S Venkatramanayya

ಇ ಎಸ್. ವೆಂಕಟರಾಮಯ್ಯ

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಪ್ರಥಮ ಕನ್ನಡಿಗರೆಂಬ ಕೀರ್ತಿಗೆ ಪಾತ್ರರಾದವರು ಎಂಗಳಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯನವರು.

ವೆಂಕಟರಾಮಯ್ಯನವರು 1924ರ ಡಿಸೆಂಬರ್ 18ರಂದು ಜನಿಸಿದರು. ಇವರ ತಂದೆ ಇ. ವಿ. ಸೀತಾರಾಮಯ್ಯನವರು ಶಾಲಾ ಶಿಕ್ಷಕರಾಗಿದ್ದರು. ತಾಯಿ ನಂಜಮ್ಮನವರು.

ವೆಂಕಟರಾಮಯ್ಯನವರು ಪಾಂಡವಪುರದಲ್ಲಿ ಸರ್ಕಾರಿ ಪ್ರೈಮೆರಿ ಶಾಲೆ ಮತ್ತು ಪ್ರೌಢ ಶಾಲೆ, ಮೈಸೂರಿನಲ್ಲಿ ಡಿ. ಬನುಮಯ್ಯ ಹೈಸ್ಕೂಲು ಮುಂತಾದ ಕಡೆ ಓದಿ, ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಉನ್ನತ ಶ್ರೇಣಿಯೊಂದಿಗೆ ಪದವಿ ಪಡೆದರು. ಪುಣೆಯ ಕಾನೂನು ಕಾಲೇಜು ಮತ್ತು ಬೆಳಗಾವಿಯ ರಾಜಾ ಲಖಮನಗೌಡ ಕಾನೂನು ಕಾಲೇಜುಗಳಲ್ಲಿ ಓದಿ ಉನ್ನತ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಕಾನೂನು ಪದವಿಗಳಿಸಿದರು. ಬಡಕುಟುಂಬದಲ್ಲಿ ಬೆಳೆದ ವೆಂಕಟರಾಮಯ್ಯನವರು ತಮ್ಮ ವಿದ್ಯಾಭ್ಯಾಸವನ್ನು ಅಂದಿನ ಮೈಸೂರಿನ ಬಡ ಮಕ್ಕಳ ಹಾಸ್ಟೆಲ್ಲುಗಳು ಮತ್ತು ವಾರಾನ್ನಗಳಲ್ಲಿ ನಡೆಸಿದರೂ ಮಹಾನ್ ಪ್ರತಿಭಾವಂತರಾಗಿ ಚಿನ್ನದ ಪದಕಗಳೊಂದಿಗೆ ವಿದ್ಯಾಭ್ಯಾಸದಲ್ಲಿ ಉತ್ತುಂಗತೆಯನ್ನು ಸಾಧಿಸಿದರು.

