Kannada article

Spread the love
Reading Time: 2 minutes

ದೃಷ್ಟಿಹೀನರ ಭಗವಂತ – ಡಾ.ಸಾಂಡೋಕ್ ರೊಯಿಟ್
ದೇವರು ಮಾನವನಿಗೆ ನೀಡಿದ ಎಲ್ಲಾ ಅಂಗಾಂಗಗಳು ಅತ್ಯಮೂಲ್ಯವೇ. ಆದರೆ ಕಣ್ಣು ಅವುಗಳಲ್ಲಿ ಶ್ರೇಷ್ಣವಾದ ಅಂಗ. ಅದಕ್ಕೇ ಹೇಳುವುದು ನೇತ್ರದಾನ ಮಹಾದಾನ ಎಂದು. ನಾವು ಸತ್ತ ನಂತರ ಮಣ್ಣಲ್ಲಿ ಮಣ್ಣಾಗುವ ಅಥವಾ ಸುಟ್ಟು ಬೂದಿಯಾಗುವ ಕಣ್ಣುಗಳನ್ನು ದಾನವಾಗಿ ನೀಡಿದರೆ ಇನ್ನೂ ಇಬ್ಬರು ನೇತ್ರಹೀನರು ಈ ಸುಂದರ ಪ್ರಪಂಚವನ್ನು ನೋಡಬಹುದು. ವೈದ್ಯರು ದೇವರ ಪ್ರತಿರೂಪ ಎನ್ನುತ್ತಾರೆ. ಹಲವಾರು ವೈದ್ಯರು ತಮ್ಮ ಕಾರ್ಯದ ಮೂಲಕ ಈ ಮಾತನ್ನು ನಿಜವಾಗಿಸಿದ್ದಾರೆ. ಇಂತಹದ್ದೇ ಓರ್ವ ಕಣ್ಣಿನ ವೈದ್ಯರ ಬಗ್ಗೆ ನಾನಿಂದು ನಿಮಗೆ ಕಿರು ಲೇಖನದ ಮೂಲಕ ತಿಳಿಸುವೆ.
ಇವರು ಡಾ. ಸಾಂಡೋಕ್ ರೊಯಿಟ್ (Dr. Sanduk Ruit). ನೇಪಾಳ ದೇಶದ ಓರ್ವ ಖ್ಯಾತ ಕಣ್ಣಿನ ವೈದ್ಯರು. ಇವರ ಸಾಧನೆಯೇನು ಗೊತ್ತಾ? ಇವರು ಒಂದು ಲಕ್ಷಕ್ಕೂ ಅಧಿಕ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಅದೂ ಅತೀ ಕಮ್ಮಿ ಶುಲ್ಕದಲ್ಲಿ ಅಥವಾ ಉಚಿತವಾಗಿ. ಯಾವಾಗಲೂ ಇವರ ಶಸ್ತ್ರಚಿಕಿತ್ಸಾಗಾರದ ಎದುರುಗಡೆ ರೋಗಿಗಳ ದೊಡ್ಡ ಸರತಿ ಸಾಲು ಕಂಡು ಬರುತ್ತದೆ. ಡಾ. ರೋಯಿಟ್ ಪ್ರಕಾರ ಪ್ರಪಂಚದ ಅತೀ ದೊಡ್ಡ ಕಣ್ಣಿನ ಸಮಸ್ಯೆ ಎಂದರೆ ಕಣ್ಣಿನ ಪೊರೆ ಅಥವಾ ಕ್ಯಾಟರಾಕ್ಟ್. ಸಾಮಾನ್ಯವಾಗಿ ೬೦ ವರ್ಷ ದಾಟಿದವರಲ್ಲಿ ಈ ಸಮಸ್ಯೆ ಕಾಣಿಸತೊಡಗುತ್ತದೆ. ಇವರು ನೋಡುವ ದೃಶ್ಯಗಳು ಅಸ್ಪಷ್ಟವಾಗಿ ಕಾಣಿಸತೊಡಗುತ್ತವೆ. ಪೊರೆ ಬೆಳೆದಂತೆ ಕಣ್ಣು ಕಾಣಿಸುವುದಿಲ್ಲ. ನಂತರ ಪೊರೆ ಒಡೆದು ಕಣ್ಣಿಗೆ ಹಾನಿಯಾಗುವುದೂ ಇದೆ. ಇದು ಗಂಭೀರ ಸ್ಥಿತಿ. ಈ ಪೊರೆಯನ್ನು ಆಪರೇಷನ್ ಮಾಡಿ ಮಾತ್ರ ತೆಗೆಯಲು ಸಾಧ್ಯ. ಈಗಂತೂ ಲೇಸರ್ ಚಿಕಿತ್ಸೆಯೂ ಬಂದಿದೆ. ಸುಲಭವಾಗಿ ೧೦ ನಿಮಿಷದ ಒಳಗೆ ಮುಗಿದು ಹೋಗಬಹುದಾದ ಆಪರೇಷನ್ ಇದು.
