ಆತ್ಮವನ್ನು ಅವಹೇಳನ ಮಾಡಿಕೊಳ್ಳುವ ದೈನ್ಯತೆ ನಿಜವಾದ ದೈನ್ಯತೆಯಲ್ಲ.

181) ಮಗುವಿನಷ್ಟು ಸರಳವಾಗುವ ತನಕ ಪರಮಾತ್ಮ ಲಭಿಸುವುದಿಲ್ಲ. ನೀನು ಗಳಿಸಿದ ಪ್ರಾಪಂಚಿಕ ಜ್ಞಾನವನ್ನೆಲ್ಲ ಮರೆತು ಮಗುವಿನಂತೆ ಆಗು. ಆಗ ನಿನಗೆ ಸತ್ಯ ಲಭಿಸುವುದು.

182) ಸರಳತೆ ಒಬ್ಬನನ್ನು ಸುಲಭವಾಗಿ ದೇವರ ಸಮೀಪಕ್ಕೆ ಒಯ್ಯುವುದು. ಮನುಷ್ಯನು ಸರಳ ಸ್ವಭಾವದವನಾಗಿದ್ದರೆ ಆಧ್ಯಾತ್ಮಿಕ ಬೋಧನೆ ಸುಲಭವಾಗಿ ಅವನಲ್ಲಿ ಫಲಕಾರಿಯಾಗುವುದು. ಇದು ಕಲ್ಲು ಇಲ್ಲದೆ ಚೆನ್ನಾಗಿ ಉತ್ತ ನೆಲದಲ್ಲಿ ಬೀಜ ಬೇಗ ಮೊಳೆತು ಫಲಕ್ಕೆ ಬರುವಂತೆ.

183) ಯಾರು ಈ ಜನ್ಮದಲ್ಲೇ ಸತ್ತಂತಿರುವರೋ ಅವರೇ ನಿಜವಾದ ಮನುಷ್ಯರು. ಅಂದರೆ ಸತ್ತ ದೇಹದಲ್ಲಿ ಹೇಗೆ ಆಸೆ ಮತ್ತು ಜಾತಿ ನಾಶವಾಗಿವೆಯೋ ಇವರು ಹಾಗೆಯೇ ಅವುಗಳನ್ನು ನಿಗ್ರಹಿಸಿರುವರು.

184) ಎಲ್ಲಿಯವರೆಗೂ ಹೃದಯಾಕಾಶ ಆಸೆ ಎಂಬ ಮಾರುತಕ್ಕೆ ಸಿಕ್ಕಿ ಚಂಚಲವಾಗಿರುವುದೋ ಅಲ್ಲಿಯವರೆಗೆ ಪರಮಾತ್ಮನನ್ನು ಸಂದರ್ಶಿಸುವ ಅವಕಾಶ ಕಡಮೆ. ಯಾರ ಹೃದಯ ಶುದ್ಧವಾಗಿದೆಯೋ, ಪರಮಾತ್ಮನ ಧ್ಯಾನದಲ್ಲಿ ನಿರತವಾಗಿದೆಯೋ, ಅಲ್ಲಿ ಮಾತ್ರ ಅವನ ದರ್ಶನ ಉದಯಿಸುವುದು.

185) ಎಲ್ಲಿಯವರೆಗೂ ಆಸೆಯ ಮಲಿನತೆ ಸ್ವಲ್ಪವಾದರೂ ಹುದುಗಿರುವುದೋ ಅಲ್ಲಿಯವರೆಗೂ ದೇವರು ಗೋಚರಿಸುವುದಿಲ್ಲ. ಆದಕಾರಣ ನಿನ್ನ ಸಣ್ಣ ಸಣ್ಣ ಬಯಕೆಗಳನ್ನು ತೃಪ್ತಿಪಡಿಸಿಕೊ. ಮುಖ್ಯವಾದ ಬಯಕೆಗಳನ್ನು ಮುಕ್ತ ಮತ್ತು ವಿಮರ್ಶೆಗಳ ಸಹಾಯದಿಂದ ತ್ಯಜಿಸು.

186) ಆಳವಾದ ಭುವಿಯ ಅಂಚಿನಲ್ಲಿ ನಿಂತುಕೊಂಡಿರುವವನು ತಾನು ಎಲ್ಲಿ ಅದರೊಳಗೆ ಬೀಳುತ್ತೇನೆಯೋ ಎಂದು ಯಾವಾಗಲೂ ಜಾಗರೂಕವಾಗಿರುವಂತೆ ಪ್ರಪಂಚದಲ್ಲಿರುವವನು ತಾನು ಎಲ್ಲಿ ಅವುಗಳ ಆಕರ್ಷಣೆಗೆ ಒಳಗಾಗುವೆನೋ ಎಂದು ಎಚ್ಚರದಲ್ಲಿರಬೇಕು.

187) ಆನೆಯನ್ನು ಬಿಟ್ಟರೆ ಅದು ಗಿಡಮರಗಳನ್ನು ಉರುಳಿಸುತ್ತ ಹೋಗುವುದು. ಆದರೆ ಮಾವಟಿಗ ಅದರ ನೆತ್ತಿಯ ಮೇಲೆ ಅಂಕುಶವನ್ನು ಪ್ರಯೋಗಿಸಿದ ತಕ್ಷಣವೇ ಸುಮ್ಮನಾಗುವುದು. ಹೀಗೆಯೇ ನಿಗ್ರಹಿಸದ ಮನಸ್ಸು ಕೆಲಸಕ್ಕೆ ಬಾರದ ಆಲೋಚನೆಯಲ್ಲಿ ಮಗ್ನವಾಗಿರುವುದು. ವಿವೇಕವೆಂಬ ಅಂಕುಶದಿಂದ ಎಳೆದಾಗ ಸುಮ್ಮನಾಗುವುದು.

188) ಸ್ತ್ರೀಯರೆಲ್ಲರೂ ಜಗನ್ಮಯಿಯ ಅಂಶಗಳು. ಆದಕಾರಣ ಎಲ್ಲರೂ ಅವರನ್ನು ತಾಯಿಯಂತೆ ಭಾವಿಸಬೇಕು.

189) ಸ್ವಭಾವತಃ ಸ್ತ್ರೀಯರು ಒಳ್ಳೆಯವರಾಗಿರಲಿ ಅಥವಾ ಕೆಟ್ಟವರಾಗಿರಲಿ, ಪತಿವ್ರತೆಯಾಗಿರಲಿ, ಇಲ್ಲದೆ ಇರಲಿ, ಯಾವಾಗಲೂ ಜಗನ್ಮಯಿಯ ಪ್ರತಿಬಿಂಬಗಳಂತೆ ನೋಡಬೇಕು.

190) ಪತಿಯೊಂದಿಗೆ ಇರುವಾಗಲೂ ಯಾವ ಹೆಂಗಸು ಬ್ರಹ್ಮಚಾರಿಣಿಯಾಗಿರುವಳೋ ಅವಳು ಸಾಕ್ಷಾತ್ ಜಗನ್ಮಯಿ.

191) ಪ್ರಶ್ನೆ: “ಸಾಧನೆಯಲ್ಲಿ ನಿರತನಾದ ಗಂಡನಿಗೆ ಹೆಂಡತಿಯು ಒಂದು ವೇಳೆ ನೀನು ನನ್ನನ್ನು ಸರಿಯಾಗಿ ನೋಡಿಕೊಳ್ಳದೆ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದರೆ ಏನು ಮಾಡಬೇಕು?”

ಉತ್ತರ: “ಒಬ್ಬನು ಅಂತಹ ಹೆಂಡತಿಯನ್ನು, ದೇವರ ಸಾಕ್ಷಾತ್ಕಾರಕ್ಕೆ ಅಡ್ಡಿಯಾಗಿರುವವಳನ್ನು ತ್ಯಜಿಸಬೇಕು. ಅವಳು ಆತ್ಮಹತ್ಯೆ ಮಾಡಿಕೊಂಡರೆ ಮಾಡಿಕೊಳ್ಳಲಿ, ಬಿಟ್ಟರೆ ಬಿಡಲಿ. ದೇವರ ಮಾರ್ಗಕ್ಕೆ ಅಡ್ಡಿ ತರುವವಳು ಅವಿದ್ಯಾಸ್ವರೂಪಳು. ಆದರೆ ನಿಜವಾಗಿ ದೇವರಲ್ಲಿ ಭಕ್ತಿ ಇರುವವನಿಗೆ ಎಲ್ಲವೂ ಅನುಕೂಲವಾಗಿ ಒದಗುವುವು.”

“ಒಬ್ಬನಿಗೆ ನಿಜವಾಗಿ ಭಕ್ತಿಯಿದ್ದರೆ ಅವನ ಹೆಂಡತಿಯ ಮನಸ್ಸು ಕೂಡ ಕ್ರಮೇಣ ದೇವರ ಮೇಲೆ ತಿರುಗುವುದು. ಒಬ್ಬನ ಸ್ವಭಾವ ಒಳ್ಳೆಯದಾಗಿದ್ದರೆ ದೇವರ ಕೃಪೆಯಿಂದ ಅವನ ಹೆಂಡತಿಯೂ ಒಳ್ಳೆಯವಳಾಗುವಳು.”

192) ನೀನು ಮನಸ್ಸಿನಲ್ಲಿ ಇರುವುದನ್ನು ಹೊರಗೆ ಮಾತನಾಡಬೇಕು. ಮಾತು ಮತ್ತು ಆಲೋಚನೆಗಳಲ್ಲಿ ಪರಸ್ಪರ ಹೊಂದಿಕೆ ಇರಲಿ. ಇಲ್ಲದೆ ಹೋದಲ್ಲಿ ದೇವರೇ ನಿನ್ನ ಸರ್ವಸ್ವವೆಂದು ಹೇಳಿ ಮನಸ್ಸಿನಲ್ಲಿ ಪ್ರಪಂಚವೇ ನಿನ್ನ ಸರ್ವಸ್ವವೆಂದು ತಿಳಿದಿದ್ದರೆ ಏನೂ ಪ್ರಯೋಜನವಿಲ್ಲ.

193) ನಾವು ಹೇಗೆ ಪ್ರಾರ್ಥಿಸಬೇಕು ಎಂಬುದು ಮುಂದಿನ ಪ್ರಶ್ನೆ. ವಸ್ತುಗಳಿಗೆ ನಾವು ಬೇಡದೆ ಇರೋಣ. ಆದರೆ ಭಕ್ತ ನಾರದನಂತೆ ಪ್ರಾರ್ಥಿಸೋಣ. ನಾರದನು ರಾಮಚಂದ್ರನನ್ನು ಕುರಿತು “ಹೇ ರಾಮಚಂದ್ರ, ನಿನ್ನ ಪಾದಕಮಲಗಳ ಮೇಲೆ ನನಗೆ ಭಕ್ತಿಯನ್ನು ಅನುಗ್ರಹಿಸು” ಎಂದು ಕೇಳಿದನು. ಶ್ರೀರಾಮಚಂದ್ರನು “ಹಾಗೆಯೇ ಆಗಲಿ” ಎಂದನು. “ಆದರೆ ನಿನಗೆ ಇನ್ನು ಏನೂ ಬೇಡವೆ?” ಎಂದು ಕೇಳಿದನು. ಅದಕ್ಕೆ ನಾರದನು “ಭುವನವನ್ನೆಲ್ಲಾ ಮೋಹಿಸುವ ನಿನ್ನ ಮಾಯೆಯ ಬಲೆಗೆ ನಾನು ಬೀಳದಂತೆ ಅನುಗ್ರಹಿಸು” ಎಂದು ಕೇಳಿಕೊಂಡನು. ಶ್ರೀರಾಮಚಂದ್ರನು ಮತ್ತೊಮ್ಮೆ “ಹಾಗೆಯೇ ಆಗಲಿ, ಆದರೆ ನಿನಗೆ ಮತ್ತೇನೂ ಬೇಡವೆ?” ಎಂದನು. “ಭಗವಂತ! ನನಗಿನ್ನೇನೂ ಬೇಡ, ನಾನು ಪ್ರಾರ್ಥಿಸುವುದು ಇಷ್ಟೆ” ಎಂದನು.

194) ಒಂದೇ ನೀರನ್ನು ಬೇರೆ ಬೇರೆ ಜನರು ಬೇರೆ ಬೇರೆ ಮಾತಿನಲ್ಲಿ, ಕೆಲವರು ವಾಟರ್ ಎಂತಲೂ, ಕೆಲವರು ವಾರಿ ಎಂತಲೂ, ಕೆಲವರು ಪಾನಿ, ಕೆಲವರು ಆಕ್ವ ಎಂತಲೂ ಕರೆಯುವಂತೆ, ಒಂದೇ ಸಚ್ಚಿದಾನಂದವನ್ನು ಕೆಲವರು ಅಲ್ಲಾ ಎಂದೂ, ಕೆಲವರು ಹರಿ ಎಂದೂ, ಮತ್ತೆ ಕೆಲವರು ಬ್ರಹ್ಮನೆಂದೂ ಕರೆಯುವರು.

195) ದೇವರಿಗೆ ಇರುವ ನಾಮಗಳು ಹಲವು. ಅವನನ್ನು ಕಾಣುವ ರೂಪಗಳು ಅನಂತ. ನೀವು ಅವನನ್ನು ಯಾವ ಹೆಸರಿನ ಮೂಲಕವಾದರೂ, ಯಾವ ಆಕಾರದ ಮೂಲಕವಾಗಿ ಆದರೂ ಕಾಣುವಿರಿ.

196) ಕೆಲವು ವರ್ಷಗಳ ಹಿಂದೆ ಹಿಂದೂಗಳೂ ಮತ್ತು ಬ್ರಹ್ಮ ಸಮಾಜದವರೂ ತಮ್ಮ ತಮ್ಮ ಮತಗಳನ್ನು ಶ್ರದ್ಧೆ ಮತ್ತು ಉತ್ಸಾಹದಿಂದ ಪ್ರಚಾರ ಮಾಡುತ್ತಿದ್ದಾಗ ಶ್ರೀರಾಮಕೃಷ್ಣರನ್ನು ಯಾರೋ ಒಬ್ಬರು ಎರಡು ಮತಗಳ ಮೇಲೆ ತಮ್ಮ ಅಭಿಪ್ರಾಯವೇನೆಂದು ಕೇಳಿದರು. ಇದಕ್ಕೆ ಶ್ರೀರಾಮಕೃಷ್ಣರು “ನನ್ನ ಜಗನ್ಮಯಿ ಅವಳ ಕೆಲಸಗಳನ್ನು ಇಬ್ಬರ ಮೂಲಕವಾಗಿಯೂ ಮಾಡಿಸುತ್ತಿರುವಳು” ಎಂದರು.

197) ಒಬ್ಬನು ಮನೆಯ ಮೇಲಕ್ಕೆ ಏಣಿ, ಬೊಂಬು, ಮೆಟ್ಟಿಲು, ಹಗ್ಗ ಹೀಗೆ ಯಾವುದಾದರೊಂದರ ಮೂಲಕವಾಗಿ ಹತ್ತಿ ಹೋಗುವಂತೆ ದೇವರನ್ನು ಸೇರುವುದಕ್ಕೆ ಹಲವು ವಿಧಾನಗಳಿವೆ. ಪ್ರಪಂಚದಲ್ಲಿರುವ ಪ್ರತಿಯೊಂದು ಮತವೂ ಒಂದೊಂದು ದಾರಿಯನ್ನು ತೋರಿಸುತ್ತದೆ.

198) ಎಲ್ಲಾ ನರಿಗಳ ಕೂಗೂ ಒಂದೇ. ಇದರಂತೆಯೇ ಎಲ್ಲಾ ಧರ್ಮಾತ್ಮರ ಉಪದೇಶವೂ ಒಂದೇ!

199) ಯಾರಾದರೂ ಆಗಲಿ ದೇವರಿರುವವನು ಒಬ್ಬನೆ ಎಂದು ತಿಳಿದು ಶ್ರದ್ಧೆಯಿಂದ ಸಾಧನೆ ಮಾಡಿದರೆ ಅವನನ್ನು ಪಡೆಯುವುದರಲ್ಲಿ ಸಂದೇಹವಿಲ್ಲ. ಅವನನ್ನು ಯಾವ ರೀತಿಯಲ್ಲಾದರೂ ಆಗಲಿ, ಯಾವ ಭಾವದಲ್ಲಾಗಲಿ, ಯಾವ ಹೆಸರಿನ ಮೂಲಕವಾಗಲಿ ಭಜಿಸಿದರೂ ಚಿಂತೆ ಇಲ್ಲ.

200) ನೀನು ಆತನನ್ನು ಹೇಗೆ ಬೇಕಾದರೂ ಧ್ಯಾನಿಸು. ಹೇಗೆ ಬೇಕಾದರೂ ಭಜಿಸು; ಮುಂದುವರಿಯುವೆ. ಕಲ್ಲುಸಕ್ಕರೆಯಿಂದ ಆದ ದೋಸೆಯನ್ನು ಹೇಗೆ ಹಿಡಿದು ತಿಂದರೂ ಅದು ಸಿಹಿಯಾಗಿಯೆ ಇರುತ್ತದೆ.

201) ಅಜ್ಞಾನಿಯಾದ ಸಾಧಾರಣ ಮನುಷ್ಯ, ತನ್ನ ಧರ್ಮವೇ ಅತ್ಯುತ್ತಮವಾದುದೆಂದು ಬೇಕಾದಷ್ಟು ಕೂಗಾಡುವನು. ಆದರೆ ನಿಜವಾದ ಜ್ಞಾನ ಅವನ ಮನಸ್ಸಿಗೆ ಹೊಳೆದ ಮೇಲೆ, ಎಲ್ಲಾ ಮತೀಯ ವ್ಯಾಜ್ಯಗಳೂ ಕೊನೆಗಾಣುವುವು.

202) ಶ್ರೀ ಶಂಕರಾಚಾರ್ಯರ ವೇದಾಂತ ವಿವರಣೆ ನಿಜವಾಗಿ ಸತ್ಯ; ಶ್ರೀ ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ವಿವರಣೆಯೂ ಕೂಡ ಸತ್ಯವೆ.

203) ದಯೆಯಲ್ಲಿ ಮಾನವನು ಕ್ರಿಸ್ತನಂತೆ ಆಗಲಿ; ಬಾಹ್ಯ ಆಚಾರಗಳನ್ನು ಸರಿಯಾಗಿ ಅನುಸರಿಸುವುದರಲ್ಲಿ ಮಹಮ್ಮದೀಯನಂತೆ ಆಗಲಿ; ವಿಶ್ವದಲ್ಲಿ ಬದುಕಿರುವ ಜೀವಿಗಳಿಗೆಲ್ಲಾ ಅನುಕಂಪ ತೋರುವುದರಲ್ಲಿ ಹಿಂದುವಂತೆ ಆಗಲಿ.

204) ದೆವ್ವದಿಂದ ಹಿಡಿಯಲ್ಪಟ್ಟವನಿಗೆ ನಾನು ದೆವ್ವದಿಂದ ಹಿಡಿಯಲ್ಪಟ್ಟವನು ಎಂದು ತಿಳಿದರೆ ದೆವ್ವ ಅವನನ್ನು ಬಿಟ್ಟು ಓಡುವುದು. ಇದರಂತೆಯೇ ಮಾಯೆ ಎಂಬ ದೆವ್ವದಿಂದ ಹಿಡಿಯಲ್ಪಟ್ಟ ಜೀವಕ್ಕೆ ತಾನು ಹಾಗೆ ಹಿಡಿಯಲ್ಪಟ್ಟಿರುವೆನು ಎಂದು ಗೊತ್ತಾದರೆ ತಕ್ಷಣವೇ ಅದರಿಂದ ಮುಕ್ತನಾಗುತ್ತಾನೆ.

205) ಯಾರು ತನ್ನ ಮನಸ್ಸನ್ನು ತಾನು ವಂಚಿಸುವುದಿಲ್ಲವೋ ಅಂತಹವನು ಮಾತ್ರ ದೇವರ ಸನ್ನಿಧಿಯನ್ನು ಸೇರುವನು. ಅಂದರೆ ಸರಳಭಕ್ತಿ ಮತ್ತು ನಿಷ್ಕಾಪಟ್ಯ ಅವನು ಸೇರುವುದಕ್ಕೆ ಮಾರ್ಗ.

206) ಬಂಧನ ನಮ್ಮ ಮನಸ್ಸಿನಲ್ಲಿದೆ, ಮುಕ್ತಿಯೂ ನಮ್ಮ ಮನಸ್ಸಿನಲ್ಲಿದೆ. ನೀನು “ನಾನು ಮುಕ್ತಾತ್ಮ, ನಾನು ದೇವರ ಮಗು! ನನ್ನನ್ನು ಯಾರು ಬಂಧಿಸಬಲ್ಲರು” ಎಂದು ತಿಳಿದರೆ ನೀನು ಮುಕ್ತನಾಗುವೆ. ಒಬ್ಬನಿಗೆ ಒಂದು ಹಾವು ಕಚ್ಚಿದರೆ ಅವನು ಮನಃಪೂರ್ತಿಯಾಗಿ ಶ್ರದ್ಧೆಯಿಂದ “ಇದರಲ್ಲಿ ವಿಷವಿಲ್ಲ, ವಿಷವಿಲ್ಲ” ಎಂದರೆ ಅವನು ನಿಜವಾಗಿಯೂ ವಿಷದಿಂದ ಪಾರಾಗುತ್ತಾನೆ.

207) ದೇವರಲ್ಲಿ ಶ್ರದ್ಧೆ ಇಲ್ಲದೆ ಇರುವುದರಿಂದಲೇ ಮಾನವನು ವ್ಯಥೆಪಡುವನು.

208) ಇನ್ನೊಬ್ಬರನ್ನು ಕೊಲ್ಲುವುದಕ್ಕೆ ಕತ್ತಿ, ಗುರಾಣಿಗಳು ಬೇಕು. ಆತ್ಮಹತ್ಮೆ ಮಾಡಿಕೊಳ್ಳಬೇಕಾದರೆ ಗುಂಡುಸೂಜಿಯೊಂದು ಸಾಕು. ಇದರಂತೆಯೇ ಇನ್ನೊಬ್ಬನಿಗೆ ಕಲಿಸಬೇಕಾದರೆ ಬೇಕಾದಷ್ಟು ಗ್ರಂಥಗಳು ಮತ್ತು ಶಾಸ್ತ್ರಗಳನ್ನು ಓದಬೇಕು. ಆದರೆ ತನಗೆ ಸಾಕ್ಷಾತ್ಕಾರ ಬೇಕಾದರೆ ಯಾವುದಾದರೊಂದರಲ್ಲಿ ದೃಢವಿಶ್ವಾಸ ಸಾಕು.

209) ಹಿಂದೂಗಳಲ್ಲಿ ಎಷ್ಟೋ ಜಾತಿ ಮತ್ತು ಮತಗಳಿವೆ. ನಾವು ಯಾವುದನ್ನು ಅನುಸರಿಸಬೇಕು? ಒಂದು ಸಲ ಪಾರ್ವತಿ ಮಹಾದೇವನನ್ನು ಹೀಗೆ ಕೇಳಿದಳಂತೆ: “ಹೇ ಪ್ರಭು, ಅನಂತವಾದ, ನಿತ್ಯವಾದ ಸರ್ವವ್ಯಾಪಿಯಾದ ಆನಂದಕ್ಕೆ ಮೂಲವಾವುದು?” ಅದಕ್ಕೆ ಮಹಾದೇವನು “ಶ್ರದ್ಧೆಯೇ ಮೂಲ” ಎಂದನು. ಆದಕಾರಣ ಜಾತಿ ಮತಗಳ ಭಿನ್ನತೆ ಅಷ್ಟೇನು ಪ್ರಧಾನವಲ್ಲ. ಪ್ರತಿಯೊಬ್ಬರೂ ತಮ್ಮತಮ್ಮ ಮತದಲ್ಲಿ ಹೇಳಿರುವಂತೆ ದೇವರನ್ನು ಪ್ರಾರ್ಥಿಸಿ ಕರ್ತವ್ಯವನ್ನು ನೆರವೇರಿಸಲಿ.

210) ಯಾರಿಗೆ ಶ್ರದ್ಧೆ ಇದೆಯೋ ಅವನಿಗೆ ಎಲ್ಲವೂ ಇದೆ. ಯಾರಿಗೆ ಶ್ರದ್ಧೆ ಇಲ್ಲವೋ ಅವನಿಗೆ ಯಾವುದೂ ಇಲ್ಲ.

211) ನೀನು ದೇವರನ್ನು ಕಾಣಬೇಕೆಂದಿದ್ದರೆ ಅಚಲವಾದ ಶ್ರದ್ಧೆಯಿಂದ ಅವನನ್ನು ಭಜಿಸು ಮತ್ತು ನಿತ್ಯ ಅನಿತ್ಯ ವಸ್ತುಗಳನ್ನು ವಿಮರ್ಶೆ ಮಾಡು.

212) ಭಗವಂತನ ಅವತಾರವಾದ ರಾಮಚಂದ್ರನು ಲಂಕಾನಗರಿಗೆ ಹೋಗುವುದಕ್ಕೆ ಸಮುದ್ರವನ್ನು ದಾಟಲು ಸೇತುವೆಯನ್ನು ಕಟ್ಟಬೇಕಾಯಿತು. ಆದರೆ ಅವನ ಪರಮಭಕ್ತ ಭೃತ್ಯನಾದ ಹನುಮಂತ ರಾಮನಲ್ಲಿ ಅಚಲವಾದ ಭಕ್ತಿಯಿಂದ ಒಂದೇ ನೆಗೆತಕ್ಕೆ ಸಾಗರವನ್ನು ಹಾರಿದನು. ಇಲ್ಲಿ ಭಕ್ತಿಯಿಂದ ಸ್ವಾಮಿಗಿಂತ ಹೆಚ್ಚಾಗಿ ಭೃತ್ಯನು ಸಾಹಸ ಕಾರ್ಯವನ್ನು ಮಾಡಿದನು.

213) ಒಬ್ಬನು ತಾನು ಆಲೋಚಿಸಿದಂತೆ ಆಗುತ್ತಾನೆ. ಭ್ರಮರವನ್ನು ಯಾವಾಗಲೂ ಆಲೋಚಿಸುತ್ತಿರುವ ಕೀಟ ಕೊನೆಗೆ ತಾನು ಭ್ರಮರವಾಗುತ್ತದೆ ಎನ್ನುತ್ತಾರೆ. ಇದರಂತೆಯೇ ಯಾರು ಸಚ್ಚಿದಾನಂದವನ್ನು ಯಾವಾಗಲೂ ಧ್ಯಾನಿಸುತ್ತಾರೆಯೊ ಅವರು ಸಚ್ಬಿದಾನಂದಮಯರಾಗುವರು.

214) ಜೀವನವನ್ನೆಲ್ಲಾ ಪಾಪ, ನರಕವೆಂದು ಹಳಿಯುತ್ತ ಏತಕ್ಕೆ ಕಾಲ ಕಳೆಯುತ್ತೀರಿ? ಒಂದು ಸಲ “ಹೇ! ಭಗವಂತ ನಾನು ಮಾಡಬಾರದ ಅನೇಕ ಕೆಲಸಗಳನ್ನು ಮಾಡಿರುವೆನು. ಮಾಡಬೇಕಾದ ಹಲವು ಕೆಲಸಗಳನ್ನು ಮಾಡಿಲ್ಲ. ನನ್ನನ್ನು ಕ್ಷಮಿಸು” ಎಂದು ಪ್ರಾರ್ಥಿಸಿ ಅವನನ್ನು ನಂಬಿ. ನೀವು ಎಲ್ಲಾ ಪಾಪಗಳಿಂದಲೂ ಪಾರಾಗುವಿರಿ.

215) ಯಾರು ತಾವು ಜೀವವೆಂದು ತಿಳಿಯುತ್ತಾರೋ ಅವರು ಜೀವವಾಗಿಯೇ ಉಳಿಯುವರು. ಆದರೆ ಯಾರು ತಾವು ದೇವನೆಂದು ನಂಬುತ್ತಾರೆಯೋ ಅವರು ದೇವರೇ ಆಗುವರು. ಒಬ್ಬನು ತಾನು ಆಲೋಚಿಸಿದಂತೆ ಆಗುವನು.

216) ಸರಳಶ್ರದ್ಧೆ ಮತ್ತು ವಿಶ್ವಾಸದಿಂದ ಯಾರು ಭಗವಂತನಲ್ಲಿ ಶರಣಾಗುವರೋ, ಅವರು ಬೇಗ ಅವನನ್ನು ಕಾಣುವರು.

217) ಪ್ರಪಂಚದಲ್ಲಿರುವುದು, ಬಿಡುವುದು ದೇವರ ಇಚ್ಛೆಯ ಮೇಲೆ ಇರುವುದು. ಆದುದರಿಂದ ಎಲ್ಲವನ್ನೂ ಅವನ ವಶಕ್ಕೆ ಬಿಟ್ಟು ಕೆಲಸ ಮಾಡು. ನೀನು ಮತ್ತೇನು ಮಾಡಬಲ್ಲೆ?

218) ಇನ್ನೊಬ್ಬನಿಗೆ ನಮ್ಮ ಸ್ವಾಧೀನತೆಯನ್ನು ಕೊಡುವಷ್ಟು ಸುರಕ್ಷಿತವೂ ಮತ್ತು ಸುಲಭವೂ ಆದ ದಾರಿ ಮತ್ತೊಂದಿಲ್ಲ. ಸ್ವಾಧೀನತೆ ಕೊಡುವುದು ಎಂದರೆ ದೇವರಲ್ಲಿ ಶರಣಾಗತನಾಗುವುದು. ಯಾವ ವಿಧದಲ್ಲಿಯೂ ನನ್ನದು ಎಂಬ ಭಾವವಿಲ್ಲದೆ ಇರುವುದು.

219) ಕೋತಿಯ ಮರಿ ಸಂಚರಿಸುವಾಗ ತನ್ನ ತಾಯಿಯನ್ನು ಬಿಗಿಯಾಗಿ ಹಿಡಿದುಕೊಳ್ಳುವುದು. ಆದರೆ ಬೆಕ್ಕಿನ ಮರಿ ಹಾಗೆ ಮಾಡದೆ ಸುಮ್ಮನೆ ಕಿರಿಚಿಕೊಳ್ಳುವುದು. ತಾಯಿ ಅದರ ಕತ್ತನ್ನು ಹಿಡಿದುಕೊಳ್ಳುವುದು. ಕೋತಿಯ ಮರಿ ತನ್ನ ಹಿಡಿತವನ್ನು ಸಡಿಲಿಸಿದರೆ ಕೆಳಗೆ ಬಿದ್ದು ಗಾಯವನ್ನು ಹೊಂದುವುದು. ಇದು ತನ್ನ ಶಕ್ತಿಯ ಮೇಲೆ ನಿಂತಿರುವುದೇ ಇದಕ್ಕೆ ಕಾರಣ. ಆದರೆ ಬೆಕ್ಕಿನ ಮರಿಗೆ ಈ ಅಪಾಯವಿಲ್ಲ. ತನ್ನ ತಾಯಿ ಅದನ್ನು ಜಾಗದಿಂದ ಜಾಗಕ್ಕೆ ಕರೆದುಕೊಂಡು ಹೋಗುತ್ತದೆ. ಸ್ವಪ್ರಯತ್ನ ಮತ್ತು ದೇವರಲ್ಲಿ ಶರಣಾದವರಿಗೆ ಇರುವ ವ್ಯತ್ಯಾಸವೇ ಇದು.

220) ದೇವರಲ್ಲಿ ಸಂಪೂರ್ಣವಾಗಿ ಶರಣಾಗತನಾಗುವ ಸ್ವಭಾವವೆಂತಹುದು? ದಿನವೆಲ್ಲವೂ ಕಷ್ಟಪಟ್ಟು ಕೆಲಸ ಮಾಡಿ ದಿಂಬಿನ ಮೇಲೆ ತಲೆಯಿಟ್ಟು ವಿರಾಮವಾಗಿ ಹುಕ್ಕ ಸೇದುವಾಗ ಬರುವ ಮನಸ್ಸಿನ ವಿಶ್ರಾಂತಿಯಂತೆ ಇದು, ಆಗ ಅಂಜಿಕೆ ಆತಂಕಗಳು ಮಾಯವಾಗುವುವು.

221) ಊಟವಾದ ಮೇಲೆ ಆಚೆಗೆ ಎಸೆವ ಎಲೆಯಂತೆ ಇರು. ಅದು ಗಾಳಿಯ ಅಧೀನ. ಕೆಲವು ವೇಳೆ ಇಲ್ಲಿ, ಕೆಲವು ವೇಳೆ ಅಲ್ಲಿ ಹಾರಾಡುವುದು. ಕೆಲವು ವೇಳೆ ಮನೆಯೊಳಗೆ, ಕೆಲವು ವೇಳೆ ಮನೆ ಕಸದಲ್ಲಿ ಬಿದ್ದಿರುವುದು. ಒಳ್ಳೆಯದು, ದೇವರು ನಿನ್ನನ್ನು ಇಲ್ಲಿ ಇಟ್ಟಿರುವನು, ಇಲ್ಲಿಯೇ ಇರು. ಅವನು ನಿನ್ನನ್ನು ಇಲ್ಲಿ ಬಿಡಿಸಿ ಬೇರೆ ಒಂದು ಒಳ್ಳೆ ಸ್ಥಳದಲ್ಲಿ ಇಟ್ಟಾಗಲೂ ಒಳ್ಳೆಯದು ಎಂದು ನಿಸ್ಸಂಗನಾಗಿರಬೇಕು. ವಿಷಯಗಳು ತಮ್ಮ ಪಾಡಿಗೆ ತಾವಿರಲಿ.

222) ಪತಿವ್ರತೆ ಹೇಗೆ ಪತಿಯ ಪ್ರಾಣಾನಂತರವೂ ಆತನ ಆತ್ಮದೊಂದಿಗೆ ಐಕ್ಯಳಾಗಿರುವಳೋ, ಹಾಗೆ ತನ್ನ ಇಷ್ಟದೇವತೆಯನ್ನು ಯಾರು ಪ್ರೀತಿಸುತ್ತಿರುವರೋ ಅವರು ನಿಜವಾಗಿಯೂ ದೇವರಲ್ಲಿ ಐಕ್ಯತೆಯನ್ನು ಪಡೆಯುವರು.

223) ಅಂತರಂಗದಲ್ಲಿ ಭಕ್ತಿ ಇರಲಿ, ಕುತಂತ್ರ ಮತ್ತು ವೇಷ ಇವುಗಳನ್ನು ತ್ಯಜಿಸಿ. ಯಾರು ಆಫೀಸಿನಲ್ಲಿ ಅಥವಾ ವ್ಯಾಪಾರದ ವ್ಯವಹಾರದಲ್ಲಿರುವರೋ, ಅವರು ಕೂಡ ಸತ್ಯಸಂಧರಾಗಿರಬೇಕು. ಕಲಿಯುಗದಲ್ಲಿ ಸತ್ಯವೇ ತಪಸ್ಸು.

224) ಒಬ್ಬನು ಯಾವಾಗಲೂ ಸತ್ಯವನ್ನು ಹೇಳದೇ ಇದ್ದರೆ ಸತ್ಯನಾರಾಯಣನಾದ ದೇವನನ್ನು ಪಡೆಯಲಾರನು.

225) ಸತ್ಯವನ್ನು ಯಾವಾಗಲೂ ಹೇಳುವುದಕ್ಕೆ ಒಬ್ಬನು ನಿಷ್ಠನಾಗಿರಬೇಕು. ಸತ್ಯದ ಮೂಲಕ ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬಹುದು.

226) ಅಸತ್ಯ ಕೆಟ್ಟುದು. ತೋರಿಕೆಯ ಸತ್ಯವೂ ಕೂಡ ಕೆಟ್ಟುದು. ಹೊರಗಿನಂತೆ ನಿನ್ನ ಮನಸ್ಸು ಒಳಗೆ ಇಲ್ಲದಿದ್ದರೆ ನಿನಗೆ ಪ್ರಚಂಡ ಹಾನಿ ಸಂಭವಿಸುವುದು.

227) ಹೀಗೆ ಇದ್ದರೆ ಒಬ್ಬನು ಕಪಟಿಯಾಗುವನು. ಇನ್ನೊಬ್ಬರಿಗೆ ಅಪಕಾರ ಮಾಡುವುದಕ್ಕೆ ಅಥವಾ ಸುಳ್ಳನ್ನು ಹೇಳುವುದಕ್ಕೆ ಅಂಜಿಕೆಯೆಲ್ಲ ಬಿಟ್ಟುಹೋಗುವುದು.

228) ಒಂದು ಕಡೆ ಪಾದರಸ ಹಚ್ಚಿರುವ ಕನ್ನಡಿಯೊಳಗೆ ಒಬ್ಬನು ತನ್ನ ಪ್ರತಿಬಿಂಬವನ್ನು ಕಾಣುವಂತೆ, ಭಗವಂತನ ದಿವ್ಯದರ್ಶನ, ಯಾರು ಬ್ರಹ್ಮಚರ್ಯ ವ್ರತದಿಂದ ತಮ್ಮ ಪವಿತ್ರತೆ ಮತ್ತು ಶಕ್ತಿಯನ್ನು ಕಾಪಾಡಿಕೊಂಡಿರುವರೋ ಅವರ ಮನಸ್ಸಿಗೆ ಗೋಚರಿಸುವುದು.

229) ನೈಷ್ಠಿಕ ಬ್ರಹ್ಮಚರ್ಯವನ್ನು ಅಭ್ಯಾಸ ಮಾಡುವ ತನಕ ಸೂಕ್ಷ್ಮ ಆಧ್ಯಾತ್ಮಿಕ ತತ್ತ್ವಗಳನ್ನು ಅವನು ತಿಳಿದುಕೊಳ್ಳಲಾರ.

230) ಯಾರು ಕಾಮವನ್ನು ತ್ಯಜಿಸುವರೋ ಅವರು ನಿಜವಾಗಿ ಪ್ರಪಂಚವನ್ನೇ ತ್ಯಜಿಸುವರು! ದೇವರು ನಿಜವಾಗಿಯೂ ಅವರ ಸಮೀಪದಲ್ಲಿ ಇರುವನು.

231) ನಮ್ಮ ಎಲ್ಲಾ ಪ್ರಾಪಂಚಿಕ ಬಯಕೆಗಳೂ ಸಿದ್ಧಿಸಿ ಸತ್ಯವನ್ನು ಮರೆತಾಗಲೂ “ಇದನ್ನೆಲ್ಲಾ ಅನುಭವಿಸುವ ನಾನು ಯಾರು” ಎಂಬ ಪ್ರಶ್ನೆ ಏಳಬಹುದು. ಆಗಲೆ ಜಗದ ರಹಸ್ಯ ಗೋಚರಿಸುವ ಸಮಯ ಮೊದಲಾಗಬಹುದು.

232) ಹುಳುಕಡ್ಡಿಯನ್ನು ಕೆರೆಯುವಾಗ ತುಂಬಾ ಆನಂದ. ಆದರೆ ನಂತರ ಅದರಿಂದ ಆಗುವ ವ್ಯಥೆ ಸಹಿಸಲಸಾಧ್ಯ. ಇದರಂತೆಯೆ ಪ್ರಪಂಚದ ಭೋಗಗಳು ಮೊದಲಿನಲ್ಲಿ ಅತ್ಯಾನಂದಕರ. ಆದರೆ ಅದರ ಪರಿಣಾಮವನ್ನು ಕುರಿತು ಯೋಚಿಸಿದರೆ ಭಯಂಕರ.

233) ಕಣ್ಣನ್ನು ಎರಡು ಕಡೆಗಳಲ್ಲಿಯೂ ಕಟ್ಟದೆ ಇರುವ ಬೆದರುತ್ತಿರುವ ಕುದುರೆ ನೇರವಾಗಿ ನಡೆಯಲಾರದು. ಇದರಂತೆಯೆ ಸುತ್ತಲೂ ಇರುವ ಪ್ರಪಂಚದ ಭೋಗಗಳನ್ನು ನೋಡದಂತೆ ವಿವೇಕ ವೈರಾಗ್ಯಗಳ ಪಟ್ಟಿಯಿಂದ ಕೂಡಿರುವವನು ಜಾರುವುದಿಲ್ಲ ಅಥವಾ ಕೆಟ್ಟ ಹಾದಿಗೆ ಹೋಗುವುದಿಲ್ಲ.

234) ಜೀವನದಲ್ಲಿ ಎಲ್ಲಾ ಸ್ಥಿತಿಗಳನ್ನು, ದೀನನಾದ ಕಸ ಗುಡಿಸುವವನಿಂದ ಹಿಡಿದು ದೊರೆಯ ಉಚ್ಚ ಪದವಿಯವರೆಗೆ ಪ್ರತ್ಯಕ್ಷ, ಅನುಮಾನ, ಪ್ರಮಾಣಗಳ ಮೂಲಕ ವಿಮರ್ಶಿಸಿ, ಎಲ್ಲಾ ಸುಖಭೋಗಗಳ ಕ್ಷಣಭಂಗುರತೆಯನ್ನು ಮನ ಗಂಡಾಗ ಮಾತ್ರ. ಒಬ್ಬನು ನಿಜವಾದ ಜ್ಞಾನಿಯಾಗುತ್ತಾನೆ, ಪರಮಹಂಸನಾಗುತ್ತಾನೆ.

235) ವೈರಾಗ್ಯದಲ್ಲಿ ಹಲವು ವಿಧಗಳಿವೆ. ಒಂದು ಪ್ರಪಂಚ ಕಷ್ಟದಿಂದ ಸಹಿಸಲಸದಳವಾದ ವ್ಯಥೆಯಿಂದ ಬರಬಹುದು. ಆದರೆ ಉತ್ತಮವಾದ ವೈರಾಗ್ಯ ಬರುವುದು, ಪ್ರಪಂಚದ ಎಲ್ಲಾ ಸುಖಭೋಗಗಳು ಒಬ್ಬನ ಸ್ವಾಧೀನದಲ್ಲಿದ್ದರೂ ಅವುಗಳೆಲ್ಲಾ ಕ್ಷಣಿಕ, ಅನುಭವಿಸಲು ಅವುಗಳು ಯೋಗ್ಯವಲ್ಲ ಎಂಬ ಭಾವದಿಂದ. ಎಲ್ಲಾ ಅವನಿಗೆ ಇದ್ದರೂ ಯಾವುದೂ ಇಲ್ಲ.

236) ವೈರಾಗ್ಯದಲ್ಲಿ ಸಾಧಾರಣವಾಗಿ ಎರಡು ಬಗೆಗಳಿವೆ. ಒಂದು ತೀವ್ರ ಮತ್ತೊಂದು ಸಾಧಾರಣ. ಒಂದೇ ರಾತ್ರಿಯಲ್ಲಿ ನೀರು ಬಂದು ತುಂಬುವವರೆಗೆ ಅಗೆದು ದೊಡ್ಡ ಕೊಳವನ್ನು ತೋಡುವಂತೆ ತೀವ್ರ ವೈರಾಗ್ಯ. ಸಾಧಾರಣ ವೈರಾಗ್ಯ ನಿಧಾನವಾಗಿ ಬೆಳೆಯುವುದು. ಅದು ಆಲಸ್ಯವಾಗಿರುವುದು. ಅದು ಯಾವಾಗ ಪೂರ್ಣವಾಗುವುದೋ ತಿಳಿಯದು.

237) ಒಬ್ಬನು ಸ್ನಾನಕ್ಕಾಗಿ ನದಿಗೆ ಹೋಗುತ್ತಿದ್ದನು. ಆಗ ಯಾವನೊ ಒಬ್ಬನು ಹಲವು ದಿನಗಳಿಂದ ಪ್ರಪಂಚವನ್ನು ತ್ಯಜಿಸಿ, ಸನ್ಯಾಸಿಯಾಗಲು ಹವಣಿಸುತ್ತಿರುವನು ಎಂಬುದನ್ನು ಕೇಳಿದನು. ಆತನ ಮನಸ್ಸಿನಲ್ಲಿ ಸನ್ಯಾಸವೇ ಅತ್ಯುತ್ತಮ ಜೀವನವೆಂಬ ಭಾವ ದೃಢವಾಯಿತು. ಅವನು ತಕ್ಷಣವೆ ತಾನು ಸಂನ್ಯಾಸಿಯಾಗಲು ನಿರ್ಧರಿಸಿ ಮನೆಗೆ ಹಿಂತಿರುಗದೆ ಅರ್ಧನಗ್ನಾವಸ್ಥೆಯಲ್ಲಿಯೇ ಹೊರಟು ಹೋದನು. ಇದು ತೀವ್ರ ವೈರಾಗ್ಯವನ್ನು ಉದಾಹರಿಸುವುದು.

238) ಸಚ್ಚಿದಾನಂದ ಕಡಲಿನ ಒಳಗೆ ಮುಳುಗು. ಲೋಭ ಮತ್ತು ಕ್ರೋಧವೆಂಬ ಸಮುದ್ರದ ಮೊಸಳೆಗಳಿಗೆ ಅಂಜಬೇಡ. ವಿವೇಕ ಮತ್ತು ವೈರಾಗ್ಯವೆಂಬ ಅರಿಶಿನವನ್ನು ದೇಹಕ್ಕೆ ಚೆನ್ನಾಗಿ ಲೇಪಿಸಿಕೊ. ಈ ಮೊಸಳೆಗಳು ನಿನ್ನ ಸಮೀಪಕ್ಕೆ ಬರುವುದಿಲ್ಲ. ಅವು ಅರಿಶಿನ ಗಂಧವನ್ನು ಸಹಿಸುವುದಿಲ್ಲ.

239) ಬೆಸ್ತನು ದೊಡ್ಡ ಮೀನುಗಳನ್ನು ಹಿಡಿಯುವುದಕ್ಕಾಗಿ ಗಾಳವನ್ನು ನೀರಿಗೆ ಎಸೆದು ಬಹಳ ಹೊತ್ತು ಕಾಯುವನು. ಇದರಂತೆಯೇ ತನ್ನ ಸಾಧನೆಯಲ್ಲಿ ಮುಂದುವರಿಯುವ ಭಕ್ತನು ಕೊನೆಗೆ ದೇವರನ್ನು ನೋಡುವುದರಲ್ಲಿ ಸಂದೇಹವಿಲ್ಲ.

240) ಹೊಸದಾಗಿ ಹುಟ್ಟಿದ ಕರು ನೇರವಾಗಿ ನಡೆಯಬೇಕಾದರೆ ಅದು ಮುಂಚೆ ಎಷ್ಟೋ ಸಲ ತಾರಾಡಿ ಬೀಳುವುದು. ಇದರಂತೆಯೇ ಭಕ್ತಿಮಾರ್ಗದಲ್ಲಿ ಕೂಡ, ಕೊನೆಗೆ ಜಯ ಸಿಗುವವರೆಗೆ ಅನೇಕ ವೇಳೆ ಎಡವಬೇಕಾಗುವುದು.

