Kannada article

Read Previous post!
Read Next post!
Reading Time: 3 minutes

ಇದು ವಿಚಿತ್ರ ಉಯಿಲುಗಳ ಲೋಕವಯ್ಯಾ!
ಉಯಿಲು ಅಂದರೆ ವಿಲ್ (Will) ಈಗೀಗ ಬಹಳಷ್ಟು ಪ್ರಚಲಿತದಲ್ಲಿರುವ ವಿಷಯ. ಒಬ್ಬ ವ್ಯಕ್ತಿ ತನ್ನ ಮರಣಾನಂತರ ಏನೆಲ್ಲಾ ಕಾರ್ಯಗಳು ಆಗಬೇಕು, ಆಸ್ತಿ ಹೇಗೆ ವಿಲೇವಾರಿಯಾಗಬೇಕು, ಹಣ ಯಾರಿಗೆ ಸಿಗಬೇಕು, ಎಷ್ಟು ಪಾಲು ಹಂಚಬೇಕು ಎಂಬೆಲ್ಲಾ ವಿಷಯಗಳನ್ನು ತನ್ನ ಜೀವಿತಾವಧಿಯಲ್ಲಿ ಬರೆದು ಇಡುವ ಮರಣ ಪತ್ರವೇ ಉಯಿಲು ಅಥವಾ ವಿಲ್. ಮಾನಸಿಕವಾಗಿ ಸ್ವಸ್ಥವಿರುವ ವ್ಯಕ್ತಿ ತನಗೆ ಬೇಕಾದ ರೀತಿಯಲ್ಲಿ ಉಯಿಲು ಬರೆದು ಇಬ್ಬರು ಸಾಕ್ಷಿಗಳ ಸಹಿ ಮಾಡಿಸಿದರೆ ಉಯಿಲು ಅಧಿಕೃತವಾಗುತ್ತದೆ. ಅದನ್ನು ನೊಂದಾಯಿಸಿದರೆ ಇನ್ನೂ ಉತ್ತಮ. ಸಾಕ್ಷಿಗಳಿಗೆ ಉಯಿಲಿನಲ್ಲಿ ಬರೆದ ವಿಷಯ ತಿಳಿಸಬೇಕೆಂದೇನೂ ಇಲ್ಲ. ಆ ವ್ಯಕ್ತಿ ತಾನು ಬರೆದ ಅಥವಾ ಬರೆಸಿದ ಉಯಿಲನ್ನು ತನ್ನ ಜೀವಿತಾವಧಿಯಲ್ಲಿ ಎಷ್ಟು ಸಲ ಬೇಕಾದರೂ ಬದಲಿಸಬಹುದು. ಆದರೆ ಕೊನೆಯಲ್ಲಿ ಬರೆದ ಉಯಿಲೇ ಅಧಿಕೃತವಾಗಿ ಅವನ ಮರಣದ ನಂತರ ಜಾರಿಗೆ ಬರುತ್ತದೆ. ನಾನು ಹೇಳಹೊರಟಿರುವ ವಿಷಯ ಇದಲ್ಲ.
ನೀವು ಪತ್ರಿಕೆಯಲ್ಲಿ, ಟಿವಿಯಲ್ಲಿ ಚಿತ್ರ ವಿಚಿತ್ರ ಉಯಿಲುಗಳ ಬಗ್ಗೆ ಕೇಳಿಯೇ ಇರುತ್ತೀರಿ. ಅಧಿಕವಾಗಿ ವಿದೇಶಗಳಲ್ಲಿ ತಮ್ಮ ಪ್ರೀತಿಯ ನಾಯಿಯ ಅಥವಾ ಬೆಕ್ಕಿನ ಹೆಸರಲ್ಲಿ, ಡ್ರೈವರ್, ಪ್ರೇಯಸಿಯವರ ಹೆಸರಿನಲ್ಲಿ ಅಥವಾ ವಿಧ ವಿಧ ನಮೂನೆಗಳಲ್ಲಿ ಅಂದರೆ ಅತ್ಯಂತ ದೀರ್ಘವಾದ ಉಯಿಲು, ಕ್ಲಿಷ್ಟಕರವಾದ ಉಯಿಲು ಬರೆದು ಮೃತ ವ್ಯಕ್ತಿಯ ಸಂಬಂಧಿಗಳನ್ನು ಪೇಚಿಗೆ ಸಿಲುಕಿಸುತ್ತಾರೆ. ನಮ್ಮ ದೇಶದಲ್ಲೂ ಅನಾಥಾಶ್ರಮಕ್ಕೆ, ಮಠಗಳಿಗೆ, ದೇಹವನ್ನು ಆಸ್ಪತ್ರೆಗೆ ನೀಡಬೇಕಾಗಿ ಉಯಿಲು ಬರೆದವರಿದ್ದಾರೆ. ಅಂತಹ ಕೆಲವು ರೋಚಕ ವಿಲ್ ಬಗ್ಗೆ ಗಮನ ಹರಿಸುವ.