ವೆಂಕಟರಾಮಯ್ಯನವರು 1946ರ ಜೂನ್ 2ರಂದು ಬೆಂಗಳೂರು ವಿಭಾಗದ ನ್ಯಾಯಾಲಯದಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. 1969ರ ಜೂನ್ 5ರಿಂದ 1970ರ ಮಾರ್ಚ್ 4ರ ಅವಧಿಯಲ್ಲಿ ಮೈಸೂರು ಸರ್ಕಾರದ ವಕೀಲರಾಗಿ ವಕಾಲತ್ತು ವಹಿಸಿದ ಅವರು 1970ರ ಮಾರ್ಚ್ 5ರಿಂದ 1970ರ ಜೂನ್ 25ರ ವರೆಗೆ ಮೈಸೂರು ಸರ್ಕಾರದ ಅಡ್ವೋಕೇಟ್ ಜನರಲ್ ಆಗಿದ್ದರು. 1970ರ ಜೂನ್ 25ರಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದ ವೆಂಕಟರಾಮಯ್ಯನವರು, 1970ರ ನವೆಂಬರ್ 20ರಿಂದ ಖಾಯಂ ನ್ಯಾಯಾಧೀಶರ ಹುದ್ದೆ ಅಲಂಕರಿಸಿದರು. 1979ರ ಮಾರ್ಚ್ 8ರಂದು
ಆಗಿನ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನಾಯಾಧೀಶರಾದ ವೈ.ವಿ ಚಂದ್ರಚೂಡ್ ಅವರ ಆಹ್ವಾನದ ಮೇರೆಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ಧೆಯನ್ನು ಅಲಂಕರಿಸಿದ ಅವರು, ತಮ್ಮ ನಿವೃತ್ತಿಯ ಸಮೀಪದ ದಿನಗಳಲ್ಲಿ 1989ರ ಜೂನ್ 19ರಿಂದ
1989ರ ಡಿಸೆಂಬರ್ 17ರ ಅವಧಿಯಲ್ಲಿ ಸರ್ವೋಚ್ಚ ನ್ಯಾಯಾಲಯದ 18ನೇ ಪ್ರಧಾನ ನ್ಯಾಯಾಧೀಶರ ಸ್ಥಾನದ ಗೌರವವನ್ನು ಪಡೆದಿದ್ದರು. ನ್ಯಾಯಮೂರ್ತಿ ವೈ. ವಿ. ಚಂದ್ರಚೂಡ್ ಅವರು ವೆಂಕಟರಾಮಯ್ಯನವರನ್ನು ‘ಸುಜ್ಞಾನಿ ಗ್ರಾಮೀಣ ವ್ಯಕ್ತಿ’ ಎಂದು ಬಣ್ಣಿಸಿದ್ದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಆಂದೋಲನದ ಪ್ರಮುಖ ಉತ್ತೇಜಕರಾಗಿದ್ದ ನ್ಯಾಯಮೂರ್ತಿ ಇ.ಎಸ್. ವೆಂಕಟರಾಮಯ್ಯನವರು, ಭೋಪಾಲ್ ಗ್ಯಾಸ್ ದುರಂತದಲ್ಲಿ ಸಂತ್ರಸ್ತರಾದವರಿಗೆ ಯೂನಿಯನ್ ಕಾರ್ಬೈಡ್ ಸಂಸ್ಥೆ 715 ಕೋಟಿ ರೂಪಾಯಿಗಳ ಪರಿಹಾರ ನೀಡಬೇಕೆಂದು ತೀರ್ಪು ನೀಡಿದ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದರು. “ಬಡಜನತೆಗೆ ಉಚಿತ ಕಾನೂನು ನೆರವು” ಎಂಬುದು ನ್ಯಾಯಮೂರ್ತಿ ಇ.ಎಸ್. ವೆಂಕಟರಾಮಯ್ಯನವರ ವ್ರತವಾಗಿತ್ತು. ಸ್ವಂತ ಬಾಲ್ಯಕಾಲದ ಅನುಭವಗಳೇ ಅವರನ್ನು ಬಡವರ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬಲ್ಲ ವ್ಯಕ್ತಿಯನ್ನಾಗಿ ರೂಪಿಸಿದ್ದವು. “ಬಡಜನರಿಗೆ ಕಾನೂನು ನೆರವೆಂಬುದು ಕೇವಲ ಕಾನೂನು ನೆರವಿನ ಕ್ಲಿನಿಕ್‌ ಅಂತಾಗಿರದೆ; ದೊಡ್ಡಾಸ್ಪತ್ರೆಗಳಂತಾಗಬೇಕು; ಖಾಸಗಿ ಲಾ ಚೇಂಬರ್‌ಗಳು ನರ್ಸಿಂಗ್‌ ಹೋಮ್‌ಗಳಂತಿರಬೇಕು” ಇದು ವೆಂಕಟರಾಮಯ್ಯನವರು ಯಾವಾಗಲೂ ಹೇಳುತ್ತಿದ್ದ ಮಾತು.