241) ಆಳವಿಲ್ಲದ ಕೊಳದಲ್ಲಿ ಶುದ್ಧವಾದ ನೀರನ್ನು ಕುಡಿಯಬೇಕಾದರೆ ಮೇಲಿರುವ ನೀರನ್ನು ಸ್ವಲ್ಪವೂ ಕದಡದೆ ಕುಡಿಯಬೇಕು. ಅದನ್ನು ಕಲಕಿದರೆ ಬಗ್ಗಡ ಮೇಲೆದ್ದು ನೀರನ್ನೆಲ್ಲಾ ಕದಡುವುದು. ನೀನು ಪರಿಶುದ್ಧವಾಗಿರಬೇಕೆಂದು ಆಶಿಸಿದರೆ ಅಚಲ ಶ್ರದ್ಧೆಯಿರಲಿ. ಕೆಲಸಕ್ಕೆ ಬಾರದ ವಾದ ವಿವಾದಗಳಲ್ಲಿ ಕಾಲಹರಣ ಮಾಡದೆ, ಕ್ರಮೇಣ ಸಾಧನೆ ಮಾಡುತ್ತ ಹೋಗು. ಇಲ್ಲದೆ ಇದ್ದರೆ ನಿನ್ನ ಮೆದುಳು ಕೆಡುವುದು.

242) ಜದುನಾಥಮಲ್ಲಿಕ ಮುಂತಾದ ಕಲ್ಕತ್ತೆಯ ಶ್ರೀಮಂತರ ಮನೆ ಆಸ್ತಿಯನ್ನು ಹಲವರು ವಿಚಾರಿಸುವರು. ಆದರೆ ಅವರನ್ನು ನೋಡಿ ಸ್ನೇಹ ಬೆಳೆಸಲಿಚ್ಛಿಸುವವರು ಅಪರೂಪ. ಇದರಂತೆಯೆ ಶಾಸ್ತ್ರವನ್ನು ಓದಿ ಧಾರ್ಮಿಕ ವಿಷಯಗಳನ್ನು ಮಾತನಾಡುವವರು ಬಹಳ. ಆದರೆ ದೇವರ ಹತ್ತಿರ ಹೋಗಲಿಚ್ಛಿಸುವವರು ಅಪರೂಪ.

243) ನೀನು ಸೇರಬೇಕೆಂದಿರುವ ಗುರಿಗೆ ಸರಿಯಾಗಿ ಸನ್ನಾಹ ಮಾಡಿಕೊ. ಹಾಲಿನಲ್ಲಿ ಬೆಣ್ಣೆ ಇದೆ ಎಂದು ಸುಮ್ಮನೆ ಅರಚಿದರೆ ಬೆಣ್ಣೆ ಬರುವುದಿಲ್ಲ. ನಿನಗೆ ಬೆಣ್ಣೆ ಬೇಕಾದರೆ ಹಾಲನ್ನು ಮೊಸರು ಮಾಡಿ ಅದನ್ನು ಕಡೆಯಬೇಕು. ನೀನು ದೇವರನ್ನು ನೋಡಬೇಕಾದರೆ ಸಾಧನೆಗೆ ಕೈಹಾಕು. “ಹೇ ಭಗವಂತ, ಹೇ ಭಗವಂತ!” ಎಂದು ಸುಮ್ಮನೆ ಕೂಗುವುದರಿಂದೇನು ಪ್ರಯೋಜನ?

244) “ನಾನು ನಿಮಗೆ ಮಾಡಿದ ಅಪ್ಪಣೆಯನ್ನು ಚೂರೂ ಬಿಡದೆ ಮಾಡಲು ಸಾಧ್ಯವೇ? ನಿಜವಾಗಿ ನಾನು ನಿಮಗೆ ಹೇಳುತ್ತೇನೆ ಕೇಳಿ: ನಾನು ಹೇಳಿದುದರಲ್ಲಿ ಹದಿನಾರನೆ ಒಂದು ಭಾಗವನ್ನು ಅನುಷ್ಠಾನ ಮಾಡಿದರೂ ನಿಮಗೆ ಮುಕ್ತಿ ಸಿಕ್ಕುವುದರಲ್ಲಿ ಸಂದೇಹವಿಲ್ಲ” ಎಂದು ಶ್ರೀಗುರುದೇವರು ಹೇಳುತ್ತಿದ್ದರು.

245) ಆತ್ಮಜ್ಞಾನಕ್ಕೆ ಸಾಧನೆ ಅತ್ಯಾವಶ್ಯಕ. ಆದರೆ ಸಂಪೂರ್ಣ ಶ್ರದ್ಧೆಯಿದ್ದರೆ ಸ್ವಲ್ಪ ಸಾಧನೆಯೆ ಸಾಕು.

246) ಭಗವಂತನ ನಾಮದ ಶಕ್ತಿಯಲ್ಲಿ ಯಾರು ಒಮ್ಮೆ ನಂಬಿ ಅನವರತವೂ ಅದನ್ನು ಉಚ್ಚರಿಸುವುದಕ್ಕೆ ಬಯಸುವನೋ ಆಗ ವಿವೇಕ ಮತ್ತು ಇತರ ಯಾವ ಭಕ್ತಿಸಾಧನೆಯೂ ಅವನಿಗೆ ಆವಶ್ಯಕವಿಲ್ಲ. ಸಂಶಯಗಳೆಲ್ಲ ನಿವಾರಣೆಯಾಗುವುವು; ಮನಸ್ಸು ಶುದ್ಧವಾಗುವುದು. ಅವನ ನಾಮದ ಬಲದಿಂದ ಭಗವಂತನನ್ನು ಪಡೆಯಬಹುದು.

247) ಯಾವಾಗಲೂ ಧ್ಯಾನ ಮತ್ತು ಮನನವನ್ನು ಬಿಡಬಾರದು.

248) ಗಂಟು ಚೆಲ್ಲಿ ಹೋದ ಸಾಸಿವೆ ಕಾಳನ್ನು ಒಂದುಗೂಡಿಸುವುದು ಎಷ್ಟು ಕಷ್ಟವೋ, ಅದರಂತೆಯೇ, ಪ್ರಾಪಂಚಿಕ ವಸ್ತುಗಳನ್ನು ಕುರಿತು ಹಲವು ದಿಕ್ಕಿನಲ್ಲಿ ಹೋಗುವ ಮನಸ್ಸನ್ನು ಒಂದುಗೂಡಿಸುವುದು ಸುಲಭವಲ್ಲ.

249) ಯಾರೂ ಅರಿಯದ ಸ್ಥಳದಲ್ಲಿಯೋ, ಕಾಡಿನ ನಿರ್ಜನ ಪ್ರದೇಶದಲ್ಲಿಯೋ ಅಥವಾ ಮನಸ್ಸಿನ ಅಂತರಾಳದಲ್ಲಿಯೋ ದೇವರನ್ನು ಧ್ಯಾನಿಸಿ.

250) ತಮ್ಮ ಸಾಧನೆಯ ದಿನಗಳನ್ನು ಕುರಿತು ಅವರು ತಮ್ಮ ಶಿಷ್ಯರಿಗೆ ಹೀಗೆ ಹೇಳುತ್ತಿದ್ದರು: “ನನ್ನ ಹುಡುಗರೇ! ಕೇಳಿ, ಆಗ ದೇವರನ್ನು ಧ್ಯಾನಿಸುವುದಕ್ಕೆ ಮುಂಚೆ ನನ್ನ ಮನಸ್ಸಿನಲ್ಲಿರುವ ಕಲ್ಮಷಗಳನ್ನೆಲ್ಲಾ ತೊಳೆದಂತೆ ಕಲ್ಪಿಸಿಕೊಂಡು ಅಲ್ಲಿ ಇಷ್ಟದೇವತೆಯನ್ನು ಸ್ಥಾಪಿಸುತ್ತಿದ್ದೆ. ಇದರಂತೆ ಮಾಡಿ.”

251) ಧ್ಯಾನ ಮಾಡುವಾಗ, ನಿಮ್ಮ ಮನಸ್ಸನ್ನು, ಭಗವಂತನ ಪಾದಪದ್ಮಗಳೊಂದಿಗೆ ಒಂದು ರೇಷ್ಮೆ ದಾರದಿಂದ ಕಟ್ಟಿಹಾಕುತ್ತಿರುವೆನೆಂದು ಭಾವಿಸಬೇಕು. ಆದರೆ ನೂಲು ಏತಕ್ಕೆ ರೇಷ್ಮೆಯದಾಗಬೇಕು? ಅವನ ಪಾದಪದ್ಮಗಳು ಅಷ್ಟು ಮೃದುವಾಗಿರುವುದರಿಂದ ಉಳಿದ ಯಾವ ದಾರವೇ ಆಗಲಿ ಅವನಿಗೆ ನೋವನ್ನುಂಟುಮಾಡುವುದು.

252) ಪ್ರಾರಂಭಿಕರು ಧ್ಯಾನ ಮಾಡುವಾಗ ಕೆಲವು ವೇಳೆ ಯೋಗ ನಿದ್ರೆಯೆಂಬ ಒಂದು ನಿದ್ರೆಗೆ ವಶರಾಗುವರು. ಅಂತಹ ಸಮಯದಲ್ಲಿ ಅನೇಕ ವೇಳೆ ದಿವ್ಯ ದರ್ಶನಗಳನ್ನು ಕಾಣುವರು.

253) ಸಾತ್ವಿಕ ಸ್ವಭಾವದವನು ಹೇಗೆ ಧ್ಯಾನ ಮಾಡುತ್ತಾನೆ ಗೊತ್ತಿದೆಯೆ? ಅರ್ಧ ರಾತ್ರಿಯಲ್ಲಿ ಹಾಸಿಗೆ ಮೇಲೆ ಸೊಳ್ಳೆಪರದೆಯ ಒಳಗಡೆ ಯಾರಿಗೂ ಕಾಣದಂತೆ ಧ್ಯಾನ ಮಾಡುವನು.

254) ಕಚ್ಚಾ ಔಷಧಿಯು ಸಾರಾಯಿಯೊಂದಿಗೆ ಬೆರೆತಿರುವಂತೆ ಸದಾ ಮನಸ್ಸು ದೇವರಲ್ಲಿ ಬೆರೆತಿರಲಿ.

255) ದೀರ್ಘ ಧ್ಯಾನ ಧ್ಯೇಯ ವಸ್ತುವಿನ ನಿಜವಾದ ಸ್ವಭಾವವನ್ನು ಪ್ರಕಟಗೊಳಿಸಿ ಧ್ಯಾನಿಸುವವರ ಆತ್ಮದ ಮೇಲೆ ಪರಿಣಾಮವನ್ನುಂಟು ಮಾಡುವುದು.

256) ದೀರ್ಘಧ್ಯಾನದಲ್ಲಿ ಇಂದ್ರಿಯಗಳ ವ್ಯಾಪಾರವೆಲ್ಲವೂ ನಿಗ್ರಹಿಸಲ್ಪಡುವುವು. ಮನಸ್ಸಿನ ಬಾಹ್ಯಚಲನೆ ಸಂಪೂರ್ಣ ನಿಲ್ಲುವುದು. ಹೋಗುವ ಬಾಗಿಲನ್ನು ಹಾಕಿದಂತಾಗುವುದು. ಪಂಚೇಂದ್ರಿಯಗಳ ವಿಷಯವೆಲ್ಲಾ ಹೊರಗೆ ಕಾಣದಂತೆ ಬಿದ್ದಿರುವುವು. ಮೊದಲು ಧ್ಯಾನ ಮಾಡುವಾಗ ಇಂದ್ರಿಯ ವಸ್ತುಗಳು ಕಣ್ಣಿಗೆ ಕಾಣುವುವು. ಆದರೆ ಧ್ಯಾನ ದೀರ್ಘವಾದಾಗ ಅವುಗಳು ಏಳುವುದಿಲ್ಲ. ಒಳಗೆ ಪ್ರವೇಶಕ್ಕೆ ಅಪ್ಪಣೆಯಿಲ್ಲದಂತೆ ಅವು ಹೊರಗೆ ಬಿದ್ದಿರುವುವು.

257) ನೀನು ಹುಚ್ಚನಾಗಬೇಕಾದರೆ ವಿಷಯವಸ್ತುಗಳಿಗಾಗಿ ಆಗಬೇಡ. ಭಗವಂತನ ಮೇಲಿನ ಪ್ರೇಮದಿಂದ ಹುಚ್ಚನಾಗು.

258) ಕೆಲವರು ತಮಗೆ ಮಕ್ಕಳಾಗಲಿಲ್ಲವೆಂದು ಕಣ್ಣೀರಿನ ಕೋಡಿಯನ್ನು ಸುರಿಸುವರು. ಮತ್ತೆ ಕೆಲವರು ತಮಗೆ ಐಶ್ವರ್ಯ ಪ್ರಾಪ್ತಿಯಾಗಲಿಲ್ಲವೆಂದು ಕೊರಗಿ ಸಾಯುತ್ತಾರೆ. ಅಯ್ಯೋ, ಆದರೆ ದೇವರನ್ನು ನಾನು ಕಂಡಿಲ್ಲವೆಂದು ಎಷ್ಟು ಜನರು ವ್ಯಥೆಪಡುವರು? ನಿಜವಾಗಿಯೂ ಕೆಲವು ಜನ ಮಾತ್ರ. ಯಾರು ಅವನನ್ನು ಹುಡುಕುತ್ತಾರೆಯೊ ಅವನಿಗೆ ಹಂಬಲಿಸುತ್ತಾರೆಯೊ ಅವರು ನಿಜವಾಗಿಯೂ ಅವನನ್ನು ಹೊಂದುವರು.

259) ಯಾರು ದೇವರಿಗಾಗಿ ಹಂಬಲಿಸುತ್ತಿರುವರೋ ಅವರು ಅನ್ನ ನೀರನ್ನು ಬಿಟ್ಟು ಕೆಲಸಕ್ಕೆ ಬಾರದ ವಸ್ತುಗಳ ಕಡೆಗೆ ಮನಸ್ಸನ್ನು ಕೊಡಲಾರರು.

260) ಕೃಪಣ ಹಣಕ್ಕಾಗಿ ಆಶಿಸುವಂತೆ ನಿನ್ನ ಹೃದಯ ದೇವರಿಗಾಗಿ ಕಾತರಿಸಲಿ.

261) ನೀರಿನಲ್ಲಿ ಮುಳುಗಿರುವವನು ಉಸಿರಾಡುವುದಕ್ಕೆ ಆಶಿಸುವಂತೆ ಒಬ್ಬನು ದೇವರನ್ನು ಕಾಣುವುದಕ್ಕೆ ಹಂಬಲಿಸಬೇಕು.

262) ದೇವರನ್ನು ಪಡೆಯಬೇಕಾದರೆ ಎಂತಹ ಪ್ರೇಮ ಬೇಕು ಗೊತ್ತಿದೆಯ? ತಲೆಗೆ ಗಾಯವಾದ ನಾಯಿ ಭಯದಿಂದ ಓಡುವಂತೆ ಭಗವಂತನಿಗಾಗಿ ಒಬ್ಬನು ವ್ಯಥೆಪಡಬೇಕು.

263) ಎಲೆ ಮನಸ್ಸೆ, ಜಗನ್ಮಯಿಯನ್ನು ದೃಢವಿಶ್ವಾಸದಿಂದ ಪ್ರಾರ್ಥಿಸು. ಅವಳು ಎಷ್ಟು ಬೇಗ ನಿನ್ನೆಡೆಗೆ ಓಡಿಬರುವಳೆಂಬುದನ್ನು ನೋಡುವೆ. ಒಬ್ಬನು ಹೃತ್ಪೂರ್ವಕವಾಗಿ ದೇವರನ್ನು ಬೇಡಿದರೆ ಅವನು ಬರದೆ ಇರಲಾರ.

264) ನಮ್ಮ ಭಗವತ್ ಭಕ್ತಿ ಎಷ್ಟು ಧೃಢವಾಗಿರಬೇಕು ಗೊತ್ತಿದೆಯೆ? ಪತಿವ್ರತೆಗೆ ತನ್ನ ಪ್ರಿಯತಮನ ಮೇಲೆ ವಿಶ್ವಾಸ, ಜಿಪುಣನಿಗೆ ಹಣದ ಮೇಲಿರುವ ಆಸಕ್ತಿ, ಪ್ರಾಪಂಚಿಕರಿಗೆ ವಿಷಯ ವಸ್ತುಗಳ ಮೇಲಿರುವ ಆಸಕ್ತಿ , ಇಂತಹ ಆಸಕ್ತಿಗಳ ಹತ್ತರಷ್ಟು ನಮಗೆ ದೇವರ ಮೇಲೆ ಇರುವ ಪ್ರೇಮವಾದರೆ, ಆಗ ನೀನು ಅವನನ್ನು ಪಡೆಯುವೆ.

265) ಏಸುಕ್ರಿಸ್ತನು ಒಂದು ದಿನ ಕೆರೆಯ ದಡದ ಮೇಲೆ ಹೋಗುತ್ತಿದ್ದನು. ಭಕ್ತನೊಬ್ಬನು ಅವನನ್ನು ಸಮೀಪಿಸಿ, “ಹೇ ಸ್ವಾಮಿ, ದೇವರನ್ನು ಹೇಗೆ ಪಡೆಯಬಹುದು?” ಎಂದು ಕೇಳಿದನು. ತಕ್ಷಣವೇ ಕ್ರಿಸ್ತನು ಆತನನ್ನು ಕೆರೆ ನೀರಿನಲ್ಲಿ ಮುಳುಗಿಸಿದನು. ಕೆಲವು ಕ್ಷಣದ ಮೇಲೆ ಅವನನ್ನು ಮೇಲಕ್ಕೆ ಬಿಟ್ಟನು. ಕೈಗಳಿಂದ ಅವನನ್ನು ಎಚ್ಚರಿಸಿ “ಹೇಗಿತ್ತು?” ಎಂದನು. ಭಕ್ತನು “ನನ್ನ ಕೊನೆಗಾಲ ಬಂದಂತೆ ಇತ್ತು. ಅವಸ್ಥೆ ತುಂಬ ದಾರುಣವಾಗಿತ್ತು” ಎಂದನು. ಆಗ ಕ್ರಿಸ್ತನು “ನೀನು ಕ್ಷಣಕಾಲ ಉಸಿರಾಡುವುದಕ್ಕೆ ಹೇಗೆ ಹಂಬಲಿಸುತ್ತಿದ್ದೆಯೋ ಅದರಂತೆ ದೇವರಿಗಾಗಿ ಹಂಬಲಿಸಿದರೆ ದೇವರನ್ನು ಕಾಣುವೆ” ಎಂದನು.

266) ನಾನು ಈ ಜನ್ಮದಲ್ಲಿಯೇ ದೇವರನ್ನು ಕಾಣಬೇಕು. ಹೌದು ಇನ್ನು ಮೂರು ದಿನಗಳಲ್ಲಿ ದೇವರನ್ನು ಕಾಣಬೇಕು. ಇಲ್ಲ ಒಂದು ಸಲ ಅವನ ನಾಮೋಚ್ಚಾರದಲ್ಲಿಯೇ ಅವನನ್ನು ಕಾಣಬೇಕು, ಇಂತಹ ತೀವ್ರ ಪ್ರೇಮದಿಂದ ಭಕ್ತನು ದೇವರ ಲಕ್ಷ್ಯವನ್ನು ತನ್ನ ಎಡೆಗೆ ಸೆಳೆಯಬಹುದು. ಬೇಗ ಅವನನ್ನು ಪಡೆಯಬಹುದು. ಆದರೆ ತಮ್ಮ ಪ್ರೇಮದಲ್ಲಿ ಮಂದಗಾಮಿಗಳಾದ ಭಕ್ತರು ನಿಜವಾಗಿಯೂ ಅವನನ್ನು ಕಾಣಬೇಕಾದರೆ ಯುಗಾಂತರಗಳಾಗುವುವು.

267) ಮೋಕ್ಷವು ಈ ಜನ್ಮದಲ್ಲಿಲ್ಲದಿದ್ದರೆ ಇನ್ನೊಂದು ಜನ್ಮದಲ್ಲಿ ಸಿಕ್ಕುವುದು ಎಂಬ ಸೋಮಾರಿತನವೇಕೆ? ಭಕ್ತಿಯಲ್ಲಿ ಇಂತಹ ಸೋಮಾರಿತನವಿರಬಾರದು; ಈ ಜನ್ಮದಲ್ಲಿಯೆ ಇದೇ ಕ್ರಮದಲ್ಲಿಯೇ ನಾನು ಅವನನ್ನು ಕಾಣಬೇಕೆಂದು ದೃಢಪ್ರತಿಜ್ಞೆ ಮಾಡುವವರೆಗೂ ಗುರಿಯನ್ನು ಮುಟ್ಟಲಾರೆವು.

268) ಯಾರ ಏಕಾಗ್ರತೆ ಮತ್ತು ವ್ಯಾಕುಲತೆ ಅತಿ ತೀವ್ರವಾಗಿರುವುದೊ ಅವರು ದೇವರನ್ನು ಬೇಗ ಕಾಣುವರು.

269) ಈ ಕಲಿಯುಗದಲ್ಲಿ ದೇವರನ್ನು ನೋಡಬೇಕೆಂದು ಮೂರು ದಿನಗಳು ತೀವ್ರ ವ್ಯಾಕುಲಪಟ್ಟರೆ ಅವನ ಅನುಗ್ರಹವನ್ನು ಪಡೆಯಬಹುದು.

270) ಚಂದ್ರ ಮಾವನು ಎಲ್ಲಾ ಮಕ್ಕಳಿಗೂ ಮಾವ. ಇದರಂತೆಯೆ ದೇವರು ಎಲ್ಲರಿಗೂ ಸೇರಿದವನು. ಎಲ್ಲರಿಗೂ ದೇವರನ್ನು ಪ್ರಾರ್ಥಿಸುವುದಕ್ಕೆ ಅಧಿಕಾರವಿದೆ. ಯಾರು ಅವನನ್ನು ಪ್ರಾರ್ಥಿಸುವರೋ ಅವರು ಅವನನ್ನು ನೋಡಿ ಧನ್ಯರಾಗುವರು. ನೀನು ಅವನನ್ನು ಪ್ರಾರ್ಥಿಸಿದರೆ ನೀನೂ ಕೂಡ ಅವನನ್ನು ನೋಡುವೆ.

271) ನಾನು ನಿಜವಾಗಿ ನಿಮಗೆ ಹೇಳುತ್ತೇನೆ ಕೇಳಿ: ಯಾರಿಗೆ ದೇವರು ಬೇಕೋ ಅವರಿಗೆ ಅವನು ಸಿಕ್ಕುತ್ತಾನೆ. ನಿಜವಾದ ಉತ್ಸಾಹದಿಂದ ಮೂರು ದಿನಗಳು ಪ್ರಯತ್ನಪಡಿ. ನೀವು ಖಂಡಿತವಾಗಿ ಮುಂದುವರಿಯುವಿರಿ.

272) ಅಚಲವಾದ ಭಕ್ತಿ, ವಜ್ರೋಪಮ ಶ್ರದ್ಧೆಯನ್ನು ದಯಪಾಲಿಸೆಂದು ಜಗನ್ಮಯಿಯನ್ನು ಪ್ರಾರ್ಥಿಸಿ.

