Kannada article

Read Previous post!
Read Next post!
Reading Time: 2 minutes

ಚಹಾ ಮಾರಿ ವಿದೇಶಯಾನ ಮಾಡುವ ಮೋಹನಾ ಮತ್ತು ವಿಜಯನ್
ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಒಂದಲ್ಲಾ ಒಂದು ಆಶೆ ಇದ್ದೇ ಇರುತ್ತದೆ. ಒಳ್ಳೆಯ ಮನೆ, ಹೊಸ ಮಾಡೆಲ್ ಕಾರ್, ಬೈಕ್, ಮದುವೆಯಾಗಲು ಸುಂದರ ಯುವತಿ, ಉತ್ತಮ ಆಹಾರ, ಪ್ರವಾಸ, ಪುಣ್ಯಸ್ಥಳಗಳ ಭೇಟಿ ಹೀಗೆ ಮಾನವನ ಆಶೆಗೆ ಮಿತಿಯೇ ಇರುವುದಿಲ್ಲ. ನಾನೀಗ ಹೇಳ ಹೊರಟಿರುವುದು ಟೀ ಮಾರುತ್ತಾ ಅದರಲ್ಲಿ ಉಳಿಸಿದ ಹಣದಿಂದ ವಿದೇಶ ಪ್ರವಾಸ ಮಾಡುವ ದಂಪತಿಯ ಬಗ್ಗೆ. 
ಈ ದಂಪತಿ ಇರುವುದು ಕೇರಳ ರಾಜ್ಯದ ಕೊಚ್ಚಿನ್ ನಲ್ಲಿ. ಕೆ. ಆರ್. ವಿಜಯನ್ ಮತ್ತು ಮೋಹನಾ ವಿಜಯನ್ ದಂಪತಿಗಳಿಗೆ ದೇಶ ವಿದೇಶ ತಿರುಗಾಡುವ ಆಶೆ. ಆದರೆ ಅವರ ಜೀವನೋಪಾಯಕ್ಕಾಗಿ ಇರುವುದು ಒಂದು ಸಣ್ಣ ಟೀ ಅಂಗಡಿ ಮಾತ್ರ. ಇಲ್ಲಿನ ಗಾಂಧೀನಗರದಲ್ಲಿರುವ ಶ್ರೀ ಬಾಲಾಜಿ ಕಾಫಿ ಹೌಸ್ ಎಂಬ ಹೋಟೇಲ್ ನಡೆಸುತ್ತಾ ಬಂದಿರುವ ಇವರಿಗೆ ೭೦ ವರ್ಷ ದಾಟಿದೆ. ಆದರೆ ಉತ್ಸಾಹ ಕುಂದಿಲ್ಲ. ಇವರಿಬ್ಬರೂ ಹೋಟೇಲಿನಲ್ಲಿ ಲವಲವಿಕೆಯಿಂದ ಓಡಾಡಿ, ಗ್ರಾಹಕರಿಗೆ ಏನು ಬೇಕು ಎನ್ನುವುದನ್ನು ಕೇಳಿ ತಾವೇ ಸ್ವತಃ ತಂದುಕೊಡುವುದರ ಸೊಗಡೇ ಬೇರೆ. ಮದುವೆಯಾಗಿ ೪೫ ವರ್ಷಗಳು ತುಂಬಿವೆ ಎಂದು ವಿಜಯನ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇಬ್ಬರೂ ಬಡತನದ ಹಿನ್ನಲೆಯುಳ್ಳ ಮನೆತನದಿಂದ ಬಂದವರಾದುದರಿಂದ ಇವರಿಗೆ ಬದುಕು ಸಾಗಿಸಲು ಇರುವ ದಾರಿಯೆಂದರೆ ಈ ಸಣ್ಣ ಹೋಟೇಲ್ ನಲ್ಲಿ ಇರುವ ಆದಾಯ ಮಾತ್ರ. ಆದರೂ ಇವರ ಕನಸಿಗೆ ಎಣೆಯಿಲ್ಲ. ಸಣ್ಣ ವಯಸ್ಸಿನಿಂದಲೂ ಇವರಿಬ್ಬರಿಗೂ ದೇಶ ವಿದೇಶ ತಿರುಗಾಡುವ ಆಶೆ. ಮದುವೆಯ ಪ್ರಾರಂಭದ ದಿನಗಳಲ್ಲಿ ಹಣಕಾಸಿನ ಸಮಸ್ಯೆಯಿಂದ ಇವರು ತಿರುಗಾಡಿದ್ದು ಕಮ್ಮಿಯೇ. ಆದರೆ ಈಗ ಹಣಕಾಸಿನ ಸಮಸ್ಯೆ ಇದ್ದರೂ ಅದನ್ನು ಗೆಲ್ಲುವ ಮನಸ್ಸು ಈರ್ವರೂ ಮಾಡಿಕೊಂಡಿದ್ದಾರೆ. ಸುಮಾರು ೫೫ ವರ್ಷಗಳ ಹಿಂದೆ ಅಂದರೆ ೧೯೬೩ರಲ್ಲಿ ಕೊಚ್ಚಿನ್ ಪೇಟೆಯಲ್ಲಿ ಬೀದಿ ಬೀದಿಯಲ್ಲಿ ತಿರುಗಾಡಿ ಟೀ ಮಾರಿದ ವಿಜಯನ್ ನಂತರ ಸಣ್ಣ ಹೋಟೇಲ್ ಪ್ರಾರಂಭಿಸಿದರು.
ನಿಮಗೆ ಓದುವಾಗ ಅಚ್ಚರಿಯಾಗುವ ವಿಷಯವೆಂದರೆ, ತಮ್ಮ ಈ ಟೀ ಅಂಗಡಿಯ ದುಡಿಮೆಯಿಂದ ಬಂದ ಹಣವನ್ನೇ ಸಂಗ್ರಹ ಮಾಡಿಕೊಂಡು ಇವರು ಈಗಾಗಲೇ ೨೫ ದೇಶಗಳಿಗೆ ಹೋಗಿ ತಿರುಗಾಡಿ ಬಂದಿದ್ದಾರೆ. ಯಾವುದಕ್ಕೂ ಮನಸ್ಸು ಬೇಕು. ಮನಸ್ಸಿದ್ದರೆ ಮಾರ್ಗ ಎನ್ನುತ್ತೀರಾ? ಹೌದು. ನಮ್ಮಲ್ಲಿ ಹಲವರಿಗೆ ಆರೋಗ್ಯ, ವಯಸ್ಸು, ಹಣ ಎಲ್ಲವೂ ಇದ್ದರೂ ತಿರುಗಾಡುವ ಹುಮ್ಮಸ್ಸು ಇದೆಯೇ? ಕೆಲವರಂತೂ ತಮ್ಮ ಊರು ಬಿಟ್ಟು ಹೊರಗೆ ಹೋಗುವುದಿಲ್ಲ. ಸದಾ ಕಾಲ ಕೆಲಸ ಕೆಲಸ ಇನ್ನಷ್ಟು ಕೆಲಸ. ಅಷ್ಟೇ ಅವರ ಜೀವನ. ಆದರೆ ವಿಜಯನ್ ದಂಪತಿಗಳ ಜೀವನೋತ್ಸಾಹ ದೊಡ್ದದು. ದೇಶಗಳನ್ನು ಸುತ್ತುವ ಈ ಕಾಯಕವನ್ನು ಅವರು ಹೇಗೆ ಯೋಜನೆ ಮಾಡುತ್ತಾರೆ.ಬನ್ನಿ ನೋಡುವ.