*ಹಾಲೆಂಡ್ ದೇಶದ ಓರ್ವ ವ್ಯಕ್ತಿಗೆ ಏನನ್ನಿಸಿತೋ ತನ್ನ ಮರಣ ಶಾಸನವನ್ನು ಕಾಗದದಲ್ಲಿ ಬರೆಯುವ ಬದಲು ತನ್ನ ಮನೆಯ ಮರದ ಬಾಗಿಲಿನಲ್ಲೇ ಬರೆಸಿ ಇಬ್ಬರು ಸಾಕ್ಷಿಗಳಿಂದ ಸಹಿ ಹಾಕಿಸಿಕೊಂಡಿದ್ದ. ಆ ವ್ಯಕ್ತಿಯ ಮರಣಾನಂತರ ಅವನ ಸಂಬಂಧಿಕರು ಆ ಬಾಗಿಲಿನ ಫೊಟೋ ತೆಗೆದು ಕೋರ್ಟಿಗೆ ತೆಗೆದುಕೊಂಡು ಹೋದರೆ ನ್ಯಾಯಾಧೀಶರು ಅದನ್ನು ಖಡಾ ಖಂಡಿತವಾಗಿ ನಿರಾಕರಿಸಿದರು. ಕಡೆಗೆ ಆ ಸಂಬಂಧಿಕರು ಆ ವ್ಯಕ್ತಿಯ ಮನೆಯ ಬಾಗಿಲನ್ನೇ ಕಿತ್ತು ತೆಗೆದು ನ್ಯಾಯಾಲಯಕ್ಕೆ ತಂದು ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರು ಪಡಿಸಬೇಕಾಯಿತಂತೆ. 

 • ೧೮೫೦ರಲ್ಲಿ ಜಾರ್ಜಿಯಾ ದೇಶದ ಈ ವ್ಯಕ್ತಿಯ ಉಯಿಲು ವಿಚಿತ್ರವಾದರೂ ಸತ್ಯ. ವಿಲಿಯಂ ಎಚ್. ಜಾಕ್ಸನ್ ಎಂಬ ವ್ಯಕ್ತಿ ತನ್ನ ಎಲ್ಲಾ ಆಸ್ತಿಯನ್ನು ತನ್ನ ಪ್ರೀತಿಯ ‘ಓಕ್’ ಮರದ ಹೆಸರಿಗೆ ಬರೆದಿಟ್ಟಿದ್ದಾನಂತೆ.
  *ಕ್ಯಾಥರೀನ್ ಓಲ್ ವರ್ಗ್ ಎಂಬ ೭೪ ವರ್ಷದ ಮಹಿಳೆ ತನ್ನ ಸಮಸ್ತ ಆಸ್ತಿಯನ್ನು ತಾನು ಮುದ್ದಿನಿಂದ ಸಾಕಿದ ಐದು ಬೆಕ್ಕುಗಳ ಹೆಸರಿನಲ್ಲಿ ಬರೆದಿಟ್ಟಿದ್ದಾಳೆ.