273) ಸಾಧಕನ ಶಕ್ತಿ ಇರುವುದೆಲ್ಲಿ? ಅವನು ದೇವರ ಮಗು, ಕಂಬನಿಯೆ ಅವನ ಪರಮ ಶಕ್ತಿ . ಅತ್ತು ಬೇಡುವ ಮಗುವಿನ ಆಸೆಗಳನ್ನು ತಾಯಿ ತೃಪ್ತಿಪಡಿಸುವಂತೆ ಭಗವಂತನು ಯಾವುದಕ್ಕಾಗಿ ತನ್ನ ಭಕ್ತನು ಅಳುತ್ತಿರುವನೋ ಅದನ್ನು ಈಡೇರಿಸುವನು.

274) ಒಂದು ದಿನ ಒಬ್ಬ ಮನುಷ್ಯನು ಶ್ರೀಗುರುದೇವರಿಗೆ ಹೀಗೆ ಹೇಳಿದನು: “ನನಗೆ ಈಗ ಐವತ್ತೈದು ವರುಷ. ಹದಿನಾಲ್ಕು ವರುಷಗಳಿಂದ ಅವನನ್ನು ಹುಡುಕುವುದರಲ್ಲಿ ನಿರತವಾಗಿರುವೆನು. ನನ್ನ ಗುರುಗಳ ಬುದ್ಧಿವಾದವನ್ನು ಅನುಸರಿಸಿದೆನು. ಎಲ್ಲಾ ತೀರ್ಥಯಾತ್ರೆಗಳನ್ನೂ ಮಾಡಿದೆನು. ಎಷ್ಟೋ ಜನ ಸಾಧು ಸಂತರನ್ನು ನೋಡಿಯೂ ಆಯಿತು. ಆದರೂ ನನಗೆ ಏನೂ ಲಭಿಸಲಿಲ್ಲ.”

ಇದನ್ನು ಕೇಳಿ ಶ್ರೀರಾಮಕೃಷ್ಣರು ಹೀಗೆ ಹೇಳಿದರು : “ನಾನು ನಿನಗೆ ಭರವಸೆ ಕೊಡುತ್ತೇನೆ. ಯಾರು ಅವನಿಗಾಗಿ ಕಾತುರರಾಗಿರುವರೊ ಅವರು ಅವನನ್ನು ಪಡೆಯುತ್ತಾರೆ. ನನ್ನನ್ನು ನೋಡಿ ಧೈರ್ಯ ತಾಳು.”

275) ಮಗು ತಾಯಿಗೆ “ಅಮ್ಮಾ, ನನಗೆ ಹಸಿವಾದಾಗ ಎಬ್ಬಿಸು” ಎಂದಿತು. ಅದಕ್ಕೆ ತಾಯಿ “ಮಗು, ಹಸಿವೇ ನಿನ್ನನ್ನು ಎಬ್ಬಿಸುವುದು” ಎಂದಳು.

276) ಮಗು ಆಟದ ಸಾಮಾನಿಗೆ ಮತ್ತು ಕಾಸಿಗೆ ತಾಯಿಯನ್ನು ಬೇಡಿ ಕಾಡುವಂತೆ, ಯಾರು ಏನನ್ನೂ ಅರಿಯದ ಎಳೆಯ ಮಗುವಿನಂತೆ, ದೇವರನ್ನು ಆತನು ತನ್ನ ಅತಿ ನಿಕಟ ಬಂಧುವೆಂದು, ಅತಿ ಪ್ರೀತಿಪಾತ್ರನೆಂದು ತಿಳಿದು, ಆತನಿಗಾಗಿ ಅಂತರಂಗದಲ್ಲಿ ಅತಿ ತೀವ್ರವಾಗಿ ವ್ಯಾಕುಲಪಡುವರೊ ಅವರಿಗೆ ಕೊನೆಗೆ ಅವನು ಪ್ರತ್ಯಕ್ಷನಾಗುವನು.

277) ನಗರ ರಕ್ಷಕನು ತನ್ನ ದೀಪದ ಬೆಳಕನ್ನು ಯಾರ ಮೇಲೆ ತಿರುಗಿಸಿದರೆ ಅವರನ್ನು ನೋಡಬಲ್ಲನು. ಆದರೆ ಆ ಬೆಳಕನ್ನು ತನ್ನ ಮುಖದ ಕಡೆಗೆ ತಿರುಗಿಸಿಕೊಳ್ಳುವ ತನಕ ಇತರರು ಯಾರೂ ಅವನನ್ನು ನೋಡಲಾರರು. ಇದರಂತೆಯೆ ದೇವರು ಎಲ್ಲರನ್ನೂ ನೋಡುವನು. ಆದರೆ ಅವನೇ ಕೃಪೆ ತೋರಿ ಇನ್ನೊಬ್ಬರಿಗೆ ಕಾಣಿಸಿಕೊಂಡ ಹೊರತು ಇತರರು ಅವರನ್ನು ನೋಡಲಾರರು.

278) ಜಮೀನುದಾರನು ಬಹಳ ಶ್ರೀಮಂತನಾಗಿರಬಹುದು. ಆದರೆ ಬಡ ರೈತನೊಬ್ಬನು, ಪ್ರೀತಿಯಿಂದ ಸಾಮಾನ್ಯವಾದ ಬಹುಮಾನಗಳನ್ನು ತಂದರೂ ಅವನು ಅತ್ಯಂತ ಸಂತೋಷದಿಂದ ಸ್ವೀಕರಿಸುವನು. ಇದರಂತೆಯೆ ಸರ್ವಶಕ್ತನಾದ ಭಗವಂತ ಎಷ್ಟೇ ಮಹಿಮಾವಂತನಾಗಿರಲಿ, ಭಕ್ತನು ಹೃತ್ಪೂರ್ವಕವಾಗಿ ಕೊಡುವ ಕಾಣಿಕೆಯನ್ನು ಅತಿ ಸಂತೋಷದಿಂದಲೂ ಮತ್ತು ತೃಪ್ತಿಯಿಂದಲೂ ಸ್ವೀಕರಿಸುವನು.

279) ನಾನು ದೇವರನ್ನು ನೋಡಿದರೆ ಸಾಕು; ನನಗೆ ಸಂಸ್ಕೃತ ಗೊತ್ತಿಲ್ಲದೆ ಇದ್ದರೆ ಏನು? ಭಗವಂತನು ಅವನನ್ನು ನೋಡಬೇಕೆಂದು ಬಯಸುವ ತನ್ನ ಎಲ್ಲ ಮಕ್ಕಳ ಮೇಲೂ ಅವರು ಪಂಡಿತರಾಗಲಿ, ಪಾಮರರಾಗಲಿ ಎಲ್ಲರ ಮೇಲೂ ಒಂದೇ ಸಮನಾಗಿ ತನ್ನ ಅನುಗ್ರಹವನ್ನು ಬೀರುವನು. ತಂದೆಗೆ ಐದಾರು ಮಕ್ಕಳಿರುವರೆಂದು ತಿಳಿಯೋಣ. ಕೆಲವರು ಅವನನ್ನು ‘ಪ’ ಎಂತಲೋ ‘ಬಾ’ ಎಂತಲೊ ಕರೆಯುವರು. ಪೂರ್ತಿ ಉಚ್ಚರಿಸುವುದಕ್ಕೆ ಅವರಿಗೆ ಬರುವುದಿಲ್ಲ. ಅವರ ತಂದೆ ಇವರನ್ನು ಮೊದಲನೆಯವನಿಗಿಂತ ಕಡಿಮೆ ಪ್ರೀತಿಸುವನೆ? ಮಕ್ಕಳಿಗೆ ಸರಿಯಾಗಿ ಅಪ್ಪ ಎಂದು ಕರೆಯುವುದಕ್ಕೆ ಬರುವುದಿಲ್ಲ ಎಂದು ಅವನಿಗೆ ಗೊತ್ತಿದೆ. ತಂದೆ ಎಲ್ಲರನ್ನೂ ಒಂದೇ ಸಮನಾಗಿ ಪ್ರೀತಿಸುವನು.

280) ಕೆಸರು ಮತ್ತು ಧೂಳಿನಿಂದ ಕೊಳೆ ಮಾಡಿಕೊಳ್ಳುವುದು ಮಗುವಿನ ಸ್ವಭಾವ. ಆದರೆ ತಾಯಿ ಮಗು ಕೊಳೆಯಿಂದ ಇರುವುದಕ್ಕೆ ಅವಕಾಶ ಕೊಡುವುದಿಲ್ಲ. ಆಗಿಂದಾಗ್ಗೆ ಅದನ್ನು ತೊಳೆಯುತ್ತಿರುವಳು. ಇದರಂತೆಯೇ ತಪ್ಪನ್ನು ಮಾಡುವುದು ಮನುಷ್ಯನ ಸ್ವಭಾವ. ಮನುಷ್ಯನು ತಪ್ಪು ಸ್ವಭಾವದವನಾಗಿದ್ದರೆ ನಿಜವಾಗಿ ದೇವರು ಅವನಿಗೆ ಎರಡರಷ್ಟು ಆದರದಿಂದ ಪಾರಾಗುವುದಕ್ಕೆ ಮಾರ್ಗವನ್ನೂ ತೋರುವುದರಲ್ಲಿ ಸಂದೇಹವಿಲ್ಲ.

281) ದೀಪದ ಸ್ವಭಾವ ಬೆಳಕನ್ನು ಕೊಡುವುದು. ಇದರ ಸಹಾಯದಿಂದ ಕೆಲವರು ಅಡಿಗೆ ಮಾಡಬಹುದು. ಮತ್ತೆ ಕೆಲವರು ಸುಳ್ಳು ಅರ್ಜಿಯನ್ನು ಬರೆಯಬಹುದು. ಕೆಲವರು ಭಗವನ್ನಾಮದ ಸಹಾಯದಿಂದ ಮೋಕ್ಷವನ್ನು ಪಡೆಯಲು ಯತ್ನಿಸುವರು. ಮತ್ತೆ ಕೆಲವರು ತಮ್ಮ ದುರುದ್ದೇಶಗಳನ್ನು ಈಡೇರಿಸಿಕೊಳ್ಳಲು ಯತ್ನಿಸುವರು. ಆದರೆ ಅವರ ಪವಿತ್ರ ನಾಮವಾದರೋ ಇವುಗಳಾವುದರಿಂದಲೂ ಕಳಂಕವಾಗದೆ ಇರುವುದು.

282) ಭಕ್ತ ತನ್ನ ಇಷ್ಟ ದೇವತೆಯನ್ನು ತಾಯಿಯೆಂದು ಕರೆಯುವುದರಿಂದ ಏತಕ್ಕೆ ಅಷ್ಟೊಂದು ಭಾವೋನ್ಮಾದವನ್ನು ಪಡೆಯುವನು? ಏಕೆಂದರೆ, ಮಗುವಿಗೆ ಎಲ್ಲರಿಗಿಂತ ಹೆಚ್ಚಾಗಿ ತಾಯಿಯಲ್ಲಿ ಸಲಿಗೆ. ಆದಕಾರಣವೇ ಅವಳು ಎಲ್ಲರಿಗಿಂತಲೂ ಸಮೀಪದವಳು.

283) ಸಚ್ಚಿದಾನಂದ ಸಾಗರದ ಮೇಲಿಂದ ಬರುವ ತಂಗಾಳಿ ಯಾರ ಮೇಲೆ ಬೀಸುವುದೋ ಅವರನ್ನೆಲ್ಲ ಪರಿವರ್ತನೆಗೊಳಿಸುವುದು. ಹಿಂದಿನ ಮಹಾ ಋಷಿಗಳಾದ ಸನಕ ಸನಾತನ ಮುಂತಾದವರು ಈ ತಂಗಾಳಿಯಿಂದ ಮೃದು ಹೃದಯರಾದರು. ದೇವೋನ್ಮತ್ತನಾದ ನಾರದನು ದೂರದಿಂದ ಆ ಸಚ್ಚಿದಾನಂದ ಸಾಗರವನ್ನು ಒಮ್ಮೆ ನಿಜವಾಗಿ ನೋಡಿದನು. ಅಂದಿನಿಂದ ತನ್ನನ್ನೇ ಮರೆತು ಯಾವಾಗಲೂ ಹರಿನಾಮೋಚ್ಚಾರಣೆ ಮಾಡುತ್ತ ಉನ್ಮತ್ತನಂತೆ ಜಗತ್ತಿನಲ್ಲಿ ಸಂಚಾರ ಮಾಡುತ್ತಿರುವನು. ಆಜನ್ಮಯೋಗಿಯಾದ ಶುಕದೇವನು ಆ ಸಚ್ಚಿದಾನಂದ ಸಾಗರವನ್ನು ಮೂರು ವೇಳೆ ಮುಟ್ಟಿರುವನು. ಅಂದಿನಿಂದಲೂ ದೇವೋನ್ಮತ್ತನಾಗಿ ಮಗುವಿನಂತೆ ಹೊರಳಾಡುತ್ತಿರುವನು. ಜಗದ ಮಹಾ ಗುರುವಾದ ಮಹಾದೇವನಾದರೋ ಆ ಸಾಗರದಿಂದ ಮೂರು ಬೊಗಸೆ ನೀರನ್ನು ಕುಡಿದಿರುವನು. ಅಂದಿನಿಂದಲೂ ಆ ಸಚ್ಚಿದಾನಂದನಲ್ಲಿ ಉನ್ಮತ್ತನಾಗಿ ಹೆಣದಂತೆ ಅಚಲನಾಗಿ ನೆಲದ ಮೇಲೆ ಬಿದ್ದಿರುವನು. ಈ ಸಾಗರದ ಆಳವನ್ನು ಯಾರು ಅಳೆಯಬಲ್ಲರು? ಇದರ ಅದ್ಭುತಗಳನ್ನು ಯಾರು ತಿಳಿಯಬಲ್ಲರು?

284) ಮಗುವಿನ ಸರಳತೆ ಎಷ್ಟು ಮಧುರ! ಪ್ರಪಂಚದ ಐಶ್ವರ್ಯಕ್ಕೆ ಬದಲು ಬೊಂಬೆಯನ್ನು ಆಶಿಸುವುದು. ಇದರಂತೆ ಶ್ರದ್ಧಾವಂತನಾದ ಭಕ್ತನು ಕೂಡ. ಐಶ್ವರ್ಯ ಕೀರ್ತಿಗಳನ್ನೆಲ್ಲಾ ತಿರಸ್ಕರಿಸಿ ದೇವರಲ್ಲಿ ಐಕ್ಯನಾಗಬೇಕಾದರೆ ಮತ್ತಾರಿಗೂ ಸಾಧ್ಯವಿಲ್ಲ.

285) ನಿಜವಾದ ಭಕ್ತ ತನ್ನ ಮನಸ್ಸಿನ ಮುಕ್ಕಾಲು ಪಾಲನ್ನು ದೇವರಿಗೆ, ಉಳಿದ ಕಾಲುಭಾಗವನ್ನು ಮಾತ್ರ ಪ್ರಪಂಚದ ಕಡೆಗೆ ಕೊಡುವನು. ದೇವರಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಅವನು ಬಹಳ ಜೋಪಾನವಾಗಿರುವನು. ಬಾಲವನ್ನು ತುಳಿದ ಹಾವು ರೇಗಿ ಬರುವಂತೆ; ಎಲ್ಲಾ ಕಡೆಗಿಂತಲೂ ಹೆಚ್ಚಾಗಿ ಬಾಲದಲ್ಲಿ ತನ್ನ ಗೌರವ ಹಾವಿಗೆ ಇರುವಂತೆ ತೋರುವುದು.

286) ಶರಪಂಜರದ ಮೇಲೆ ಮರಣೋನ್ಮುಖನಾದ ಭೀಷ್ಮನ ಕಣ್ಣಿನಿಂದ ನೀರು ಬರುವುದು ಕಂಡಿತು. ಶ್ರೀಕೃಷ್ಣ ಮತ್ತು ಪಾಂಡವರು ಹತ್ತಿರದಲ್ಲಿಯೇ ನಿಂತಿದ್ದರು. ಅರ್ಜುನನು ಕೃಷ್ಣನಿಗೆ “ಎಷ್ಟು ಆಶ್ಚರ್ಯ ಸಹೋದರನೆ ! ನಮ್ಮ ಪಿತಾಮಹರಾದ ಭೀಷ್ಮರು ಅಷ್ಟು ಧರ್ಮಾತ್ಮರು, ಸತ್ಯನಿಷ್ಠರು, ಜಿತೇಂದ್ರಿಯರು, ಅಷ್ಟವಸುಗಳಲ್ಲಿ ಒಬ್ಬರಾಗಿದ್ದರೂ, ಅವರೂ ಕೂಡ ಕೊನೆಗಾಲದಲ್ಲಿ ಮಾಯಾಪಾಶಕ್ಕೆ ಸಿಕ್ಕಿ ಕಣ್ಣೀರು ಕರೆಯುತ್ತಿರುವರು” ಎಂದರು. ಭೀಷ್ಮನಿಗೆ ಇದನ್ನು ತಿಳಿಸಿದ ಮೇಲೆ ಅವರು ಹೀಗೆ ಹೇಳಿದರು: “ಹೇ ಕೃಷ್ಣ, ನಿನಗೆ ಚೆನ್ನಾಗಿ ಗೊತ್ತಿದೆ, ನಾನು ಅದಕ್ಕಾಗಿ ಅಳುತ್ತಿಲ್ಲ ಎಂಬುದು. ಯಾವ ಪಾಂಡವರಿಗೆ ಭಗವಂತನೇ ಸಾರಥಿಯಾಗಿ ಕೆಲಸ ಮಾಡುತ್ತಿರುವನೋ ಅವರು ಅನಂತ ಕಷ್ಟ ಮತ್ತು ದುಃಖಗಳನ್ನು ಅನುಭವಿಸಬೇಕಾಯಿತು ಎಂಬುದನ್ನು ಕುರಿತು ಆಲೋಚನೆ ಮಾಡಿದಾಗ, ಭಗವಂತನ ಲೀಲೆಯನ್ನು ಎಳ್ಳಷ್ಟೂ ತಿಳಿಯಲಿಲ್ಲವಲ್ಲ ಎಂದು ನನಗೆ ಕಣ್ಣೀರು ತಡೆಯಲಾಗಲಿಲ್ಲ.”

287) ಪರಮಾತ್ಮನನ್ನು ಒಬ್ಬನು ಹೆಚ್ಚು ಸಮೀಪಿಸಿದಂತೆಲ್ಲಾ ಆತನ ಅನಂತ ಮಹಿಮೆಯು ಹೊಸ ಹೊಸದಾಗಿ ಹೆಚ್ಚು ಹೆಚ್ಚಾಗಿ ಕಾಣುವುದು. ಕೊನೆಗೆ ಜ್ಞಾನಸಿದ್ಧನಾಗಿ ಅವನಲ್ಲಿ ಐಕ್ಯನಾಗುವನು.

288) ಒಂದು ಸಲ ರಾಣಿ ರಾಸಮಣಿಯ ದಕ್ಷಿಣೇಶ್ವರ ದೇವಾಲಯದಲ್ಲಿ ಕಳುವು ನಡೆಯಿತು. ವಿಷ್ಣುಮಂದಿರದಲ್ಲಿ ವಿಗ್ರಹಗಳಿಗೆ ಹಾಕಿದ ಒಡವೆಗಳೆಲ್ಲ ಕಳುವಾದುವು. ಮಥುರನಾಥ ಮತ್ತು ಶ್ರೀರಾಮಕೃಷ್ಣರು ಸಮಾಚಾರವೇನೆಂದು ನೋಡುವುದಕ್ಕೆ ಹೋದರು. ಮಥುರನಾಥನು, “ದೇವರೇ! ನೀನು ಕೆಲಸಕ್ಕೆ ಬಾರದವನು. ಕಳ್ಳರು ನಿನ್ನ ಒಡವೆಗಳನ್ನೆಲ್ಲಾ ಕಸಿದುಕೊಂಡು ಹೋದರು. ಆದರೂ ನೀನು ಅವರನ್ನು ತಡೆಯಲಾರದೆ ಹೋದೆ” ಎಂದನು. ಇದನ್ನು ಕೇಳಿ ಶ್ರೀರಾಮಕೃಷ್ಣರು ಕಟುವಾಗಿ ಹೀಗೆ ಉತ್ತರ ಕೊಟ್ಟರು – ” ಹೀಗೆ ಮಾತನಾಡುವುದಕ್ಕೆ ನೀನು ಎಂತಹ ಹುಚ್ಚ? ನೀನು ಹೇಳುವ ಒಡವೆ, ನೀನು ವಿಗ್ರಹದಲ್ಲಿ ಆರಾಧಿಸುವ ಪರಮೇಶ್ವರನಿಗೆ ಮಣ್ಣಿಗೆ ಸಮ. ಭಾಗ್ಯದೇವತೆಯಾದ ಲಕ್ಷ್ಮಿಯೇ ತನ್ನ ಐಶ್ವರ್ಯವನ್ನು ಪಡೆಯುವುದು ಅವನಿಂದ ಎಂಬುದನ್ನು ಜ್ಞಾಪಕದಲ್ಲಿಡು.”

289) ದೇವರು ನಮಗೆ ಊಟಕ್ಕೆ ಕೊಡುತ್ತಾನೆ ಎಂದು ಅವನನ್ನು ದಯಾಪರನೆಂದು ಹೇಳುವುದಕ್ಕೆ ಆಗುವುದಿಲ್ಲ. ಏಕೆಂದರೆ ಪ್ರತಿಯೊಬ್ಬ ತಂದೆಯೂ ತನ್ನ ಮಕ್ಕಳನ್ನು ಕಾಪಾಡಬೇಕು. ಆದರೆ ಅಡ್ಡದಾರಿಗೆ ಬೀಳದಂತೆ ನಮ್ಮನ್ನು ಪ್ರಲೋಭನೆಗಳಿಂದ ಕಾಪಾಡಿದರೆ ಅವನನ್ನು ನಿಜವಾಗಿಯೂ ದಯಾಮಯನೆನ್ನಬಹುದು.

290) ಕೋಣೆಗೆ ದೀಪವನ್ನು ತಂದೊಡನೆಯೆ ಶತಮಾನಗಳಿಂದ ಇದ್ದ ಕತ್ತಲೆ ಪಲಾಯನವಾಗುವುದು. ಹಲವು ಜನ್ಮಾಂತರಗಳಿಂದ ಸಂಚಿತವಾದ ಪಾಪವೆಲ್ಲ ಒಮ್ಮೆ ಆತನ ಕರುಣಾಕಟಾಕ್ಷದಿಂದ ಮಾಯವಾಗುವುದು.

291) ಕೆಲವು ಮೀನುಗಳಿಗೆ ಹಲವು ಜೊತೆ ಮೂಳೆಗಳಿವೆ. ಮತ್ತೆ ಕೆಲವಕ್ಕೆ ಒಂದೇ ಜೊತೆ ಮೂಳೆ ಇದೆ. ಮೀನನ್ನು ತಿನ್ನುವವರು ಅದು ಒಂದೇ ಆಗಲಿ ಅಥವಾ ಹಲವಾಗಲಿ ಎಲ್ಲವನ್ನೂ ತೆಗೆದುಹಾಕುವರು. ಇದೇ ರೀತಿಯಲ್ಲಿ ಕೆಲವರಿಗೆ ಹೆಚ್ಚು ಪಾಪಗಳಿವೆ. ಮತ್ತೆ ಕೆಲವರಿಗೆ ಕಡಿಮೆ ಇದೆ. ಆದರೆ ಜೀವಿಗಳನ್ನು ಉದ್ಧಾರ ಮಾಡುವ ಭಗವಂತನ ಅನುಗ್ರಹ ಎಲ್ಲರನ್ನು ಒಂದೇ ರೀತಿ ಪಾವನರನ್ನಾಗಿ ಮಾಡುವುದು.