ವಿಜಯನ್ ಅವರಿಗೆ ಹೋಟೇಲ್ ನಿಂದ ಬರುವ ಆದಾಯ ಸಣ್ಣದು. ದಿನಾಲೂ ಸುಮಾರು ೩೦೦ ರಿಂದ ೩೫೦ ಗ್ರಾಹಕರು ಇವರ ಹೋಟೇಲ್ ಗೆ ಬರುತ್ತಾರೆ. ಇವರು ತಮ್ಮ ಆದಾಯದಲ್ಲಿ ದಿನಕ್ಕೆ ೩೦೦ ರೂಪಾಯಿಯನ್ನು ಉಳಿಸುತ್ತಾರೆ. ಪ್ರತೀ ದಿನ ಅಷ್ಟೇ ಮೊತ್ತವನ್ನು ಒಟ್ಟುಗೂಡಿಸಿ ತಮ್ಮ ವಿದೇಶ ಪ್ರವಾಸಕ್ಕಾಗಿ ಉಪಯೋಗಿಸುತ್ತಾರೆ. ಈ ಉಳಿಕೆ ಹಣವು ಇವರ ವಿದೇಶಯಾನಕ್ಕೆ ಕಮ್ಮಿಯಾದರೆ ಸ್ಥಳೀಯ ಬ್ಯಾಂಕ್ ನಿಂದ ಸಾಲ ಪಡೆಯುತ್ತಾರೆ. ಈ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ವಿದೇಶದಲ್ಲೂ ಇವರು ಖರ್ಚು ಮಾಡುವುದು ಕಮ್ಮಿ. ತಮ್ಮ ಊರಿನಲ್ಲೂ ಇವರು ತುಂಬಾನೇ ಮಿತವ್ಯಯಿ. ಹೋಟೇಲ್ ನಲ್ಲೂ ಇವರೇ ಎಲ್ಲಾ ಕೆಲಸ ಮಾಡುತ್ತಾರೆ. ಸಿಬ್ಬಂದಿ ಸಂಖ್ಯೆ ಒಂದೋ ಎರಡೋ ಅಷ್ಟೇ. ವಿದೇಶ ಯಾನ ಮುಗಿಸಿ ಬಂದು ಮುಂದಿನ ಮೂರು ವರ್ಷಗಳಲ್ಲಿ ಬ್ಯಾಂಕ್ ನಿಂದ ತೆಗೆದ ಸಾಲವನ್ನು ತೀರಿಸುತ್ತಾರೆ ಮತ್ತೆ ಇನ್ನೊಂದು ದೇಶಕ್ಕೆ ಹೋಗುವ ಕನಸು ಕಾಣುತ್ತಾರೆ. 
೧೯೮೮ರಲ್ಲಿ ಹಿಮಾಲಯ ಯಾತ್ರೆಯಿಂದ ಇವರ ಪ್ರವಾಸಗಾಥೆ ಪ್ರಾರಂಭವಾಯಿತು. ವಿಜಯನ್ ದಂಪತಿ ಈಗಾಗಲೇ ಸಿಂಗಾಪುರ, ಸ್ವಿಜರ್ ಲ್ಯಾಂಡ್, ನ್ಯೂಯಾರ್ಕ್, ಅರ್ಜೆಂಟೀನಾ, ಪೆರು, ಬ್ರೆಜಿಲ್, ಚಿಲಿ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮುಂತಾದ ೨೫ ದೇಶಗಳಿಗೆ ಹೋಗಿ ಬಂದಿದ್ದಾರೆ. ಅವರ ಮುಂದಿನ ಪ್ರವಾಸ ತಾಣಗಳು ಸ್ವೀಡನ್, ಹಾಲೆಂಡ್, ಡೆನ್ಮಾರ್ಕ್, ಗ್ರೀನ್ ಲ್ಯಾಂಡ್, ನಾರ್ವೆ… ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ವಯಸ್ಸು ಆಗುತ್ತಾ ಬಂದರೂ ಇವರಲ್ಲಿ ದೇಶ ಸುತ್ತುವ ಉತ್ಸಾಹ ಕಮ್ಮಿ ಆಗಿಲ್ಲ. ಇವರೇ ಹೇಳುವಂತೆ ‘ಬೇರೆ ಬೇರೆ ದೇಶಕ್ಕೆ ಹೋದಾಗ ಆ ದೇಶದ ಜನರ ಸಂಸ್ಕೃತಿ, ಆಚಾರ ವಿಚಾರ ಮತ್ತು ಅಲ್ಲಿಯ ಪ್ರವಾಸ ತಾಣಗಳ ಪರಿಚಯವಾಗುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ ಮಾನಸಿಕ ನೆಮ್ಮದಿ ಸಿಗುತ್ತದೆ.’. 