  *೧೯೯೧ರಲ್ಲಿ ಜರ್ಮನ್ ಸಂಸದ ಕಾರ್ಲೋಟಾ ಲಿಬೆಷ್ಟೇನಾ ಸತ್ತಾಗ ಅವನು ತನ್ನ ಉಯಿಲಿನಲ್ಲಿ ತನ್ನ ಸಮಸ್ತ ಆಸ್ತಿಯನ್ನು ಅವನ ಪ್ರೀತಿಯ ನಾಯಿ ‘ಗುಂಟರ್’ ಹೆಸರಿಗೆ ಬರೆದಿಟ್ಟಿದ್ದ. ಎಷ್ಟು ಆಸ್ತಿ ಎಂದು ಕೇಳಿದರೆ ನೀವು ಹೌಹಾರುತ್ತೀರಿ. ೧೩೯ ಬಿಲಿಯನ್ ಜರ್ಮನ್ ಮಾರ್ಕ್ ಗಳನ್ನು ಬರೆದು ಹೋಗಿದ್ದ. ನಾಯಿಗೆ ಇಷ್ಟು ಸಾಕಾಗದು ಎಂದು ಓರ್ವ ಕೆಲಸದವಳು, ಓರ್ವ ಡ್ರೈವರ್, ಒಂದು ದೊಡ್ಡ ಕಾರು ಮತ್ತು ಒಂದು ಈಜು ಕೊಳವನ್ನೂ ಬರೆದಿದ್ದ. ನಾಯಿ ಸತ್ತ ಬಳಿಕ ಯಾರಿಗೆ ಹೋಗುತ್ತೋ ಈ ಆಸ್ತಿ? ಅದನ್ನು ಬರೆದಿಲ್ಲ ಅನಿಸುತ್ತೆ.
  *ಡೆನ್ಮಾರ್ಕ್ ದೇಶದ ಓರ್ವ ವೃದ್ಧೆ ತನ್ನ ೬೩ ಸಾವಿರ ಡಾಲರ್ ಗಳ ಆಸ್ತಿಯನ್ನು ಅವಳ ಮುದ್ದಿನ ಆರು ಚಿಂಪಾಂಜಿಗಳ ಹೆಸರಿಗೆ ಬರೆದಿದ್ದಳು. ಆ ದೇಶದ ಕಾನೂನಿನ ಪ್ರಕಾರ ಅವಳು ಸತ್ತ ಬಳಿಕ ಆ ಆಸ್ತಿಯ ವಿವರವನ್ನು ಆ ಚಿಂಪಾಂಜಿಗಳ ಎದುರು ಓದಿ ಹೇಳಬೇಕಾಯಿತಂತೆ. ಚಿಂಪಾಂಜಿಗಳಿಗೆ ಎಷ್ಟು ತಿಳಿಯಿತೋ, ಎಷ್ಟು ಖುಷಿ ಆಯಿತೋ ಆ ದೇವರಿಗೇ ಗೊತ್ತು.
  *ಓರ್ವ ಹೆಂಗಸು ಸದಾ ಕಾಲ ಏನೋ ಬರೆಯುತ್ತಿದ್ದಳಂತೆ. ಅವಳ ಸಂಬಂಧಿಕರು ಹೆಂಗಸು ಯಾವುದೋ ಪುಸ್ತಕ ಬರೆಯುತ್ತಿರಬೇಕೆಂದು ಅನಿಸಿಕೊಂಡಿದ್ದರಂತೆ. ಅವಳು ಸತ್ತಾಗ ಗೊತ್ತಾಯಿತಂತೆ ಅದು ಅವಳ ಮರಣ ಪತ್ರವೆಂದು. ಅವಳು ಸುಮಾರು ೨ ವರ್ಷಗಳ ಕಾಲ ಅವಳ ಉಯಿಲು ಬರೆದಳಂತೆ. ಆ ಮರಣ ಪತ್ರದಲ್ಲಿ ಸುಮಾರು ೯೦ ಸಾವಿರ ಪದಗಳಿವೆಯಂತೆ. ಏನೆಲ್ಲಾ ಬರೆದಳೋ. ಬಹುಷ ಅದನ್ನು ಜಾರಿಗೆ ತರಬೇಕಾದರೆ ಅವಳ ಸಂಬಂಧಿಕರ ಆಯುಷ್ಯ ಮುಗಿದು ಹೋಗುವುದೋ ಏನೋ? ಇದು ಅತ್ಯಂತ ದೀರ್ಘವಾದ ಉಯಿಲು ಎಂದು ದಾಖಲಾಗಿದೆಯಂತೆ.