292) ಮಲೆಯಮಾರುತ ಬೀಸಿದಾಗ ಸತ್ತ್ವವಿದ್ದ ಗಿಡಗಳೆಲ್ಲ ಗಂಧದ ಮರಗಳಾಗುವುವು ಎಂಬ ನಾಣ್ಣುಡಿ ಇದೆ. ಆದರೆ ಸತ್ತ್ವವಿಲ್ಲದ ಬೊಂಬು, ಪರಂಗಿ ಮತ್ತು ಬಾಳೆಗಿಡಗಳು ಹಾಗೆಯೇ ಉಳಿಯುವುವು. ಇದರಂತೆಯೆ ದೈವಾನುಗ್ರಹ ಮನುಷ್ಯನ ಮೇಲೆ ಬಿದ್ದರೆ ಯಾರಲ್ಲಿ ಭಕ್ತಿ ಧರ್ಮ ಇವುಗಳ ಅಂಕುರವು ಇರುವುವೊ ಅವರು ಉತ್ತಮರಾಗಿ ಪವಿತ್ರತೆಯಿಂದ ಪೂರಿತರಾಗುವರು. ಆದರೆ ಯಾರು ಕೆಲಸಕ್ಕೆ ಬಾರದ ಸಂಸಾರದಲ್ಲಿ ಮಗ್ನರಾಗಿರುವರೊ ಅವರು ಹಿಂದಿನಂತೆಯೇ ಇರುವರು.

293) ಭಗವಂತನ ಅನುಗ್ರಹವೆಂಬ ತಂಗಾಳಿ ಸರ್ವದಾ ಬೀಸುತ್ತಿರುವುದು. ಸಂಸಾರ ಸಾಗರದ ಮೇಲೆ ಇರುವ ಸೋಮಾರಿಗಳಾದ ನಾವಿಕರು ಇದರಿಂದ ಉಪಯೋಗವನ್ನು ಪಡೆಯುವುದಿಲ್ಲ. ಆದರೆ ಜಾಗ್ರತರಾದ ಬಲಶಾಲಿಗಳಾದ ನಾವಿಕರು ಯಾವಾಗಲೂ ತಮ್ಮ ಮನಸ್ಸೆಂಬ ಪಟವನ್ನು ಹರಡಿ ಗುರಿಯನ್ನು ಬೇಗ ಸೇರುವರು.

294) ಸಾಗರದ ಮಧ್ಯದಲ್ಲಿ ಪಟಸ್ತಂಭದ ಮೇಲೆ ಕುಳಿತ ಹಕ್ಕಿ ಒಂದೇ ಕಡೆ ಕುಳಿತು ಸಾಕಾಗಿ ವಿಶ್ರಾಂತಿಗಾಗಿ ಬೇರೆ ಯಾವುದಾದರೂ ಸ್ಥಳವನ್ನು ಹುಡುಕಲು ಹಾರಿಹೋಗುವುದು. ಆದರೆ ಬೇರೆ ಎಲ್ಲೂ ಸ್ಥಳವಿಲ್ಲದೆ ಕೊನೆಗೆ ತಾನು ಮೊದಲಿದ್ದ ಸ್ಥಳಕ್ಕೇ ಬರುವುದು. ಇದರಂತೆಯೆ ಪೂರ್ಣ ಅನುಭವವುಳ್ಳ ಮತ್ತು ಶಿಷ್ಯನ ಹಿತವನ್ನು ಕೋರುವ ಗುರುವಿನ ಶಿಸ್ತು ಮತ್ತು ಆತನು ವಿಧಿಸುವ ಕಾರ್ಯಗಳಿಗೆ ಸಾಧಾರಣ ಶಿಷ್ಯನು ಬೇಸರಪಡುವನು. ಗುರುವಿನಲ್ಲಿ ಭಕ್ತಿ ಮತ್ತು ಶ್ರದ್ಧೆಯನ್ನೆಲ್ಲ ಕಳೆದುಕೊಂಡು ಸ್ವಪ್ರಯತ್ನದಿಂದಲೇ ದೇವರನ್ನು ಸಾಧಿಸುವೆನೆಂದು ಹೋಗುವನು. ಆದರೆ ಬೇಕಾದಷ್ಟು ನಿಷ್ಪ್ರಯೋಜನವಾಗಿ ಪ್ರಯತ್ನಪಟ್ಟ ಮೇಲೆ ಕೊನೆಗೆ ಅವನು ಅದೇ ಗುರುವಿನ ಆಶೀರ್ವಾದ ಮತ್ತು ಅನುಗ್ರಹವನ್ನು ಪಡೆಯಲು ಬಂದೇ ಬರುವನು.

295) ಯಾರು ತನ್ನ ಗುರುವನ್ನು ಕೇವಲ ಮನುಷ್ಯನೆಂದು ಭಾವಿಸುತ್ತಾರೆಯೊ, ಅವರ ಭಕ್ತಿ ಮತ್ತು ಪ್ರಾರ್ಥನೆಗಳಿಂದ ಅವನಿಗೆ ಏನೂ ಪ್ರಯೋಜನ ಸಿಕ್ಕುವುದಿಲ್ಲ. ನಾವು ನಮ್ಮ ಗುರುವನ್ನು ಸಾಧಾರಣ ಮನುಷ್ಯನೆಂದು ಭಾವಿಸಬಾರದು. ಶಿಷ್ಯನು ಇಷ್ಟದೇವತೆಯನ್ನು ಕಾಣುವುದಕ್ಕೆ ಮುಂಚೆ ಗುರುವೆ ವಿಚಿತ್ರವಾಗಿ ಪರಿಣಾಮ ಹೊಂದಿ ದೇವರನ್ನು ತೋರುವನು. ಆಗ ಶಿಷ್ಯನಿಗೆ ಗುರು ಮತ್ತು ಇಷ್ಟದೇವತೆ ಒಂದಾಗಿ ಕಾಣುವುದು. ಯಾವ ವರವನ್ನು ಕೇಳಿದರೂ ದೈವತ್ವವನ್ನು ಪಡೆದಿರುವ ಗುರುವು ಶಿಷ್ಯನಿಗೆ ಕೊಡುವನು. ಗುರು ಶಿಷ್ಯನನ್ನು ನಿರ್ವಾಣದ ಪರಮಪದದವರೆಗೂ ಕರೆದೊಯ್ಯುವನು ಅಥವಾ ಶಿಷ್ಯನು ಇಚ್ಛೆಪಟ್ಟರೆ, ಪೂಜ್ಯ ಪೂಜಕ ಭಾವದಿಂದ ದ್ವೈತರಂಗದಲ್ಲಿ ಬೇಕಾದರೂ ಇರಬಹುದು. ಅವನು ಏನು ಪ್ರಾರ್ಥಿಸಿದರೂ ಗುರು ಅದನ್ನು ಕರುಣಿಸುವನು.

296) ಮಾನವ ಗುರು ಮಂತ್ರವನ್ನು ಕಿವಿಗೆ ಹೇಳುವನು. ದೇವಗುರು ಶಿಷ್ಯನ ಜೀವಕ್ಕೆ ಮಂತ್ರವನ್ನು ಧಾರೆ ಎರೆಯುವನು.

297) ಗುರು ಮಧ್ಯಸ್ಥಗಾರ. ಅವನು ದೇವರು ಮತ್ತು ಮಾನವನನ್ನು ಸಮೀಪಕ್ಕೆ ತರುವನು. ಮದುವೆ ಮಾಡುವವನು ಗಂಡು ಹೆಣ್ಣನ್ನು ಒಟ್ಟಿಗೆ ತರುವಂತೆ.

298) ಗುರು ದೊಡ್ಡ ಗಂಗಾನದಿಯಂತೆ. ಮನುಷ್ಯರು ಕಸವನ್ನೆಲ್ಲಾ ಗಂಗಾ ನದಿಗೆ ಎಸೆಯುವರು. ಆದರೆ ಇದರಿಂದ ಅದರ ಪಾವನತೆ ಕಡಿಮೆಯಾಗುವುದಿಲ್ಲ. ಇದರಂತೆಯೇ ಗುರು ಎಲ್ಲಾ ವಿಧದ ನೀಚ ಅಪಮಾನ ಮತ್ತು ನಿಂದೆಗಳಿಂದ ಮೇಲಿರುವನು.

299) ದೇವರಿಗೆ ಸಂಬಂಧಪಟ್ಟ ರಹಸ್ಯವನ್ನು ತಿಳಿಯಬೇಕೆಂದು ನೀನು ಅತಿ ಕಾತುರನಾಗಿದ್ದರೆ, ಅವನು ನಿನಗೆ ಸದ್ಗುರುವನ್ನು ಕಳುಹಿಸುತ್ತಾನೆ. ಗುರುವನ್ನು ಹುಡುಕುವುದಕ್ಕೆ ನೀನು ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ.

300) ಶಿಷ್ಯ ಗುರುವನ್ನು ಎಂದಿಗೂ ನಿಂದಿಸಬಾರದು. ಗುರು ಹೇಳಿದುದನ್ನು ಮರುಮಾತಿಲ್ಲದೆ ಪಾಲಿಸಬೇಕು. ಬಂಗಾಳಿಯ ಗಾದೆಯೊಂದು ಹೀಗೆ ಹೇಳುತ್ತದೆ: “ನನ್ನ ಗುರು ಹೆಂಡದ ಅಂಗಡಿಗೆ ಹೋದರೂ ಅವನು ಪವಿತ್ರ ನಿತ್ಯಾನಂದ – ನನ್ನ ಗುರು ಹೆಂಡಕುಡುಕರು ಮತ್ತು ಪಾಪಿಗಳ ಮನೆಗೆ ಹೋದರೂ ಅವನು ನನ್ನ ಭಾಗಕ್ಕೆ ಪರಿಶುದ್ಧ ಅಕಳಂಕ ಗುರು.

301) ಅವತಾರ ಯಾವಾಗಲೂ ಒಂದೇ. ಸಂಸಾರ ಸಾಗರದಲ್ಲಿ ಮುಳುಗಿ ಒಂದು ಕಡೆ ಎದ್ದಾಗ ಕೃಷ್ಣನೆಂದು, ಮತ್ತೊಮ್ಮೆ ಮುಳುಗಿ ಇನ್ನೊಂದೆಡೆ ಎದ್ದರೆ ಅವನನ್ನು ಕ್ರಿಸ್ತನೆಂದು ತಿಳಿಯುವರು.

302) ಸಚ್ಚಿದಾನಂದದ ಮರದಲ್ಲಿ ರಾಮ, ಕೃಷ್ಣ, ಬುದ್ಧ, ಕ್ರಿಸ್ತರೆಂಬ ಹಲವು ಫಲಗಳ ಜೊಂಪೆಗಳಿವೆ. ಇವುಗಳಲ್ಲಿ ಯಾವಾಗಲಾದರೂ ಒಂದೆರಡು ಜಗತ್ತಿಗೆ ಬಂದು ಜನರ ಜೀವಮಾನದಲ್ಲಿ ದೊಡ್ಡ ಬದಲಾವಣೆಯನ್ನು, ಕ್ರಾಂತಿಯನ್ನುಂಟು ಮಾಡುವರು.

303) ಅವತಾರಗಳು ದಿವ್ಯಶಕ್ತಿ ಮತ್ತು ದಿವ್ಯಜ್ಞಾನದೊಂದಿಗೆ ಬರುವರು. ಕೆಳಗಿನಿಂದ ಮೇಲಿನವರೆಗೆ ಸಾಕ್ಷಾತ್ಕಾರ ಯಾವ ಸ್ಥಿತಿಯಲ್ಲಾದರೂ ಆಗಲಿ. ಅವರು ಹೋಗಿ ಇರಬಲ್ಲರು. ರಾಜನ ಅರಮನೆಯಲ್ಲಿ ಅಪರಿಚಿತನು ಹೊರಗಡೆಯ ಕೆಲವು ಕೋಣೆಗಳಿಗೆ ಮಾತ್ರ ಹೋಗಬಲ್ಲ. ಆದರೆ ದೊರೆಯ ಸ್ವಂತ ಮಗು ಅರಮನೆಯ ಯಾವ ಮೂಲೆಗೆ ಬೇಕಾದರೂ ಹೋಗಬಲ್ಲದು.

304) ಅವತಾರವನ್ನು ತಿಳಿದುಕೊಳ್ಳುವುದು ಬಹಳ ಕಷ್ಟ. ಇದು ಸಾಂತದ ಮೇಲಿರುವ ಅನಂತದ ಲೀಲೆ.

305) ಭಗವಾನ್ ಶ್ರೀರಾಮಚಂದ್ರನು ಪ್ರಪಂಚಕ್ಕೆ ಬಂದಾಗ ಅವನು ಭಗವಂತನ ಅವತಾರವೆಂದು ಹನ್ನೆರಡು ಜನ ಋಷಿಗಳು ಮಾತ್ರ ತಿಳಿದುಕೊಂಡರು. ಹಾಗೆಯೇ ದೇವರು ಈ ಜಗದಲ್ಲಿ ಅವತಾರ ಮಾಡಿದಾಗ ಎಲ್ಲೋ ಕೆಲವರು ಮಾತ್ರ ಅವನಲ್ಲಿರುವ ಭಗವಂತನ ಅಂಶಗಳನ್ನು ಕಂಡುಹಿಡಿಯುವರು.

306) ದೇವದೂತನನ್ನು ಅವನ ಜನರೇ ಗೌರವಿಸದಿರುವುದಕ್ಕೆ ಕಾರಣವೇನು? ದೊಂಬರ ನೆಂಟರು ಅವನು ಮಾಡುವ ಚಮತ್ಕಾರವನ್ನು ನೋಡುವುದಕ್ಕೆ ನಡೆಯುವುದಿಲ್ಲ. ಆದರೆ ಅಪರಿಚಿತರು ಅವನ ಚಮತ್ಕಾರವನ್ನು ನೋಡಲು ಇಚ್ಛಿಸುವರು.

307) ವಜ್ರಬಂತುಲ (Euphorbia) ಬೀಜ ಅದರ ಕೆಳಗೆ ಬೀಳುವುದಿಲ್ಲ. ಅವು ಗಾಳಿಯಿಂದ ದೂರ ಹಾರಿ ಬಿದ್ದು ಅಲ್ಲಲ್ಲಿ ಬೇರು ಬಿಡುವುವು. ಹಾಗೆಯೇ ದೇವದೂತರ ಭಾವನೆ ತನ್ನ ಊರಿನಿಂದ ದೂರ ದೇಶದಲ್ಲಿ ಪ್ರಕಟವಾಗಿ ಅಲ್ಲಿನ ಜನರು ಅವನನ್ನು ಮೆಚ್ಚುವರು.

308) ದೀಪ ಸುತ್ತಲೂ ಬೆಳಗುತ್ತಿದ್ದರೂ ಯಾವಾಗಲೂ ಅದರ ಕೆಳಗೆ ನೆರಳಿರುವುದು. ಹಾಗೆಯೇ ಮಹಾತ್ಮರ ಹತ್ತಿರವಿರುವವರು ಆತನನ್ನು ತಿಳಿದುಕೊಳ್ಳುವುದಿಲ್ಲ. ಯಾರು ದೂರದಲ್ಲಿರುವರೋ ಅವರೇ ಆತನ ಅದ್ಭುತ ಶಕ್ತಿಯನ್ನು ಆಧ್ಯಾತ್ಮಿಕ ಕಾಂತಿಯನ್ನು ಮೆಚ್ಚುವರು.

309) ಯಾರು ದೇವರನ್ನು ಪೂರ್ಣವಾಗಿ ತಿಳಿಯಬಲ್ಲರು? ಅವನನ್ನು ಪೂರ್ಣವಾಗಿ ತಿಳಿದುಕೊಳ್ಳುವುದು ನಮಗೆ ಸಾಧ್ಯವಿಲ್ಲ ಅಥವಾ ಅವಶ್ಯಕವೂ ಇಲ್ಲ. ನಾವು ಅವನನ್ನು ನೋಡಿದರೆ ಸಾಕು. ಅವನೊಬ್ಬನೇ ಸತ್ಯವೆಂದು ತಿಳಿದರೆ ಸಾಕು. ಒಬ್ಬ ಮನುಷ್ಯನು ಪವಿತ್ರ ಗಂಗಾನದಿಯ ನೀರನ್ನು ಮುಟ್ಟುತ್ತಾನೆಂದು ತಿಳಿಯೋಣ. “ಗೋಮುಖೀ (ಗಂಗಾಮೂಲ) ಯಿಂದ ಗಂಗಾ ಸಾಗರದವರೆಗೆ (ಗಂಗಾಸಂಗಮ) ಗಂಗಾನದಿಯನ್ನು ನೋಡಿದ್ದಾಯಿತು. ಸ್ಪರ್ಶ ಮಾಡಿ ಧನ್ಯನಾದೆನು” ಎಂದು ಭಾವಿಸುವನು.

310) ನೀನು ದೇವರನ್ನು ಹುಡುಕುತ್ತೀಯೇನು? ಹಾಗಾದರೆ ಅವನನ್ನು ಮನುಷ್ಯನಲ್ಲಿ ಹುಡುಕು. ಉಳಿದ ಎಲ್ಲಾ ವಸ್ತುಗಳಿಗಿಂತಲೂ ಅವನ ಮಹಿಮೆ ಮಾನವನಲ್ಲಿ ಹೆಚ್ಚು ಪ್ರಕಟವಾಗಿರುವುದು. ಭಗವಂತನಿಗಾಗಿ ಯಾರ ಹೃದಯ ತುಂಬಿ ತುಳುಕಾಡುವುದೊ ಆತನಲ್ಲೇ ವಿಹರಿಸುವರೋ ಅವನ ಪ್ರೇಮದಿಂದ ಉನ್ಮತ್ತರಾಗಿರುವರೋ ಅವರಲ್ಲಿ ಹುಡುಕು. ಅಂತಹ ವ್ಯಕ್ತಿಯಲ್ಲಿ ದೇವರು ನಿಜವಾಗಿಯೂ ಇರುವನು.

311) ರೈಲ್ವೆ ಎಂಜಿನ್ ಸಂಚರಿಸಿ ತಾನು ಗುರಿ ಸೇರುವುದು ಮಾತ್ರವಲ್ಲದೆ ಜೊತೆಗೆ ದೊಡ್ಡ ಗಾಡಿಗಳ ಸಾಲೊಂದನ್ನೂ ಎಳೆದುಕೊಂಡು ಹೋಗುವುದು. ಇದರಂತೆಯೇ ನಮ್ಮ ಅವತಾರಗಳು ಪಾಪಕಾರ್ಯದಲ್ಲಿ ಬದ್ಧರಾಗಿರುವ ಮಾನವನನ್ನು ಭಗವಂತನ ಎಡೆಗೆ ಕರೆದುಕೊಂಡು ಹೋಗುವರು.

312) ಸಾಧಾರಣ ಕಾಲದಲ್ಲಿ ನೀರನ್ನು ಬಹಳ ಆಳದಿಂದ ಮತ್ತು ಶ್ರಮದಿಂದ ಬಾವಿಯಿಂದ ಎಳೆಯಬಹುದು. ಆದರೆ ಮಳೆಗಾಲದಲ್ಲಿ ಎಲ್ಲಾ ಕಡೆಗಳಲ್ಲಿಯೂ ನೀರು ಇರುವಾಗ ಎಲ್ಲಿಂದ ಬೇಕಾದರೂ ನೀರನ್ನು ಸುಲಭವಾಗಿ ಪಡೆಯಬಹುದು. ಇದರಂತೆಯೇ ಸಾಮಾನ್ಯವಾಗಿ ದೇವರನ್ನು ಪ್ರಾರ್ಥನೆ ಮತ್ತು ತಪಸ್ಸಿನಿಂದ ಬಹಳ ಕಷ್ಟಪಟ್ಟು ಪಡೆಯಬಹುದು. ಆದರೆ ಜಗದಲ್ಲಿ ಅವತಾರವೆಂಬ ಮಹಾಪ್ರವಾಹ ಬಂದಾಗ ಎಲ್ಲಾ ಕಡೆಯಲ್ಲಿಯೂ ದೇವರನ್ನು ನೋಡಬಹುದು.

313) ಜ್ಞಾನಯೋಗವೆಂದರೆ ಜ್ಞಾನದ ಮೂಲಕ ದೇವರೊಂದಿಗೆ ಸಂಬಂಧವನ್ನು ಕಲ್ಪಿಸಿಕೊಳ್ಳುವುದು. ನಿರಾಕಾರ ಬ್ರಹ್ಮನನ್ನು ಪಡೆಯುವುದು ಜ್ಞಾನಿಯ ಗುರಿ. ಅವನು ನೇತಿ, ನೇತಿ ಎಂದು ಒಂದು ಅಸತ್ಯವಾದ ಮೇಲೆ ಮತ್ತೊಂದು ಅಸತ್ಯವನ್ನು ತೊರೆದು ಕೊನೆಗೆ ನಿತ್ಯ ವಸ್ತುವಿಚಾರ ನಿಲ್ಲುವವರೆಗೂ ಹೋಗಿ ಸಮಾಧಿಯಲ್ಲಿ ಬ್ರಹ್ಮಸಾಕ್ಷಾತ್ಕಾರ ಪಡೆಯುವನು.

314) ಧ್ಯಾನದಿಂದ ಗೋಚರಿಸುವ ಜ್ಞಾನ ಬೇರೆ, ತರ್ಕದಿಂದ ಸಿಕ್ಕುವ ಜ್ಞಾನ ಬೇರೆ. ಪುನಃ ಇದಕ್ಕಿಂತ ಅವನಿಗೆ ಸತ್ಯಸಾಕ್ಷಾತ್ಕಾರವಾದ ಮೇಲೆ ದೊರಕುವ ಜ್ಞಾನವೇ ಬೇರೆ ಎಂದು ನನಗೆ ಗೊತ್ತಾಗಿದೆ.

315) ಒಬ್ಬನಿಗೆ ತನ್ನ ಆತ್ಮ ಗೊತ್ತಾಗಿದ್ದರೆ ಆತನಿಗೆ ಉಳಿದವರೂ ಮತ್ತು ದೇವರು ಗೊತ್ತಾಗುವುದು. ನನ್ನ ಅಹಂಕಾರವೆಂದರೇನು? ಇದೇನು ನನ್ನ ಕೈಯೇ ಕಾಲೇ ರಕ್ತವೇ ಮಾಂಸವೆ? ಇದನ್ನು ಕುರಿತು ಗಹನವಾಗಿ ವಿಚಾರಮಾಡಿರಿ. ಆಗ ನಾನು ಎನ್ನುವುದು ಇಲ್ಲವೆಂದು ಗೊತ್ತಾಗುತ್ತದೆ. ನೀವು ಈರುಳ್ಳಿಯ ಸಿಪ್ಪೆಯನ್ನು ತೆಗೆಯುತ್ತಿದ್ದರೆ ಕೊನೆಗೆ ಅದೆಲ್ಲ ಸಿಪ್ಪೆಯಿಂದಲೇ ಆಗಿರುವಂತೆ ತೋರುವುದು. ಅದರೊಳಗಡೆ ಏನೂ ತಿರುಳು ಕಾಣುವುದಿಲ್ಲ. ನೀವು ಅಹಂಕಾರವನ್ನು ವಿಭಜನೆ ಮಾಡಿದರೆ ಕೊನೆಗೆ ನಾನು ಎನ್ನುವ ಯಾವ ಸತ್ಯವೂ ಇಲ್ಲವೆಂದು ಗೊತ್ತಾಗುವುದು. ಇಂತಹ ಅಹಂಕಾರ ವಿಭಜನೆ ಕೊನೆಗೆ ದೇವರು ಒಬ್ಬನೇ ಸತ್ಯವೆಂಬುದನ್ನು ದೃಢಪಡಿಸುವುದು. ಅಹಂಕಾರ ಕಳಚಿಬಿದ್ದಾಗ ದೇವರು ಅಲ್ಲೇ ವ್ಯಕ್ತವಾಗುವನು.