ವಿಜಯನ್ ತಮ್ಮ ಹೋಟೇಲ್ ಗೋಡೆಗಳಲ್ಲಿ ತಾವು ಹೋಗಿ ಬಂದಿರುವ ದೇಶಗಳ ಮಾಹಿತಿಯನ್ನು, ಆ ದೇಶಗಳ ನೋಟುಗಳು ಎಲ್ಲವನ್ನೂ ಫ್ರೇಂ ಹಾಕಿ ತೂಗು ಹಾಕಿದ್ದಾರೆ. ಹೋಟೇಲ್ ಗೆ ಬಂದ ಗ್ರಾಹಕರು ಇವರು ಮಾಡಿಕೊಟ್ಟ ಟೀ ಸವಿಯುವುದರ ಜೊತೆಗೆ ವಿದೇಶಗಳ ಮಾಹಿತಿಯನ್ನೂ ಪಡೆಯಬಹುದಾಗಿದೆ. ಇವರ ಸಾಹಸದ ಕಥೆಯನ್ನು ಅಮೇರಿಕನ್ ಪ್ರವಾಸಿಗ ಡ್ರ್ಯೂ ಬಿನ್ಸ್ಕಿ ಎಂಬವರು ಸಾಕ್ಷ್ಯ ಚಿತ್ರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದರು. ಇದನ್ನು ಗಮನಿಸಿದ ಖ್ಯಾತ ಉದ್ಯಮಿ, ಮಹೇಂದ್ರ ಬಳಗದ ಮಾಲೀಕರಾದ ಆನಂದ್ ಮಹೇಂದ್ರ ಇವರನ್ನು ಸಂಪರ್ಕಿಸಿ ಮಾಹಿತಿ ಪಡೆದರು. ನಂತರ ಮುಂದಿನ ಅವರ ವಿದೇಶ ಪ್ರವಾಸಕ್ಕೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಗೆ ಹೋಗಲು ಹಣಕಾಸು ಸೇರಿದಂತೆ ಎಲ್ಲಾ ಅನುಕೂಲ ಮಾಡಿಕೊಟ್ಟರು.
ವಿಜಯನ್ ಹಾಗೂ ಮೋಹನಾ ದಂಪತಿಯವರ ಪ್ರಕಾರ ವಿದೇಶಕ್ಕೆ ತೆರಳಲು ಮುಖ್ಯವಾಗಿ ಬೇಕಾಗಿರುವುದು ಹಣವಲ್ಲ, ಮನಸ್ಸು. ಹೃದಯದ ಮಾತನ್ನು ಕೇಳಿದರೆ ಮನಸ್ಸು ಸುಂದರವಾಗುತ್ತದೆ. ಮನಸ್ಸು ಮಾಡಿದರೆ ಅಸಾಧ್ಯವಾದುದನ್ನೇ ಸಾಧಿಸಬಹುದೆಂದು ಈ ದಂಪತಿ ತೋರಿಸಿಕೊಟ್ಟಿದ್ದಾರೆ.     
ಚಿತ್ರ ವಿವರಗಳು: ೧. ವಿದೇಶಯಾನದ ಸಂಭ್ರಮದಲ್ಲಿ ಮೋಹನಾ ವಿಜಯನ್
೨. ಸಿಡ್ನಿ ಹಾರ್ಬರ್ ಪ್ರದೇಶದಲ್ಲಿ ಮೋಹನಾ ವಿಜಯನ್
೩. ಕೊಚ್ಚಿನ್ ನಲ್ಲಿರುವ ತಮ್ಮ ಚಹಾ ಅಂಗಡಿಯಲ್ಲಿ
ಚಿತ್ರ ಕೃಪೆ: ಅಂತರ್ಜಾಲ ತಾಣ
 

Read Previous post!
Read Next post!