  *ಒಬ್ಬ ಫ್ರೆಂಚ್ ವ್ಯಕ್ತಿಯು ತನ್ನ ಮರಣ ಶಾಸನದಲ್ಲಿ ಯಾರು ದೇವರ ಜೊತೆ ಮಾತನಾಡುತ್ತಾರೋ ಅವರಿಗೆ ಅವನ ಸಮಸ್ತ ಆಸ್ತಿ ಸಿಗಬೇಕೇಂದು ಉಯಿಲು ಬರೆದಿಟ್ಟಿದ್ದನಂತೆ. ಅವನು ಸತ್ತ ಬಳಿಕ ದೇವರ ಜೊತೆ ಮಾತನಾಡುವ ವ್ಯಕ್ತಿಗಳು ಅಲ್ಲಿ ಸಿಗದೇ ಅವನ ಆಸ್ತಿಯಿನ್ನೂ ಸರಕಾರದ ವಶದಲ್ಲೇ ಇದೆಯಂತೆ. ಭಾರತದಲ್ಲಾಗುತ್ತಿದ್ದರೆ ಗಲ್ಲಿ ಗಲ್ಲಿಗಳಲ್ಲಿ ದೇವ ಮಾನವರು ಸಿಗುತ್ತಿದ್ದರು. ಸುಲಭದಲ್ಲಿ ಆಸ್ತಿಯನ್ನು ವಿಲೇ ಮಾಡಬಹುದಿತ್ತು ಅಲ್ಲವೇ?
  *ಕೆಲವರು ಹೆಂಡತಿಗಾಗಿ ಲಕ್ಷಾಂತರ ರೂಪಾಯಿ ಬಿಟ್ಟು ಹೋಗುತ್ತಾರೆ. ಹಿಂದೆ ಒಬ್ಬ ಭೂಪನಿದ್ದ ನೋಡಿ, ಅವನಿಗೆ ಹೆಂಡತಿ ಮೇಲೆ ಏನು ಕೋಪವಿತ್ತೋ ಅವನ ಮರಣ ಶಾಸನದಲ್ಲಿ ಅವಳಿಗೋಸ್ಕರ ಕೇವಲ ಒಂದು ಅವನ ಹಳೆಯ ಪ್ಯಾಂಟ್ ಮಾತ್ರ ಬಿಟ್ಟು ಹೋಗಿದ್ದ ಆ ಕೋಟ್ಯಾಧಿಪತಿ ಉದ್ಯಮಿ. ಅವನ ಜೀವಮಾನವಿಡೀ ಅವಳು ಅವನನ್ನು ಹಿಂಸಿಸುತ್ತಿದ್ದಳಂತೆ. ಅದರ ಸೇಡನ್ನು ಅವನು ಈ ರೀತಿ ಉಯಿಲು ಬರೆಯುದರ ಮೂಲಕ ತೀರಿಸಿಕೊಂಡ.
  *ಮತ್ತೊರ್ವ ಉದ್ಯಮಿ ಅವನ ಹೆಂಡತಿಗೆ ನೀಡಿದ್ದು ಕೇವಲ ಒಂಡು ಡಾಲರ್ ಮಾತ್ರ. ಆ ಡಾಲರ್ ಯಾಕೆ ಕೊಟ್ಟಿರುವೆ ಎಂದೂ ಅವನ ಉಯಿಲಿನಲ್ಲಿ ಬರೆದಿದ್ದ. ಅವನ ಪ್ರಕಾರ ಆ ಒಂದು ಡಾಲರ್ ನಲ್ಲಿ ಒಳ್ಳೆಯ ಹಗ್ಗವನ್ನು ಖರೀದಿಸಿ ಅವನ ಹೆಂಡತಿ ನೇಣು ಹಾಕಿಕೊಳ್ಳಲಿ ಎಂದಾಗಿತ್ತು. ಹೆಂಡತಿ ಅವನು ಬದುಕಿರುವಾಗ ಏನೆಲ್ಲಾ ಕಾಟಕೊಟ್ಟಳೋ ಆ ಭಗವಂತನೇ ಬಲ್ಲ.