316) ತಮ್ಮ ಎದೆಯನ್ನು ತೋರುತ್ತಾ ಶ್ರೀರಾಮಕೃಷ್ಣರು ಯಾರಿಗೆ ದೇವರು ಇಲ್ಲಿರುವನೊ ಅವರಿಗೆ ದೇವರು ಹೊರಗೂ ಇರುವನು. ಯಾರು ತಮ್ಮಲ್ಲಿ ದೇವರನ್ನು ಕಾಣರೊ ಅವರಿಗೆ ಹೊರಗೂ ದೇವರಿಲ್ಲ. ಯಾರು ತಮ್ಮ ಆತ್ಮದಲ್ಲಿ ದೇವರನ್ನು ನೋಡುವರೊ ಅವರು ವಿಶ್ವವೆಂಬ ದೇವಾಲಯದಲ್ಲಿಯೂ ನೋಡುವರು ಎಂದರು.

317) ಕಲಿಯುಗದಲ್ಲಿ ಜ್ಞಾನಯೋಗ ಬಹಳ ಕಷ್ಟ. ಮೊದಲನೆಯದಾಗಿ ನಮ್ಮ ಪ್ರಾಣ ಅನ್ನದ ಮೇಲೆ ನಿಂತಿದೆ. ಎರಡನೆಯದಾಗಿ ಈ ಯುಗದಲ್ಲಿ ಮನುಷ್ಯರು ಅಲ್ಪ ಆಯುಷ್ಯದವರು. ಮೂರನೆಯದಾಗಿ ನಮ್ಮಲ್ಲಿರುವ ಜೀವಾತ್ಮ ಬುದ್ದಿ ಭ್ರಮೆಯಿಂದ ಪಾರಾಗುವುದಕ್ಕೆ ಸಾಧ್ಯವೇ ಇಲ್ಲವೆನ್ನಬಹುದು. ಜ್ಞಾನ ಬರಬೇಕಾದರೆ ನಿರ್ಧಾರ ಯಾವುದೆಂದರೆ “ನಾನು ದೇಹವಲ್ಲ. ಸರ್ವವ್ಯಾಪಿಯೂ ನಿರಂಕುಶವೂ, ಅವ್ಯಕ್ತವೂ ಆದ ಬ್ರಹ್ಮ. ನಾನು ದೇಹವಲ್ಲದ ಕಾರಣ ದೇಹದ ಅವಸ್ಥೆಗಳಾದ ಜನನ ಮರಣ, ಹಸಿವು-ತೃಷೆ ರೋಗಾದಿಗಳಿಲ್ಲದವನು” ಎಂಬುದು. ಇಂತಹ ಅವಸ್ಥೆಗಳಿಗೆ ಒಳಗಾಗಿದ್ದರೂ ತಾನೆ ಜ್ಞಾನಿಯೆಂದು ಹೇಳಿಕೊಳ್ಳುವವನು ಕೈಗೆ ಚುಚ್ಚಿಕೊಂಡಿರುವ ಮುಳ್ಳಿನ ವ್ಯಥೆಯಿಂದ ಅರಚುತ್ತಿದ್ದರೂ ತನ್ನ ಕೈಗೆ ಏನೂ ಆಗಿಲ್ಲ, ಅದು ಸರಿಯಾಗಿದೆ ಎನ್ನುವವನಂತೆ. ಇಂತಹ ಮಾತಿನಿಂದ ಪ್ರಯೋಜನವಿಲ್ಲ. ಮೊದಲನೆಯದಾಗಿ ದೇಹಬುದ್ಧಿ ಎಂಬ ಮುಳ್ಳನ್ನು ಜ್ಞಾನಾಗ್ನಿಯಿಂದ ದಹಿಸಿ ಬೂದಿ ಮಾಡಬೇಕು.

318) ಪ್ರಾಪಂಚಿಕರು ನಿಜವಾಗಿ ಆಶಿಸುವುದು ಕೆಲಸಕ್ಕೆ ಬಾರದ ವಿಷಯ ವಸ್ತುಗಳನ್ನು. ಪ್ರಾಪಂಚಿಕತೆಯಿಂದ ಮೈಲಿಗೆಯಾಗದ ಶುದ್ಧ ಹೃದಯರಿಗೆ ಮಾತ್ರ ದೇವರನ್ನು ಸಂಪೂರ್ಣ ಪ್ರೀತಿಸುವ ಚಿತ್ತೈಕಾಗ್ರತೆ ದೊರಕುವುದು.

319) ಜ್ಞಾನಕ್ಕೆ ಅರ್ಹರಾದವರು ಎಲ್ಲೋ ಸ್ವಲ್ಪ ಮಂದಿ ಮಾತ್ರ. ಸಹಸ್ರಾರು ಜನಗಳಲ್ಲಿ ಒಬ್ಬನು ತಿಳಿಯಲು ಯತ್ನಿಸುವನು. ಹಾಗೆ ಬಯಸುವ ಸಾವಿರಾರು ಜನರಲ್ಲಿ ಒಬ್ಬನು ಅದನ್ನು ನೋಡಬಹುದು – ಎಂದು ಗೀತೆ ಸಾರುತ್ತದೆ. ಕಾಮಕಾಂಚನದ ಮೇಲೆ ಆಸಕ್ತಿ ಕಡಿಮೆಯಾದಷ್ಟೂ ಜ್ಞಾನ ಹೆಚ್ಚಾಗುವುದು.

320) ಭಕ್ತನೊಬ್ಬನು ತನ್ನ ಹತ್ತಿರದ ನೆಂಟನೊಬ್ಬನ ಮೇಲೆ ತುಂಬ ಆಸಕ್ತನಾಗಿ, ಮನಸ್ಸನ್ನು ಸ್ಥಿರಗೊಳಿಸಲು ಅಸಾಧ್ಯವಾಗಿರುವುದನ್ನು ಕಂಡು ಶ್ರೀರಾಮಕೃಷ್ಣರು ಅವನಿಗೆ, ಪ್ರೀತಿಸುವ ವಸ್ತುವನ್ನು ದೇವರೆಂದು ತಿಳಿದು ಉಪಚಾರ ಮಾಡು ಎಂದರು. ಈ ವಿಷಯವನ್ನೇ ವಿವರಿಸುತ್ತಿರುವಾಗ ವೈಷ್ಣವ ಚರಣ ಕೂಡ ಇದೇ ಅಭಿಪ್ರಾಯವನ್ನು ಹೀಗೆ ಹೇಳುತ್ತಿದ್ದನು: “ಒಬ್ಬನು ತಾನು ಪ್ರೀತಿಸುವ ವಸ್ತುವನ್ನು ಇಷ್ಟದೇವತೆ ಎಂದು ತಿಳಿದರೆ ಮನಸ್ಸು ಸುಲಭವಾಗಿ ದೇವರ ಕಡೆ ತಿರುಗುವುದು”

321) ಹರಿನಾಮವನ್ನು ಕೇಳಿದ ತಕ್ಷಣವೇ ಆನಂದಬಾಷ್ಪ ಸುರಿಯದೆ ಇರುವತನಕ ಸಾಧನೆ ಆವಶ್ಯಕ. ಭಗವಂತನ ಹೆಸರನ್ನು ಕೇಳಿದ ತಕ್ಷಣವೇ ಯಾರ ಹೃದಯ ಕರಗಿ ಕಣ್ಣಿನಲ್ಲಿ ಆನಂದಬಾಷ್ಪ ಬರುವುದೊ ಅವನಿಗೆ ಯಾವ ಸಾಧನೆಯೂ ಬೇಕಾಗಿಲ್ಲ.

322) ಭಕ್ತಿ ವಿಕಾಸವಾದಂತೆ ಕ್ರಮೇಣ, ವಿವೇಕ ವೈರಾಗ್ಯ ಭೂತದಯೆ, ಸಾಧುಸೇವೆ ಮತ್ತು ಅವರ ಸಂಗ, ಭಜನೆ, ಸತ್ಯ ಮುಂತಾದ ಗುಣಗಳೆಲ್ಲಾ ಆವಿರ್ಭವಿಸುವುವು.

323) ಈಶ್ವರದರ್ಶನದ ಚಿಹ್ನೆಗಳಿವೆ. ಯಾರಲ್ಲಿ ಭಕ್ತಿ ಮೂಡಿದೆಯೋ ಅವರು ಶೀಘ್ರದಲ್ಲಿಯೇ ದೇವರನ್ನು ಪಡೆಯುವರು ಎಂದು ತಿಳಿ.

324) ಸಮುದ್ರದ ಕೆಳಗೆ ಇರುವ ಅಯಸ್ಕಾಂತ ಬಂಡೆ ಅದರ ಮೇಲೆ ತೇಲುತ್ತಿರುವ ಹಡಗನ್ನು ತನ್ನೆಡೆಗೆ ಆಕರ್ಷಿಸಿ, ಅದರ ಕಬ್ಬಿಣದ ಮೊಳೆಗಳನ್ನೆಲ್ಲ ಸೆಳೆದು, ಹಲಗೆಗಳನ್ನು ಪ್ರತ್ಯೇಕ ಮಾಡಿ ಆ ಹಡಗನ್ನು ಮುಳುಗಿಸುವುದು. ಇದರಂತೆಯೇ ಜೀವನು ದೇವರೆಂಬ ಅಯಸ್ಕಾಂತ ಶಿಲೆಯಿಂದ ಆಕರ್ಷಿತನಾದರೆ, ಒಂದು ಕ್ಷಣದಲ್ಲಿ ಅವನ ಸ್ವಾರ್ಥತೆ ಮತ್ತು ವ್ಯಕ್ತಿತ್ವವನ್ನು ನಾಶಮಾಡಿ ಆತ್ಮನನ್ನು ಪರಮಾನಂದ ಸಾಗರದಲ್ಲಿ ಮುಳುಗಿಸುವುದು.

325) ಭಕ್ತನ ಕೈಯಲ್ಲಿ ಪ್ರೇಮವೆನ್ನುವುದು ಅವನನ್ನು ಸಚ್ಚಿದಾನಂದಕ್ಕೆ (ದೇವರಿಗೆ) ಕಟ್ಟಿಕೊಂಡಿರುವ ಹಗ್ಗದಂತೆ. ಭಕ್ತ ದೇವರನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿರುವಂತೆ ತೋರುವುದು. ಅವನು ಕೂಗಿದಾಗಲೆಲ್ಲ ದೇವರು ಬರುವನು.

326) ಶುದ್ಧ ಭಕ್ತಿ ಮತ್ತು ಶುದ್ಧ ಜ್ಞಾನ ಎರಡೂ ಒಂದೆ.

327) ಯಾರನ್ನು ವೇದಾಂತಿಗಳು ಬ್ರಹ್ಮನೆನ್ನುವರೋ, ಅವನನ್ನೇ ಯೋಗಿಗಳು ಆತ್ಮನೆನ್ನುವರು, ಭಕ್ತರು ಭಗವಂತನೆನ್ನುವರು. ಒಬ್ಬನೇ ಬ್ರಾಹ್ಮಣ ಪೂಜೆ ಮಾಡುವಾಗ ಪೂಜಾರಿಯೆಂದೂ ಅಡಿಗೆ ಮಾಡುವಾಗ ಅಡಿಗೆಯವನೆಂದೂ ಕರೆಸಿಕೊಳ್ಳುತ್ತಾನೆ.

328) ಜ್ಞಾನ ಮತ್ತು ಭಕ್ತಿಯನ್ನು ರಾಜಿ ಮಾಡಿಸುವ ಒಂದು ಪೌರಾಣಿಕ ಕಥೆ ಇದೆ. ಒಂದು ಸಾರಿ ಅವತಾರ ಪುರುಷನಾದ ರಾಮಚಂದ್ರ ತನ್ನ ಮಹಾಭಕ್ತನಾದ ಹನುಮಂತನನ್ನು ಕುರಿತು “ಮಗು ನನ್ನನ್ನು ಯಾವ ದೃಷ್ಟಿಯಿಂದ ನೋಡುತ್ತೀಯೆ. ನನ್ನನ್ನು ಹೇಗೆ ಧ್ಯಾನ ಮಾಡುವೆ ಹೇಳು?” ಎಂದು ಕೇಳಿದನು.
ಹನುಮಂತ “ಹೇ ರಾಮ, ಕೆಲವು ವೇಳೆ ನಾನು ನಿನ್ನನ್ನು ಪೂರ್ಣನೆಂದು, ಪೂಜಿಸುತ್ತೇನೆ. ಆಗ ನಾನು ಪೂರ್ಣತೆಯ, ಪವಿತ್ರತೆಯ ಒಂದು ಅಂಶವೆಂದು ಭಾವಿಸುತ್ತೇನೆ. ಕೆಲವು ವೇಳೆ ನಿನ್ನನ್ನು, ನನ್ನ ಸ್ವಾಮಿ ಎಂದೂ, ನಾನು ನಿನ್ನ ಭೃತ್ಯನೆಂದೂ ಭಾವಿಸುತ್ತೇನೆ. ಕೆಲವು ವೇಳೆ ಹೇ ರಾಮಚಂದ್ರ , ಬ್ರಹ್ಮಜ್ಞಾನದಿಂದ ಧನ್ಯನಾದಾಗ ನಾನೇ ನೀನು, ನೀನು ನಾನೆಂದು ಭಾವಿಸುತ್ತೇನೆ” ಎಂದರು.

329) ಅದ್ವೈತ ಜ್ಞಾನವೇ ನಿಮಗೆ ಇಷ್ಟವಾದರೂ ಕೂಡ, ನೀವು ಮೊದಲು ಪೂಜ್ಯ ಪೂಜಕ ಭಾವದಿಂದ ಹೊರಡಬೇಕು. ಅನಂತರ ಜ್ಞಾನ ನಿಮಗೆ ಸುಲಭವಾಗಿ ಪ್ರಾಪ್ತವಾಗುವುದು.

330) ಭಕ್ತ ಸಾಧಾರಣವಾಗಿ ಬ್ರಹ್ಮಜ್ಞಾನವನ್ನು ಅಪೇಕ್ಷಿಸುವುದಿಲ್ಲ. ಜಗನ್ಮಯಿಯೋ ಅಥವಾ ಆಕೆಯ ಅನಂತ ರೂಪಗಳಲ್ಲಿ ಒಂದಾದ ಕೃಷ್ಣನೋ, ಚೈತನ್ಯದೇವನೋ, ಮುಂತಾದ ಪ್ರತ್ಯಕ್ಷ ಪರಮಾತ್ಮನ ಸ್ವರೂಪವನ್ನು ಕಂಡು ಕೃತಾರ್ಥನಾಗುವನು. ಸಮಾಧಿಯಲ್ಲಿ ತನ್ನ ಅಹಂಕಾರ ಸಂಪೂರ್ಣ ನಾಶವಾಗದೆ ಇರಲಿ ಎಂದು ಭಕ್ತನು ಜೋಪಾನವಾಗಿರುವನು. ಪರಮಾತ್ಮನ ಸ್ವರೂಪವನ್ನು ಒಂದು ವ್ಯಕ್ತಿರೂಪದಲ್ಲಿ ಆನಂದಿಸುವುದಕ್ಕೆ ಸಂತೋಷಿಸುವನು. ಅವನಿಗೆ ಸಕ್ಕರೆಯಾಗುವುದಕ್ಕಿಂತ, ಸಕ್ಕರೆಯ ರುಚಿ ನೋಡುವುದಕ್ಕೆ ಆಸೆ.

331) ನನ್ನ ಜಗನ್ಮಯಿ, ತಾನೇ ವೇದಾಂತ ಬ್ರಹ್ಮನೆಂದು ಸಾರುವಳು. ಕೀಳು ಅಹಂಕಾರವನ್ನು ಅಳಿಸಿ ಬ್ರಹ್ಮಜ್ಞಾನವನ್ನು ಕೊಡುವುದು ಅವಳ ಕೈಯಲ್ಲಿದೆ. ಆದಕಾರಣ ಜಗನ್ಮಯಿ ಇಚ್ಛೆಪಟ್ಟರೆ ನೀನು ಮೊದಲು ಬ್ರಹ್ಮನಲ್ಲಿಗೆ ವಿಚಾರದ ಮೂಲಕವಾಗಿ ಬರಬಹುದು. ಭಕ್ತಿ ಯ ಮೂಲಕವೂ ಬರಬಹುದು. ಜ್ಞಾನ ಮತ್ತು ಭಕ್ತಿಯನ್ನು ದಯಪಾಲಿಸಲೆಂದು ಆಕೆಯನ್ನು ಅನುದಿನವೂ ಪ್ರಾರ್ಥಿಸುವುದು ಮತ್ತು ಆಕೆಯಲ್ಲಿ ಶರಣು ಹೋಗುವುದು ಇವೇ ಭಕ್ತಿಯ ಸಾರ. ಮೊದಲು ಇವುಗಳ ಮೂಲಕ ನನ್ನ ಜಗನ್ಮಯಿಯಲ್ಲಿಗೆ ಬನ್ನಿ. ನನ್ನ ಮಾತನ್ನು ನಂಬಿ, ನಿಮ್ಮ ಪ್ರಾರ್ಥನೆ ನಿಜವಾಗಿಯೂ ಹೃತ್ಪೂರ್ವಕವಾಗಿದ್ದರೆ, ನೀವು ಅದಕ್ಕಾಗಿ ಕಾದು ಕುಳಿತರೆ, ಜಗನ್ಮಯಿಯು ಬಯಕೆಯನ್ನು ಈಡೇರಿಸುವಳು. ಅನಂತರ ನೀವು ಅವಳ ನಿರಾಕಾರ ಸ್ವರೂಪವನ್ನು ಪಡೆಯಬೇಕೆಂದಿದ್ದರೆ, ಅವಳನ್ನು ಬೇಡಿ. ನಿಮ್ಮ ಪ್ರಾರ್ಥನೆಯನ್ನು ಅವಳು ಕರುಣಿಸಲು ಇಚ್ಛೆಪಟ್ಟರೆ, ಅವಳು ಸರ್ವಶಕ್ತಳಾದುದರಿಂದ ಸಮಾಧಿಯಲ್ಲಿ ಅವಳ ನಿರಾಕಾರ ಸ್ಥಿತಿಯನ್ನು ಕೂಡ ಅನುಭವಿಸಲು ನಿಮಗೆ ಸಾಧ್ಯವಾಗುವುದು. ಇದನ್ನೆ ಬ್ರಹ್ಮಜ್ಞಾನವೆನ್ನುವುದು.

332) ಎರಡು ತರಹ ಸಾಧಕರನ್ನು ನಾವು ನೋಡುತ್ತೇವೆ. ಒಬ್ಬರನ್ನು ಕೋತಿಯ ಮರಿಗೆ ಹೋಲಿಸಬಹುದು. ಮತ್ತೊಬ್ಬರನ್ನು ಬೆಕ್ಕಿನ ಮರಿಗೆ ಹೋಲಿಸಬಹುದು. ಕೋತಿಯ ಮರಿ ತನ್ನ ತಾಯಿಯನ್ನು ಭದ್ರವಾಗಿ ಹಿಡಿದುಕೊಳ್ಳುವುದು. ಆದರೆ ಬೆಕ್ಕಿ ಮರಿ ಇದ್ದ ಸ್ಥಳದಲ್ಲಿ ಸುಮ್ಮನೆ ಕಿರಿಚಿಕೊಳ್ಳುವುದು. ಕೋತಿಯ ಮರಿ ತನ್ನ ಕೈಗಳನ್ನು ಸಡಿಲಿಸಿದರೆ ಕೆಳಗೆ ಬಿದ್ದು ಗಾಯ ಹೊಂದುವುದು. ಏಕೆಂದರೆ ಇದು ತನ್ನ ಸ್ವಂತ ಶಕ್ತಿಯ ಮೇಲೆ ನಿಂತುಕೊಳ್ಳಬೇಕಾಗಿರುವುದು. ಆದರೆ ಬೆಕ್ಕಿನ ಮರಿಗೆ ಈ ಅಂಜಿಕೆ ಇಲ್ಲ. ತಾಯಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದುಕೊಂಡು ಹೋಗುವುದು. ಇದರಂತೆಯೇ ಕರ್ಮ ಯೋಗಿಯಾಗಲಿ ಅಥವಾ ಜ್ಞಾನಯೋಗಿಯಾಗಲಿ ಮೋಕ್ಷಕ್ಕೆ ತನ್ನ ಸ್ವಂತ ಪ್ರಯತ್ನದ ಮೇಲೆ ನಿಲ್ಲುವನು. ಭಕ್ತನಿಗಾದರೊ ದೇವರು ಸರ್ವವನ್ನೂ ಮಾಡುವನು ಎಂದು ಗೊತ್ತಿದೆ. ಆದಕಾರಣ ಅವನನ್ನು ನಂಬಿ ಅವನಲ್ಲಿ ಶರಣಾಗತನಾಗುವನು. ಮೊದಲನೆಯವರು ಕೋತಿಯ ಮರಿಯಂತೆ, ಎರಡನೆಯವರು ಬೆಕ್ಕಿನ ಮರಿಯಂತೆ.

333) “ನಾನೇ ಅವನು” “ಪರಿಶುದ್ಧಾತ್ಮ” ಎಂದು ಜ್ಞಾನಿ ಹೇಳುತ್ತಾನೆ. ಆದರೆ ಭಕ್ತ “ಇದೆಲ್ಲವೂ ಅವನ ಮಹಿಮೆ” ಎನ್ನುತ್ತಾನೆ.

334) ಎಲ್ಲವೂ ನಾನೆ, ಎಲ್ಲವೂ ನೀನೆ, ನೀನು ಸ್ವಾಮಿ, ನಾನು ಭೃತ್ಯ ಎಂಬ ಈ ಮೂರು ಭಾವಗಳಲ್ಲಿ ಯಾವುದಾದರೊಂದರಲ್ಲಿ ಪಳಗಿದ ಮೇಲೆಯೆ ಒಬ್ಬನು ದೇವರನ್ನು ಪಡೆಯುವುದು.

335) ಒಬ್ಬನು ಶಿವಶಕ್ತಿಯಿಂದ ಹುಟ್ಟಿದರೆ ಅವನು ಜ್ಞಾನಿಯಾಗುತ್ತಾನೆ. ಅವನ ಸ್ವಭಾವ ಯಾವಾಗಲೂ ಬ್ರಹ್ಮನೊಬ್ಬನೇ ಸತ್ಯ, ಜಗತ್ತೆಲ್ಲಾ ಮಿಥ್ಯ ಎಂಬುದರ ಕಡೆಗೆ. ಆದರೆ ಒಬ್ಬನು ವಿಷ್ಣುಶಕ್ತಿಯಿಂದ ಹುಟ್ಟಿದರೆ ಅವನಲ್ಲಿ ಶ್ರದ್ಧೆ ಭಕ್ತಿಗಳೆಂದಿಗೂ ಮಾಯವಾಗುವುದಿಲ್ಲ. ವಿಚಾರ ಮತ್ತು ತರ್ಕದಿಂದ ಇವು ಕೆಲವು ವೇಳೆ ಕಡಿಮೆಯಾದರೂ, ಕಾಲಕ್ರಮೇಣ ಇವು ಯಥೇಚ್ಛವಾಗಿ ಯಾದವ ಸಂತತಿಯನ್ನು ನಾಶಮಾಡಿದ ಮುಸಲದಂತೆ ವೃದ್ಧಿಯಾಗುವುದು.