ಸಂವಿಧಾನದಲ್ಲಿ 42ನೆಯ ತಿದ್ದುಪಡಿ ಮೂಲಕ 39 ಎ ವಿಧಿ (ಸಮಾನ ನ್ಯಾಯ ಹಾಗೂ ಉಚಿತ ಕಾನೂನು ನೆರವು) ಅಡಿಯಲ್ಲಿ ಬಡವರಿಗೂ ಉಚಿತ ಕಾನೂನು ಸಹಾಯ ದೊರೆಯಬೇಕೆಂಬ ಅಗತ್ಯವನ್ನು ಸರಕಾರ ಮನಗಾಣುವ ಎಷ್ಟೋ ವರ್ಷಗಳಷ್ಟು ಹಿಂದೆಯೇ ವೆಂಕಟರಾಮಯ್ಯನವರು 1948 – 1956ರ ಅವಧಿಯಲ್ಲಿ ಖಾಸಗಿ ಹಣದಿಂದ ಕಾರ್ಯನಿರ್ವಹಿಸುತ್ತಿದ್ದ ‘ಬೆಂಗಳೂರು ಲೀಗಲ್‌ ಏಯ್ಡ್ ಸೊಸೈಟಿ’ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮುಂದೆ ಅವರು (1976 – 79ರ ಅವಧಿಯಲ್ಲಿ) ಕರ್ನಾಟಕ ಕಾನೂನು ನೆರವು ಸಲಹಾ ಮಂಡಳಿಯ ಅಧ್ಯಕ್ಷರಾದರು. ಕಾನೂನು ಶಿಕ್ಷಣ ಕ್ಷೇತ್ರದಲ್ಲೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಬಿ.ಎಂ.ಎಸ್‌ ಕಾನೂನು ಕಾಲೇಜಿನ ಸ್ಥಾಪಕರಲ್ಲೊಬ್ಬರಾಗಿದ್ದ ಅವರು ಅಲ್ಲಿನ ಪ್ರಾಧ್ಯಾಪಕರಾಗಿ ಮತ್ತು ಮುಂದೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಕಾನೂನು ಬೋಧಿಸಿದ ಕೆಲವೇ ಕೆಲವು ಸುಪ್ರೀಂಕೋರ್ಟ್‌ ನ್ಯಾಯಾಧೀಶರಲ್ಲಿ ವೆಂಕಟರಾಮಯ್ಯನವರೂ ಒಬ್ಬರು. ಬೆಂಗಳೂರಿನ ನ್ಯಾಶನಲ್‌ ಸ್ಕೂಲ್‌ ಆಫ್ ಇಂಡಿಯಾದಲ್ಲಿನ ಎಂ.ಕೆ. ನಂಬಿಯಾರ್‌ ಸಾಂವಿಧಾನಿಕ ಕಾನೂನು ಪೀಠದ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ನ್ಯಾಯಮೂರ್ತಿ ವೆಂಕಟರಾಮಯ್ಯನವರು ಹಲವಾರು ಮಹತ್ವದ ಗ್ರಂಥಗಳನ್ನೂ ರಚಿಸಿದ್ದಾರೆ. ‘ವುಮನ್ ಅಂಡ್ ಲಾ’, ‘ಎ ಫ್ರೀ ಅಂಡ್‌ ಬ್ಯಾಲನ್ಸ್‌ಡ್‌ ಪ್ರೆಸ್‌’, ‘ಫ್ರೀಡಮ್‌ ಆಫ್ ದಿ ಪ್ರೆಸ್‌ – ಸಮ್‌ ರೀಸೆಂಟ್‌ ಟ್ರೆಂಡ್ಸ್‌’, ‘ಬಿ. ಎನ್‌. ರಾವ್‌: ಕಾನ್‌ಸ್ಟಿಟ್ಯೂಶನಲ್‌ ಅಡ್ವೈಸರ್‌’, ‘ಇಂಡಿಯನ್‌ ಫೆಡರಲಿಸಂ – ಎ ಕಂಪ್ಯಾರೆಟಿವ್‌ ಸ್ಟಡಿ’, ‘ಜಸ್ಟಿಸ್‌ ಇಂಪೆರಿಲ್ಡ್‌ – ಎ ಮೆಮೊಯರ್’ ಮುಂತಾದವು ಅವರ ಪ್ರಮುಖ ಕೃತಿಗಳಾಗಿವೆ. ‘ಜಸ್ಟಿಸ್‌ ಇಂಪೆರಿಲ್ಡ್‌ – ಎ ಮೆಮೊಯರ್’ ಕೃತಿ ಮೈಸೂರು ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿ ಪ್ರಸಿದ್ಧರಾದ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರ ಮುನ್ನುಡಿಯನ್ನು ಹೊಂದಿದ್ದು, ಕರ್ನಾಟಕದ ಸಾರ್ವಜನಿಕ ವ್ಯವಹಾರವನ್ನು ಅಧ್ಯಯನ ವಿಷಯವನ್ನಾಗಿಸಿಕೊಂಡಿದ್ದು ಕಾನೂನಿನ ವಿದ್ಯಾರ್ಥಿಗಳೆಲ್ಲರೂ ಅಗತ್ಯವಾಗಿ ಓದಿಕೊಳ್ಳಲೇಬೇಕಾದ ಗ್ರಂಥವಾಗಿದೆ.

ನ್ಯಾ| ವೆಂಕಟರಾಮಯ್ಯ ಅವರು ಕಾನೂನು ವ್ಯವಸ್ಥೆಯ ಘನತೆ – ಗೌರವವನ್ನು ಎತ್ತಿ ಹಿಡಿದವರು. ಅವರ ಪುತ್ರಿ ಎ.ವಿ ನಾಗರತ್ನ ಅವರೂ ಉಚ್ಚನ್ಯಾಯಾಲಯದ ಓರ್ವ ನ್ಯಾಯಾಧೀಶೆಯಾಗಿ ಹೆಸರು ಮಾಡಿದ್ದಾರೆ.

ನಾಡಿನ ಸಾಂಸ್ಕೃತಿಕ ವಲಯದಲ್ಲಿ ಸಹಾ ತಮ್ಮನ್ನು ಗುರುತಿಸಿಕೊಂಡಿದ್ದ ನ್ಯಾಯಮೂರ್ತಿ ವೆಂಕಟರಾಮಯ್ಯನವರು ಹಲವಾರು ವರ್ಷಗಳ ಕಾಲ ಭಾರತೀಯ ವಿದ್ಯಾಭವನದ ಕರ್ನಾಟಕ ವಿಭಾಗದ ರಾಜ್ಯಮಟ್ಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ಹೊಂದಿದವರಾಗಿದ್ದರು. ತಮ್ಮ ಬದುಕಿನಲ್ಲಿ ಅಷ್ಟೊಂದು ಔನ್ನತ್ಯವನ್ನು ಸಾಧಿಸಿದ್ದರೂ ಅತ್ಯಂತ ಸಾಮಾನ್ಯರಂತೆ ಬದುಕನ್ನು ನಡೆಸಿ ಮೌಲ್ಯಯುತ ಬದುಕಿನ ಹಿರಿಮೆಯನ್ನು ಮೆರೆದ ನ್ಯಾಯಮೂರ್ತಿ ಇ ಎಸ್ ವೆಂಕಟರಾಮಯ್ಯನವರು 1997ರ ಸೆಪ್ಟೆಂಬರ್ 24ರಂದು ಈ ಲೋಕವನ್ನಗಲಿದರು..

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s