  *ಇದೊಂದು ಅಪೂರ್ವವಾದ ಹೃದಯಸ್ಪರ್ಶಿ ವಿಲ್. ಓರ್ವ ರಶ್ಯನ್ ಉದ್ಯಮಿ ಅವನ ವಿಲ್ ನಲ್ಲಿ ಎರಡು ಕವರ್ ಗಳ ಬಗ್ಗೆ ಮಾತ್ರ ಬರೆದಿದ್ದ. ಅವನು ಸತ್ತ ಕೂಡಲೇ ಮೊದಲ ಕವರ್ ಒಡೆದು ಅದರಲ್ಲಿ ಬರೆದದ್ದು ಓದಬೇಕು ಎಂದು ಬರೆದಿತ್ತು. ಅದರಂತೆ ಅವನ ಮರಣದ ನಂತರ ಮೊದಲ ಕವರ್ ಓದಿದಾಗ, ಅದರಲ್ಲಿ ಅವನ ಅಂತ್ಯಕ್ರಿಯೆಯನ್ನು ಹೇಗೆ ಮಾಡಬೇಕೆಂದು ಬರೆದಿತ್ತು. ಬೆಳಗಿನ ಜಾವ, ಕೊರೆಯುವ ಚಳಿಯಲ್ಲಿ, ಬರಿ ಮೈಯಲ್ಲಿ ಅವನ ಅಂತ್ಯ ಸಂಸ್ಕಾರ ಮಾಡಬೇಕು. ರಷ್ಯಾದಲ್ಲಿ ಅವನು ಮರಣ ಹೊಂದಿದ ಸಮಯದಲ್ಲಿ ಬಹಳ ಚಳಿ. ಹಿಮವೂ ಬೀಳುತ್ತಿತ್ತು. ಆ ಸಮಯ ಯಾರು ಅಂತ್ಯ ಸಂಸ್ಕಾರಕ್ಕೆ ಬರುತ್ತಾರೆ? ಆದರೂ ಏನೂ ನಾಲ್ಕು ಮಂದಿ ಅಂತ್ಯಸಂಸ್ಕಾರ ಮಾಡಲು ಬಂದರು. ಎಲ್ಲಾ ವಿಧಿ ವಿಧಾನಗಳು ಮುಗಿದ ಬಳಿಕ ಅವನ ಆಶೆಯಂತೆ ಎರಡನೇ ಲಕೋಟೆಯನ್ನು ಒಡೆದು ಓದಲಾಯಿತು. ಅದರ ಪ್ರಕಾರ ಅವನ ಸಮಸ್ತ ಆಸ್ತಿಯನ್ನು ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಿದವರಿಗೆ ಸಮಾನವಾಗಿ ಹಂಚಬೇಕು ಎಂದಿತ್ತಂತೆ. ಒಳ್ಳೆಯ ಕೆಲಸಕ್ಕೆ ಉತ್ತಮ ಫಲ ಸಿಕ್ಕೇ ಸಿಗುತ್ತದೆ. ಕಷ್ಟ ಪಟ್ಟು ಅಂತಿಮ ಸಂಸ್ಕಾರ ಮಾಡಿದ ನಾಲ್ವರು ದಿನ ಬೆಳಗಾಗುವಷ್ಟರಲ್ಲಿ ಧನಿಕರಾದರು. 
  ಇವು ಕೆಲವು ಸ್ಯಾಂಪಲ್ ಮಾತ್ರ. ಇನ್ನೂ ಅನೇಕ ಚಿತ್ರ ವಿಚಿತ್ರ ಉಯಿಲು ಬರೆದವರ ಸಂಖ್ಯೆ ಈ ಜಗತ್ತಿನಲ್ಲಿ ಸಾಕಷ್ಟು ಜನ, ಇದ್ದಾರೆ.  
  (ಆಧಾರ)
   
Read Previous post!
Read Next post!