336) ಜ್ಞಾನ ಪುರುಷನಂತೆಯೂ, ಭಕ್ತಿ ಸ್ತ್ರೀಯಂತೆಯೂ ಇರುವುದು. ದೇವರ ಅರಮನೆಯಲ್ಲಿ, ದಿವಾನಖಾನೆಯವರೆಗೆ ಮಾತ್ರ ಜ್ಞಾನಿಗೆ ಅವಕಾಶ. ಆದರೆ ಭಕ್ತನಾದರೋ ಅವನ ಅಂತಃಪುರಕ್ಕೆ ಪ್ರವೇಶಿಸಬಲ್ಲ.

337) ಒಂದು ದಿನ ಜ್ಞಾನಿ ಮತ್ತು ಭಕ್ತ ಇಬ್ಬರೂ ಒಂದು ಕಾಡಿನ ಮೂಲಕ ಹೋಗುತ್ತಿದ್ದರು. ದಾರಿಯಲ್ಲಿ ಅವರು ಒಂದು ಹುಲಿಯನ್ನು ನೋಡಿದರು. ಜ್ಞಾನಿ “ನಾವು ಓಡಿಹೋಗುವ ಅಗತ್ಯವಿಲ್ಲ. ಸರ್ವಶಕ್ತನಾದ ದೇವರು ನಮ್ಮನ್ನು ನಿಜವಾಗಿ ಕಾಪಾಡುವನು” ಎಂದನು. ಭಕ್ತನು “ಬೇಡಪ್ಪ ಬೇಡ, ಓಡಿ ಹೋಗೋಣ. ನಮ್ಮ ಸ್ವಂತ ಪ್ರಯತ್ನದಿಂದ ಇದನ್ನು ಸಾಧಿಸುವುದಕ್ಕೆ ಸಾಧ್ಯವಾಗಿರುವಾಗ ದೇವರಿಗೇಕೆ ತೊಂದರೆ ಕೊಡಬೇಕು?” ಎಂದನು.

338) ಕರ್ಮಯೋಗವೆಂದರೆ ಕರ್ಮದ ಮೂಲಕ ದೇವರೊಂದಿಗೆ ಸಂಬಂಧವನ್ನು ಕಲ್ಪಿಸಿಕೊಳ್ಳುವುದು. ಅನಾಸಕ್ತಿಯಿಂದ ಅಷ್ಟಾಂಗಯೋಗ ಅಥವಾ ರಾಜಯೋಗವನ್ನು ಅಭ್ಯಾಸ ಮಾಡಿದರೆ ಅದು ಕರ್ಮಯೋಗ. ಇದು ಏಕಾಗ್ರತೆ ಮತ್ತು ಧ್ಯಾನದ ಮೂಲಕ ಐಕ್ಯತೆಗೆ ಒಯ್ಯುತ್ತದೆ. ಗೃಹಸ್ಥ ಕರ್ಮಗಳನ್ನು (ಅಂದರೆ, ತನಗೆ ಅಥವಾ ಪರೋಪಕಾರಕ್ಕೆ ಅನ್ವಯಿಸುವ ರಾಜಕೀಯ ಅಥವಾ ಸಾಮಾಜಿಕ ಕಾರ್ಯಗಳು) ದೇವರ ಪ್ರೀತ್ಯರ್ಥವಾಗಿ ಅನಾಸಕ್ತಿಯಿಂದ ಮಾಡಿದರೆ ಅದು ಕರ್ಮಯೋಗ. ಇತರ ಯೋಗಗಳಂತೆ ಕರ್ಮಯೋಗದ ಗುರಿಯೂ ಕೂಡ ಸಾಕಾರ ನಿರಾಕಾರ ಅಥವಾ ಇವೆರಡು ಬಗೆಯ ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದು.

339) ಈ ಯುಗದಲ್ಲಿ ಭಕ್ತಿಯೇ ಶ್ರೇಷ್ಠ. ಕರ್ಮಕ್ಕೆ ತಾನೆ ನಿಂತುಕೊಳ್ಳಲು ಕಾಲಿಲ್ಲ. ಅದು ಮರಳಿನ ತಳಹದಿಯಂತೆ. ಮೊದಲು ಭಕ್ತಿಯನ್ನು ಅಭ್ಯಾಸ ಮಾಡಿ. ಉಳಿದವು ಅಂದರೆ, ಪಾಠಶಾಲೆ, ಔಷಧಾಲಯ ನೀವು ಇಚ್ಛೆಪಟ್ಟರೆ ಅನಂತರ ಬರುವುವು. ಮೊದಲು ಭಕ್ತಿ ಅನಂತರ ಕರ್ಮ. ದೇವರ ಮೇಲೆ ಭಕ್ತಿ ಅಥವಾ ಪ್ರೇಮವಿಲ್ಲದೆ ಪ್ರಯೋಜನವಿಲ್ಲ, ಅದು ನಿಲ್ಲಲಾರದು.

340) ದೇವರಿಗೆ ನೀನು ಏನನ್ನು ಅರ್ಪಿಸಿದರೂ ಅದು ಸಾವಿರ ಪಾಲು ಹೆಚ್ಚಾಗಿ ನಿನಗೆ ಹಿಂದಿರುಗಿ ಬರುವುದು. ಆದಕಾರಣವೆ ಎಲಾ ಕರ್ಮಗಳ ಕೊನೆಯಲ್ಲಿ ಕರ್ಮಫಲಗಳನ್ನೆಲ್ಲಾ ಕೃಷ್ಣಾರ್ಪಣ ಮಾಡಿ ಸ್ವಲ್ಪ ನೀರನ್ನು ಧಾರೆ ಎರೆಯಬೇಕು.

341) ಯುಧಿಷ್ಠಿರ ಶ್ರೀಕೃಷ್ಣನಿಗೆ ತನ್ನ ಪಾಪಗಳನ್ನೂ ಕೂಡ ಸಮರ್ಪಿಸುವುದರಲ್ಲಿರುವಾಗ, ಭೀಮಸೇನನು ಅವನನ್ನು ಎಚ್ಚರಿಸಿದನು: “ನೀನು ಹಾಗೆ ಮಾಡಕೂಡದು: ಶ್ರೀಕೃಷ್ಣನಿಗೆ ನೀನು ಏನನ್ನು ಅರ್ಪಿಸುವೆಯೋ ಅವುಗಳೆಲ್ಲಾ ಸಾವಿರ ಪಾಲಿನಷ್ಟು ಹೆಚ್ಚಿ ನಿನಗೆ ಹಿಂದಿರುಗಿ ಬರುವುವು.”

342) ನೀವು ಕೆಲಸವನ್ನು ಬಿಡುವುದಕ್ಕೆ ಆಗುವುದಿಲ್ಲ. ಪ್ರಕೃತಿ ನಿಮ್ಮಿಂದ ಕೆಲಸ ಮಾಡಿಸುವುದು. ಆದಕಾರಣ ಕೆಲಸ ಮಾಡೋಣ. ಅನಾಸಕ್ತಿಯಿಂದ ಕೆಲಸ ಮಾಡಿದರೆ ಅದು ದೇವರೆಡೆಗೆ ನಮ್ಮನ್ನು ಒಯ್ಯುವುದು. ಅನಾಸಕ್ತಿಯಿಂದ ಕೆಲಸ ಮಾಡುವುದು ಎಂದರೆ ಈ ಜನ್ಮದಲ್ಲಿ ಅಥವಾ ಮುಂದಿನ ಜನ್ಮದಲ್ಲಿ ಯಾವ ಅಂಜಿಕೆ ಅಥವಾ ಪ್ರತಿಫಲದಾಸೆಗೆ ಕೆಲಸ ಮಾಡದೆ ಇರುವುದು. ಹೀಗೆ ಮಾಡಿದ ಕರ್ಮ ಮೋಕ್ಷಕ್ಕೆ ದಾರಿ. ಆ ಮೋಕ್ಷವೇ ದೇವರು.

343) ತನ್ನ ಶಿಷ್ಯನಿಗೆ ಉಪದೇಶವನ್ನು ಮಾಡುತ್ತಿದ್ದಾಗ ಗುರು ತನ್ನ ಎರಡು ಕೈಬೆರಳುಗಳನ್ನೂ ಎತ್ತಿದನು. ಇದು ಬ್ರಹ್ಮ ಮತ್ತು ಮಾಯೆಯನ್ನು ತೋರುವುದು. ಅನಂತರ ಒಂದು ಬೆರಳನ್ನು ಕೆಳಗೆ ಇಳಿಸಿ, ಮಾಯೆ ಹೋದ ಮೇಲೆ ಈ ಪ್ರಪಂಚ ಯಾವುದೂ ಉಳಿಯುವುದಿಲ್ಲವೆಂದು ಹೇಳಿದನು. ನಿರಾಕಾರ ಬ್ರಹ್ಮನೊಬ್ಬನೇ ಇರುವನು.

344) ಹೇಗೆ ನಾನು ಕೆಲವು ವೇಳೆ ಬಟ್ಟೆ ಬರೆಗಳನ್ನು ಹಾಕಿಕೊಂಡಿರುವೆನೊ ಮತ್ತು ಕೆಲವು ವೇಳೆ ದಿಗಂಬರನಾಗಿರುವೆನೊ ಹಾಗೆಯೆ ಬ್ರಹ್ಮ ಕೆಲವು ವೇಳೆ ಗುಣಸಹಿತನಾಗಿರುವನು, ಕೆಲವು ವೇಳೆ ಗುಣರಹಿತನಾಗಿರುವನು. ಶಕ್ತಿಯಿಂದ ಒಡಗೂಡಿದಾಗ ಅವನನ್ನು ಈಶ್ವರ ಅಥವಾ ಸಾಕಾರನೆಂದು ಕರೆಯುತ್ತಾರೆ.

345) ನನ್ನ ಜಗನ್ಮಯಿ ಏಕವೂ ಮತ್ತು ಅನೇಕವೂ ಅಗಿರುವಳು ಮತ್ತು ಏಕ ಅನೇಕಗಳನ್ನು ಮೀರಿಯೂ ಇರುವಳು ಎಂಬುದನ್ನು ತಿಳಿಯಿರಿ.

346) ನನ್ನ ಜಗನ್ಮಯಿ ಅನೇಕದಂತೆ ತೋರುತ್ತಿರುವುದರ ಏಕ. ಅನಂತ ಶಕ್ತಿಯುತಳಾಗಿರುವುದರಿಂದ ಅವಳೇ, ಹಲವು ವಿಧವಾಗಿ ತೋರುವ, ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳಾಗಿ ಜೀವ ಮತ್ತು ಜಗತ್ತೆಂಬ ಭೇದವನ್ನು ಧರಿಸುವಳು. ನನ್ನ ಜಗನ್ಮಯಿ ವೇದಾಂತಿಗಳ ಬ್ರಹ್ಮವಲ್ಲದೆ ಬೇರೆಯಲ್ಲ. ಅವಳೇ ನಿರಾಕಾರ ಬ್ರಹ್ಮನ ಸಾಕಾರ ಸ್ವರೂಪ.

347) ಹೇಗೆ ಹಣ್ಣಿನ ಚಿಪ್ಪು, ಬೀಜ, ತಿರುಳು ಎಲ್ಲವೂ ಆ ಮರದ ಮೂಲ ಬೀಜದಿಂದ ಬಂದಿದೆಯೊ, ಹಾಗೆಯೆ ಒಬ್ಬ ದೇವರಿಂದ ಚರಚರಾತ್ಮಕವಾದುದೆಲ್ಲ, ಆಧ್ಯಾತ್ಮಿಕ ಮತ್ತು ಪಾಂಚಭೌತಿಕವಾದುದೆಲ್ಲ ಬಂದಿದೆ.

348) ಸನ್ಯಾಸಿಯೊಬ್ಬನು ಪುರಿಯ ಜಗನ್ನಾಥ ದೇವಾಲಯಕ್ಕೆ ಹೋದನು. ದೇವರು ಸಾಕಾರನೊ ನಿರಾಕಾರನೊ ಎನ್ನುವುದರಲ್ಲಿ ಅವನಿಗೆ ಸಂದೇಹವಿತ್ತು . ಆ ಪವಿತ್ರ ವಿಗ್ರಹವನ್ನು ನೋಡಿದಾಗ ಅದನ್ನು ಪರೀಕ್ಷಿಸಿ ತನ್ನ ಸಂದೇಹವನ್ನು ದೂರಮಾಡಿಕೊಳ್ಳಲು ಆಶಿಸಿದನು. ಅವನು ತನ್ನ ದಂಡವನ್ನು ಎಡಗಡೆಯಿಂದ ಬಲಗಡೆಗೆ, ಅದು ವಿಗ್ರಹವನ್ನು ಮುಟ್ಟುವುದೆ ಇಲ್ಲವೆ ಎಂದು ನೋಡಲು ಚಲಿಸಿದನು. ಸ್ವಲ್ಪ ಹೊತ್ತು ಅವನಿಗೆ ಏನೂ ಕಾಣಿಸಲಿಲ್ಲ ಅಥವಾ ದಂಡಕ್ಕೆ ಏನೂ ತಾಕಲಿಲ್ಲ. ಆದುದರಿಂದ ದೇವರು ನಿರಾಕಾರ ಎಂದು ನಿರ್ಧರಿಸಿದನು. ಬಲಗಡೆಯಿಂದ ಎಡಗಡೆಗೆ ದಂಡವನ್ನು ಚಲಿಸುವಾಗ ಅದು ವಿಗ್ರಹವನ್ನು ತಾಕಿತು. ಆದಕಾರಣ ದೇವರು ಸಾಕಾರನೂ ಹೌದು ಮತ್ತು ನಿರಾಕಾರನು ಹೌದು ಎಂದು ನಿರ್ಧರಿಸಿದನು.

349) ಸಾಕಾರನಾದ ದೇವರು ದೃಶ್ಯಕ್ಕೆ ಗೋಚರನು. ನಮ್ಮ ಪ್ರೀತಿ ಪಾತ್ರನಾದ ಸ್ನೇಹಿತನೊಂದಿಗೆ ಪ್ರತ್ಯಕ್ಷವಾಗಿ ಮಾತನಾಡುವಂತೆ ಮಾತನಾಡಬಹುದು, ಮುಟ್ಟಬಹುದು.

350) ಭಕ್ತಿಯ ಒಂದು ಹಂತದಲ್ಲಿ ಭಕ್ತನಿಗೆ ಸಾಕಾರ ದೇವರಲ್ಲಿ ತೃಪ್ತಿ, ಮತ್ತೊಂದು ಹಂತದಲ್ಲಿ ನಿರಾಕಾರ ದೇವರಲ್ಲಿ ತೃಪ್ತಿ.

351) ಸಚ್ಚಿದಾನಂದ ಹೀಗೇ ಎಂದು ಯಾರೂ ಹೇಳಲಾರರು. ಆದಕಾರಣವೆ ದೇವರು ಮೊದಲು ಅರ್ಧನಾರೀಶ್ವರ ರೂಪವನ್ನು ಧರಿಸಿದನು. ಅವನು ಏತಕ್ಕೆ ಹೀಗಾದನು ನಿನಗೆ ಗೊತ್ತೆ? ಪ್ರಕೃತಿ ಮತ್ತು ಪುರುಷ ಎರಡೂ ತಾನೆ ಎನ್ನುವುದನ್ನು ತೋರಿಸುವುದಕ್ಕೆ. ಅದಕ್ಕಿಂತ ಕೆಳಗೆ ಸಚ್ಚಿದಾನಂದ ಹಲವು ಪುರುಷ ಮತ್ತು ಪ್ರಕೃತಿಗಳಾಗಿವೆ.

352) ದೂರಕ್ಕೆ ಸಾಗರದ ನೀರು ನೀಲಿಯಂತೆ ಕಾಣುತ್ತದೆ. ಆದರೆ ಕೈಯಲ್ಲಿ ಸ್ವಲ್ಪ ತೆಗೆದುಕೊಂಡರೆ ಅದು ಶುದ್ಧವಾಗಿ ತಿಳಿಯಾಗಿರುವುದು. ಇದರಂತೆಯೆ ಭಗವಾನ್ ಶ್ರೀಕೃಷ್ಣನೂ ಕೂಡ ದೂರಕ್ಕೆ ಶ್ಯಾಮಲವರ್ಣನಂತೆ ಇರುವನು. ಆದರೆ ಅವನು ನಿಜವಾಗಿ ಹಾಗಿಲ್ಲ. ಅವನು ಅವ್ಯಕ್ತ ನಿರ್ಮಲ ಮತ್ತು ನಿರ್ಗುಣ.

353) ದೇವರು ಎಲ್ಲದರಲ್ಲಿಯೂ ಇರುವನು. ಆದರೆ ಎಲ್ಲರೂ ದೇವರಲ್ಲಿ ಇಲ್ಲ. ಅದಕ್ಕೇ ಅವರು ಕಷ್ಟವನ್ನು ಅನುಭವಿಸುವುದು.

354) ಎಲ್ಲ ವಸ್ತುಗಳೂ ನಾರಾಯಣ. ಮನುಷ್ಯನೂ ನಾರಾಯಣ, ಮೃಗವೂ ನಾರಾಯಣ. ಋಷಿ ನಾರಾಯಣ, ಕಪಟಿಯೂ ನಾರಾಯಣ. ಇರುವುದೆಲ್ಲ ನಾರಾಯಣನೆ. ನಾರಾಯಣ ಹಲವು ರೂಪಿನಲ್ಲಿ ಆಟವಾಡುವನು. ಇರುವುದೆಲ್ಲವೂ ಅವನ ಅನಂತ ರೂಪಗಳು, ಅವನ ಮಹಿಮೆಯ ಅನಂತ ದೃಶ್ಯಗಳು.

355) “ಕಚ್ಚುವ ಹಾವು ನಾನೇ, ಗುಣ ಮಾಡುವ ಮಂತ್ರವಾದಿಯೂ ನಾನೇ. ಶಿಕ್ಷೆಯನ್ನು ವಿಧಿಸುವ ನ್ಯಾಯಾಧಿಪತಿಯೂ ನಾನೇ, ಶಿಕ್ಷೆಯನ್ನು ಕೊಡುವ ದೂತನೂ ನಾನೇ” ಎಂದು ದೇವರು ಹೇಳುವನು.

356) ದೇವರು ಕಳ್ಳನಿಗೆ ಹೋಗಿ ಕದಿಯುವಂತೆ ಪ್ರೇರಣೆ ಕೊಡುವನು ಮತ್ತು ಅದೇ ಕಾಲದಲ್ಲಿ ಮನೆಯವನಿಗೆ ಕಳ್ಳ ಬಂದಿರುವನು ಎಂದು ಎಚ್ಚರಿಸುವನು. ಅವನೇ ಎಲ್ಲವನ್ನೂ ಮಾಡುವನು.

357) ನನ್ನ ಹುಡುಗರೇ! ನಿಜವಾಗಿ ದೇವರನ್ನು ನೋಡಬಹುದು. ನಾವು ಜೊತೆಯಲ್ಲಿ ಕುಳಿತುಕೊಂಡು ಮಾತನಾಡುತ್ತಿರುವಂತೆಯೆ ದೇವರನ್ನು ನೋಡಬಹುದು ಮತ್ತು ಆತನೊಂದಿಗೆ ಮಾತನಾಡಬಹುದು. ನಿಜವಾಗಿಯೂ ಹೃತ್ಪೂರ್ವಕವಾಗಿಯೂ ನಾನು ಹೇಳುತ್ತೇನೆ.

358) ದೇವರನ್ನು ನೋಡಿದವರು ಸಾಧಾರಣ. ಚರ್ಮದ ಕಣ್ಣುಗಳ ಮೂಲಕವಾಗಿ ನೋಡುತ್ತಾರೆಯೆ ಎಂದು ಪ್ರಶ್ನೆ ಮಾಡಿದಾಗ, ಶ್ರೀರಾಮಕೃಷ್ಣರು “ಇಲ್ಲ, ಅವನನ್ನು ಚರ್ಮದ ಕಣ್ಣುಗಳಿಂದ ನೋಡಲಾಗುವುದಿಲ್ಲ. ಸಾಧನೆಯ ಕಾಲದಲ್ಲಿ ಪ್ರೇಮದ ಕಣ್ಣು ಕಿವಿಗಳಿಂದ ಕೂಡಿದ ಪ್ರೇಮತನುವೊಂದು ನಿನ್ನಲ್ಲಿ ಉತ್ಪತ್ತಿಯಾಗುವುದು. ಅವುಗಳ ಮೂಲಕ ನೀನು ದೇವರನ್ನು ನೋಡುವೆ ಮತ್ತು ಕೇಳುವೆ” ಎಂದರು.

359) ಯಾರು ಭಗವಂತನನ್ನು ನೋಡಿರುವರೊ ಅವರು ಸಂಪೂರ್ಣ ಮಾರ್ಪಟ್ಟ ಜೀವಿಗಳು.

360) ಕೆಲವರು ಆಗಲೇ ಜಾಗ್ರತರಾಗಿರುವರು. ಇವರಿಗೆ ಕೆಲವು ಚಿಹ್ನೆಗಳಿವೆ. ದೇವರಿಗೆ ಸಂಬಂಧಪಟ್ಟಿದುದಲ್ಲದೆ ಮತ್ತಾವುದನ್ನೂ ಅವರು ಕೇಳಲಿಚ್ಛಿಸುವುದಿಲ್ಲ. ಸಪ್ತ ಸಮುದ್ರಗಳಿದ್ದರೂ, ಗಂಗೆ ಯಮುನಾ ನದಿಗಳು ಉಕ್ಕಿ ಹರಿಯುತ್ತಿದ್ದರೂ, ಮಳೆ ಹನಿಗೆ ಮಾತ್ರ ನಿರೀಕ್ಷಿಸುವ ಚಾತಕಪಕ್ಷಿಯಂತೆ ಇವರು. ಬಾಯಾರಿಕೆಯಿಂದ ಇದರ ಗಂಟಲು ಒಣಗಿ ಹೋಗಿದ್ದರೂ ಮಳೆ ಹನಿಯಲ್ಲದೆ ಮತ್ತಾವುದನ್ನು ಇದು ಕುಡಿಯುವುದಿಲ್ಲ.

361) ಮಾನವನ ಹೃದಯಕ್ಕೆ ದೇವರ ಆಗಮನದ ಚಿಹ್ನೆಗಳೇನು? ಅರುಣೋದಯ ಸೂರ್ಯನ ಬರವನ್ನು ಸಾರುವಂತೆ, ನಿಸ್ವಾರ್ಥತೆ, ಪರಿಶುದ್ಧತೆ ಮತ್ತು ಧಾರ್ಮಿಕತೆ ಇವು ದೇವರ ಬರವನ್ನು ಸಾರುವುವು.