ಡಾ. ರೊಯಿಟ್ ಪ್ರಕಾರ ೬೦ ವರ್ಷ ದಾಟಿದ ಸುಮಾರು ೯೦% ಜನರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ. ಇದರ ಪರಿಹಾರ ಶಸ್ತ್ರಚಿಕಿತ್ಸೆ ಮಾತ್ರ ಮತ್ತು ಅದರ ವೆಚ್ಚ ಬಡವರಿಗೆ ಸ್ವಲ್ಪ ದುಬಾರಿಯೇ. ಈ ಕಾರಣದಿಂದ ಡಾ. ರೋಯಿಟ್ ತಮ್ಮಲ್ಲೇ ಒಂದು ಪ್ರತಿಜ್ಞೆ ಮಾಡಿಕೊಂಡಿದ್ದಾರೆ. ಇಂತಹ ಸಾಮಾನ್ಯ ಬಡ ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತೇನೆ ಎಂದು ನಿರ್ಧರಿಸಿರುವ ಇವರು ಈಗಲೂ ತಮ್ಮ ಮಾತಿನಿಂದ ಹಿಂದೆ ಸರಿದಿಲ್ಲ. ಸಾಮಾನ್ಯವಾಗಿ ೨೦೦ ಡಾಲರ್ (ಸುಮಾರು ೧೫ ಸಾವಿರ) ತಗಲುವ ಈ ಆಪರೇಷನ್ ಡಾ. ರಾಯಿಟ್ ಕೇವಲ ಮೂರು ಡಾಲರ್ (ಸುಮಾರು ೨೦೦-೨೫೦ ರೂಪಾಯಿ) ಒಳಗೆ ಮಾಡಿ ಮುಗಿಸುತ್ತಾರೆ. ಆ ಕಾರಣದಿಂದಲೇ ಅವರು ಮಾಡುವ ಶಸ್ತ್ರ ಚಿಕಿತ್ಸೆಗೆ ಜನರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಾರೆ.
ಕೆಲವು ಗ್ರಾಮಗಳಲ್ಲಿ ಆಸ್ಪತ್ರೆಗಳೇ ಇರುವುದಿಲ್ಲ. ಅಲ್ಲಿ ಡಾ. ರೊಯಿಟ್ ಒಂದು ದೊಡ್ಡ ಹಾಲ್ ನಂತಹ ವ್ಯವಸ್ಥೆ ಇರುವ ಕಟ್ಟಡವನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ ಮತ್ತೆ ಅಲ್ಲಿ ಅವರ ಪರಿಕರಗಳನ್ನು ಜೋಡಿಸುತ್ತಾರೆ. ಅವರ ಪ್ರಕಾರ ನೇಪಾಳದಂತಹ ಸಣ್ಣ ದೇಶದಲ್ಲಿ ಇಂತಹ ಶಸ್ತ್ರ ಚಿಕಿತ್ಸೆಯನ್ನು ಕಮ್ಮಿ ದರಕ್ಕೆ ಮಾಡಲು ಸಾಧ್ಯವಾದರೆ ಬೇರೆ ಬೇರೆ ದೇಶಗಳಲ್ಲೂ ಯಾಕೆ ಸಾಧ್ಯವಿಲ್ಲ? ಎಂದು. ಕೇವಲ ಮೂರು ಡಾಲರ್ ನಲ್ಲಿ ಕಣ್ಣಿನ ದೃಷ್ಟಿ ಮರಳುವುದು ಒಂದು ಅದ್ಭುತ ವ್ಯವಸ್ಥೆಯೇ ಸರಿ. ಇವರನ್ನು ನಂಬಿರುವ ರೋಗಿಗಳು ನೂರಾರು, ಸಾವಿರಾರು ಸಂಖ್ಯೆಯಲ್ಲಿ ಇವರ ಬಳಿಗೆ ಬರುತ್ತಾರೆ. ಕೇವಲ ಐದೇ ನಿಮಿಷದಲ್ಲಿ ಶಸ್ತ್ರ ಚಿಕಿತ್ಸೆ ಮುಗಿಸಿ ಹಸನ್ಮುಖರಾಗಿ ಮನೆಗೆ ಮರಳುತ್ತಾರೆ. ಅವರ ಕಣ್ಣಿನ ಪೊರೆ ತೆಗೆದ ಬಳಿಕ ಅವರಿಗೆ ಆಗುವ ಸಂತೋಷ ಹೇಳ ತೀರದು.
ಡಾ. ರೊಯಿಟ್ ಕೇವಲ ನೇಪಾಳದಲ್ಲಿ ಮಾತ್ರವಲ್ಲ ನೆರೆಯ ಚೀನಾ, ಭಾರತ ದೇಶಗಳಲ್ಲೂ ಇರುವ ಕಣ್ಣಿನ ರೋಗಿಗಳಿಗಾಗಿ ತಮ್ಮ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಅತ್ಯಂತ ಅಪಾಯಕಾರಿ ದೇಶವಾದ ಉತ್ತರ ಕೊರಿಯಾದಲ್ಲೂ ಇವರು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿ ಬಂದಿದ್ದಾರೆ. ಇವರು ಯಾಕೆ ಇಷ್ಟು ಕಮ್ಮಿ ದರದಲ್ಲಿ ಚಿಕಿತ್ಸೆ ನೀಡುತ್ತಾರೆ ಎಂದು ಕೇಳಿದಾಗ ಅವರು ತಮ್ಮ ಕುಟುಂಬದಲ್ಲಿ ನಡೆದ ಒಂದು ಘಟನೆಯ ಬಗ್ಗೆ ಹೇಳುತ್ತಾರೆ ‘ ನನಗೆ ಯಂಗ್ಲಾ (Yangla) ಎಂಬ ಹೆಸರಿನ ಸಣ್ಣ ತಂಗಿ ಇದ್ದಳು. ನನಗೆ ಅವಳೆಂದರೆ ಪ್ರಾಣ. ಆದರೆ ಅವಳಿ ಬಂದ ಕಾಯಿಲೆಗೆ ಸರಿಯಾದ ಚಿಕಿತ್ಸೆ ದೊರೆಯದೇ ಅವಳು ತನ್ನ ಹದಿನೈದನೇ ವಯಸ್ಸಿನಲ್ಲೇ ಮರಣವನ್ನಪ್ಪಿದಳು. ಇದು ನನ್ನ ಮೇಲೆ ತುಂಬಾನೇ ಪ್ರಭಾವ ಬೀರಿತು. ನಾನು ಅಂದೇ ನಿರ್ಧಾರ ಮಾಡಿದೆ ನನ್ನ ತಂಗಿಗೆ ಆದ ಹಾಗೆ ಬೇರೆ ಯಾರಿಗೂ ಆಗ ಬಾರದು, ಅದಕ್ಕೇ ನಾನು ವೈದ್ಯನಾದೆ. ಇದರಿಂದ ನನಗೆ ಸಾವಿರಾರು ಜನರ ನೋವನ್ನು ನಿವಾರಿಸುವ ಶಕ್ತಿ ಭಗವಂತ ನೀಡಿದ ಎಂದು ಭಾವಿಸುತ್ತೇನೆ’
ಡಾ. ರೊಯಿಟ್ ಅವರ ಮಾತು ಅಕ್ಷರಶಃ ಈಗ ನಿಜವಾಗಿದೆ. ಆಪರೇಶನ್ ಆದ ಬಳಿಕ ರೋಗಿಗಳು ನೋಡುವ ಮೊದಲ ವ್ಯಕ್ತಿ ಇವರೇ. ಆದುದರಿಂದ ಇವರನ್ನು ರೋಗಿಗಳು ‘ದೃಷ್ಟಿಹೀನರ ಭಗವಂತ’ (The God of Sight) ಎಂದೇ ಕರೆಯುತ್ತಾರೆ. ಡಾ. ರೊಯಿಟ್ ಅವರ ಮಾನವೀಯತೆಯ ಮನಸ್ಸು ಬಹಳ ಜನರ ಕಣ್ಣಿನ ದೃಷ್ಟಿಯ ಜೊತೆಗೆ ಮುಖದಲ್ಲೂ ಮಂದಹಾಸ ಮೂಡಿಸಿದೆ.
ಸೆಪ್ಟೆಂಬರ್ ೪, ೧೯೫೪ರಲ್ಲಿ ನೇಪಾಳದಲ್ಲಿ ಜನಿಸಿದ ಇವರಿಗೆ ಈಗ ೬೬ ವರ್ಷ. ಇವರ ಸೇವೆಯನ್ನು ಗುರುತಿಸಿ ಭಾರತ ಸರಕಾರವು ೨೦೧೮ರಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. ಪ್ರಸಿದ್ಧ ‘ರಾಮನ್ ಮ್ಯಾಗ್ಸಸೆ ‘ ಪ್ರಶಸ್ತಿಯೂ ಇವರನ್ನು ಹುಡುಕಿಕೊಂಡು ಬಂದಿದೆ. ಇವರ ಜೀವನ ಸಾಧನೆಯ ಬಗ್ಗೆ ಆಸ್ಟ್ರೇಲಿಯಾದ ಲೇಖನ ಅಲಿ ಗ್ರಿಪ್ಪರ್ ‘ಬರಿಗಾಲ ವೈದ್ಯ’ (The Barefoot Surgeon) ಎಂಬ ಪುಸ್ತಕ ಬರೆದಿದ್ದಾರೆ. ಇದು ೨೦೧೮ರಲ್ಲಿ ಬಿಡುಗಡೆಯಾಗಿದೆ.
(ಆಧಾರ)
ಚಿತ್ರ ವಿವರ: ೧. ಗುಣಮುಖರಾದ ರೋಗಿಗಳ ಜೊತೆ ಡಾ. ರೊಯಿಟ್
೨. ಪದ್ಮಶ್ರೀ ಪುರಸ್ಕಾರ ಸ್ವೀಕರಿಸುತ್ತಿರುವ ಡಾ. ರೊಯಿಟ್
ಚಿತ್ರ : ಅಂತರ್ಜಾಲ ತಾಣ