362) ರಾಜ ತನ್ನ ಭೃತ್ಯನ ಮನೆಗೆ ಹೋಗಿ ಆದರಾತಿಥ್ಯವನ್ನು ಸ್ವೀಕರಿಸುವುದಕ್ಕೆ ಮುಂಚೆ, ಭೃತ್ಯನು ತನ್ನನ್ನು ಚೆನ್ನಾಗಿ ಬರಮಾಡಿಕೊಂಡು ಗೌರವವನ್ನು ತೋರಲಿ ಎಂದು ತನ್ನ ಭಂಡಾರದಿಂದ ಅವನೇ ಆಸನ, ಆಹಾರ ಸಾಮಗ್ರಿ ಮುಂತಾದುವನ್ನು ಕಳುಹಿಸುವನು. ಇದರಂತೆಯೆ ದೇವರು ಬರುವುದಕ್ಕೆ ಮುಂಚೆ ಹಂಬಲಿಸುತ್ತಿರುವ ಭಕ್ತನ ಹೃದಯಕ್ಕೆ, ಪ್ರೇಮ, ಭಕ್ತಿ ಮತ್ತು ಶ್ರದ್ಧೆ ಮುಂತಾದುವನ್ನು ಕಳುಹಿಸುವನು.

363) ಪರಮಾನಂದ ದೊರೆತಾಗ ಒಬ್ಬನು ಅದರಿಂದ ಆಮಲೇರುವನು. ಮದ್ಯವನ್ನು ಕುಡಿಯದೆ ಇದ್ದರೂ ಅವನೊಬ್ಬ ತುಂಬ ಕುಡಿದವನಂತೆ ತೋರುತ್ತಾನೆ. ನಾನು ನನ್ನ ಜಗನ್ಮಯಿಯ ಪಾದಕಮಲಗಳನ್ನು ನೋಡಿದಾಗ ನನಗೆ ಐದು ಬುಡ್ಡಿ ಸಾರಾಯಿ ಕುಡಿದಷ್ಟು ಅಮಲೇರುವುದು. ಈ ಸ್ಥಿತಿಯಲ್ಲಿ ಒಬ್ಬನು ಸಿಕ್ಕಿದ ಆಹಾರವನ್ನು ತೆಗೆದುಕೊಳ್ಳಲು ಆಗುವುದಿಲ್ಲ.

364) ಮನುಷ್ಯನಿಗೆ ನಿಜವಾದ ಜ್ಞಾನಪ್ರಾಪ್ತಿಯಾದರೆ ಅವನು ದೇವರನ್ನು ಎಲ್ಲೋ ದೂರದಲ್ಲಿ ಇರುವವನೆಂದು ಭಾವಿಸುವುದಿಲ್ಲ. ಅವನು ಅಂದಿನಿಂದ ದೂರದಲ್ಲಿರುವವನೆಂದು ಕಾಣಿಸುವುದಿಲ್ಲ. ಅವನು ಅಂತರಂಗದಲ್ಲಿರುವವನು ಎಂದು ಭಾಸವಾಗುವುದು. ಅವನು ಎಲ್ಲರ ಅಂತರಂಗದಲ್ಲೂ ಇರುವನು. ಅವನನ್ನು ಹುಡುಕುವವರೆಲ್ಲ ಅಲ್ಲಿ ಕಾಣುತ್ತಾರೆ.

365) ನೀರಿನಲ್ಲಿರುವ ಒಂದು ಹೂಜಿಯ ಒಳಗೆ ಮತ್ತು ಹೊರಗೆಲ್ಲಾ ನೀರಿರುವುದು. ಇದರಂತೆಯೆ ದೇವರಲ್ಲಿ ತನ್ಮಯವಾದ ಜೀವಕ್ಕೆ ಸರ್ವಾಂತರ್ಯಾಮಿಯಾದ ಭಗವಂತ ಒಳಗೆ ಮತ್ತು ಹೊರಗೆಲ್ಲ ಕಾಣುವನು.

366) ಭಗವಂತನ ಸಾಕ್ಷಾತ್ಕಾರವಾದ ಮೇಲೆ ಒಬ್ಬನು ಅವನನ್ನು ಎಲ್ಲಾ ಕಡೆಯಲ್ಲೂ ಮತ್ತು ಎಲ್ಲಾ ವಸ್ತುಗಳಲ್ಲೂ ಕಾಣುವನು. ಅದರ ಮಾನವನಲ್ಲಿ ಅವನ ಆವಿರ್ಭಾವ ಹೆಚ್ಚು. ಅದರಲ್ಲಿಯೂ ಕಾಮಿನಿಕಾಂಚನಗಳ ಮೇಲೆ ಸ್ವಲ್ಪವೂ ಇಚ್ಛೆಯಿಲ್ಲದ ಸತ್ವಗುಣದಿಂದ ಕೂಡಿದ ಭಕ್ತರಲ್ಲಿ ಅವನು ಅತ್ಯುತ್ತಮವಾಗಿ ಪ್ರಕಾಶಿಸುವನು.

367) ಮುಕ್ತಿ ಜೀವಿಗಳಲ್ಲಿ ಮಾಯೆಯಿರುವುದೆ? ಶುದ್ಧ ಚಿನ್ನದಿಂದ ಒಡವೆಗಳನ್ನು ಮಾಡಲಾಗುವುದಿಲ್ಲ. ಅದರೊಂದಿಗೇನಾದರೂ ಬೆರಕೆ ಲೋಹವನ್ನು ಸೇರಿಸಬೇಕು. ಮನುಷ್ಯನಿಗೆ ದೇಹವಿರುವವರೆಗೆ ಅದರ ವ್ಯಾಪಾರಕ್ಕಾಗಿಯಾದರೂ ಸ್ವಲ್ಪ ಮಾಯೆಯಿರಬೇಕು. ಮಾಯೆಯಿಂದ ಸಂಪೂರ್ಣ ಪಾರಾದವನು ಇಪ್ಪತ್ತೊಂದು ದಿನಕ್ಕಿಂತ ಹೆಚ್ಚು ಬದುಕಿರುವುದಿಲ್ಲ.

368) ಕತ್ತನ್ನು ಕುರಿಯ ದೇಹದಿಂದ ಬೇರ್ಪಡಿಸಿದ ಮೇಲೆ ಮುಂಡ ಸ್ವಲ್ಪ ಕಾಲ ಬದುಕಿರುವಂತೆ ಇನ್ನೂ ಒದ್ದಾಡುವುದು. ಇದರಂತೆಯೆ ಸಿದ್ಧನಲ್ಲಿ ಅಹಂಕಾರ ಸಂಪೂರ್ಣ ನಾಶವಾಗಿದ್ದರೂ ಜಗದ ವ್ಯಾಪಾರವನ್ನು ನಡೆಸುವುದಕ್ಕಾಗಿ ಸ್ವಲ್ಪ ಅಹಂಕಾರ ಉಳಿದಿರುವುದು. ಆದರೆ ಅದು ಅವನನ್ನು ಮತ್ತೊಮ್ಮೆ ಪ್ರಪಂಚಕ್ಕೆ ಬಂಧಿಸಲಾರದು.

369) ದೇಹ ಹುಟ್ಟಿದೆ. ಅದು ಸಾಯಲೇಬೇಕು. ಆದರೆ ಆತ್ಮನಿಗೆ ಸಾವಿಲ್ಲ. ಅಡಕೆ ಮಾಗಿದ ಮೇಲೆ ಅದು ಮೇಲಿನ ಮುಸುಕಿನಿಂದ ಬೇರೆಯಾಗುವುದು. ಆದರೆ ಇನ್ನೂ ಹಸಿಯಾಗಿರುವಾಗ ಆದನು ಬೇರ್ಪಡಿಸುವುದು ಕಷ್ಟ. ದೇವರನ್ನು ಹೊಂದಿದ ಮೇಲೆ ದೇಹ ಆತ್ಮಕ್ಕಿಂತ ಬೇರೆ ಎಂಬ ಭಾವ ಹುಟ್ಟುವುದು.

370) ಯಹೂದ್ಯರು ಏಸುಕ್ರಿಸ್ತನನ್ನು ಶಿಲುಬೆಗೆ ಮೊಳೆಯಿಂದ ಹೊಡೆದಾಗ ನೋವಿನಿಂದ ಪರಿತಪಿಸುತ್ತಿದ್ದರೂ ಹಾಗೆ ಮಾಡಿದವರನ್ನು ಕ್ಷಮಿಸೆಂದು ಹೇಗೆ ಬೇಡಿದ? ಎಳೆಯ ತೆಂಗಿನಕಾಯನ್ನು ಚುಚ್ಚಿದರೆ ಅದು ಚಿಪ್ಪನ್ನು ಛೇದಿಸಿಕೊಂಡು ಹೋಗುವುದು. ಆದರೆ ಕೊಬ್ಬರಿ, ಚಿಪ್ಪಿನಿಂದ ಬೇರೆಯಾಗಿರುತ್ತದೆ. ಚಿಪ್ಪನ್ನು ಒಡೆದಾಗ ಕೊಬ್ಬರಿಗೆ ಏನೂ ತಾಕುವುದಿಲ್ಲ. ಏಸುಕ್ರಿಸ್ತನೂ ಹೀಗೆ ಕೊಬ್ಬರಿಯಂತೆ ಇದ್ದನು. ಅವನ ಅಂತರಾತ್ಮವು ದೇಹದ ಹೊದಿಕೆಯಿಂದ ಬೇರೆಯಾಗಿತ್ತು. ಆದಕಾರಣವೆ ದೇಹದ ಯಾತನೆ ಅವನನ್ನು ಪೀಡಿಸಲಿಲ್ಲ. ಅವರು ಮೊಳೆಯನ್ನು ದೇಹಕ್ಕೆ ಹೊಡೆದರೂ ಅವನ ವೈರಿಗಳ ಕ್ಷೇಮಾರ್ಥವಾಗಿ ಸಮಾಧಾನದಿಂದ ಪ್ರಾರ್ಥಿಸಲು ಸಾಧ್ಯವಾಯಿತು.

371) ಜೀವನ್ಮುಕ್ತನು ಜಗದಲ್ಲಿ ಹೇಗೆ ಬಾಳುತ್ತಾನೆ? ಅವನು ನೀರಿನಲ್ಲಿ ಮುಳುಗುವ ಹಕ್ಕಿಯಂತೆ ಇರುತ್ತಾನೆ. ಅದು ನೀರಿನಲ್ಲಿ ಮುಳುಗುತ್ತದೆ. ಆದರೆ ನೀರು ಅದರ ಗರಿಯನ್ನು ನೆನೆಸುವುದಿಲ್ಲ. ಅದರ ದೇಹಕ್ಕೆ ಅಂಟಿಕೊಂಡಿರುವ ಕೆಲವು ತೊಟ್ಟು ನೀರು ಅದು ಒಂದು ಸಲ ರೆಕ್ಕೆಯನ್ನು ಕೊಡವಿದರೆ ಸುಲಭವಾಗಿ ಜಾರಿಹೋಗುವುದು.

372) ಹಾವು ಘೋರ ವಿಷಜಂತು. ಅದನ್ನು ಯಾರಾದರೂ ಹಿಡಿಯಲು ಬಂದರೆ ಅದು ಕಚ್ಚುತ್ತದೆ. ಆದರೆ ಹಾವುಗಳನ್ನು ಮುಗ್ಧಗೊಳಿಸುವ ಗಾರುಡಿಗ ವಿದ್ಯೆಯನ್ನು ಬಲ್ಲವನಾದರೋ ಹಾವುಗಳನ್ನು ಕೊರಳಿಗೆ ಮತ್ತು ಹೆಗಲಿಗೆ ಒಡವೆಯಂತೆ ಸುತ್ತಿಕೊಂಡು ಹೋಗುವನು. ಇದರಂತೆಯೆ ಆಧ್ಯಾತ್ಮಿಕ ಜ್ಞಾನವನ್ನು ಪಡೆದವರು ಕಾಮ ಕಾಂಚನಗಳ ವಿಷಕ್ಕೆ ಎಂದಿಗೂ ಒಳಗಾಗುವುದಿಲ್ಲ.

373) ಕಪ್ಪೆ ಮರಿಯ ಬಾಲ ಹೋದಮೇಲೆ ಅದು ನೆಲದ ಮೇಲೆ ಮತ್ತು ನೀರಿನಲ್ಲಿ ಎರಡು ಕಡೆಯೂ ವಾಸಿಸಬಲ್ಲದು. ಮೋಹಗೊಳಿಸುವ ಅಜ್ಞಾನವೆಂಬ ಬಾಲ ಬಿದ್ದು ಹೋದಮೇಲೆ ಜೀವಿ ಸ್ವತಂತ್ರನಾಗುತ್ತಾನೆ. ಆಗ ಅವನು ದೇವರಲ್ಲಿ ಮತ್ತು ಪ್ರಪಂಚದಲ್ಲಿ ಎರಡೂ ಕಡೆಯೂ ಇರಬಲ್ಲನು.

374) ಗಾಳಿಯು ಚಂದನ ಮರದ ಸುವಾಸನೆಯನ್ನೂ, ಕೊಳೆತು ನಾರುವ ಹೆಣದ ದುರ್ವಾಸನೆಯನ್ನೂ, ಒಂದೇ ಸಮನಾಗಿ ಹೊತ್ತುಕೊಂಡು ಹೋಗುವುದು. ಆದರೆ ಇದು ಯಾವುದರೊಂದಿಗೂ ಬೆರೆಯುವುದಿಲ್ಲ. ಇದರಂತೆಯೆ ಜೀವನ್ಮುಕ್ತನು ಜಗದಲ್ಲಿ ಬಾಳುತ್ತಾನೆ; ಆದರೆ ಅದರೊಂದಿಗೆ ಬೆರೆಯುವುದಿಲ್ಲ.

375) ಕಬ್ಬಿಣ ಸ್ಪರ್ಶ ಶಿಲೆಗೆ ತಾಕಿ ಚಿನ್ನವಾದ ಮೇಲೆ ಅದನ್ನು, ಭೂಮಿಯ ಒಳಗೆ ಇಡಬಹುದು ಅಥವಾ ಕಸದ ರಾಶಿಗೆ ಬಿಸಾಡಬಹುದು. ಅದು ಯಾವಾಗಲೂ ಚಿನ್ನವಾಗಿಯೆ ಉಳಿಯುವುದು. ತನ್ನ ಹಿಂದಿನ ಸ್ವಭಾವಕ್ಕೆ ತಿರುಗುವುದಿಲ್ಲ. ಇದರಂತೆಯೆ ಭಗವಂತನು ಪಾದಪದ್ಮಗಳನ್ನು ಒಂದು ಸಾರಿಯಾದರೂ ಮುಟ್ಟಿದವನ ಸ್ಥಿತಿ. ಅವನು ಪ್ರಪಂಚದ ದಾಂಧಲೆಯಲ್ಲಿ ಇರಲಿ ಅಥವಾ ನಿರ್ಜನಾರಣ್ಯದಲ್ಲಿ ಇರಲಿ ಅವನನ್ನು ಯಾವುದೂ ಪೀಡಿಸುವುದಿಲ್ಲ.

376) ನೀರಿಗೆ ಹಾಕಿದ ಹಾಲು ತಕ್ಷಣವೆ ಅದರೊಂದಿಗೆ ಮಿಶ್ರವಾಗುವುದು. ಆದರೆ ಬೆಣ್ಣೆ ಮಾಡಿ ನೀರಿಗೆ ಹಾಕಿದರೆ ಅದರೊಂದಿಗೆ ಮಿಶ್ರವಾಗದೆ ನೀರಿನ ಮೇಲೆ ತೇಲುತ್ತದೆ. ಭಗವಂತನ ಸ್ಥಿತಿಯನ್ನು ಪಡೆದ ಮೇಲೆ ಒಬ್ಬನು ಯಾವಾಗಲೂ ಬದ್ಧರಾದ ಪಾಪಿಗಳೊಂದಿಗೆ ಇರಬಹುದು. ಆದರೂ ಇಂತಹವರ ಸಂಗದಿಂದ ಅವನು ಕೆಡುವುದಿಲ್ಲ.

377) ಯಾರು ಬ್ರಹ್ಮನಲ್ಲಿ ಜೀವ ಮತ್ತು ಪ್ರಕೃತಿಯನ್ನು ಕಾಣುವರೊ ಅವರನ್ನು ಒಳ್ಳೆಯದು ಮತ್ತು ಕೆಟ್ಟುದು ಬಂಧಿಸಲಾರದು. ಸಿದ್ಧನು ಪಾಪಪುಣ್ಯಗಳನ್ನು ಮೀರುವನು. ಆದರೆ ಪಾಪವನ್ನೆಂದಿಗೂ ಮಾಡುವುದಿಲ್ಲ.

378) ಮನುಷ್ಯನು ನೆಲದ ಮೇಲೆ ನಿಂತಿರುವಾಗ ಕ್ಷುದ್ರವಾಗಿರುವ ಹುಲ್ಲನ್ನೂ ಮತ್ತು ಬಹಳ ಎತ್ತರವಾಗಿರುವ ದೇವದಾರುವನ್ನೂ ನೋಡಿ “ಓ, ಮರ ಎಷ್ಟು ದೊಡ್ಡದು, ಹುಲ್ಲು, ಎಷ್ಟು ಚಿಕ್ಕದು !” ಎನ್ನುತ್ತಾನೆ. ಆದರೆ ಬೆಟ್ಟವನ್ನು ಹತ್ತಿ, ಅದರ ನೆತ್ತಿಯಿಂದ ಕೆಳಗೆ ನೋಡಿದಾಗ ಮರ ಮತ್ತು ಹುಲ್ಲು ಎರಡೂ ಪ್ರತ್ಯೇಕಗೊಳಿಸಲಾರದ ಸಸ್ಯರಾಶಿಯಲ್ಲಿ ಮಿಶ್ರವಾಗಿ ಹೋಗುವುದು. ಇದರಂತೆಯೇ ಪ್ರಾಪಂಚಿಕ ದೃಷ್ಟಿಯಲ್ಲಿ ಜನರ ಸ್ಥಾನಮಾನಗಳ ಅಂತರವಿದೆ. ಒಬ್ಬನು ರಾಜ ಮತ್ತೊಬ್ಬನು ಮೋಚಿ; ಒಬ್ಬ ತಂದೆ ಮತ್ತೊಬ್ಬ ಮಗ ಇತ್ಯಾದಿ. ಆದರೆ ದಿವ್ಯದೃಷ್ಟಿ ತೆರೆದಾಗ ಎಲ್ಲರೂ ಸಮನಾಗಿ ಕಾಣುವರು. ಆಗ ಒಳ್ಳೆಯವರು ಕೆಟ್ಟವರು, ಮೇಲು ಕೀಳೆಂಬ ತಾರತಮ್ಯ ಬರುವುದಿಲ್ಲ.

379) ಪರಮಹಂಸರ ಸ್ಥಿತಿ ಮಗುವಿನಂತೆ. ಅವರು ಗಂಡಸಿಗೂ, ಹೆಂಗಸಿಗೂ ಭೇದವನ್ನು ತಿಳಿಯರು. ಆದರೂ ಜಗತ್ತಿಗೆ ಒಂದು ಮೇಲ್ಪಂಕ್ತಿಯನ್ನು ಹಾಕುವುದಕ್ಕಾಗಿ ಸ್ತ್ರೀಯರ ವಿಷಯದಲ್ಲಿ ಅವರು ಬಹಳ ಜಾಗರೂಕನಾಗಿರಬೇಕು.

380) ಜ್ಞಾನಿಯಲ್ಲಿರುವ ಕೆಲವು ಚುಕ್ಕೆಗಳಿಂದ ಅಪಾಯವಿಲ್ಲ. ಚಂದ್ರನಲ್ಲೂ ಕಳಂಕವಿದೆ. ಆದರೆ ಇದರಿಂದ ಅದರ ಕಾಂತಿಗೆ ಭಂಗವಿಲ್ಲ.

381) ಒಂದು ಸಲ ಸನ್ಯಾಸಿನಿಯೊಬ್ಬಳು ಜನಕನ ಆಸ್ಥಾನಕ್ಕೆ ಬಂದಳು. ರಾಜನು ಅವಳ ಮುಖವನ್ನು ನೋಡದೆ ನಮಸ್ಕಾರ ಮಾಡಿದನು. ಇದನ್ನು ನೋಡಿ ಸನ್ಯಾಸಿನಿ “ಹೇ ಜನಕ ! ಇದೇನು ವಿಚಿತ್ರ, ಇನ್ನೂ ಹೆಂಗಸರನ್ನು ಕಂಡರೆ ಇಷ್ಟು ಅಂಜಿಕೆ! “ಎಂದಳು. ಪೂರ್ಣಜ್ಞಾನ ಬಂದ ಮೇಲೆ ಒಬ್ಬನ ಸ್ವಭಾವ ಮಗುವಿನಂತೆ ಸರಳವಾಗುವುದು. ಗಂಡಸು ಹೆಂಗಸರ ಭೇದಭಾವವನ್ನು ಅರಿಯರು.

382) ಅದ್ವೈತ ಜ್ಞಾನವನ್ನು ನೀನು ಇಟ್ಟುಕೊಂಡು ಏನು ಬೇಕಾದರೂ ಮಾಡು. ಆಗ ನಿನ್ನಿಂದ ಯಾವ ಪಾಪಕಾರ್ಯವೂ ಆಗುವುದಿಲ್ಲ.

383) ಸ್ಪರ್ಶಮಣಿಗೆ ತಾಗಿದರೆ ಉಕ್ಕಿನ ಕತ್ತಿ ಚಿನ್ನದ ಕತ್ತಿಯಾಗುವುದು. ಹಿಂದಿನ ರೂಪವೇ ಅದಕ್ಕೆ ಇದ್ದರೂ ಉಕ್ಕಿನ ಕತ್ತಿಯಂತೆ ಅದು ನಾಶಮಾಡಲಾರದು. ಇದರಂತೆಯೇ ಭಗವಂತನ ಪಾದಸ್ಪರ್ಶ ಮಾಡಿದವರ ಬಾಹ್ಯರೂಪು ಬದಲಾಯಿಸುವುದಿಲ್ಲ. ಆದರೆ ಅವನು ಎಂದಿಗೂ ಕೆಟ್ಟುದನ್ನು ಮಾಡುವುದಿಲ್ಲ.

384) ಯಾರು ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡಿರುವರೊ ಅವರು ಕೆಲವು ವೇಳೆ ಹುಚ್ಚರಂತೆ, ಕೆಲವು ವೇಳೆ ಪಿಶಾಚಿಯಂತೆ ಶುಚಿ ಅಶುಚಿಯ ಜ್ಞಾನವಿಲ್ಲದೆ ತಿರುಗಾಡುತ್ತಿರುವರು. ಕೆಲವು ವೇಳೆ ಭಗವಂತನನ್ನು ಒಳಗೆ ಮತ್ತು ಹೊರಗೆ ನೋಡಿ ಮೂಕರಾಗಿ ಜಡವಸ್ತುವಿನಂತೆ ನಿಲ್ಲುವರು. ಕೆಲವು ವೇಳೆ ಬಾಲಕರಂತೆ ಯಾವ ವಸ್ತುವಿನ ಮೇಲೂ ಆಸಕ್ತರಾಗದೆ ಬಟ್ಟೆಯನ್ನು ಗಂಟುಕಟ್ಟಿ ಬಗಲಿನಲ್ಲಿ ಇಟ್ಟುಕೊಂಡು ಹೋಗುವರು. ಆದರೆ ಅವರು ಪರೋಪಕಾರಕ್ಕೆ ಕೆಲಸ ಮಾಡುವಾಗ ಸಿಂಹದಂತೆ ಧೈರ್ಯಶಾಲಿಗಳು

We are coming Soon!▶
Read Next post!